ಮಲೆನಾಡಿನ ಮನೆ ಮನೆಗೂ ರಕ್ಷಣೆ ಕೊಡುತ್ತೇವೆ: ಸಚಿವ ಮಧು ಬಂಗಾರಪ್ಪ* ======== – *ಕಸ್ತೂರಿ ರಂಗನ್ ವರದಿ ಜಾರಿಗೆ ಯಾವುದೇ ಕಾರಣಕ್ಕೂ ಅವಕಾಶವಿಲ್ಲ; ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ನಿಂದ ಬೃಹತ್ ಪಾದಯಾತ್ರೆ*

*ಮಲೆನಾಡಿನ ಮನೆ ಮನೆಗೂ ರಕ್ಷಣೆ ಕೊಡುತ್ತೇವೆ: ಸಚಿವ ಮಧು ಬಂಗಾರಪ್ಪ*
========

– *ಕಸ್ತೂರಿ ರಂಗನ್ ವರದಿ ಜಾರಿಗೆ ಯಾವುದೇ ಕಾರಣಕ್ಕೂ ಅವಕಾಶವಿಲ್ಲ; ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ನಿಂದ ಬೃಹತ್ ಪಾದಯಾತ್ರೆ*

ತೀರ್ಥಹಳ್ಳಿ, ಸೆ.7:

ಮಲೆನಾಡಿನ ಜನರ ಬದುಕಿಗೆ ಧಕ್ಕೆಯನ್ನುಂಟು ಮಾಡುವ ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಲು ಅವಕಾಶ ನೀಡುವುದಿಲ್ಲ. ಮಲೆನಾಡಿನ ಮನೆ ಮನೆಗೂ ರಕ್ಷಣೆ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅಭಯ ನೀಡಿದರು.

ಕಸ್ತೂರಿ ರಂಗನ್ ವರದಿ ರದ್ದುಪಡಿಸಿ ಮಲೆನಾಡು ಉಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ತೀರ್ಥಹಳ್ಳಿ ಘಟಕದ ವತಿಯಿಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಸೋಮವಾರ ನಡೆದ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತೀರ್ಥಹಳ್ಳಿಯ ಬಿಂತಳದಿಂದ ಆರಂಭಗೊಂಡ ಪಾದಯಾತ್ರೆ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದವರೆಗೆ ಸಾಗಿತು. ಪಾದಯಾತ್ರೆಯುದ್ದಕ್ಕೂ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.

ನಾನು 2013ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದಾಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಆಗ ಕಸ್ತೂರಿ ರಂಗನ್ ವರದಿ ಕುರಿತು ಸಚಿವ ಸಂಪುಟ ಉಪಸಮಿತಿ ರಚಿಸಲಾಗಿತ್ತು ಈ ಸಮಿತಿಯ ಶಿಫಾರಸಿನಂತೆ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಲಾಗಿತ್ತು. ಕಸ್ತೂರಿ ರಂಗನ್ ವರದಿಯನ್ನು ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದೆ. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ವರದಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.

ಇದು ಕೇವಲ ಒಂದು ಅಧಿಸೂಚನೆಯನ್ನು ವಿರೋಧಿಸುವ ಹೋರಾಟವಲ್ಲ. ಮಲೆನಾಡಿನ ನೆಲ, ಕೃಷಿ, ಬದುಕು ಹಾಗೂ ಭವಿಷ್ಯವನ್ನು ರಕ್ಷಿಸುವ ಸಂಕಲ್ಪದ ಹೋರಾಟವಾಗಿದೆ. ಪಶ್ಚಿಮ ಘಟ್ಟ ನಮ್ಮ ಹೆಮ್ಮೆ. ಪರಿಸರ ಸಂರಕ್ಷಣೆ ಅಗತ್ಯ. ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಪರಿಸರದೊಂದಿಗೇ ಬದುಕುತ್ತಿರುವ ಮಲೆನಾಡಿನ ಜನರನ್ನು ಸಂಕಷ್ಟಕ್ಕೆ ಸಿಲುಕಿಸುವ ಯಾವುದೇ ಕ್ರಮವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.

