ರಸಿಕರ ರಂಜಿಸಿದ ಯಕ್ಷ ಭಾವ ಗಾನ ಎಂಬ ವಿನೂತನ ಜುಗಲ್ ಬಂಧಿ
ರಸಿಕರ ರಂಜಿಸಿದ ಯಕ್ಷ ಭಾವ ಗಾನ ಎಂಬ ವಿನೂತನ ಜುಗಲ್ ಬಂಧಿ
ಶಿವಮೊಗ್ಗ : ಸಂಗೀತ ಸಮಪರ್ಣ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಶನಿವಾರ ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಯಕ್ಷ ಭಾವ ಗಾನ ಎಂಬ ವಿನೂತನ ಜುಗಲ್ ಬಂಧಿ ಸಂಗೀತ ಕಾರ್ಯಕ್ರಮ ಸಂಗೀತ ರಸಿಕರ ಮನಸೆಳೆಯುವಲ್ಲಿ ಅತ್ಯಂತ ಯಶಸ್ವಿಯಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಗೀತ ವಿದ್ವಾನ್ ಶೃಂಗೇರಿ ನಾಗರಾಜ್, ಈ ಜುಗಲ್ ಬಂಧಿ ಕಾರ್ಯಕ್ರಮ ಎರಡು ಮಹಾನ್ ಕಲಾ ಪ್ರಕಾರಗಳ ಮಿಲನವಾಗಿದೆ. ಯಕ್ಷಗಾನ ನಮ್ಮ ನಾಡಿನ ಹೆಮ್ಮೆಯಾಗಿದೆ. ಶಾಸ್ತ್ರೀಯತೆಯಿಂದ ಕೂಡಿದ ಈ ಪ್ರಾದೇಶಿಕ ಕಲೆಯೊಂದು ಇಂದು ವಿಶ್ವದ ಕಲೆಯಾಗಿ ಬೆಳೆದು ನಿಂತಿದೆ. ಯಕ್ಷಗಾನದಲ್ಲಿ ವ್ಯಕ್ತಿಯ ಚಿತ್ರಕ್ಕಿಂತ ಆತನ ಪಾತ್ರ ಮುಖ್ಯವಾಗುತ್ತದೆ ಎಂದರು.
ಹಾಗೆಯೇ ಭಾವಗೀತೆ ಎಂಬುದು ಮನಸ್ಸಿನ ಭಾವಗಳ ಮಧುರ ಗೀತೆಗಳೇ ಆಗಿವೆ. ಬೇಂದ್ರೆ ಕುವೆಂಪು ಲಕ್ಷ್ಮಿ ನಾರಾಯಣಭಟ್ಟ ಅಷ್ಟೇ ಏಕೆ ಶಿಶುನಾಳ ಶರೀಫರಂತಹ ಕವಿಗಳ ಕವಿತೆಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಿದೆ. ಮೈಸೂರು ಮಲ್ಲಿಗೆ ಇದಕ್ಕೆ ಬಹುದೊಡ್ಡ ಉದಾಹರಣೆ ಎಂದರು.
ಸಂಗೀತ ಗಾಯಕಿ ಸುರೇಖಾ ಹೆಗಡೆ, ಯಕ್ಷಗಾನ ಭಾಗವತ ಅನಂತ ಹೆಗಡೆ ಈ ಇಬ್ಬರೂ ಯಕ್ಷಗಾನದ ಗಾಂಭೀರ್ಯ, ಭಾವಗೀತೆಯೆ ಮೃದುತ್ವ ಈ ಎರಡೂ ವಿರುದ್ಧ ಧೃವಗಳನ್ನು ಒಂದೇ ವೇದಿಕೆಯಲ್ಲಿ ಸಮೀಕರಿಸಿ ತೋರಿಸುತ್ತಿರುವುದು ಒಂದು ಹೊಸ ಪ್ರಯೋಗ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್. ಮಾತನಾಡಿ, ಇದೊಂದು ಹೊಸ ಪ್ರಯೋಗ. ಸಾಂಸ್ಕೃತಿಕ ಸಂಘಗಳು ಇಂತಹ ಕಾರ್ಯಕ್ರಮಗಳನ್ನು ರೂಪಿಸಿದರೆ, ಇಲಾಖೆಯ ನಿಯಮಗಳಿಗೆ ಬದ್ಧವಾಗಿ ಧನಸಹಾಯ ನೀಡುತ್ತದೆ. ಸಂಘಗಳು ಇದರ ಪ್ರಯೋಜನ ಪಡೆಯಬೇಕು ಎಂದರು.
ಕಾರ್ಯಕ್ರಮ ಸಂಯೋಜಕಿ ಹಾಗೂ ಟ್ರಸ್ಟ್ ಅಧ್ಯಕ್ಷೆ ಸುರೇಖಾ ಹೆಗಡೆ ಮಾತನಾಡಿ, ಇಂತಹ ಕಾರ್ಯಕ್ರಮ ಆಯೋಜಿಸಬೇಕು ಎಂಬುದು ನನ್ನ ಬಹುದಿನ ಕನಸಾಗಿತ್ತು. ಇದಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ. ಇಂತಹ ಹೊಸ ಪ್ರಯೋಗಗಳು ಸಂಗೀತ ಲೋಕದಲ್ಲಿ ನಡೆದರೆ ಅದಕ್ಕೊಂದು ಹೊಸ ರೂಪ ಕೊಟ್ಟಂತೆ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕರುಣಾಳು ಬಾ ಬೆಳಕೆ ಸೇರಿದಂತೆ ಹಲವು ಭಾವಗೀತೆಗಳು ಹಾಗೂ ಯಕ್ಷಗಾನದ ಭಾಗವತಗಳು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಕಾರ್ಯಕ್ರಮದಲ್ಲಿ ಪ್ರೇಕ್ಷಕರಾಗಿ ಭಾಗವಹಿಸಿದ್ದ ಶಾಸಕ ಎಸ್.ಎನ್. ಚನ್ನಬಸಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.



