ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟಿಸದ ಶಿಕ್ಷಣ ಇಲಾಖೆ! ವಿದ್ಯಾರ್ಥಿ, ಪೋಷಕರ ತಲೆಗೆ ಮಕ್ಮಲ್ ಟೋಪಿ

ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟಿಸದ ಶಿಕ್ಷಣ ಇಲಾಖೆ! ವಿದ್ಯಾರ್ಥಿ, ಪೋಷಕರ ತಲೆಗೆ ಮಕ್ಮಲ್ ಟೋಪಿ

ಮಕ್ಕಳನ್ನು ಚೆನ್ನಾಗಿ ಓದಿಸಬೇಕು, ಒಳ್ಳೆ ಶಿಕ್ಷಣ ನೀಡಿ ಉನ್ನತ ಹುದ್ದೆಗೇರಿಸಬೇಕು ಅಂತ ಅದೇಷ್ಟೋ ಪೋಷಕರು ಹಗಲಿರಳು ಕಷ್ಟಪಟ್ಟು ದುಡಿದು ಮಕ್ಕಳನ್ನು ಹೈಟೆಕ್ ಶಾಲೆಗಳಿಗೆ ದಾಖಲಾತಿ ಮಾಡಿಸುತ್ತಾರೆ. ಆದರೆ ಲಕ್ಷ ಲಕ್ಷ ಶುಲ್ಕ ಕಟ್ಟಿಸಿಕೊಂಡ ಶಾಲೆಗಳು ಪೋಷಕರ ಕನಸು, ಆಸೆಗಳಿಗೆ ಬೆಂಕಿ ಹಚ್ಚಲು ಮುಂದಾಗಿವೆ. ರಾಜಧಾನಿ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ಅನಧಿಕೃತ ಶಾಲೆಗಳು ತಲೆ ಎತ್ತಿದ್ದು, ಕಡಿವಾಣ ಹಾಕಬೇಕಿದ್ದ ಶಿಕ್ಷಣ ಇಲಾಖೆ ದಿವ್ಯ ನಿರ್ಲಕ್ಷ್ಯ ವಹಿಸಿದೆ.

ವಿದ್ಯಾರ್ಥಿಗಳ (Students) ಭವಿಷ್ಯ ರೂಪಿಸಬೇಕಾಗಿರುವ ವಿದ್ಯಾ ದೇಗುಲಗಳು ಮಕ್ಕಳ ಜೀವನದ ಜೊತೆ ಚಲ್ಲಾಟವಾಡುತ್ತಿವೆ. ಪೋಷಕರ ನೂರಾರು ಕನಸುಗಳು ನುಚ್ಚು ನೂರು ಮಾಡುತ್ತಿವೆ. ಸದ್ಯ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ತಲೆ ಎತ್ತಿರುವ ಅನಧಿಕೃತ ಶಾಲೆಗಳು (Illegal Schools) ಪೋಷಕರ ನಿದ್ದೆಗೆಡಸಿವೆ. ಕಾನೂನು ಕ್ರಮವಹಿಸಿ ಕಡಿವಾಣ ಹಾಕಬೇಕಿದ್ದ ಶಿಕ್ಷಣ ಇಲಾಖೆ (Education Department) ಕಣ್ಣಾಮುಚ್ಚಾಲೆ ಆಡುತ್ತಿದೆ.

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಾರಂಭಕ್ಕೆ ಕೆಲ ದಿನಗಳಷ್ಟೇ ಬಾಕಿ ಇದೆ. ಇಷ್ಟಾದರೂ ಶಿಕ್ಷಣ ಇಲಾಖೆ ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟಿಸುತ್ತಿಲ್ಲ. ಕಳೆದ ತಿಂಗಳು ಅಂದರೆ ಏಪ್ರಿಲ್ 12 ರಂದು ಶಾಲಾ ಶಿಕ್ಷಣ ಇಲಾಖೆ ಅನಧಿಕೃತ ಶಾಲೆಗಳ ಪಟ್ಟಿಯ ವರದಿ ನೀಡುವಂತೆ ರಾಜ್ಯದ ಎಲ್ಲ ಬಿಇಎ ಹಾಗೂ ಡಿಡಿಪಿಐಗೆ ಸೂಚಿಸಿತ್ತು. ಅಲ್ಲದೆ ಏಪ್ರಿಲ್ 12 ರಿಂದ 19 ರವರೆಗೆ ಎಲ್ಲ ಆಕ್ಷೇಪಣೆ ಪರಶೀಲನೆ ನಡೆಸಿ ಎಪ್ರಿಲ್ 24 ರಂದು ಅಧಿಕೃತವಾಗಿ ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟಸುವಂತೆ ಸೂಚಿಸಿತ್ತು.
ಏಪ್ರಿಲ್ 25 ರಂದು ಶಾಲಾ ಆಡಳಿತ ಮಂಡಳಿ ಹಾಗೂ ಶಾಲಾ ಮುಖ್ಯಸ್ಥರು ತಮ್ಮ ಶಾಲೆಗಳ ಸೂಚನಾ ಫಲಕದಲ್ಲಿ ನೊಂದಣಿ ಹಾಗೂ ಮಾನ್ಯತೆ ನವೀಕರಣ ಪತ್ರ ಹಾಕುವಂತೆ ಹೇಳಿತ್ತು. ಈ ಸೂಚನೆ ಪಾಲಿಸದ ಶಾಲೆಗಳ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಿತ್ತು. ಆದರೆ ಶಿಕ್ಷಣ ಇಲಾಖೆ ಇದುವರೆಗೂ ಯಾವುದೇ ಶಾಲೆಗಳಿಗೆ ನೋಟಿಸ್ ನೀಡಿಲ್ಲ ಅನಧಿಕೃತ್ತ ಶಾಲೆಗಳ ಪಟ್ಟಿ ಪ್ರಕಟಿಸಿಲ್ಲ.

