ಮೀಟರ್ ಬಡ್ಡಿ ಮಾಫಿಯಾಕ್ಕೆ ಬಲಿಯಾದ ಆರ್.ಲಕ್ಷ್ಮಣ್ ಕೇಸ್ ಏನಾಯ್ತು?ಪೃಥ್ವಿ ಮ್ಯಾನ್ಷನ್ ಮಾಲೀಕ ಜಿ.ಮೋಹನ್, ಅವನ ಮಗ ಪೃಥ್ವಿ, ವೆಂಕಟೇಶ್ ತಲೆಮರೆಸಿಕೊಂಡು ಹೋಗಿದ್ದೆಲ್ಲಿಗೆ?ಇಲ್ಲಿದೆ ಫುಲ್ details….
ಮೀಟರ್ ಬಡ್ಡಿ ಮಾಫಿಯಾಕ್ಕೆ ಬಲಿಯಾದ ಆರ್.ಲಕ್ಷ್ಮಣ್ ಕೇಸ್ ಏನಾಯ್ತು?
ಪೃಥ್ವಿ ಮ್ಯಾನ್ಷನ್ ಮಾಲೀಕ ಜಿ.ಮೋಹನ್, ಅವನ ಮಗ ಪೃಥ್ವಿ, ವೆಂಕಟೇಶ್ ತಲೆಮರೆಸಿಕೊಂಡು ಹೋಗಿದ್ದೆಲ್ಲಿಗೆ?
ಇಲ್ಲಿದೆ ಫುಲ್ details….
ಮೀಟರ್ ಬಡ್ಡಿ ಮಾಫಿಯಾ ಸಕ್ರಿಯವಾಗಿದೆ ಎಂಬುದಕ್ಕೆ ಮಾಜಿ ನಗರಸಭಾ ಸದಸ್ಯ ಆರ್.ಲಕ್ಷ್ಮಣ್ ದುರಂತ ಸಾವು ಮತ್ತೊಂದು ಮಹತ್ವದ ಉದಾಹರಣೆ!
ಒಂದು ಕಡೆ ಪೊಲೀಸ್ ವ್ಯವಸ್ಥೆ ಅಡಿಯಲ್ಲಿ ನೇರವಾಗಿ ಬಡ್ಡಿ ವ್ಯವಹಾರಸ್ಥರನ್ನು ಚಳಿ ಜ್ವರ ಬಿಡಿಸಲು ಸಾಧ್ಯವಿಲ್ಲ. ಮೀಟರ್ ಬಡ್ಡಿಗೆ ಬೇಸತ್ತೋ, ಅನಾಹುತ ಮಾಡಿಕೊಂಡು ಸತ್ತೋ ಪ್ರಕರಣ ದಾಖಲಾದರೆ ಮಾತ್ರ ಇಲ್ಲಿ ಪೊಲೀಸರು ತಮ್ಮ ಕಾನೂನಿನ ರುಚಿ ತೋರಿಸಬಲ್ಲರು.
ಅಕ್ರಮ ಬಡ್ಡಿ ವ್ಯವಹಾರದ ಕುರಿತು ದೂರುಗಳೇನಾದರೂ ಇದ್ದರೆ ಮೊದಲು ದೂರು ಕೊಡಬೇಕಿರುವುದು ಸಹಕಾರ ಸಂಘಗಳ ಉಪ ನೋಂದಣಾಧಿಕಾರಿಗಳ ಕಚೇರಿಗೆ. ಅಲ್ಲೊಬ್ಬ ಡೆಪ್ಯೂಟಿ ರಿಜಿಸ್ಟ್ರಾರ್ ಇರುತ್ತಾರಲ್ಲ, ಅವರೇ ಇಂಥ ಅಕ್ರಮ ಬಡ್ಡಿ, ಮರಬಡ್ಡಿ, ಚಕ್ರಬಡ್ಡಿಗಳ ವ್ಯವಹಾರ ಮಾಡುವವರ ಚಡ್ಡಿ ಒದ್ದೆ ಮಾಡಬೇಕು. ದುರಂತವೆಂದರೆ, ಇಂಥ ಬಡ್ಡಿಕೋರರಿಂದ ತೊಂದರೆಗೊಳಗಾದವರು ನೇರವಾಗಿ ಎಡತಾಕುವುದು ಸ್ಥಳೀಯ ಪೊಲೀಸ್ ಠಾಣೆಗಳಿಗೆ. ಒಬ್ಬರೇ ಒಬ್ಬ ಸತ್ರಸ್ತರೂ ಡೆಪ್ಯೂಟಿ ರಿಜಿಸ್ಟ್ರಾರಿಗೆ ದೂರು ಕೊಟ್ಟಿದ್ದು, ಆ ಅಧಿಕಾರಿ ಚೇರಿನಿಂದ ಕೆಳಗಿಳಿದು ಬಂದು ಅಕ್ರಮ ಬಡ್ಡಿಕೋರರ ವಿರುದ್ಧ ತೊಡೆ ತಟ್ಟಿದ್ದು ಎಲ್ಲಿದೆ?
