ವಿದ್ಯಾರ್ಥಿನಿಯ ತಲೆ ಕಡಿದು ಒಯ್ದಿದ್ದ ಪ್ರಕಾಶ ಅರೆಸ್ಟ್
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಯ ತಲೆ ಕಡಿದು ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದಾರೆ.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ನಡೆದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ (SSLC Student Murder) ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಸ್ಎಸ್ಎಲ್ಸಿ ಫಲಿತಾಂಶ ಹೊರ ಬಿದ್ದ ಮೇ 09ರಂದು ಆರೋಪಿ ಬಾಲಕಿಯ ರುಂಡ ಕತ್ತರಿಸಿ ಎಸ್ಕೇಪ್ ಆಗಿದ್ದ. ಪೊಲೀಸರು ಹಲವು ತಂಡಗಳನ್ನು ಮಾಡಿ ಶೋಧ ಕಾರ್ಯ ನಡೆಸುತ್ತಿದ್ದರು. ಸದ್ಯ ಸೋಮವಾರಪೇಟೆ ತಾಲೂಕಿನ ಗ್ರಾಮವೊಂದರಲ್ಲಿ ಅಡಗಿದ್ದ ಆರೋಪಿ ಪ್ರಕಾಶ್ನನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಡಿಕೇರಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನೆಲೆ
ಸೂರ್ಲಬ್ಬಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ ಮೀನಾ, ಈ ಕುಗ್ರಾಮದಲ್ಲಿ ಈ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಏಕೈಕ ವಿದ್ಯಾರ್ಥಿನಿ. ಆದರೆ ಆಕೆಯ ದುರಂತ ನೋಡಿ. ಒಂದು ಕಡೆ ಮೀನಾ ಮೇ.09ರಂದು ಎಸ್ಎಸ್ಎಲ್ಸಿ ಪಾಸ್ ಆದ ಖುಷಿಯಲ್ಲಿದ್ದಳು. ಮತ್ತೊಂದು ಕಡೆ ಅವತ್ತೇ ಆಕೆಯ ಪ್ರಿಯಕರನ ಜೊತೆ ಎಂಗೇಜ್ಮೆಂಟ್ ಕೂಡ ಆಗಿತ್ತು. ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮನೆಗೆ ಭೇಟಿ ನೀಡಿ 18 ವರ್ಷ ತುಂಬುವ ವರೆಗೆ ಮೀನಾಳಿಗೆ ಮದುವೆ ಮಾಡದಂತೆ ಪೋಷಕರ ಬಳಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಈ ವಿಚಾರಣೆ ಜಗಳ ಶುರು ಮಾಡಿದ್ದ ಮೀನಾಳ ಪ್ರಿಯಕರ ಮಚ್ಚು ತಂದು ಮೀನಾಳ ಕತ್ತು ಕತ್ತರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೃತ ಮೀನಾ ಮನೆಯಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಶಾಲೆಗೆ ತನ್ನ ಮನೆಯಿಂದ ಗುಡ್ಡ ಗಾಡು ರಸ್ತೆಯಲ್ಲಿ ನಿತ್ಯ ನಡೆದೇ ಸಾಗುತ್ತಿದ್ದಳು. ಪಾಠದಲ್ಲಿ ಮಾತ್ರವಲ್ಲ ಆಟದಲ್ಲೂ ಬಹಳ ಚೂಟಿ ಇದ್ದಳು. ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಿದ್ದಳು. ಒಬ್ಬಳೇ ಆದ್ರೂ ಶಾಲೆಗೆ ಹೋಗ್ತಾಳಲ್ಲಾ ಅಂತ ಊರವರೆಲ್ಲಾ ಈಕೆಯ ಬಗ್ಗೆ ಹೆಮ್ಮೆ ಪಡ್ತಾ ಇದ್ರು. ಆದರೆ ಹದಿಹರೆಯದ ವಯಸ್ಸಿನಲ್ಲಿ ಈಕೆಗೆ ಲವ್ ಆಗಿದೆ. 35 ವರ್ಷದ ಓಂಕಾರಪ್ಪ ಅಲಿಯಾಸ್ ಪ್ರಕಾಶ್ ಎಂಬುವವನ ಜೊತೆ ಮೀನಾಗೆ ಪ್ರೀತಿ ಬೆಳೆದಿತ್ತು.
