*ಕಸ್ತೂರಿ ರಂಗನ್ ವರದಿ ಜಾರಿಯಾಗಬಾರದು – ರಾಜ್ಯಸರ್ಕಾರದ ನಿಲುವು ಸರಿಯಾಗಿದೆ, ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಸ್ವಾಗತ: ವೈ.ಹೆಚ್ ನಾಗರಾಜ್*

*ಕಸ್ತೂರಿ ರಂಗನ್ ವರದಿ ಜಾರಿಯಾಗಬಾರದು – ರಾಜ್ಯಸರ್ಕಾರದ ನಿಲುವು ಸರಿಯಾಗಿದೆ, ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಸ್ವಾಗತ: ವೈ.ಹೆಚ್ ನಾಗರಾಜ್*

ಶಿವಮೊಗ್ಗ: ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡಬಾರದು ಎನ್ನುವ ಕರ್ನಾಟಕ ರಾಜ್ಯ ಸರ್ಕಾರದ ನಿಲುವು ಅತ್ಯಂತ ಸರಿಯಾಗಿದೆ. ಈ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು “ವರದಿ ಜಾರಿಗೆ ಅವಕಾಶ ನೀಡುವುದಿಲ್ಲ, ಮಲೆನಾಡು ರೈತರು ಆತಂಕ ಪಡುವ ಅಗತ್ಯವಿಲ್ಲ” ಎಂದು ಸ್ಪಷ್ಟ ಭರವಸೆ ನೀಡಿರುವುದನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್ ನಾಗರಾಜ್ ಹೇಳಿದ್ದಾರೆ.

ಕೇಂದ್ರ ಸರ್ಕಾರ 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿರುವುದು ಖಂಡನೀಯ. ರಾಜ್ಯ ಸರ್ಕಾರ ಈಗಾಗಲೇ ವಿಧಾನಸಭೆಯಲ್ಲಿ ವರದಿಯನ್ನು ತಿರಸ್ಕರಿಸುವ ನಿರ್ಣಯ ಮಾಡಿ ಕೇಂದ್ರಕ್ಕೆ ಅಧಿಕೃತವಾಗಿ ಪತ್ರ ಬರೆದಿದ್ದರೂ, ಕೇಂದ್ರ ಮತ್ತೆ ಮತ್ತೆ 20,668 ಚ.ಕಿ.ಮೀ ಪ್ರದೇಶದ 1,576 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯ (ESZ) ಎಂದು ಘೋಷಿಸಲು ಹೊರಟಿರುವುದು ಸರಿಯಲ್ಲ.ಇದರಲ್ಲಿ ನಮ್ಮ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 484 ಗ್ರಾಮಗಳು ಸೇರಿವೆ. ಜನವಸತಿ ಪ್ರದೇಶ, ಕೃಷಿ ಭೂಮಿ, ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರ ಜಮೀನುಗಳನ್ನೂ ESZ ವ್ಯಾಪ್ತಿಗೆ ತಂದರೆ ರೈತರು ಬದುಕುವುದಾದರೂ ಹೇಗೆ? ಕೃಷಿ ಚಟುವಟಿಕೆ, ಮನೆ ದುರಸ್ತಿ, ಗ್ರಾಮೀಣ ರಸ್ತೆ, ಸಣ್ಣ ಕೈಗಾರಿಕೆ, ಪ್ರವಾಸೋದ್ಯಮ ಎಲ್ಲವೂ ಸ್ಥಗಿತಗೊಳ್ಳುತ್ತದೆ. ಉಪಗ್ರಹ ಸಮೀಕ್ಷೆಯ ಬದಲಾಗಿ ಮೈದಾನ ಮಟ್ಟದ ವಾಸ್ತವಿಕ ಸಮೀಕ್ಷೆ ನಡೆಸಿ ಜನವಸತಿ ಪ್ರದೇಶಗಳನ್ನು ಪಟ್ಟಿಯಿಂದ ಕೈಬಿಡಬೇಕಾಗಿದೆ.ರಾಜ್ಯ ಸರ್ಕಾರದ ನಿಲುವು ಸ್ಪಷ್ಟವಾಗಿದೆ. 20,668 ಚ.ಕಿ.ಮೀ ಪೈಕಿ 16 ಸಾವಿರ ಚ.ಕಿ.ಮೀ ಈಗಾಗಲೇ ಅಭಯಾರಣ್ಯ, ರಾಷ್ಟ್ರೀಯ ಉದ್ಯಾನ, ಹುಲಿ ಯೋಜನೆ ವ್ಯಾಪ್ತಿಯಲ್ಲಿ ಸಂರಕ್ಷಿತವಾಗಿದೆ. ಉಳಿದ 4 ಸಾವಿರ ಚ.ಕಿ.ಮೀ ಜನವಸತಿ ಮತ್ತು ಕೃಷಿ ಪ್ರದೇಶವನ್ನು ಯಾವುದೇ ಕಾರಣಕ್ಕೂ ಸೇರಿಸಬಾರದು.ಸಚಿವ ಮಧು ಬಂಗಾರಪ್ಪ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಾಗೂ ಅರಣ್ಯ ಸಚಿವರು ಮಲೆನಾಡಿನ ರೈತರ ಪರವಾಗಿ ಗಟ್ಟಿಯಾಗಿ ನಿಂತಿರುವುದು ಸಮಾಧಾನಕರ ಸಂಗತಿ. ಈ ವರದಿ ಶಾಶ್ವತವಾಗಿ ಜಾರಿಯಾಗದಂತೆ ನೋಡಿಕೊಳ್ಳಬೇಕು ಮತ್ತು ಮಲೆನಾಡು ರೈತರ ಹಲವು ವರ್ಷಗಳ ಆತಂಕವನ್ನು ಶಾಶ್ವತವಾಗಿ ಕೊನೆಗೊಳಿಸಬೇಕು ಎಂದು ಅವರು ತಿಳಿಸಿದ್ದಾರೆ.

ಈ ಹೋರಾಟ ಪಕ್ಷಾತೀತವಾಗಬೇಕು. ಇದು ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ,ರಾಜಕೀಯದ ವಿಚಾರದಲ್ಲ, ಇದು ನಮ್ಮ ಮಣ್ಣಿನ ಮತ್ತು ರೈತರ ಬದುಕಿನ ಪ್ರಶ್ನೆ. ಈ ಭಾಗದ ಸಂಸದರು ಸೇರಿದಂತೆ ಎಲ್ಲಾ ಪಕ್ಷಗಳ ಮುಖಂಡರು, ರೈತ ಸಂಘಟನೆಗಳು ಒಗ್ಗೂಡಿ ಕೇಂದ್ರದ ಈ ಏಕಪಕ್ಷೀಯ ನಡೆಗೆ ತಕ್ಕ ಉತ್ತರ ನೀಡಬೇಕು.

ರಾಜ್ಯ ಸರ್ಕಾರ ಮತ್ತೊಮ್ಮೆ ವಿಶೇಷ ನಿರ್ಣಯ ಮಾಡಿ ಕೇಂದ್ರಕ್ಕೆ ಕಳುಹಿಸಿ ಇದಕ್ಕೆ ಶಾಶ್ವತ ಅಂತ್ಯ ಹಾಡಬೇಕು ಎಂದು ವೈ ಹೆಚ್ ನಾಗರಾಜ್
ಮನವಿ ಮಾಡಿದ್ದಾರೆ.