ಚೆಕ್ ಬೌನ್ಸ್ ಪ್ರಕರಣ; ನಟಿ ಪದ್ಮಜಾ ರಾವ್ ಗೆ 3 ತಿಂಗಳ ಜೈಲು ಶಿಕ್ಷೆ-40.20 ಲಕ್ಷ ರೂ ದಂಡ

ಚೆಕ್ ಬೌನ್ಸ್ ಪ್ರಕರಣ; ನಟಿ ಪದ್ಮಜಾ ರಾವ್ ಗೆ 3 ತಿಂಗಳ ಜೈಲು ಶಿಕ್ಷೆ-40.20 ಲಕ್ಷ ರೂ ದಂಡ

ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಪದ್ಮಜಾ ರಾವ್‌ ಅವರಿಗೆ ಮಂಗಳೂರಿನ 8ನೇ ಜೆಎಂಎಫ್‌ಸಿ ನ್ಯಾಯಾಲಯವು ಮೂರು ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಹಾಗೂ 40.20 ಲಕ್ಷ ರೂದಂಡ ವಿಧಿಸಿ ಆದೇಶ ನೀಡಿದೆ.
ನಟಿ ಪದ್ಮಜಾ ರಾವ್‌ ಅವರು 40 ಲ.ರೂ ಸಾಲ ಪಡೆದಿದ್ದರು. ಇದಕ್ಕೆ ಭದ್ರತೆಯಾಗಿ 2020ರ ಜೂನ್‌ 17ರಂದು ಐಸಿಐಸಿಐ ಬ್ಯಾಂಕಿನ ಬೆಂಗಳೂರಿನ ಬನಶಂಕರಿ ಶಾಖೆಯಲ್ಲಿರುವ ತಮ್ಮ ಖಾತೆಯ ಚೆಕ್‌ ನೀಡಿದ್ದರು. ಈ ಚೆಕ್‌ ಅನ್ನು ನಗದೀಕರಿಸಲು ಹಾಕಿದಾಗ ಅವರ ಖಾತೆಯಲ್ಲಿ ಅಷ್ಟೊಂದು ಮೊತ್ತ ಇರಲಿಲ್ಲ. 15 ದಿನಗಳ ಒಳಗೆ ಸಾಲದ ಹಣ ಪಾವತಿಸುವಂತೆ ‌2020ರ ಜೂನ್ 30ರಂದು ಪದ್ಮಜಾ ರಾವ್‌ ಅವರಿಗೆ ನೋಟಿಸ್‌ ನೀಡಿದರೂ ಅವರು ಹಣ ಪಾವತಿಸಿರಲಿಲ್ಲ ಎಂದು ‘ವೀರೂ ಟಾಕೀಸ್‌’ ಸಂಸ್ಥೆಯ ಮಾಲೀಕ, ಮಂಗಳೂರು ಮೇರಿಹಿಲ್ ನಿವಾಸಿ ವೀರೇಂದ್ರ ಶೆಟ್ಟಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಸಮನ್ಸ್‌ ಜಾರಿಯಾದ ಬಳಿಕ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಪದ್ಮಜಾ ರಾವ್‌ ಅವರು ‘ನಾನು ದೂರುದಾರರಿಂದ ಯಾವುದೇ ಸಾಲ ಪಡೆದಿಲ್ಲ ಹಾಗೂ ಅವರಿಗೆ ಯಾವುದೇ ಚೆಕ್‌ ನೀಡಿಲ್ಲ’ ಎಂದು ಹೇಳಿಕೆ ನೀಡಿದ್ದರು.
52.70 ಲಕ್ಷ ರೂ.ವಂಚನೆ ಮಾಡಿದ ಬಗ್ಗೆ ವೀರೇಂದ್ರ ಶೆಟ್ಟಿ ವಿರುದ್ಧ ಬೆಂಗಳೂರಿನ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ 2020 ಮಾರ್ಚ್‌ 23ರಂದು ದೂರು ದಾಖಲಿಸಿದ್ದಕ್ಕೆ ಪ್ರತಿಯಾಗಿ ತಮ್ಮ ಕಕ್ಷಿದಾರರ ವಿರುದ್ಧ ಈ ಆರೋಪ ಮಾಡಿದ್ದಾರೆ. ಅವರ ಮನೆಯಿಂದ ಚೆಕ್‌ ಕಳವು ಮಾಡಿ ಸಹಿಯನ್ನು ಪೋರ್ಜರಿ ಮಾಡಲಾಗಿದೆ’ ಎಂದು ಪದ್ಮಜಾ ರಾವ್‌ ಪರ ವಕೀಲರು ವಾದಿಸಿದ್ದರು. ಆದರೆ, ಇದಕ್ಕೆ ಪೂರಕ ಪುರಾವೆಗಳನ್ನು ಒದಗಿಸುವಲ್ಲಿ ಅವರು ವಿಫಲರಾಗಿದ್ದರು.
8ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಫವಾಜ್‌ ಪಿ.ಎ ಅವರು, ‘ಪದ್ಮಜಾ ರಾವ್‌ ಅವರು 40.20 ಲಕ್ಷ ರೂ.ದಂಡ ಪಾವತಿಸಬೇಕು. ಅದರಲ್ಲಿ 40.17 ಲ.ರೂಗಳನ್ನು ದೂರುದಾರರಿಗೆ ನೀಡಬೇಕು. 3,000 ರೂ.ಗಳನ್ನು ಸರಕಾರಕ್ಕೆ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.