*89ನೇ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ದಾಸವಾಣಿ ಕಾರ್ಯಕ್ರಮ*
*89ನೇ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ದಾಸವಾಣಿ ಕಾರ್ಯಕ್ರಮ*
*ಶಿವಮೊಗ್ಗ:* ಸಪ್ತಸ್ವರ ಸಂಗೀತ ಸಭಾ (ರಿ.) ವತಿಯಿಂದ ಸಂಸ್ಥಾಪಕರಾದ ದಿ. ಶ್ರೀ ಅರುಣ್ ಹಂಪಿಹೊಳಿ ಅವರ ನಾಲ್ಕನೇ ವರ್ಷದ ಪುಣ್ಯತಿಥಿಯ ಅಂಗವಾಗಿ 89ನೇ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ದಾಸವಾಣಿ ಕಾರ್ಯಕ್ರಮವನ್ನು ನವೆಂಬರ್ 22ರ ಭಾನುವಾರ ಸಂಜೆ 6 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಭಾದ ಅಧ್ಯಕ್ಷ ಭಾಸ್ಕರ್ ಜಿ. ಕಾಮತ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಧಾರವಾಡದ ಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರ ಡಾ. ಪಂ. ವಿಜಯ್ಕುಮಾರ್ ಪಾಟೀಲ್ ಅವರಿಂದ ಗಾಯನ ನಡೆಯಲಿದೆ. ಅವರಿಗೆ ತಬಲಾದಲ್ಲಿ ಸುಮಿತ್ ನಾಯಕ್, ಹಾರ್ಮೋನಿಯಂನಲ್ಲಿ ರೇಖಾ ಅರುಣ್ ಹಂಪಿಹೊಳಿ ಹಾಗೂ ತಾಳದಲ್ಲಿ ಶ್ರೀ ಕಾರ್ತಿಕೇಯ ಪ್ರಭು ಸಹಕರಿಸಲಿದ್ದಾರೆ ಎಂದರು.
ವಿಜಯ್ಕುಮಾರ್ ಪಾಟೀಲ್ ಅವರು ಕಿರಾಣಾ ಘರಾಣೆಯ ಹಿರಿಯ ವಿದ್ವಾಂಸರಾದ ಪಂ. ಸಂಗಮೇಶ್ವರ ಗುರವ ಹಾಗೂ ಪಂ. ಕೈವಲ್ಯಕುಮಾರ್ ಗುರವರಲ್ಲಿ ಕಿರಾಣಾ ಘರಾಣೆಯ ಸೂಕ್ಷ್ಮಾಂಶಗಳನ್ನು ಅಭ್ಯಸಿಸಿದ್ದಾರೆ. ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಮಧುರವಾದ ಧ್ವನಿ, ಸುಶ್ರಾವ್ಯ ಸ್ವರಗಳು ಹಾಗೂ ಸಾಹಿತ್ಯವನ್ನು ಭಾವಪೂರ್ಣವಾಗಿ ಪ್ರಸ್ತುತಪಡಿಸುವ ಇವರು ಹಿಂದುಸ್ತಾನಿ ಗಾಯನದೊಂದಿಗೆ ದಾಸವಾಣಿ, ವಚನ, ರಂಗಗೀತೆ, ಮರಾಠಿ ಅಭಂಗ್ ಹಾಗೂ ನಾಟ್ಯಗೀತೆಗಳನ್ನು ಪ್ರಸ್ತುತಪಡಿಸುತ್ತಾರೆ ಎಂದರು.
2013ನೇ ಸಾಲಿನ ಡಾ. ಮಲ್ಲಿಕಾರ್ಜುನ ಮನಸೂರು ರಾಷ್ಟ್ರೀಯ ಯುವಪುರಸ್ಕಾರ, 2008ರ ಪಂಜಾಬಿನಲ್ಲಿ ನಡೆದ ಹರಿವಲ್ಲಭ ಸಂಗೀತ ಸಮ್ಮೇಳನದಲ್ಲಿ ರಾಷ್ಟ್ರಮಟ್ಟದ ಪ್ರಥಮಸ್ಥಾನ ಹಾಗೂ ಚಿನ್ನದ ಪದಕ, ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರಮಟ್ಟದ ಯುವಜನೋತ್ಸವದಲ್ಲಿ ಪ್ರಥಮಸ್ಥಾನ ಸೇರಿದಂತೆ ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ ಎಂದು ಅವರು ತಿಳಿಸಿದರು.
ಸಂಗೀತ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಭಾದ ಕಾರ್ಯದರ್ಶಿ ಕೆ.ಜೆ. ಕುಮಾರಶಾಸ್ತ್ರಿ, ಉಪಾಧ್ಯಕ್ಷ ಆರ್. ಅಚ್ಯುತ್ ರಾವ್, ಜಂಟಿ ಕಾರ್ಯದರ್ಶಿ ಎನ್. ಹೆಚ್. ದೇವಕುಮಾರ್, ಖಜಾಂಚಿ ವಿವೇಕಾನಂದ ನಾಯಕ್, ಹೆಚ್.ಜಿ. ದ್ವಾರಕಾನಾಥ್, ವಿನೋದ್ ಪೈ ಇದ್ದರು.