ಅದೊಂದು ಕಡೆ ಇರಲಿ; ಈಗ ಆರ್. ಲಕ್ಷ್ಮಣ್ ಎಂಬ ಮಾಜಿ ನಗರಸಭಾ ಸದಸ್ಯ ಶಿವಮೊಗ್ಗದ ಮೂವರು ಬಡ್ಡಿಕೋರರ ಕಾಟಕ್ಕೆ ಬೇಸತ್ತು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಎಲ್ಲೆಲ್ಲೂ ಹರದಾಡಿತು. ಗೋಪಾಳದ ಬಳಿಯ ಪಾರ್ಕಿನಲ್ಲಿ ಕುಳಿತು ವಿಷ ಕುಡಿದು ಒದ್ದಾಡುತ್ತಲೇ ತಾವೇ ಆಂಬ್ಯುಲೆನ್ಸಿಗೂ ಕರೆಸಿಕೊಂಡ ಲಕ್ಷ್ಮಣ್ ಕೊನೆಯ ಕ್ಷಣಗಳಲ್ಲಿ ಬದುಕಲು ಪ್ರಯತ್ನಿಸಿದರು. ಆದರೂ ಸೋತು ಶವವಾದರು.
ಇವರು ಸಾವಿಗೆ ಮುನ್ನ ಬರೆದ ಎರಡು ಪತ್ರಗಳು ಬೇರೆ ಬೇರೆಯದೇ ಕಥೆ ಹೇಳುತ್ತಿವೆ. ಬಿಜೆಪಿಯ ನಾಯಕರೂ ಆಗಿದ್ದ ಲಕ್ಷ್ಮಣ್ ಕ್ಲಾಸ್-2 ಕಂಟ್ರ್ಯಾಕ್ಟರ್ ಕೂಡ ಆಗಿದ್ದರು. ಗುತ್ತಿಗೆ ಆಧಾರದ ಮೇಲೆ ಕ್ರೆಡಿಲ್ ಕಾಮಗಾರಿಗಳನ್ನು ಮುಗಿಸಿದ್ದ ಲಕ್ಷ್ಮಣ್ ಸಹಜವಾಗಿ ಸಾಲ ಮಾಡಿಕೊಂಡಿದ್ದರು. ಸರ್ಕಾರದಿಂದ ಮಾಡಿದ ಕೆಲಸದ ಹಣ ಕಳೆದ ನಾಲ್ಕೈದು ವರ್ಷಗಳಿಂದ ಬರದೇ ಕಂಗಾಲಾಗಿದ್ದರು.
ಈ ಹಿನ್ನೆಲೆಯಲ್ಲಿ ನ.22 ರಂದು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಶಿವಮೊಗ್ಗದ ಶಾಸಕರಿಗೊಂದು, ಪೊಲೀಸರಿಗೆ ಮತ್ತೊಂದು ಪತ್ರ ಬರೆದಿದ್ದರು. ಆ ಪತ್ರಗಳನ್ನು ಪೊಲೀಸರು ಇದೀಗ ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ವಿನೋಬ ನಗರದ ಪೃಥ್ವಿ ಮ್ಯಾನ್ಷನ್ ಮಾಲೀಕ, ಬಡ್ಡಿ ವ್ಯವಹಾರಸ್ಥ ಜಿ.ಮೋಹನ್, ಅವನ ಮಗ ಪೃಥ್ವಿ ಮತ್ತು ವೆಂಕಟೇಶ ಎಂಬುವವರು ಆರ್.ಲಕ್ಷ್ಮಣ್ ರವರಿಗೆ ನೀಡಿದ ಮೀಟರ್ ಬಡ್ಡಿ ವಸೂಲಿ ಕಾಟಕ್ಕೆ ಬೇಸತ್ತು ವಿಷ ಕುಡಿದಿದ್ದಾರೆ. ಹಾಗೆಂದು, ಡೆತ್ ನೋಟ್ ನಲ್ಲಿ ಉಲ್ಲೇಖವಿದೆ ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ಲಕ್ಷ್ಮಣ್ ಮಗ ಸಿ.ಪ್ರದೀಪ್ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಎಫ್ ಐ ಆರ್ ಕೂಡ ಮೂವರ ಮೇಲೆಯೇ ಆರೋಪಿಸುತ್ತಿದೆ. ಪೊಲೀಸರಿಗೆ, ಈ ಮೂವರು ಬಡ್ಡಿಕೋರರು ಲಕ್ಷ್ಮಣ್ ಗೆ ನೀಡಿದ ಕಾಟದ ದಾಖಲೆಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.
ಜಿ.ಮೋಹನ್, ಪೃಥ್ವಿ ಮತ್ತು ವೆಂಕಟೇಶನಿಂದ ಲಕ್ಷ್ಮಣ್ ಕಳೆದ ಮೂರೂವರೆ ನಾಲ್ಕು ವರ್ಷಗಳ ಹಿಂದೆ 2.20ಲಕ್ಷ ರೂ., ಸಾಲ ಪಡೆದಿದ್ದರು. ಆ ಸಾಲಕ್ಕೆ ಬಡ್ಡಿ ಕಟ್ಟುತ್ತಲೇ ಬಂದಿದ್ದರು. ಅವರ ಕಾಟ, ಮಾತುಗಳಿಗೆ ಬೇಸತ್ತು ತಂದೆ ಲಕ್ಷ್ಮಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿ.ಪ್ರದೀಪ್ ಹೇಳುತ್ತಾರೆ.
ತುಂಗಾನಗರ ಪೊಲೀಸರು ಸಿಪಿಐ ಗುರುರಾಜ್ ಕರ್ಕಿರವರ ನೇತೃತ್ವದಲ್ಲಿ ಸಹಕಾರ ಸಂಘಗಳ ಉಪ ನೋಂದಣಾಧಿಕಾರಿಗಳ ಕಚೇರಿಯ ಡೆಪ್ಯೂಟಿ ರಿಜಿಸ್ಟ್ರಾರ್ ಮತ್ತು ಅಧಿಕಾರಿಗಳೊಂದಿಗೆ ಮೋಹನ್ ಮಾಲೀಕತ್ವದ ಪೃಥ್ವಿ ಮ್ಯಾನ್ಷನ್ ಮೇಲೆ ದಾಳಿ ಮಾಡಿದ್ದಾರೆ. ಅಲ್ಲಿ 90 ಕ್ಕೂ ಹೆಚ್ಚಿನ ಚೆಕ್ಕುಗಳು, ದಾಖಲೆ ಪತ್ರಗಳು ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಕ್ಕಿವೆ.
ಈ ದಾಖಲೆಗಳನ್ನು ಪೊಲೀಸರು ಸಹಕಾರ ಸಂಘಗಳ ನೋಂದಣಾಧಿಕಾರಿಗಳ ಕೈಗೊಪ್ಪಿಸಿ ತನಿಖೆ ಮಾಡಿ ವರದಿ ಮಾಡಲು ಸೂಚಿಸಿದ್ದಾರೆ.
ಘಟನೆ ನಡೆದಾಗಿನಿಂದ ಪೃಥ್ವಿ ಮ್ಯಾನ್ಷನ್ ಮಾಲೀಕನೂ ಅಕ್ರಮ ಬಡ್ಡಿಕೋರನೂ ಆದ ಜಿ.ಮೋಹನ್, ಅವನ ಮಗ ಪೃಥ್ವಿ, ಇನ್ನೊಬ್ಬ ಬಡ್ಡಿಕೋರ ವೆಂಕಟೇಶ್ ತಲೆ ಮರೆಸಿಕೊಂಡಿದ್ದಾರೆ. ಪೊಲೀಸರು ಹುಡುಕಾಡುತ್ತಿದ್ದಾರೆ. ಆರೋಪಿಗಳ ಮೇಲೆ ಭಾರತೀಯ ನ್ಯಾಯ ಸಂಹಿತೆ 2023(u/s- 108) ರಂತೆ ಪ್ರಕರಣ ದಾಖಲಾಗಿದೆ.
ರವಿ ಡಿ ಚನ್ನಣ್ಣನವರ್ ಶಿವಮೊಗ್ಗದ ಎಸ್ ಪಿ ಆಗಿದ್ದಾಗ ಇಂಥ ಬಡ್ಡಿ ಕ್ರಿಮಿಗಳ ವಿರುದ್ಧ ಸಮರ ಸಾರಿದ್ದರು. ಆ ಸಂದರ್ಭದಲ್ಲಿ ಬಡ್ಡಿ ವ್ಯವಹಾರಸ್ಥರ ಚಡ್ಡಿ ಒದ್ದೆ ಮಾಡಿದ್ದ ಇನ್ಸ್ ಪೆಕ್ಟರ್ ಗುರುರಾಜ್ ಕರ್ಕಿಯವರ ಕೈಯಲ್ಲಿಯೇ ಲಕ್ಷ್ಮಣ್ ಆತ್ಮಹತ್ಯೆ ಪ್ರಕರಣವಿದೆ.
ಅಕ್ರಮ ಬಡ್ಡಿ ದಂಧೆ ಕಿಂಗ್ ಪಿನ್ ಮೋಹನ್ ಅಂಡ್ ಗ್ಯಾಂಗ್ ನಿಂದ ಹಿಂದೆಯೂ ಇಂಥ ಕೃತ್ಯಗಳಾಗಿದ್ದರೆ ಅದೂ ತನಿಖೆಯಾಗಬೇಕು. ಮೃತ ಲಕ್ಷ್ಮಣ್ ಕುಟುಂಬಕ್ಕೆ ನ್ಯಾಯ ಸಿಗಬೇಕು.
– *ಶಿ.ಜು.ಪಾಶ*
8050112067