*ಶಿವಮೊಗ್ಗ ನಗರದಲ್ಲಿ ನೂತನ ‘ಆಡಳಿತ ಸೌಧ’ ನಿರ್ಮಾಣಕ್ಕೆ ಸಚಿವರಿಗೆ ಚೇತನ್ ಕೆ. ಗೌಡ ಮನವಿ*
*ಶಿವಮೊಗ್ಗ ನಗರದಲ್ಲಿ ನೂತನ ‘ಆಡಳಿತ ಸೌಧ’ ನಿರ್ಮಾಣಕ್ಕೆ ಸಚಿವರಿಗೆ ಚೇತನ್ ಕೆ. ಗೌಡ ಮನವಿ*
ಶಿವಮೊಗ್ಗ ನಗರದ ಸಮಗ್ರ ಅಭಿವೃದ್ಧಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲಾ ಪ್ರಮುಖ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ಶಿವಮೊಗ್ಗ ನಗರದಲ್ಲಿ ನೂತನ “ಆಡಳಿತ ಸೌಧ” ನಿರ್ಮಾಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಚೇತನ್ ಕೆ. ಗೌಡರವರು ಲೋಕೋಪಯೋಗಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಸಚಿವರ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿದ ಚೇತನ್ ಕೆ. ಗೌಡ ಅವರು, ಈ ಮಹತ್ವದ ಯೋಜನೆಗೆ ಶೀಘ್ರವಾಗಿ ಅಗತ್ಯ ಅನುದಾನ ಬಿಡುಗಡೆ ಮಾಡಿ ಕಾಮಗಾರಿಗೆ ಚಾಲನೆ ನೀಡಬೇಕಾಗಿ ವಿನಂತಿಸಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಿಂದ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದ ಸವಿಸ್ತಾರವಾದ ಯೋಜನಾ ವರದಿ (DPR) ಹಾಗೂ ಪೂರಕ ದಾಖಲೆಗಳ ಪ್ರತಿಗಳನ್ನು ಇದೇ ಸಂದರ್ಭದಲ್ಲಿ ಸಚಿವರಿಗೆ ಹಸ್ತಾಂತರಿಸಲಾಯಿತು.
ಪ್ರಸ್ತುತ ಶಿವಮೊಗ್ಗ ನಗರದ ಹಲವು ಪ್ರಮುಖ ಸರ್ಕಾರಿ ಕಚೇರಿಗಳು ಖಾಸಗಿ ಮಾಲೀಕತ್ವದ ಕಟ್ಟಡಗಳಲ್ಲಿ ಬಾಡಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಬಾಡಿಗೆಯನ್ನು ಸರ್ಕಾರವೇ ಭರಿಸಬೇಕಾಗಿದ್ದು, ಬೊಕ್ಕಸಕ್ಕೆ ಅನಗತ್ಯ ಆರ್ಥಿಕ ಹೊರೆಯಾಗಿದೆ. ಅಷ್ಟೇ ಅಲ್ಲದೆ, ಈ ಕಚೇರಿಗಳು ನಗರದ ವಿವಿಧೆಡೆ ಹರಿದು ಹಂಚಿಹೋಗಿರುವುದರಿಂದ ಸಾರ್ವಜನಿಕರು ಹಾಗೂ ರೈತರು ಒಂದೇ ದಿನದಲ್ಲಿ ವಿವಿಧ ಇಲಾಖೆಗಳ ಕೆಲಸಗಳನ್ನು ಮುಗಿಸಿಕೊಳ್ಳಲು ತೀವ್ರ ಪರದಾಡುವಂತಾಗಿದೆ.
ನೂತನ ಆಡಳಿತ ಸೌಧ ನಿರ್ಮಾಣಕ್ಕಾಗಿ ಗುರುತಿಸಲಾಗಿರುವ ಜಾಗವು ಶಿವಮೊಗ್ಗ ಮುಖ್ಯ ಬಸ್ ನಿಲ್ದಾಣದಿಂದ ಕೇವಲ 500 ಮೀಟರ್ ದೂರದಲ್ಲಿದೆ. ಇದು ಜಿಲ್ಲೆಯ ವಿವಿಧ ಭಾಗಗಳಿಂದ ಬರುವ ಜನಸಾಮಾನ್ಯರಿಗೆ ಅತ್ಯಂತ ಸುಲಭವಾಗಿ ತಲುಪಲು ಯೋಗ್ಯವಾದ ಕೇಂದ್ರ ಸ್ಥಾನವಾಗಿದೆ. ಈ ಯೋಜನೆಯು ಜಾರಿಗೆ ಬಂದರೆ ಸಾರ್ವಜನಿಕರಿಗೆ ದೊಡ್ಡ ಮಟ್ಟದ ಅನುಕೂಲವಾಗುವುದರ ಜೊತೆಗೆ ಸರ್ಕಾರದ ಆರ್ಥಿಕ ಹೊರೆಯೂ ತಪ್ಪಲಿದೆ ಎಂದು ಮಾನ್ಯ ಸಚಿವರಿಗೆ ಮಾಹಿತಿ ನೀಡಲಾಗಿದೆ. ಈ ಮಹತ್ವದ ಯೋಜನೆಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸರ್ಕಾರದ ವತಿಯಿಂದ ಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಪಲ್ಲವಿರವರು ಉಪಸ್ಥಿತರಿದ್ದರು.