ಮೀನಾಳ ಗ್ರಾಮದಿಂದ ಮೂರು ಕಿ.ಮೀಟರ್ ದೂರದ ಹಮ್ಮಿಯಾಲ ಗ್ರಾಮದ ಪ್ರಕಾಶ್ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಅಷ್ಟೋ ಇಷ್ಟೋ ಸಂಪಾದನೆ ಮಾಡುತ್ತಿದ್ದ. ಅದು ಬಿಟ್ಟರೆ ಕಳೆದೊಂದು ವರ್ಷದಿಂದ ಮೀನಾಳ ಹಿಂದೆಯೇ ಸುತ್ತುತ್ತಿದ್ದ. ಇವರಿಬ್ಬರು ಪ್ರೀತಿಸ್ತಾ ಇದ್ದುದ್ದು ಇಡೀ ಊರಿಗೆ ಗೊತ್ತಿತ್ತು. ಇವರಿಬ್ಬರ ಆತ್ಮೀಯತೆ ಎಷ್ಟಿತ್ತೆಂದರೆ ಈತನೇ ತನ್ನ ಬೈಕಿನಲ್ಲಿ ಮೀನಾಳನ್ನ ಮನೆಯಿಂದ ಶಾಲೆಗೆ ಡ್ರಾಪ್ ಮಾಡುತ್ತಿದ್ದ. ಮೇ.09ರ ಎಸ್ಎಸ್ಎಲ್ಸಿ ಫಲಿತಾಂಶದ ದಿನವೇ ಮೀನಾ ಹಾಗೂ ಪ್ರಕಾಶ್ಗೆ ನಿಶ್ಚಿತಾರ್ಥ ನೆರವೇರಿತ್ತು. ಬಂಧು ಮಿತ್ರರ ಎದುರು ಇಬ್ಬರು ಖುಷಿ ಖುಷಿಯಾಗಿಯೇ ಕೇಕ್ ಕಟ್ ಮಾಡಿ ರಿಂಗ್ ಪಾಸ್ ಮಾಡಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಆದರೆ ಅಪ್ರಾಪ್ತೆಗೆ ಎಂಗೇಜ್ಮೆಂಟ್ ನಡೆಯುತ್ತಿದೆ ಎಂಬ ಮಾಹಿತಿಯನ್ನ ಯಾರೋ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಭೇಟಿ ನೀಡಿದ ಇಲಾಖೆ ಅಧಿಕಾರಿಗಳು ಮೀನಾಳ ಪೋಷಕರಿಗೆ ಈಗಲೇ ಮದುವೆ ಮಾಡದಂತೆ ತಿಳಿ ಹೇಳಿದ್ದಾರೆ.
ಮೀನಾಳಿಗೆ 18 ವರ್ಷ ತುಂಬಿದ ಬಳಿಕವೇ ವಿವಾಹ ಮಾಡುವಂತೆ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡು ಬಂದಿದ್ದಾರೆ. ಇಷ್ಟೆಲ್ಲ ಆದ ಬಳಿಕ ಪ್ರಕಾಶ್ ಮರ ಕಡಿಯುವ ಮಚ್ಚಿನೊಂದಿಗೆ ಮೀನಾಳ ಮನೆಗೆ ಬಂದಿದ್ದು ಮೀನಾ ಹಾಗೂ ಅವಳ ಪೋಷಕರ ಜೊತೆ ಜಗಳವಾಡಿದ್ದಾನೆ. 18 ವರ್ಷ ಆಗುವವರೆಗೆ ಮದುವೆ ಬೇಡ ಎಂದು ಪೋಷಕರು ಹೇಳಿದ್ದು ಕೋಪಗೊಂಡು ಜಗಳ ಜೋರಾಗಿದೆ. ಇದರಿಂದ ಕುಪಿತಗೊಂಡ ಪ್ರಕಾಶ್ ಮಚ್ಚಿನಿಂದ ಮೊದಲು ತಾಯಿ ಜಾನಕಿಯ ಕೈ ಕಡಿದಿದ್ದಾನೆ, ಜಾನಕಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ತಡೆಯಲು ಬಂದ ತಂದೆ ಸುಬ್ರಮಣಿಗೆ ಜಾಡಿಸಿ ಒದ್ದ ರಭಸಕ್ಕೆ ಅವರೂ ಕುಸಿದು ಬಿದ್ದಿದ್ದಾರೆ. ಬಳಿಕ ಪ್ರಕಾಶ್, ಮೀನಾಳನ್ನ ಎಳೆದೊಯ್ದಿದ್ದಾನೆ. ಮನೆಯಿಂದ ಅಂದಾಜು 300 ಮೀಟರ್ ದೂರದವರೆಗೆ ಎಳೆದೊಯ್ದು ಮೀನಾಳ ಕುತ್ತಿಗೆಯನ್ನೇ ಕಡಿದು ರುಂಡ ಮುಂಡ ಬೇರ್ಪಡಿಸಿ ರುಂಡದೊಂದಿಗೆ ಪರಾರಿಯಾಗಿದ್ದ.