*ಮೋಸ ಮಾಡಿದ ಯುವಕನ ಪರ ನಿಂತಿತೇ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆ?* *ಈ ಸಂತ್ರಸ್ತ ಯುವತಿಗೆ ನ್ಯಾಯ ಸಿಗದಿದ್ದರೆ ಧರಣಿ ಮಾಡುತ್ತೇನೆಂದ ವಕೀಲ ಕೆ.ಪಿ.ಶ್ರೀಪಾಲ್…* *ಈ ಪ್ರಕರಣವೇಕೆ ಈಗ ಗಂಭೀರವಾಗುತ್ತಿದೆ? ಎಸ್ ಪಿ ನಿಖಿಲ್ ಗಮನಿಸುವರೇ?*
*ಮೋಸ ಮಾಡಿದ ಯುವಕನ ಪರ ನಿಂತಿತೇ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆ?*
*ಈ ಸಂತ್ರಸ್ತ ಯುವತಿಗೆ ನ್ಯಾಯ ಸಿಗದಿದ್ದರೆ ಧರಣಿ ಮಾಡುತ್ತೇನೆಂದ ವಕೀಲ ಕೆ.ಪಿ.ಶ್ರೀಪಾಲ್…*
*ಈ ಪ್ರಕರಣವೇಕೆ ಈಗ ಗಂಭೀರವಾಗುತ್ತಿದೆ? ಎಸ್ ಪಿ ನಿಖಿಲ್ ಗಮನಿಸುವರೇ?*
ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಯುವಕನ ವಿರುದ್ಧ ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಯುವತಿಯೊಬ್ಬಳು ದೂರು ದಾಖಲಿಸಿದರೂ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಅದ್ಯಾಕೆ ಮೀನಾಮೇಷ ಎಣಿಸುತ್ತಿದ್ದಾರೋ…ಕೊನೆಗೂ ಈ ಪೊಲೀಸ್ ನಿರ್ಲಕ್ಷ್ಯದ ಪ್ರಕರಣ ಗಂಭೀರ ಸ್ವರೂಪ ತಾಳುವ ಲಕ್ಷಣಗಳು ಕಾಣಿಸುತ್ತಿವೆ.
ಡಿ.ಆರ್.ಸುಧಾಕರ್ ಸೇರಿದಂತೆ ಐದು ಜನರ ವಿರುದ್ಧ ಯುವತಿಯೋರ್ವರು ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಈ ದೂರಿನ ಆಧಾರದ ಮೇಲೆ ಎಫ್ ಐ ಆರ್(66/2026) ಕೂಡ ಆಗಿದೆ. ಕಳೆದ ಮೇ 31 ರಂದು ಎಫ್ ಐ ಆರ್ ಆಗಿದ್ದರೂ ಪೊಲೀಸರು ಮಾತ್ರ ಮೌನ ಹೊದ್ದು ಮಲಗಿರುವುದರಿಂದ ಮುಖ್ಯ ಆರೋಪಿ ಬಿಟ್ಟು ಉಳಿದವರಿಗೆಲ್ಲ ಜಾಮೀನಾಗಿದೆ.
ಮುಖ್ಯ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಪೊಲೀಸರೇ, ಕ್ರಮ ಕೈಗೊಳ್ಳಿ ಎಂದು ದಿನದಿನಾ ಆ ಸಂತ್ರಸ್ತ ಯುವತಿ ಠಾಣೆಗೆ ಹಗಲು ರಾತ್ರಿ ಎಡತಾಕುತ್ತಿದ್ದರೂ ಪೊಲೀಸರ ಮನಸಿಗೇಕೋ ಈ ಸಂತ್ರಸ್ತೆಯ ನೋವು ತಾಕುತ್ತಿಲ್ಲ!
