*ಸೆಪ್ಟೆಂಬರ್ 26ರಿಂದ 5 ದಿನ ಬ್ಯಾಂಕುಗಳು ಬಂದ್!!*

*ಸೆಪ್ಟೆಂಬರ್ 26ರಿಂದ 5 ದಿನ ಬ್ಯಾಂಕುಗಳು ಬಂದ್!!*

ಈ ವಾರಾಂತ್ಯದಿಂದ ಶುರುವಾಗಿ ಮುಂದಿನ ಬುಧವಾರದವರೆಗೂ ದೇಶಾದ್ಯಂತ ಎಲ್ಲಾ ಬ್ಯಾಂಕುಗಳು ಮುಚ್ಚಿರುತ್ತವೆ. ಸೆಪ್ಟೆಂಬರ್ 26ರಿಂದ 30ರವರೆಗೆ ಸತತ ಐದು ದಿನಗಳ ಕಾಲ ಬ್ಯಾಂಕ್ ಬಂದ್ ಆಗಿರುತ್ತವೆ. ಹೀಗಾಗಿ, ಈ ವಾರ ತುರ್ತು ಬ್ಯಾಂಕ್ ಕೆಲಸ ಇರುವವರು ಮುಂಜಾಗ್ರತೆಯಾಗಿ ಶುಕ್ರವಾರದೊಳಗೆ ಮುಗಿಸಿಕೊಳ್ಳಬಹುದು. ಸೆಪ್ಟೆಂಬರ್ 28ರಂದ ಮೂರು ದಿನಗಳ ಕಾಲ ಬ್ಯಾಂಕ್ ಉದ್ಯೋಗಿಗಳ ಮುಷ್ಕರ (Bank Employees Strike) ಇರುವುದರಿಂದ ಮತ್ತು ಸೆಪ್ಟೆಂಬರ್ 26 ಮತ್ತು 27ರಂದು ಶನಿವಾರ, ಭಾನುವಾರವಾದ್ದರಿಂದ ರಜೆಗಳಿವೆ. ಹೀಗಾಗಿ, ಸತತ ಐದು ದಿನ ಬ್ಯಾಂಕ್ ಕಚೇರಿಗಳುಬಾಗಿಲು ಬಂದ್ ಮಾಡಿರುತ್ತವೆ.

ಬ್ಯಾಂಕ್ ಉದ್ಯೋಗಿಗಳ ಸಂಘಟನೆಗಳ ಮಹಾ ಒಕ್ಕೂಟದಿಂದ ಸೆಪ್ಟೆಂಬರ್ 11ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆದಿತ್ತು. ಆದರೆ, ಉದ್ಯೋಗಿಗಳ ಬೇಡಿಕೆಗಳಿಗೆ ಸರ್ಕಾರದ ಸ್ಪಂದನೆ ಸಿಗದೇ ಹೋದ ಕಾರಣ, ಮೊದಲೇ ಯೋಜಿಸಿದಂತೆ ಸೆಪ್ಟೆಂಬರ್ 26, 27 ಮತ್ತು 28, ಈ ಮೂರು ದಿನಗಳಂದು ಮುಷ್ಕರ ನಡೆಸುವುದೆಂದು ಸಂಘಟನೆಗಳು ನಿರ್ಧರಿಸಿವೆ. ಒಂದು ವೇಳೆ, ಸರ್ಕಾರದಿಂದ ಸರಿಯಾದ ಸ್ಪಂದನೆ ಆಗಲೂ ಸಿಗದೇ ಹೋದಲ್ಲಿ ಅಕ್ಟೋಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ತೀರ್ಮಾನಕ್ಕೆ ಬ್ಯಾಂಕ್ ಉದ್ಯೋಗಿಗಳು ಬಂದಿದ್ದಾರೆ.

ಭಾರತದ ನಂಬರ್ ಒನ್ ಬ್ಯಾಂಕ್ ಆಗಿರುವ ಎಸ್​ಬಿಐ ತನ್ನ ಗ್ರಾಹಕರಿಗೆ ಅಡ್ವೈಸರಿ ಬಿಡುಗಡೆ ಮಾಡಿದ್ದು, ಮುಷ್ಕರ ಆರಂಭವಾಗುವುದರೊಳಗೆ ಬ್ಯಾಂಕ್ ವಹಿವಾಟುಗಳ್ಯಾವುದಾದರೂ ಇದ್ದರೆ ಮುಗಿಸಿಕೊಳ್ಳಬೇಕೆಂದು ಸಲಹೆ ನೀಡಿದೆ.

ಕಚೇರಿ ಮುಚ್ಚಿದ್ದರೂ ಈ ಬ್ಯಾಂಕಿಂಗ್ ಸೇವೆಗಳು ಲಭ್ಯ
ಕ್ಯಾಷ್ ಬೇಕೆಂದರೆ ಎಟಿಎಂ, ಎಡಿಡಬ್ಲ್ಯುಎಂಗಳನ್ನು ಬಳಸಬಹುದು. ಇವು 24 ಗಂಟೆಯೂ ತೆರೆದಿರುತ್ತವೆ.
ಕಸ್ಟಮರ್ ಸರ್ವಿಸ್ ಪಾಯಿಂಟ್​ಗಳನ್ನು ಬಳಸಬಹುದು.
ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಯುಪಿಐ ಇತ್ಯಾದಿ ಡಿಜಿಟಲ್ ಚಾನಲ್​ಗಳನ್ನು ಬಳಸಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಮೇಲಿನ ಸಲಹೆಗಳನ್ನು ತನ್ನ ಅಡ್ವೈಸರಿಯಲ್ಲಿ ನೀಡಿದೆ.

ಯಾವ ಬ್ಯಾಂಕಿಂಗ್ ಸೇವೆಗಳಿಗೆ ಅಡ್ಡಿ?
ಚೆಕ್ ಡೆಪಾಸಿಟ್ ಮಾಡಲು, ಚೆಕ್ ಎನ್​ಕ್ಯಾಷ್ ಮಾಡಲು, ಆರ್​ಟಿಜಿಎಸ್ ಮಾಡಲು ಇತ್ಯಾದಿ ಬ್ಯಾಂಕಿಂಗ್ ಕೆಲಸಗಳಿಗೆ ಕಚೇರಿ ಹೋಗಲೇಬೇಕಾಗುತ್ತದೆ. ಇಂಥ ಕೆಲಸಗಳು ಆಗಬೇಕಿದ್ದವರು ಸೆಪ್ಟೆಂಬರ್ 25ರೊಳಗೆ ಅಥವಾ ಅಕ್ಟೋಬರ್ 1ರಿಂದ ಮಾಡಿಕೊಳ್ಳಬಹುದು.