*ತುಂಗಾ ನದಿಯಲ್ಲಿ ಈಜಾಡಲು ತೆರಳಿದ್ದ ಬೆಂಗಳೂರಿನ ನಾಲ್ವರು ಯುವಕರು ನೀರುಪಾಲು* *ಓರ್ವನ ಮೃತದೇಹ ಪತ್ತೆ* *ಮುಂದುವರಿದ ಶೋಧ ಕಾರ್ಯಾಚರಣೆ*

*ತುಂಗಾ ನದಿಯಲ್ಲಿ ಈಜಾಡಲು ತೆರಳಿದ್ದ ಬೆಂಗಳೂರಿನ ನಾಲ್ವರು ಯುವಕರು ನೀರುಪಾಲು*

*ಓರ್ವನ ಮೃತದೇಹ ಪತ್ತೆ*

*ಮುಂದುವರಿದ ಶೋಧ ಕಾರ್ಯಾಚರಣೆ*

ತೀರ್ಥಹಳ್ಳಿ: ತಾಲೂಕಿನ ತುಂಗಾ ನದಿಯ ಹೊಸ ಸೇತುವೆಯ ಕೆಳಭಾಗದಲ್ಲಿ ಬೆಂಗಳೂರಿನಿಂದ ಎರಡು ಟೆಂಪೋ ಟ್ರಾವೆಲರ್ ವಾಹನಗಳಲ್ಲಿ ಆಗಮಿಸಿದ್ದ ನಾಲ್ವರು ಯುವಕರು ಈಜಾಡಲು ನದಿಗೆ ಇಳಿದ ಸಂದರ್ಭದಲ್ಲಿ ದುರಂತ ಸಂಭವಿಸಿದೆ. ನಾಲ್ವರು ಯುವಕರು ನೀರಿನಲ್ಲಿ ಮುಳುಗಿದ್ದು, ಈಗಾಗಲೇ ಓರ್ವ ಯುವಕನ ಮೃತದೇಹ ಪತ್ತೆಯಾಗಿದೆ. ಉಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಘಟನೆ ತಿಳಿಯುತ್ತಿದ್ದಂತೆ ತೀರ್ಥಹಳ್ಳಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮಾಳೂರು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಪುಲ್ಸಿಂಗ್ ಲಂಬಾಣಿ, ಸಂತೋಷ್, ಸಚಿನ್, ಶ್ರೀಧರ್, ಶಶಿಕುಮಾರ್ ಹಾಗೂ ಅಲ್ತಾಫ್ ಅವರು ನದಿಯಲ್ಲಿ ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದು, ಈಗಾಗಲೇ ಒಂದು ಮೃತದೇಹವನ್ನು ಹೊರತೆಗೆದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಕುರುವಳ್ಳಿ ನಾಗರಾಜ್ ಹಾಗೂ ಅವರ ಗೆಳೆಯರ ತಂಡ ಸ್ಥಳೀಯ ಗ್ರಾಮಸ್ಥರೊಂದಿಗೆ ಕೈಜೋಡಿಸಿದೆ. ಶಿವಮೊಗ್ಗದ ಕಾಂಗ್ರೆಸ್ ಮುಖಂಡರಾದ ಎಂ. ಶ್ರೀಕಾಂತ್ ಅವರ ಮಾರ್ಗದರ್ಶನದಲ್ಲಿ ಶಿವಮೊಗ್ಗದಿಂದ ಆಗಮಿಸಿದ ಯುವಕರ ತಂಡ ಕೂಡ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಶೋಧ ಕಾರ್ಯದಲ್ಲಿ ಸಕ್ರಿಯವಾಗಿ ಸಹಕರಿಸುತ್ತಿದೆ.
ಇದರ ಜೊತೆಗೆ ಸ್ಥಳೀಯ ಗ್ರಾಮಸ್ಥರು, ಉದಯಪುರ, ಮೈಸಿ ಹಾಗೂ ದಬ್ಬಣಗದ್ದೆಯ ಯುವಕರು ಕೂಡ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯಕ್ಕೆ ಅಗತ್ಯ ಸಹಕಾರ ನೀಡುತ್ತಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಸ್ಥಳೀಯ ಯುವಕರು ಹಾಗೂ ಸಾರ್ವಜನಿಕರು ತೋರಿದ ಮಾನವೀಯ ಸ್ಪಂದನೆ ಗಮನಾರ್ಹವಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ, ಮಾಳೂರು ಪೊಲೀಸರು, ಕುರುವಳ್ಳಿ ನಾಗರಾಜ್ ಅವರ ಗೆಳೆಯರ ತಂಡ, ಎಂ. ಶ್ರೀಕಾಂತ್ ಅವರ ಮಾರ್ಗದರ್ಶನದಲ್ಲಿ ಆಗಮಿಸಿದ ಶಿವಮೊಗ್ಗದ ಯುವಕರು ಹಾಗೂ ಸ್ಥಳೀಯ ಗ್ರಾಮಸ್ಥರ ಸಹಕಾರದೊಂದಿಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ದುರಂತದ ಸ್ಥಳದಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಭರದಿಂದ ಸಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.