ಒಮ್ಮೆ ನಂಬಿಕೆ ದ್ರೋಹದಿಂದ ಆ ಯುವಕನಿಂದ ಗರ್ಭಿಣಿಯೂ ಆಗಿದ್ದ ಸಂತ್ರಸ್ತೆಗೆ ಪಪ್ಪಾಯಿ, ಮಾತ್ರೆ ಎಂದೆಲ್ಲ ತಿನ್ನಿಸಿ ಗರ್ಭಪಾತದಂತಹ ಕೃತ್ಯ ಕೂಡ ನಡೆದಿದೆ ಎಂಬ ಗಂಭೀರ ಆರೋಪ ಕೂಡ ಇಲ್ಲಿದೆ.
ಆರ್ ಎಸ್ ಎಸ್ ಬಜರಂಗದಳದಲ್ಲಿ ಆ ಯುವಕ ಗುರುತಿಸಿಕೊಂಡಿದ್ದಾನೆ. ಈ ಸಂಘಟನೆಯ ಕೆಲ ಮಾನವೀಯ ಹೃದಯಿಗಳು ಯುವತಿಯ ಸ್ಥಿತಿಗೆ ಕರಗಿ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುವಂತೆ ಮಾಡಿದರು. ಈ ಪ್ರಕರಣದ ಗಂಭೀರತೆ ಅರ್ಥ ಮಾಡಿಕೊಂಡಿರುವ ಸಾಮಾಜಿಕ ಹೋರಾಟಗಾರ, ವಕೀಲರಾದ ಕೆ.ಪಿ.ಶ್ರೀಪಾಲ್ ಕೂಡ ಸಂತ್ರಸ್ತೆಗೆ ನ್ಯಾಯ ಸಿಗಲೆಂದು ಪ್ರಯತ್ನಿಸಿದ್ದಾರೆ.
ಆದರೆ, ಈವರೆಗೂ ಸಂತ್ರಸ್ತೆಗೆ ನ್ಯಾಯ ಸಿಕ್ಕಿಲ್ಲ. ಬದಲಿಗೆ ಆರೆಂಟು ಸಾವಿರ ಪೊಲೀಸರೇ ಅದೂ ಇದೂ ಹೇಳಿ ಸಂತ್ರಸ್ತೆಯಿಂದ ಪಡೆದುಕೊಂಡಿದ್ದಾರೆಂದು ಶ್ರೀಪಾಲ್ ಆರೋಪಿಸುತ್ತಿದ್ದಾರೆ ಕೂಡ.
ಮಹಿಳಾ ಠಾಣೆ ಪುರಾತನ ಪೊಲೀಸರ ತಂಗುದಾಣ ಆಗಿ ಹೋಗಿದ್ದು, ಇಂತಹ ನ್ಯಾಯ ಸಿಗದ ಹಲವು ಉದಾಹರಣೆಗಳು ಆಗಾಗ ಹೊರ ಬೀಳುತ್ತಿರುತ್ತವೆ. ಹಿಂದೊಮ್ಮೆ, ಮಹಿಳಾ ವೈದ್ಯೆಗೆ ನೀಡಿದ ಲೈಂಗಿಕ ಕಿರುಕುಳದ ಆರೋಪಿಯ ವಿಚಾರದಲ್ಲೂ ಮಹಿಳಾ ಠಾಣೆಯ ಪೊಲೀಸರ ನಿರ್ಲಕ್ಷ್ಯ ಎದ್ದುಕಂಡಿತ್ತೆಂದು ಶ್ರೀಪಾಲ್ ಉದಾಹರಣೆ ನೀಡಿದ್ದಾರೆ.
ಒಂದೆರಡು ದಿನಗಳಲ್ಲಿ ಈ ಸಂತ್ರಸ್ತ ಯುವತಿಗೆ ನ್ಯಾಯ ಸಿಗದಿದ್ದರೆ ವಕೀಲ ಶ್ರೀಪಾಲ್ ಧರಣಿ ಮಾಡಲಿದ್ದಾರೆ.
ಎಸ್ ಪಿ ನಿಖಿಲ್ ಬಿ. ಯವರು ಈಗಲಾದರೂ ಮಹಿಳಾ ಠಾಣೆಗೆ ಗಂಭೀರತೆಯ ಪಾಠ ಕಲಿಸಬೇಕಿದೆ…