*ರಾಘವೇಂದ್ರ, ಶೋಭಾ ಸಭೆಗೆ ಹೋಗಿದ್ದರೇ?*

ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಇಂದು ಬಿಜೆಪಿಯವರು ಮಲೆನಾಡಿನ ರೈತರ ಪರವಾಗಿ ಮಾತನಾಡುತ್ತಿರುವುದಾಗಿ ಹೇಳುತ್ತಿದ್ದಾರೆ. ಆದರೆ 2016ರ ಆಗಸ್ಟ್ 11ರಂದು ಕೇಂದ್ರ ಸರ್ಕಾರ ಕರೆದಿದ್ದ ಅತ್ಯಂತ ಮಹತ್ವದ ಸಭೆಗೆ ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಅಂದಿನ ಉಡುಪಿ-ಚಿಕ್ಕಮಗಳೂರು ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆ ಅವರು ಭಾಗವಹಿಸಿದ್ದರೇ? ಎಂದು ಪ್ರಶ್ನಿಸಿದ ಅವರು, ಈಗ ಬಿಜೆಪಿಯವರು ಈ ವಿಚಾರದಲ್ಲಿ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಿದ್ದಾರೆ ಎಂದು ಟೀಕಿಸಿದರು.

*ಏಳನೇ ಬಾರಿ ಕರಡು ಅಧಿಸೂಚನೆ*

ಕರ್ನಾಟಕ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಹಲವು ಬಾರಿ ಸ್ಪಷ್ಟವಾಗಿ ತಿರಸ್ಕರಿಸಿದೆ. ವಿಧಾನಸಭೆಯಲ್ಲಿಯೂ ವರದಿಯನ್ನು ತಿರಸ್ಕರಿಸುವ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಆದರೂ ಕೇಂದ್ರದ ಬಿಜೆಪಿ ಸರ್ಕಾರ ಮತ್ತೆ ಮತ್ತೆ ಅಧಿಸೂಚನೆಗಳನ್ನು ಹೊರಡಿಸುತ್ತಿದೆ. ಇದೀಗ ಏಳನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ ಎಂದರು.

ಮೊದಲ ಆರು ಅಧಿಸೂಚನೆಗಳಲ್ಲಿ ತೀರ್ಥಹಳ್ಳಿ ತಾಲ್ಲೂಕಿನ 139 ಗ್ರಾಮಗಳನ್ನು ಸೇರಿಸಲಾಗಿತ್ತು. ಇದನ್ನು ತೀರ್ಥಹಳ್ಳಿಯ ಜನರು ಹಾಗೂ ರಾಜ್ಯ ಸರ್ಕಾರ ವಿರೋಧಿಸಿತ್ತು. ಆದರೆ ಇದೀಗ ಅಂತಿಮ ಅಧಿಸೂಚನೆಯ ಹೆಸರಿನಲ್ಲಿ ಗ್ರಾಮಗಳ ಸಂಖ್ಯೆಯನ್ನು 154ಕ್ಕೆ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಸ್ಥಳೀಯ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಈ ವಿಚಾರದಲ್ಲಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಮಧು ಬಂಗಾರಪ್ಪ, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

*ನಾವು ಪರಿಸರದ ಭಾಗ*

ಪಶ್ಚಿಮ ಘಟ್ಟದಲ್ಲಿ ಸಾವಿರಾರು ವರ್ಷಗಳಿಂದ ಜನರು ಬದುಕುತ್ತಿದ್ದಾರೆ. ಕೃಷಿ ಮಾಡುತ್ತಿದ್ದಾರೆ. ಅಡಕೆ, ಭತ್ತ, ಕಾಫಿ, ಮೆಣಸು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ನಾವು ಪರಿಸರ ವಿರೋಧಿಗಳಲ್ಲ; ನಾವೇ ಪರಿಸರದ ಭಾಗ. ಪ್ರಕೃತಿಯೊಂದಿಗೆ ಬದುಕುತ್ತಿರುವವರು ನಮ್ಮ ಮಲೆನಾಡಿನ ರೈತರು ಎಂದು ಹೇಳಿದರು.

