*ನನಗೀಗಲೂ ನೆನಪಿದೆ; ಎಂ.ಕೆ.ಸುರೇಶ್ ಕುಮಾರ್ (ಚಾಲುಕ್ಯ ಬಾರ್ ಸುರೇಶ್) ಎಂಬ ದೈತ್ಯ ವ್ಯಕ್ತಿಯ ಭೇಟಿ!*
*ನನಗೀಗಲೂ ನೆನಪಿದೆ; ಎಂ.ಕೆ.ಸುರೇಶ್ ಕುಮಾರ್ (ಚಾಲುಕ್ಯ ಬಾರ್ ಸುರೇಶ್) ಎಂಬ ದೈತ್ಯ ವ್ಯಕ್ತಿಯ ಭೇಟಿ!*
ನಾನಾಗ ನನ್ನ ತಾತಾ, ಅಪ್ಪ ಸೇರಿದಂತೆ ಅವಿಭಕ್ತ ಕುಟುಂಬದಲ್ಲಿದ್ದೆ. ಹುಡುಗ ಸಣ್ಣವನು. ಮನೆ ಇದ್ದಿದ್ದು ರವಿವರ್ಮ ರಸ್ತೆಯಲ್ಲಿ. ರವಿವರ್ಮ ರಸ್ತೆಗೆ ಶಿವಮೊಗ್ಗ ನಗರಸಭೆ ಕೌನ್ಸಿಲರ್ ಆಗ್ತಿದ್ದಿದ್ದು ಓರ್ವ ಬ್ರಾಹ್ಮಣ ಅಜ್ಜಿ. ನಾನಾಗ ಅವರ ಮನೆಗೆ ನಮ್ಮ ತಾತಾ/ ಅಪ್ಪನ ಸೌದೆ ಡಿಪೋ ಸೌದೆಯನ್ನು ಮಣದ ಲೆಕ್ಕದಲ್ಲಿ ಕಬ್ಬಿಣದ ಕಾಲ್ಗಾಡಿಯಲ್ಲಿ ಒಯ್ದು ಹಾಕುತ್ತಿದ್ದೆ. ಅವರು ಒಣಕೊಬ್ಬರಿ, ಬೆಲ್ಲ ಕೊಡ್ತಿದ್ದ ನೆನಪು, ಅದೂ ಹಿಂಬಾಗಿಲಿನಿಂದ! ಆ ಮನೆ ಇದ್ದಿದ್ದು ವಂದನಾ ಟಾಕೀಸಿನ ಹತ್ತಿರ…
ಅದು ಅತ್ಲಾಗಿರಲಿ…ರವಿವರ್ಮ ರಸ್ತೆಗೆ ಹೊಂದಿಕೊಂಡು ಇದ್ದಿದ್ದು ಕ್ಲಾರ್ಕ್ ಪೇಟೆ. ಅದಕ್ಕೆ ಕೌನ್ಸಿಲರ್ ಎಂ.ಕೆ.ಸುರೇಶ್ ಕುಮಾರ್ @ ಚಾಲುಕ್ಯ ಬಾರ್ ಸುರೇಶ್ ಜೀ…ನಮ್ಮ ಕಡೆಯ ಏನೇ ಸಮಸ್ಯೆಗಳಿದ್ದರೂ(ಹೆಚ್ಚಾಗಿ ಪೊಲೀಸ್ ಕೇಸುಗಳು, ಅಬಕಾರಿ ಕೇಸುಗಳು) ಅದನ್ನ ನಿಭಾಯಿಸುವ ಕೆಲಸ ಮಾಡುತ್ತಿದ್ದುದೇ ಅಮೀರ್ ಅಹಮದ್ ಸರ್ಕಲ್ಲಿನ ಹತ್ತಿರದಲ್ಲೇ ಇದ್ದ ಪಲ್ಲವಿ ಹೋಟೆಲ್ ಎದುರಿನ ಚಾಲುಕ್ಯ ಬಾರ್ ಎಂಡ್ ರೆಸ್ಟೋರೆಂಟಿನ ಸೂರಿಯವರು…
