*ವಿಧಾನ ಪರಿಷತ್ ಚುನಾವಣೆಯ ಗೆಲುವಿನಿಂದ ಬಿಜೆಪಿ ಬೀಗುವ ಅವಶ್ಯಕತೆ ಇಲ್ಲ – ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್*
*ವಿಧಾನ ಪರಿಷತ್ ಚುನಾವಣೆಯ ಗೆಲುವಿನಿಂದ ಬಿಜೆಪಿ ಬೀಗುವ ಅವಶ್ಯಕತೆ ಇಲ್ಲ – ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್*
ಶಿವಮೊಗ್ಗ: ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದು ಬಿಜೆಪಿ ಬೀಗುವ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಅದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಜನಾದೇಶವನ್ನು ಗೌರವಿಸಬೇಕು, ಹೊರತು ಅದನ್ನೇ ಇಟ್ಟುಕೊಂಡು ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ನಾಯಕರನ್ನು ಹೀಯಾಳಿಸುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದ್ದಾರೆ.
ಇದೇ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ನಡೆದಾಗ, ಪಕ್ಷದ ಶಿಸ್ತು ಉಲ್ಲಂಘನೆಯಾದಾಗ ಬಿಜೆಪಿ ನಾಯಕರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿರುವ ನಾಗರಾಜ್ ಅವರು, ತಮ್ಮ ಪಕ್ಷದೊಳಗಿನ ಲೋಪದೋಷಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಸಂಭ್ರಮಾಚರಣೆ ತಪ್ಪಲ್ಲ, ಆದರೆ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ನೀಡಿರುವ ಟೀಕೆಗೆ ಯಾವುದೇ ಅರ್ಥವಿಲ್ಲ. ಪ್ರಧಾನಿ ಮೋದಿಜೀ ಅವರ ಕ್ಷೇತ್ರದಲ್ಲೇ ಸಮಾಜವಾದಿ ಪಕ್ಷ ಗೆಲುವು ಸಾಧಿಸಿದೆ ಎಂಬುದನ್ನು ಬಿಜೆಪಿ ನಾಯಕರು ಮರೆಯಬಾರದು. ವಾರಣಾಸಿಯಲ್ಲೇ ಬಿಜೆಪಿಗೆ ಸವಾಲು ಎದುರಾಗಿದ್ದರೆ, ಇದು ರಾಜ್ಯದ ಒಂದು ಪರಿಷತ್ ಕ್ಷೇತ್ರದ ಸಣ್ಣ ಚುನಾವಣೆ ಮಾತ್ರ ಎಂದು ಅವರು ಕುಟುಕಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕರನ್ನು ಟೀಕಿಸುವ ಬಿಜೆಪಿ ನಾಯಕರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾವೆಷ್ಟು ನೈತಿಕತೆಯಲ್ಲಿ ಇದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕು. ಅಧಿಕಾರಕ್ಕಾಗಿ ಯಾವ ಮಟ್ಟಕ್ಕೂ ಇಳಿಯುವ ಬಿಜೆಪಿಯ ಸಂಸ್ಕೃತಿ ರಾಜ್ಯದ ಜನರಿಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ವಿಧಾನಸಭಾ ಚುನಾವಣೆಯೂ ಬರಲಿದೆ. ಆಗ ಜನರೇ ಬಿಜೆಪಿಯ ಈ ಬೀಗುವಿಕೆಗೆ, ಅಹಂಕಾರಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಕಾಂಗ್ರೆಸ್ ಪಕ್ಷ ಜನರ ವಿಶ್ವಾಸದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ವೈ.ಹೆಚ್. ನಾಗರಾಜ್ ಅವರು ವ್ಯಕ್ತಪಡಿಸಿದ್ದಾರೆ.