ಮಲೆನಾಡಿನ ರೈತರೊಂದಿಗೆ ಸರ್ಕಾರ ನಿಲ್ಲಲಿದೆ. ರೈತರ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಕ್ರಮಕ್ಕೂ ಅವಕಾಶ ನೀಡುವುದಿಲ್ಲ. ಹೀಗಾಗಿ ಮಲೆನಾಡಿನ ರೈತರು ಆತಂಕಪಡಬಾರದು. ನಿಮ್ಮ ಜಮೀನು, ಕೃಷಿ ಮತ್ತು ಬದುಕಿನ ವಿಚಾರದಲ್ಲಿ ನಿಮ್ಮ ಸರ್ಕಾರ ನಿಮ್ಮ ಜೊತೆಗಿದೆ ಎಂದು ಭರವಸೆ ನೀಡಿದರು.

*ವಿಶೇಷ ಅಧಿವೇಶನದಲ್ಲಿ ಸ್ಪಷ್ಟ ನಿಲುವು*

ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಶೇಷ ಅಧಿವೇಶನ ಕರೆದಿರುವುದು ಮಹತ್ವದ ಬೆಳವಣಿಗೆಯಾಗಿದೆ. ಈ ಅಧಿವೇಶನದಲ್ಲಿ ಸರ್ಕಾರ ತನ್ನ ಸ್ಪಷ್ಟ ನಿಲುವನ್ನು ಮತ್ತೊಮ್ಮೆ ವ್ಯಕ್ತಪಡಿಸಲಿದೆ ಎಂದು ಹೇಳಿದರು.

*ಬಂಗಾರಪ್ಪರ ಆಶಯ ಮುಂದುವರಿಸುವುದು ಕರ್ತವ್ಯ*

ನನ್ನ ತಂದೆ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ತಮ್ಮ ಇಡೀ ರಾಜಕೀಯ ಜೀವನದಲ್ಲಿ ರೈತರು, ಬಡವರು ಮತ್ತು ಜನಸಾಮಾನ್ಯರ ಪರವಾಗಿ ನಿಂತವರು. ಅವರ ರಾಜಕಾರಣದ ಮೂಲಮಂತ್ರವೇ ಜನರ ಬದುಕು. ಅವರ ಆಶಯಗಳನ್ನು ಮುಂದುವರಿಸುವುದು ನನ್ನ ಕರ್ತವ್ಯ. ಅವರ ಮಾರ್ಗದಲ್ಲಿಯೇ ನಾನು ನಡೆಯುತ್ತಿದ್ದೇನೆ. ಮಲೆನಾಡಿನ ರೈತನಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ ಎಂದು ಮಧು ಬಂಗಾರಪ್ಪ ಹೇಳಿದರು.

ದೇವರಾಜ ಅರಸು ಅವರು ಭೂ ಹಕ್ಕು ನೀಡಿದರು. ಬಂಗಾರಪ್ಪ ಅವರು ಆ ಭೂಮಿಗೆ ಪಂಪ್‌ಸೆಟ್ ನೀಡಿ ಭೂಮಿಯನ್ನು ಹಸಿರಾಗಿಸಿದರು. ಸಿದ್ದರಾಮಯ್ಯ ಅವರು ಅನ್ನ ನೀಡಿದರು. ಈ ಮೂವರು ನಾಯಕರ ಸಮಾಜಪರ ಕಾಳಜಿಯಿಂದ ರಾಜ್ಯ ಅಭಿವೃದ್ಧಿಯಾಗಿದೆ. ಬಿಜೆಪಿ ಏನು ಮಾಡಿದೆ? ಯಡಿಯೂರಪ್ಪ ಅವರ ಸಾಧನೆ ಏನು? ಎಂದು ಪ್ರಶ್ನಿಸಿದರು.