ಅವರು ತಿಳಿದೋ ತಿಳಿಯದೆಯೋ ಚಾಲುಕ್ಯ ಬಳಗದ ಅನಭಿಷಕ್ತ ದೊರೆಯಾಗಿದ್ರು. ಹಣಕಾಸಿನ ವಿಚಾರದಲ್ಲಿ ಪ್ರಾಮಾಣಿಕರು. ಚಾಲುಕ್ಯ ಸೂರಿ ಕೌನ್ಸಿಲರ್ ಎಲೆಕ್ಷನ್ನಿಗೆ ನಿಂತಿದ್ದಾರೆಂದರೆ ಅಲ್ಲಿ ಮತ್ತೊಬ್ಬರು ಗೆಲ್ಲುವುದು ಬಹಳ ಕಷ್ಟವೇ…ಅದೇ ಆಧಾರದ ಮೇಲೆ ಅವರು ಶಿವಮೊಗ್ಗ ನಗರಸಭೆಗೂ ಅಧ್ಯಕ್ಷರಾದರು. ಆದರೆ, ಆವಾಗ ಸುರೇಶ್ ರವರ ವಿರುದ್ಧ ಕ್ರಾಂತಿದೀಪ ಪತ್ರಿಕೆ ಸುದ್ದಿ ಮಾಡಿತ್ತು- ಮಧ್ಯಾಹ್ನದ ನಂತರ ಬಾಗಿಲು ತೆಗೆಯುವ ನಗರಸಭೆ ಅಂತ ನೆನಪು…ಇದರಿಂದ ಸುರೇಶ್ ರವರು ಬಹಳ ಕಿಡಿ ಕಿಡಿ ಕಾರಿದ್ದರು ಪತ್ರಿಕೆಯ ಮಂಜಣ್ಣನ ವಿರುದ್ಧ. ಆ ಮುನಿಸು ಬಹಳ ದಿನಗಳ ಕಾಲ ಮುಂದುವರೆದಿತ್ತು ಕೂಡ.
ಅವರು ಶಿವಮೊಗ್ಗ ನಗರಸಭೆ ಅಧ್ಯಕ್ಷರಾಗುವ ಅವಕಾಶ ದಟ್ಟವಾಗಿದ್ದರೂ ಪ್ರಭಾವಿ ನಾಯಕರಾಗಿದ್ದ ಕಾಗೋಡು ತಿಮ್ಮಪ್ಪರವರ ಕಿವಿಗೆ ಕೆಲವರು ಏನೇನೋ ಊದಿ ಆ ಅವಕಾಶ ತಪ್ಪಿಸುವ ಕಾರ್ಯಕ್ರಮಗಳು ನಡೆದಿದ್ದವು. ಅದೇ ಸಮಯದಲ್ಲಿ ಬಹಳ ಆತ್ಮೀಯರಾಗಿದ್ದ ಕಾಗೋಡಜ್ಜನಿಗೆ ಚಾಲುಕ್ಯ ಸುರೇಶ್ ರವರ ಸ್ಥಳೀಯ ಪ್ರಭಾವದ ಪರಿಚಯ ಮಾಡಿಕೊಟ್ಟಿದ್ದರಿಂದ ಅವರೇ ಅಂತಿಮವಾಗಿ ಆಗ ನಗರಸಭಾ ಅಧ್ಯಕ್ಷರಾದರು(ಇಲ್ಲಿ ಬೇರೆ ಪ್ರಭಾವಗಳೂ ಕೆಲಸ ಮಾಡಿರಬಹುದು).
ಬಹಳ ಅದ್ಭುತ ಅನ್ನೋ ರೀತಿಯ ಮನುಷ್ಯರಾಗಿದ್ದ ಚಾಲುಕ್ಯ ಸುರೇಶ್ ರವರ ಬಳಗದಲ್ಲಿ ಬಹಳ ಬಹಳ ಜನ ಬೆಳೆದಿದ್ದಾರೆ.ಕೆಲವರು ಅಲ್ಲಿ ಗ್ರಾಹಕರಿಗೆ ಗ್ಲಾಸು ವಿತರಿಸುತ್ತಿದ್ದವರೂ ಶಾಸಕರೂ, ಅಧಿಕಾರಿಗಳೂ, ಕೋಟ್ಯಾಧಿಪತಿಗಳೂ ಆದವರು ಇನ್ನೂ ಕಣ್ಣ ಮುಂದಿದ್ದಾರೆ.
