ಆಯುಕ್ತ ಮಾಯಣ್ಣ ಗೌಡರ ಸಾಧನೆ ಏನು? ಹೇಗೆ ಇವರು ಭಿನ್ನ?*ಜನ ಸ್ನೇಹಿ ವಾತಾವರಣದತ್ತ ಶಿವಮೊಗ್ಗ ಮಹಾ ನಗರ ಪಾಲಿಕೆ*
ಆಯುಕ್ತ ಮಾಯಣ್ಣ ಗೌಡರ ಸಾಧನೆ ಏನು?
ಹೇಗೆ ಇವರು ಭಿನ್ನ?
*ಜನ ಸ್ನೇಹಿ ವಾತಾವರಣದತ್ತ ಶಿವಮೊಗ್ಗ ಮಹಾ ನಗರ ಪಾಲಿಕೆ*
ಸಾರ್ವಜನಿಕರು ತಮ್ಮ ಒಂದಲ್ಲ ಒಂದು ಕೆಲಸ ಕಾರ್ಯಗಳಿಗೆ ಮಹಾನಗರ ಪಾಲಿಕೆ ಕಛೇರಿಯತ್ತ ಹೋಗಲೇ ಬೇಕಾದದ್ದು ಸಾಮಾನ್ಯ ಸಂಗತಿ ಹಾಗೂ ಅನಿವಾರ್ಯವೂ ಹೌದು. ಅಲ್ಲಿ ಸಾರ್ವಜನಿಕರ ಸಣ್ಣ ಕೆಲಸ ಬಿಡಿ ಕಂದಾಯ ಪಾವತಿಯಂತಹ ಸಾಮಾನ್ಯ ಕಾರ್ಯ ಮಾಡಬೇಕಾಗಿದ್ದರೂ ದೊಡ್ಡ ಸಾಹಸ ಪಡಬೇಕಾಗಿತ್ತು! ನಮ್ಮ ಕೆಲಸಕ್ಕೆ ಯಾವ ವಿಭಾಗಕ್ಕೆ, ಯಾವ ಕಡೆ ಹೋಗಬೇಕು ಎಂದು ತಿಳಿಯದೆ ಒಂದಿಡೀ ದಿನ ಬಿಸಿಲಿನಲ್ಲಿ ನಿಂತು ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ ಸತಾಯಿಸುವ ಸಿಬ್ಬಂದಿಗಳ ನಡುವೆ ನೇರ ಕೆಲಸ ಮಾಡಿಸಿಕೊಳ್ಳುವುದು ಸಾದ್ಯವಾಗದೆ ಬ್ರೋಕರ್ ಮೊರೆ ಹೋಗುವುದು ಅನಿವಾರ್ಯವಾಗಿತ್ತು. ಇನ್ನು ಜನಸಾಮಾನ್ಯರಿಗೆ ಆಯುಕ್ತರ ಭೇಟಿ ಸುಲಭವಾಗಿರಲಿಲ್ಲ. ಒಮ್ಮೆ ಪಾಲಿಕೆ ಗೇಟಿನೊಳಗೆ ಹೋದರೆ ಮತ್ತೆ ವಾಪಾಸು ಹೊರಬಂದಾಗಲೇ ಉಸ್ಸಬ್ಬಾ ಎಂದು ಉಸಿರು ಬಿಡುವ ವಾತಾವರಣವಿತ್ತು!
ಈಗ ಪಾಲಿಕೆ ಆಡಳಿತ ವ್ಯವಸ್ಥೆಯಲ್ಲಿ ಒಂದಿಷ್ಟು ಮಾತ್ರವಲ್ಲ ,ಭಾರೀ ಎನ್ನುವಷ್ಟು ಬದಲಾವಣೆ ಆಗಿದೆ.
ಸಾರ್ವಜನಿಕರಿಗೆ ಎಲ್ಲಾ ಕಡೆ, ವಿಭಾಗಗಳಲ್ಲೂ ಮಾಹಿತಿ ಫಲಕಗಳು ಇವೆ. ಮರೀಚಿಕೆ ಎನ್ನುವಂತಾಗಿದ್ದ ನಗುಮೊಗದ ಸೇವೆಯ ಭರವಸೆಯನ್ನೂ ಕಾಣುವಂತಾಗಿದೆ.
ಕಟ್ಟಡಗಳ ಆಧುನೀಕರಣ, ಹೆಚ್ಚು ಸ್ಥಳಾವಕಾಶ, ಹಿರಿಯ ನಾಗರಿಕರು , ಅಶಕ್ತರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ , ಶುಚಿತ್ವ, ಹಸಿರೀಕರಣ ಹೀಗೆ ಹಲವು ಜನಸ್ನೇಹಿ ಆಡಳಿತ ಅನುಕೂಲ ಕಲ್ಪಿಸಲಾಗಿದೆ.
ಪಾಲಿಕೆ ಆವರಣ ಮಧ್ಯದ ಪಾರಂಪರಿಕ ಕಟ್ಟಡವನ್ನು ಯಥಾಸ್ಥಿತಿ ಕಾಪಾಡಿಕೊಂಡು ದುರಸ್ತಿ ಗೊಳಿಸಿ ಆಡಳಿತ ಕಛೇರಿ ಮಾಡಿರುವುದು ಉತ್ತಮ ಕಾರ್ಯವಾಗಿದೆ.
ಪಾಲಿಕೆ ಆಯುಕ್ತರ ಕಛೇರಿ ಇರುವ ಈ ಕಟ್ಟಡದಲ್ಲಿ ಆಯುಕ್ತರ ಆಪ್ತ ಸಹಾಯಕರ ಸೇವೆಯೂ ದೊರೆಯುತ್ತಿದೆ. ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸವನ್ನು ಇವರು ನಗುಮೊಗದಿಂದ ಮಾಡುತ್ತಿದ್ದಾರೆ.