ಬಂಗಾರಪ್ಪ ಅವರು ಉಚಿತ ಪಂಪ್‌ಸೆಟ್ ನೀಡಿದ್ದರ ಫಲವಾಗಿ ಇಂದು ಶಿವಮೊಗ್ಗ ಜಿಲ್ಲೆಯಲ್ಲಿ 1.14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆ ವಿಸ್ತರಣೆಯಾಗಿದೆ ಎಂದು ಹೆಮ್ಮೆಯಿಂದ ಹೇಳಿದರು.

*’ನಿಮ್ಮ ಬೆಂಬಲಕ್ಕೆ ನಾನು ಬಂದಿದ್ದೇನೆ’*

ಮುಂಗಾರು ಅಧಿವೇಶನವನ್ನು ಸರ್ವನಾಶ ಮಾಡಿದವರು ಬಿಜೆಪಿಯವರು. ರಾಜ್ಯದ ಸಮಸ್ಯೆಗಳ ಕುರಿತು ಚರ್ಚಿಸಲು ಅವರಿಗೆ ಆಸಕ್ತಿ ಇಲ್ಲ. ಈಗ ಪ್ರತಿಭಟನೆಯ ನಾಟಕ ಮಾಡುತ್ತಿದ್ದಾರೆ. ಕಸ್ತೂರಿ ರಂಗನ್ ವರದಿ ಕುರಿತು ಬಿಜೆಪಿಯ ರಾಜ್ಯ ಮತ್ತು ಕೇಂದ್ರ ನಾಯಕರ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಇಂದು ದೆಹಲಿಗೆ ತೆರಳಿ, ಪಕ್ಷದ ವರಿಷ್ಠ ನಾಯಕರಾದ ಶ್ರೀ ರಾಹುಲ್‌ ಗಾಂಧಿಯವರ ಆಶಯದಂತೆ ಏರ್ಪಡಿಸಲಾಗಿದ್ದ ಶಿಕ್ಷಣ ಸುಧಾರಣೆ ಕುರಿತ ಸಭೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ನಿನ್ನೆ ರಾತ್ರಿ ಸಭೆ ರದ್ದಾದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬೆಳಗಿನ ಜಾವ 3 ಗಂಟೆಗೆ ಎದ್ದು ತೀರ್ಥಹಳ್ಳಿಗೆ ಬಂದಿದ್ದೇನೆ. ನಿಮ್ಮ ಬೆಂಬಲಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ. ಕಸ್ತೂರಿ ರಂಗನ್ ವರದಿ ಕುರಿತು ನನಗೆ ವಿರೋಧವಿರುವುದರಿಂದ ಸ್ವಯಂಪ್ರೇರಣೆಯಿಂದ ಬಂದಿದ್ದೇನೆ ಎಂದು ಸಚಿವರು ಹೇಳಿದರು.

ನಾನು ಬಂಗಾರಪ್ಪ ಅವರ ಮಗ. ಅವರ ಆಶಯವನ್ನು ಎತ್ತಿಹಿಡಿಯುವುದು ನನ್ನ ಕರ್ತವ್ಯ. ಮಲೆನಾಡಿನ ಜನರ ಹಿತ ಕಾಪಾಡಲು ಸದಾ ನಿಮ್ಮೊಂದಿಗೆ ಇರುತ್ತೇನೆ. ಮಲೆನಾಡಿನ ಮನೆ ಮನೆಗೂ ರಕ್ಷಣೆ ನೀಡುತ್ತೇವೆ ಎಂದು ಮಧು ಬಂಗಾರಪ್ಪ ಅಭಯ ನೀಡಿದರು.

ಈ ಪಾದಯಾತ್ರೆ ಮತ್ತು ಪ್ರತಿಭಟನಾ ಸಭೆಯಲ್ಲಿ ಕೆಪಿಸಿಸಿ ಪ್ರಚಾರ ಸಭೆಯ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಶ್ವೇತಾ ಬಂಡಿ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ರಮೇಶ್ ಶೆಟ್ಟಿ, ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಮುಖಂಡರಾದ  ರಮೇಶ್ ಹೆಗಡೆ, ಕೆಸ್ತೂರು ಮಂಜುನಾಥ್, ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೂಡುಬ ರಾಘವೇಂದ್ರ, ಶ್ರೀನಿವಾಸ ಕರಿಯಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.