ಮಧ್ಯ ಕರ್ನಾಟಕಕ್ಕೆ ಹೈಕೋರ್ಟ್ ಪೀಠ ಅತ್ಯಗತ್ಯ: ಶಿವಮೊಗ್ಗದ ವಕೀಲರ ಹೋರಾಟಕ್ಕೆ ಡಾ. ಧನಂಜಯ ಸರ್ಜಿ ಬೆಂಬಲ

ಮಧ್ಯ ಕರ್ನಾಟಕಕ್ಕೆ ಹೈಕೋರ್ಟ್ ಪೀಠ ಅತ್ಯಗತ್ಯ: ಶಿವಮೊಗ್ಗದ ವಕೀಲರ ಹೋರಾಟಕ್ಕೆ ಡಾ. ಧನಂಜಯ ಸರ್ಜಿ ಬೆಂಬಲ

ಶಿವಮೊಗ್ಗ, : ಮಲೆನಾಡು ಹಾಗೂ ಮಧ್ಯ ಕರ್ನಾಟಕದ ಸಾರ್ವಜನಿಕರು ಮತ್ತು ಕಕ್ಷಿದಾರರ ಅನುಕೂಲಕ್ಕಾಗಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ ಅವರು ಭಾಗವಹಿಸಿ, ವಕೀಲರ ನ್ಯಾಯಸಮ್ಮತ ಹೋರಾಟಕ್ಕೆ ತಮ್ಮ ಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ಜನರ ಅನುಕೂಲಕ್ಕಾಗಿ ಈಗಾಗಲೇ ಎರಡು ಸಂಚಾರಿ ಪೀಠಗಳನ್ನು ನೀಡಲಾಗಿದೆ. ಆದರೆ, ಸುಮಾರು 90 ಲಕ್ಷದಿಂದ 1 ಕೋಟಿಯಷ್ಟು ಜನಸಂಖ್ಯೆ ಇರುವ ಮಧ್ಯ ಕರ್ನಾಟಕ ಭಾಗಕ್ಕೆ ಸಂಚಾರಿ ಪೀಠದ ತೀವ್ರ ಕೊರತೆಯಿದೆ. ಜನಸಂಖ್ಯೆ ಮತ್ತು ಭೌಗೋಳಿಕ ಆಧಾರದ ಮೇಲೆ ನೋಡುವುದಾದರೆ, ಮಧ್ಯ ಕರ್ನಾಟಕಕ್ಕೆ ಶಿವಮೊಗ್ಗವು ಸಂಚಾರಿ ಪೀಠ ಸ್ಥಾಪನೆಗೆ ಅತ್ಯಂತ ಸೂಕ್ತ ಹಾಗೂ ಯೋಗ್ಯವಾದ ಜಾಗವಾಗಿದೆ. ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳು ಬಾಕಿ ಉಳಿದಿರುವ ರಾಜ್ಯಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇಡೀ ಕರ್ನಾಟಕ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಲಕ್ಷಾಂತರ ಪ್ರಕರಣಗಳು ಇತ್ಯರ್ಥವಾಗದೇ ಉಳಿದಿವೆ. 2024ರ ಸಾಲಿನಲ್ಲಿ ಸರಿಸುಮಾರು17.9 ಲಕ್ಷ ಪ್ರಕರಣಗಳನ್ನು ವಿಲೇವಾರಿ ಮಾಡಿದ್ದರೂ ಸಹ, ಪ್ರಸ್ತುತ 21 ಲಕ್ಷಕ್ಕೂ ಅಧಿಕ ಪ್ರಕರಣಗಳು ಇನ್ನೂ ಬಾಕಿ ಉಳಿದಿದೆ. ಈ ಪ್ರಮಾಣದ ಪ್ರಕರಣಗಳು ಬಾಕಿ ಇರುವಾಗ, ಕಕ್ಷಿದಾರರಿಗೆ ತ್ವರಿತವಾಗಿ ನ್ಯಾಯ ದೊರಕಿಸಿಕೊಡಲು ಶಿವಮೊಗ್ಗದಲ್ಲಿ ಹೊಸ ಪೀಠದ ಸ್ಥಾಪನೆ ಅನಿವಾರ್ಯವಾಗಿದೆ ಎಂದು ಹೇಳಿದರು.

