*ಮುಂದಿನ ಜಾತ್ರೆಯೊಳಗೆ ಚಂದ್ರಗುತ್ತಿ ದೇವಾಲಯದ ಸಮಗ್ರ ಮೂಲಸೌಕರ್ಯಗಳ ಅಭಿವೃದ್ಧಿ : ಎಸ್. ಮಧು ಬಂಗಾರಪ್ಪ ಭರವಸೆ*

*ಮುಂದಿನ ಜಾತ್ರೆಯೊಳಗೆ ಚಂದ್ರಗುತ್ತಿ ದೇವಾಲಯದ ಸಮಗ್ರ ಮೂಲಸೌಕರ್ಯಗಳ ಅಭಿವೃದ್ಧಿ : ಎಸ್. ಮಧು ಬಂಗಾರಪ್ಪ ಭರವಸೆ*

ಶಿವಮೊಗ್ಗ

ಚಂದ್ರಗುತ್ತಿ ದೇವಾಲಯವನ್ನು ಸಮಗ್ರ ಅಭಿವೃದ್ಧಿ ಮಾಡುವ ಉದ್ದೇಶದಿಂದಾಗಿ ಪ್ರಾಧಿಕಾರ ರಚಿಸಲಾಗಿದ್ದು, ಅಭಿವೃದ್ದಿಗೆ ಸಂಪೂರ್ಣ ಅನುದಾನ ತರುವ ಜವಾಬ್ದಾರಿ ನನ್ನದು. ಮುಂದಿನ ಜಾತ್ರೆಯೊಳಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ಭರವಸೆ ನೀಡಿದರು.
ಶನಿವಾರ ಅವರು ಚಂದ್ರಗುತ್ತಿಯ ರೇಣುಕಾಂಬ ದೇವಾಲಯದ ಮೂಲಭೂತ ಸೌಕರ್ಯದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದ ನಂತರ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.‌
ರೂ. 2.84 ಕೋಟಿ ವೆಚ್ಚದ ಮೂಲಭೂತ ಸೌಕರ್ಯಗಳ ಕಾಮಗಾರಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ.
ಜನವರಿ ಮಾಹೆಯಲ್ಲಿ ಚಂದ್ರಗುತ್ತಿ ದೇವಾಲಯ ಅಭಿವೃದ್ದಿ ಪ್ರಾಧಿಕಾರ ರಚನೆಯಾಗಿದ್ದು, ಇದರಿಂದಾಗಿ ದೇವಾಲಯದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ. ಕೇಂದ್ರ ಪುರಾತತ್ವ ಇಲಾಖೆ ಹಾಗೂ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಕೆಲಸಗಳನ್ನು ಮಾಡಬೇಕಾಗಿದೆ.
ದೇವಸ್ಥಾನದ ಮುಖ್ಯ ದ್ವಾರದಿಂದ ಹತ್ತಲು ಮೆಟ್ಟಿಲುಗಳಿವೆ. ಆದರೆ ದೇವಸ್ಥಾನದ ಇನ್ನೊಂದು ಕಡೆಯಿಂದ ಇಳಿಯಲು ಮೆಟ್ಟಿಲು ನಿರ್ಮಿಸಲಾಗುವುದು. ಹಾಗೂ ಛಾವಣಿ ನಿರ್ಮಿಸಲಾಗುವುದು.
ದೇವಸ್ಥಾನದ ಕಿಟಕಿಗಳು ಹಾಳಾಗಿವೆ ಹಾಗೂ ದೇವಸ್ಥಾನ ಕಟ್ಟಡ ಸೋರುತ್ತಿದ್ದು‌ ರಿಪೇರಿ ಮಾಡಲಾಗುವುದು. ದೇವಸ್ಥಾನ ಬಳಿ ಅರಣ್ಯ ವ್ಯಾಪ್ತಿಗೆ ಬರುವ ಹತ್ತು ಎಕರೆ ಜಮೀನಿನಲ್ಲಿ ಜಾತ್ರೆ ಮತ್ತಿತರೆ ಉತ್ಸವದಲ್ಲಿ ಭಕ್ತಾದಿಗಳು ಉಳಿದುಕೊಳ್ಳಲು ಡಾರ್ಮಿಟರಿ, ಶೌಚಾಲಯ ವ್ಯವಸ್ಥೆ, ಪಾರ್ಕಿಂಗ್ ಇನ್ನಿತರೆ ಮೂಲಭೂತ ವ್ಯವಸ್ಥೆ ಮಾಡುವ ಯೋಜನೆ ಇದ್ದು ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್ ಪಡೆದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು. ಮೊದಲು ಹಣ ಇದ್ದರೂ ಅಭಿವೃದ್ದಿಪಡಿಸಲು ಜಾಗ ಇರಲಿಲ್ಲ.