ಇನ್ನು ಆಯುಕ್ತರನ್ನು ಭೇಟಿ ಮಾಡಲು ಬರುವ ಸಾರ್ವಜನಿಕರು ಕೆಲವೊಮ್ಮೆ ಕಾಯಬೇಕಾದ ಅನಿವಾರ್ಯತೆ ಇರುತ್ತದೆ. ಕಾರ್ಯನಿಮಿತ್ತ ಹೊರಗಡೆ ಹೋಗಿರುವ ಅಥವಾ ಸಭೆಯಲ್ಲಿ ಭಾಗವಹಿಸಿರುವ ಸಂದರ್ಭದಲ್ಲಿ ಕಾಯುವ ಸಾರ್ವಜನಿಕರಿಗೆ ಆಸನ, ಫ್ಯಾನ್ ವ್ಯವಸ್ಥೆ ಜೊತೆಗೆ ವಿವಿಧ ದಿನ ಪತ್ರಿಕೆಗಳು, ಸಾಮಾನ್ಯ ಜ್ಞಾನ ಪುಸ್ತಕ ಗಳು ಸೇರಿದಂತೆ ಉತ್ತಮ ಅಭಿರುಚಿ ಪತ್ರಿಕೆಗಳನ್ನು ಅಂದವಾಗಿ ಜೋಡಿಸಿಟ್ಟಿದ್ದಾರೆ.
ಈ ಎಲ್ಲಾ ಬದಲಾವಣೆಗೆ ಅನೇಕ ಅಧಿಕಾರಿಗಳ ಶ್ರಮ ಇರುವುದಾದರೂ ಇದರ ಹಿಂದಿರುವ ಕಲ್ಪನೆ, ಶಕ್ತಿ ಮಹಾನಗರ ಪಾಲಿಕೆ ಕ್ರಿಯಾಶೀಲ, ಜನಪರ ಆಯುಕ್ತ ಮಾನ್ಯ ಮಾಯಣ್ಣ ಗೌಡರವರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
ತುಂಗಾ ನದಿಗೆ ಕಲುಷಿತ ನೀರು ಸೇರುತ್ತಿರುವುದನ್ನು ತಡೆಯುವ ಕಾರ್ಯಕ್ಕೆ ಆಗಬೇಕಾದ ಕಾಮಗಾರಿಗಳಿಗೆ ವೇಗ ದೊರಕಿಸಿಕೊಟ್ಟಿದ್ದು, ತುಂಗಾ ಸೇತುವೆಯಿಂದ ಎಸೆಯುವ ದೊಡ್ಡ ಪ್ರಮಾಣದ ಕಸ, ತ್ಯಾಜ್ಯ ಗಳನ್ನು ತಡೆಯಲು ಸೇತುವೆ ಗೋಡೆ ಮೇಲೆ ಮೆಶ್ ಅಳವಡಿಸಿರುವುದು, ಮಳೆಗಾಲಕ್ಕೆ ಮುನ್ನ ರಾಜಾ ಕಾಲುವೆಗಳನ್ನು ಸಂಪೂರ್ಣ ಸ್ವಚ್ಛಗೊಳಿಸಿರುವುದು, ಹಸಿರೀಕರಣ ಕಾರ್ಯ ,ಯಶಸ್ವೀ ಮೂರು ಚುನಾವಣೆಗಳ ನಿರ್ವಹಣೆಯಲ್ಲಿ ಭಾಗಿಯಾಗಿರುವುದು ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡಿದ ಮಾಯಣ್ಣ ಗೌಡರ ಸೇವೆ ಶಿವಮೊಗ್ಗ ನಗರಕ್ಕೆ ಇನ್ನಷ್ಟು ಕಾಲ ಅವಶ್ಯಕತೆ ಇದೆ. ಆದರೆ ಅಷ್ಟರಲ್ಲೇ ಅವರ ವರ್ಗಾವಣೆ ಸುದ್ದಿಯೂ ಬಂದಿದೆ.
ಉತ್ತಮ ಕೆಲಸ ಮಾಡುವ, ಜನಸಾಮಾನ್ಯರ ಅಧಿಕಾರಿ ಎಂದೆನಿಸಿಕೊಂಡವರ ವರ್ಗಾವಣೆ ಎಲ್ಲರಿಗೂ ಬೇಸರ ತರುವುದಂತೂ ನಿಜ. ಆದರೆ ಯಾವುದೇ ಇಲಾಖೆಯಲ್ಲಿ ಈ ಹಿಂದೆ ಇದ್ದ ಕೆಲವು ದಕ್ಷ ಅಧಿಕಾರಿಗಳನ್ನು ಜನ ಈಗಲೂ ನೆನಪಿಸಿಕೊಳ್ಳುತ್ತಿರುವುದು ಅವರು ಮಾಡಿದ ಕಾರ್ಯದಿಂದಾಗಿ, ಕಾರ್ಯ ಶೈಲಿಯಿಂದಾಗಿ.
ಜನರಿಂದ…
ಜನರಿಗಾಗಿ….
ಜನರಿಗೋಸ್ಕರ ಇರುವ ಮಹಾನಗರ ಪಾಲಿಕೆ ಆಡಳಿತ ಇನ್ನಷ್ಟು ಸುಧಾರಣೆ ಕಾಣಲಿ ಎಂದು ಆಶಿಸುವ,
– ತ್ಯಾಗರಾಜ ಮಿತ್ಯಾಂತ ಶಿವಮೊಗ್ಗ.