ಒಂದು ವೇಳೆ ಸಂಚಾರಿ ಪೀಠವನ್ನು ಮಂಗಳೂರಿಗೆ ಕೊಟ್ಟರೆ ಅದಕ್ಕೆ ತಮ್ಮ ಯಾವುದೇ ಅಭ್ಯಂತರವಿಲ್ಲ, ಆದರೆ ಯಾವುದೇ ಕಾರಣಕ್ಕೂ ಶಿವಮೊಗ್ಗ ಜಿಲ್ಲೆಯನ್ನು ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸುವುದು ಬೇಡ ಎಂದು ಅವರು ಸ್ಪಷ್ಟಪಡಿಸಿದರು. ಭೌಗೋಳಿಕವಾಗಿ ಶಿವಮೊಗ್ಗದ ಜನರಿಗೆ ಮಂಗಳೂರಿಗಿಂತ ಬೆಂಗಳೂರಿನೊಂದಿಗೆ ಉತ್ತಮ ಸಂಪರ್ಕ ಹಾಗೂ ಒಡನಾಟವಿದ್ದು, ನಮ್ಮ ಬಹುತೇಕ ಕಚೇರಿ ಕೆಲಸಗಳು ಬೆಂಗಳೂರಿನಲ್ಲೇ ಸುಲಭವಾಗಿ ಆಗುತ್ತವೆ. ಆದ್ದರಿಂದ, ದೂರವಿದ್ದರೂ ಬೆಂಗಳೂರೇ ಈ ಭಾಗದ ಜನರಿಗೆ ಅನುಕೂಲವಾಗಲಿದ್ದು, ಶಿವಮೊಗ್ಗವನ್ನು ಮಂಗಳೂರಿಗೆ ಸೇರಿಸುವ ಬದಲು ಶಿವಮೊಗ್ಗದಲ್ಲೇ ಸ್ವತಂತ್ರವಾಗಿ ಸಂಚಾರಿ ಪೀಠವನ್ನು ಸ್ಥಾಪಿಸಬೇಕು ಎಂದು ಈ ನ್ಯಾಯಸಮ್ಮತ ಬೇಡಿಕೆ ಈಡೇರುವವರೆಗೂ ತಮ್ಮ ಸಂಪೂರ್ಣ ಸಹಮತ ಮತ್ತು ಬೆಂಬಲ ವಕೀಲರ ಸಂಘದೊಂದಿಗಿರಲಿದೆ ಎಂದು ಡಾ. ಧನಂಜಯ ಸರ್ಜಿ ಅವರು ಭರವಸೆ ನೀಡಿದರು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ  ಮಧು ಬಂಗಾರಪ್ಪ, ಶಾಸಕರಾದ  ಆರಗ ಜ್ಞಾನೇಂದ್ರ,  ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಶಾಸಕರಾದ ಶ್ರೀಮತಿ ಬಲ್ಕಿಸ್ ಬಾನು, ವಕೀಲರ ಸಂಘದ ಅಧ್ಯಕ್ಷರಾದ  ರಾಘವೇಂದ್ರ ಸ್ವಾಮಿ, ಹಿರಿಯ ವಕೀಲರಾದ  ಬಸಪ್ಪ ಗೌಡ್ರು ಹಾಗೂ ಎಂ. ಶ್ರೀಕಾಂತ್, ಪ್ರಮುಖರಾದ ಕಲಗೋಡು ರತ್ನಾಕರ್ ಹಾಗೂ ವಕೀಲರ ಸಂಘದ ಪ್ರಮುಖರು ಉಪಸ್ಥಿತರಿದ್ದರು.