ಬಹಳ ಆಶ್ಚರ್ಯವೆಂದರೆ, ಅವರು ಏಕಕಾಲದಲ್ಲಿ ಆಝಾದ್ ನಗರದ ಮುಸ್ಲೀಮರ ಡಾರ್ಲಿಂಗ್, ಹಿಂದೂಗಳ(ಹಿಂದೂ ಮಹಾಸಭಾ) ಡಾರ್ಲಿಂಗ್, ಸಹಕಾರಿಗಳ ಡಾರ್ಲಿಂಗ್…ಜಾತ್ಯಾತೀತ ವ್ಯಕ್ತಿತ್ವ ಬೇರೆ…ಇದು ಓರ್ವ ಮನುಷ್ಯನಿಗೆ ನಾಟಕ ಮಾಡದೆಯೂ ಹೇಗಿರಲು ಸಾಧ್ಯ?!
ಚಾಲುಕ್ಯ ಬಳಗದ ಹೆಸರುಗಳೊಮ್ಮೆ ನೋಡಬೇಕು ನೀವು- ಭಟ್ಟ, ರೆಡ್ಡಿ, ಗೌಡ, ನಾಯ್ಕ,ಖಾನ್,ಅಹಮದ್, ಸಿಂಗ್, ರೋಡ್ರಿಗಸ್…ಯಾವ ಜಾತಿ? ಯಾವ ಧರ್ಮ?
ಅವರು ಚುನಾವಣೆಯೊಂದಕ್ಕೆ ಸ್ಪರ್ಧಿಸಿದ್ದರಂತೆ. ಅಧ್ಯಕ್ಷರಾಗಬೇಕು ಅಂದಾಗ ಹಣದ ಅವಶ್ಯಕತೆ ಬಿತ್ತಂತೆ- ಸ್ನೇಹ ಬಳಗ ಸೂಟ್ ಕೇಸ್ ಗಳನ್ನು ಹಣದೊಂದಿಗೆ ಸಿದ್ಧಪಡಿಸಿ ಕಳಿಸಿದೆ.
ಎಲ್ಲದೂ ಮುಗಿದ ಮೇಲೆ ಬಹಳ ಹಣ ಉಳಿದಿದೆ! ಚಾಲುಕ್ಯ ಸುರೇಶ್ ತಡಮಾಡದೇ ಆ ಉಳಿದಿದ್ದ ಹಣವನ್ನು ರಾತ್ರೋ ರಾತ್ರಿ ಅವರವರಿಗೇ ಮರಳಿ ಕೊಟ್ಟು ಕಳಿಸಿದ್ದನ್ನು ಅವರ ಸ್ನೇಹಿತರು ಈಗಲೂ ನೆನಪಿಸಿಕೊಳ್ತಾರೆ!
ಶಿವಮೊಗ್ಗಕ್ಕೊಬ್ಬ ಶಾಸಕರಾಗಬೇಕಿದ್ದ ಎಲ್ಲಾ ಅರ್ಹತೆಗಳನ್ನು ಹೊಂದಿದ್ದ ಎಂ.ಕೆ.ಸುರೇಶ್ ಕುಮಾರ್ @ ಚಾಲುಕ್ಯ ಬಾರ್ ಸೂರಿ ಇವತ್ತಿಲ್ಲ ಎಂಬುದು ಸಣ್ಣ ಮಾತಲ್ಲ…ಬಹಳ ಬಹಳವೇ ಕಳೆದುಕೊಂಡಿದ್ದೇವೆ ಅನಿಸಬೇಕಾದ ಸಮಯ ಸಂದರ್ಭವಿದು…
– *ಶಿ.ಜು.ಪಾಶ*
8050112067
(4/7/2026)