ಚಂದ್ರಗುತ್ತಿ ದೇವಾಲಯದ ಮೂಲಭೂತ ಅಭಿವೃದ್ದಿಗಾಗಿ ಪ್ರವಾಸೋದ್ಯಮ ಮತ್ತು ಮುಜರಾಯಿ ಇಲಾಖೆಗಳು ಸೇರಿ ಸಮಗ್ರ ಯೋಜನೆ ತಯಾರಿಸಿ ನೀಡಿರಿ. ಶೇ. ೧೦೦ ರಷ್ಟು ಹಣವನ್ನು ಒದಗಿಸುವ ಜವಾಬ್ದಾರಿ ನನ್ನದಾಗಿದ್ದು ಮುಂದಿನ ಜಾತ್ರೆ ವೇಳೆಗೆ ಭಕ್ತಾಧಿಗಳು ಉಳಿಯುವ ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯಗಳ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.‌
ಸೊರಬ ತಾಲ್ಲೂಕಿನಲ್ಲಿ ಗುಡವಿ, ಕೋಟಿಪುರ, ಚಂದ್ರಗುತ್ತಿ, ಬಂಗಾರಧಾಮ, ಬನವಾಸಿ ಪ್ರವಾಸಿ ತಾಣಗಳಿವೆ. ಜಿಲ್ಲೆಯಲ್ಲಿ ೬೪ ಪ್ರವಾಸಿ ತಾಣಗಳಿದ್ದು ಜಿಲ್ಲೆ ಉತ್ತಮ‌ಪ್ರವಾಸಿ ತಾಣವಾಗುತ್ತಿದೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಮೂಲಕ ರೂ. ೩೪೧ ಕೋಟಿ ಹಣ ಯಾರ ಮಧ್ಯಸ್ಥಿಕೆ ಇಲ್ಲದೆ ನೇರವಾಗಿ ಫನಾನುಭವಿಗಳಿಗೆ ತಲುಪತ್ತಿದ್ದು ಬಡವರ ಬಾಳಿಗೆ ಆಸರೆಯಾಗಿದೆ.
ದುಡಿಯುವ ಕೈಗಳಿಗೆ ಕೆಲಸ ನೀಡುವ ಮಹಾತ್ಮಾ ಗಾಂಧಿ ನರೇಗಾ ಯೋಜನೆಯನ್ನು ಬದಲಾಯಿಸಿ, ಕೇಂದ್ರದ ನಿಯಂತ್ರಣಕ್ಕೆ ಒಳಪಟ್ಟ ಯೋಜನೆ ತಂದಿರುವುದನ್ನು‌ ತೀವ್ರವಾಗಿ ವಿರೋಧಿಸುತ್ತೇವೆ ಎಂದರು.
ಕಾನೂನಾತ್ಮಕವಾಗಿ ಉಳುಮೆ ಮಾಡುತ್ತಿರುವ ಬಗರ್ ಹುಕುಂ ರೈತರನ್ನು ಯಾವುದೇ ಅಧಿಕಾರಿಗಳು ಒಕ್ಕಲೆಬ್ಬಿಸುವಂತಿಲ್ಲ. ಬಡವರಿಗೆ ಹಕ್ಕುಪತ್ರ ನೀಡುವುದು ನಮ್ಮ ಜವಾಬ್ದಾರಿಯಾಗಿದ್ದು ಅದನ್ನು ನಾವು ಮಾಡುತ್ತೇವೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷಸಿ.ಎಸ್.ಚಂದ್ರಭೂಪಾಲ,
ಸಾಗರ ಎಸಿ ವೀರೇಶ್ ಕುಮಾರ್ , ಸೂಪರಿಂಟೆಂಡಿಂಗ್ ಆರ್ಕಿಯಾಲಜಿಸ್ಟ್ ಡಾ.ಸುಜಿತ್ ನಯನ್, ಸೊರಬ ತಹಶೀಲ್ದಾರರಾದ ಪುರಂದರ ಕೆ , ಸೊರಬ ಇಓ ಶಶಿಧರ್, ಚಂದ್ರಗುತ್ತಿ ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಮೀಳಾ ಕುಮಾರಿ ಮುಖಂಡರಾದ ಗಣಪತಿ, ಸದಾನಂದಗೌಡ, ಅಣ್ಣಪ್ಪ ಇತರೆ ಮುಖಂಡರು, ಚಂದ್ರಗುತ್ತಿ ಗ್ರಾಮದ ಪ್ರಮುಖರು ಹಾಜರಿದ್ದರು.