ಶಾಲೆಗಳ ದಾಖಲಾತಿ ಪ್ರಕ್ರಿಯೆ ಶುರುವಾಗಿದ್ದರೂ ಶಿಕ್ಷಣ ಇಲಾಖೆ ಮಾತ್ರ ಗಪ್ ಚುಪ್​ ಅಂತಿದ್ದು ಪೋಷಕರ ವಲಯದಲ್ಲಿ ವ್ಯಾಪಕ ವಿರೋಧ ಕೇಳಿ ಬಂದಿದೆ. ಕೂಡಲೇ ರಾಜ್ಯದ ಎಲ್ಲ ಜಿಲ್ಲೆಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸುವಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಆಯಾ ಜಿಲ್ಲೆಗಳ ಪ್ರಮುಖ ಪತ್ರಿಕೆಗಳಲ್ಲಿ ಈ ಪಟ್ಟಿ ಪ್ರಕಟವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರ ಬರೆದು ಒತ್ತಾಯಿಸಿದರೂ ಕೂಡ, ಶಿಕ್ಷಣ ಇಲಾಖೆ ಡೋಟ್ ಕೇರ್ ಅಂತಿದೆ.

ಈ ಬಗ್ಗೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಸಿಂಗ್ ಅವರನ್ನು ಕೇಳಿದರೆ, ಪ್ರಕಟ ಮಾಡುತ್ತೇವೆ ಮಾಡುತ್ತೇವೆ ಅಂತ ಮೌನಕ್ಕೆ ಜಾರುತ್ತಾರೆ.
ಈಗಾಗಲೆ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ಶುರುವಾಗಿದೆ. ಅನೇಕ ಶಾಲೆಗಳು ಈ ವರ್ಷದ ದಾಖಲಾತಿ ಶುರು ಮಾಡಿವೆ. ಆದರೆ ಪೋಷಕರಿಗೆ ಮಾತ್ರ ಇದು ಬಿಗ್ ಸಮಸ್ಯೆಯಾಗಿದೆ. ಕೆಲವು ಅನಧಿಕೃತ ಶಾಲೆಗಳು ಕೂಡಾ ಶೈಕ್ಷಣಿಕ ವರ್ಷದ ದಾಖಲಾತಿ ಶುರು ಮಾಡಿಕೊಂಡಿವೆ. ಆದರೆ ಇದರ ಬಗ್ಗೆ ಪೋಷಕರಿಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲದಾಗಿದೆ. ಅನಧಿಕೃತ ಶಾಲೆಗಳ ಮುಂದೆ ಶಿಕ್ಷಣ ಇಲಾಖೆ ಯಾವುದೆ ಬೋರ್ಡ್ ಅಥವಾ ನೋಟಿಸ್ ಕೂಡ ಹಾಕಿಲ್ಲ.
ಇಲಾಖೆಯ ವೆಬ್ ಸೈಟ್ ಪತ್ರಿಕಾ ಪ್ರಕಟಣೆ ಕೂಡಾ ನೀಡುತ್ತಿಲ್ಲ. ಇದು ಟೆನ್ಷನ್​ಗೆ ಕಾರಣವಾಗಿದೆ. ಇಲಾಖೆ ಗರುತಿಸಿರುವ ಅನಧಿಕೃತ ಶಾಲೆ ಯಾವವು ಎಂಬ ಮಾಹಿತಿ ತಿಳಿಯದಾಗಿದೆ. ಇದರಿಂದ ಯಾವ ಶಾಲೆಗೆ ದಾಖಲಾತಿ ಮಾಡಿಸಬೇಕು? ಯಾವುದು ಅನಧಿಕೃತ ಶಾಲೆ ಅಂತಾ ತಿಳಿಯದೆ ಪರದಾಡುತ್ತಿದ್ದೇವೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಬೆಂಗಳೂರು ಸೇರಿದಂತೆ ಹಲವಡೆ ಪೋಷಕರಿಗೆ ಮಕಮಲ್ ಟೋಪಿ ಹಾಕಿರುವ ಅನಧಿಕೃತ ಶಾಲೆಗಳ ಕಳ್ಳಾಟದ ವಿರುದ್ಧ ಶಿಕ್ಷಣ ಇಲಾಖೆ ಇನ್ನಾದರೂ ಚಾಟಿ ಬಿಸಬೇಕಿದೆ. ಮುಂದಿನ ದಿನಗಳಲ್ಲಿ ಪೋಷಕರು ಮೋಸಹೋಗದಂತೆ ತಡೆಯಲು ಈ ಅನಧಿಕೃತ ಶಾಲೆಗಳ ಪಟ್ಟಿ ನೀಡಿ, ಅತಂಹ ಶಾಲೆಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕಿದೆ.