*ಮಾಜಿ ಶಾಸಕರಾದ ಎಚ್.ಎಮ್. ಚಂದ್ರಶೇಖರಪ್ಪನವರ ನಿಧನಕ್ಕೆ ಎಸ್ ಮಧು ಬಂಗಾರಪ್ಪ ತೀವ್ರ ಸಂತಾಪ*.

*ಮಾಜಿ ಶಾಸಕರಾದ ಎಚ್.ಎಮ್. ಚಂದ್ರಶೇಖರಪ್ಪನವರ ನಿಧನಕ್ಕೆ ಎಸ್ ಮಧು ಬಂಗಾರಪ್ಪ ತೀವ್ರ ಸಂತಾಪ*.

ಪಕ್ಷದ ಹಿರಿಯ ನಾಯಕರು, ಶಿವಮೊಗ್ಗದ ಮಾಜಿ ಶಾಸಕರು, ರಾಜ್ಯ ಮಾಜಿ ಶಾಸಕರ ವೇದಿಕೆಯ ಅಧ್ಯಕ್ಷರಾದ ಶ್ರೀ ಎಚ್‌.ಎಂ. ಚಂದ್ರಶೇಖರಪ್ಪ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ.
ಇತ್ತೀಚಿನವರೆಗೂ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮಾನ್ಯ ಎಚ್‌.ಎಂ. ಚಂದ್ರಶೇಖರಪ್ಪ ನವರು ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಉಪಾಧ್ಯಕ್ಷರಾಗಿ, ಲಿಂಗಾಯತ ಸಮಾಜವನ್ನು ಸಂಘಟಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.
ಶಿವಮೊಗ್ಗ ನಗರಸಭೆಯ ಸದಸ್ಯರಾಗಿ, ಅಧ್ಯಕ್ಷರಾಗಿ, ಶಿವಮೊಗ್ಗ ನಗರಕ್ಕೆ ಅಪಾರ ಕೊಡುಗೆ ನೀಡಿದ್ದ ಶ್ರೀಯುತರು ಸುಮಾರು 10 ವರ್ಷಗಳ ಕಾಲ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ ಪಕ್ಷವನ್ನು ಬಲಪಡಿಸಿದ್ದರು.

  • ನಮ್ಮ ತಂದೆ ಮಾಜಿ ಮುಖ್ಯಮಂತ್ರಿ, ಬಂಗಾರಪ್ಪ ಅವರ ಬೆಂಬಲಿಗರಾಗಿ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡಿದ್ದ ಶ್ರೀಯುತರು ಅವರ ಸಲಹೆಯಂತೆ 1999ರ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿ, ಶಾಸಕರಾಗಿ ಆಯ್ಕೆಯಾಗಿದ್ದರು. ತಮ್ಮ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಹಿರಿಯ ನಾಯಕ ಕೆ.ಎಸ್‌. ಈಶ್ವರಪ್ಪ ಅವರನ್ನು ಸೋಲಿಸಿದ ಕಾರಣಕ್ಕೆ ರಾಜ್ಯದ ಗಮನ ಸೆಳೆದಿದ್ದರು.

ಶ್ರೀಯುತ ಚಂದ್ರಶೇಖರಪ್ಪ ಅವರು ಅಪ್ಪಾಜಿಯವರೊಂದಿಗೆ ಮಾತ್ರವಲ್ಲದೆ, ನನ್ನೊಂದಿಗೂ ರಾಜಕೀಯ ವಿಷಯಗಳ ಕುರಿತು ಚರ್ಚಿಸುತ್ತಾ, ಮಾರ್ಗದರ್ಶನ ನೀಡುತ್ತ. ಅಪ್ಪಾಜಿಯವರೊಂದಿಗೆ ಕಳೆದ ಆತ್ಮೀಯ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದರು. ಈಗ ಅವರಿಲ್ಲ ಎಂಬ ಶುದ್ದಿ ಅಘಾತವನ್ನುಂಟು ಮಾಡಿದ್ದು, ನಮ್ಮ ಕುಟುಂಬದೊಂದಿಗೆ ಮತ್ತು ವೈಯಕ್ತಿಕವಾಗಿ ಅವರೊಂದಿಗೆ ನನಗಿದ್ದ ಒಡನಾಟದ ದಿನಗಳು ನನ್ನ ಮನಸ್ಸಿನಲ್ಲಿ ಸದಾ ಹಸಿರಾಗಿರುತ್ತವೆ.
ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಅವರ ಕುಟುಂಬ ವರ್ಗಕ್ಕೆ, ಹಾಗೂ ಅವರ ಹಿರಿಯ ಪುತ್ರ, ನನ್ನ ಆತ್ಮೀಯರೂ, ಪಕ್ಷದ ಮುಖಂಡರೂ ಆದ ಎಚ್‌.ಸಿ.ಯೋಗೀಶ್‌ ಅವರಿಗೆ,
ಮತ್ತು ಅವರ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಎಸ್, ಮಧು ಬಂಗಾರಪ್ಪ