– ಸಾಗರದ ಚಾರ್ವಾಕ ರಾಘು ಬರೆದಿರೋ ನಾಟಕಾವಲೋಕನ; ಜತೆಗಿರುವನು ಚಂದಿರ ಮತ್ತು ಕಾಲದ ಕರೆ

*

ಸಾಗರದ ಹೆಗ್ಗೋಡಿನಲ್ಲಿ ಕಲೆಗಳ ಸಂಗಡ ಶಿಬಿರದ ಹೊತ್ತಿನ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಅಕ್ಟೋಬರ್ ಐದರಂದು ಶಿವರಾಮ ಕಾರಂತ ರಂಗಮಂದಿರದಲ್ಲಿ ಮೈಸೂರಿನ ಸಂಕಲ್ಪ ತಂಡದವರು ಖ್ಯಾತ ನಟ ನಿರ್ದೇಶಕ ಹುಲಿಗೆಪ್ಪ ಕಟ್ಟಿಮನಿಯವರ ನಿರ್ದೇಶನದಲ್ಲಿ ಜಯಂತ್ ಕಾಯ್ಕಿಣಿಯವರು ರೂಪಾಂತರಿಸಿದ “ಜತೆಗಿರುವನು ಚಂದಿರ” ನಾಟಕವನ್ನು ಅಭಿನಯಿಸಿದರು. ಈ ನಾಟಕದ ವಸ್ತು ಮತ್ತು ಅದು ರಂಗದ ಮೇಲೆ ಪ್ರಸ್ತುತಗೊಂಡ ವಿನ್ಯಾಸವು ನಿಜಕ್ಕೂ ಕಾಲದ ಕರೆಗೆ ಒಗೊಟ್ಟ ಹಾಗೆ ಇತ್ತು. ವರ್ತಮಾನದಲ್ಲಿ ಜಗತ್ತು ಮೂರನೇ ಮಹಾಯುದ್ದದ ದಾರಿಯಲ್ಲಿ ಇದ್ದ ಹಾಗೆ ಕಾಣುತ್ತಿದೆ. ರಶ್ಯಾ ಉಕ್ರೇನ್,ಇಸ್ರೇಲ್ ಪೆಲಿಸ್ತೇನಿ ನಡುವೆ ನಡೆಯುತ್ತಿರುವ ಯುದ್ದ, ಯುದ್ದದಲ್ಲಿ ಆಗುತ್ತಿರುವ ಆಮಾಯಕರ ಸಾವು ನೋವುಗಳು, ಹಸುಗೂಸುಗಳ ಆಕ್ರಂದನ ದಿನನಿತ್ಯ ನೋಡುತ್ತಿದ್ದೇವೆ. ಇಂತಹ ಕ್ರೌರ್ಯವನ್ನು ನಿಲ್ಲಿಸಲು ಮುಂದಾಗಬೇಕಾಗಿದ್ದ ಅಮೆರಿಕಾದಂತಹ ದೇಶಗಳು ಇಸ್ರೇಲಿಗೆ ಯುದ್ದಾಸ್ತ್ರ ಸರಬರಾಜು ಮಾಡುತ್ತಾ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದೆ. ಇತ್ತ ಭಾರತದಲ್ಲಿ ಕಳೆದ ಹತ್ತು ವರ್ಷಗಳಿಂದ ಇನ್ನಿಲ್ಲದ ಹಿಂಸೆ, ಸಾಮಾಜಿಕ ಕ್ಷೋಬೆಗೆ ಕಾರಣವಾಗುತ್ತಿದೆ. ವೈವಿದ್ಯತೆಯ ಜಾಗದಲ್ಲಿ ಏಕ ಸಂಸ್ಕøತಿಯನ್ನು ಹೇರುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಹಲವು ತರಹದ ಪ್ರಯೋಗಗಳು ನಡೆಯುತ್ತಿದೆ. ಇದನ್ನು ವಿರೋಧ ಮಾಡಿದವರಿಗೆ ವಿವಿಧ ರೀತಿಯಲ್ಲಿ ಬೆದರಿಕೆ ಒಡ್ಡಲಾಗುತ್ತಿದೆ. ವರ್ತಮಾನಕ್ಕೆ ಮುಖಾಮುಖಿಯಾಗುವ ಬರಹಗಾರರನ್ನು,ಹೋರಾಟಗಾರರನ್ನು, ಕಲಾವಿದರನ್ನು ದಮನಿಸುವ ಕ್ರಿಯೆಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರಭುತ್ವದ ದಮನವನ್ನು ಲೆಕ್ಕಿಸದೆ ಮುನ್ನುಗುವ ವ್ಯಕ್ತಿಗಳ ಮೇಲೆ ಸುಳ್ಳು ಕೇಸು ಹಾಕಿ ಜೈಲಿಗೆ ಅಟ್ಟಲಾಗುತ್ತಿದೆ. ವೈಜ್ನಾನಿಕವಾಗಿ ಚಿಂತಿಸಿ ಮುಂದಕ್ಕೆ ಹೋಗಬೇಕಾದ ಸಮಾಜವನ್ನು ಜಾತಿ,ಧರ್ಮದ ಹೆಸರಿನಲ್ಲಿ ಚೂರು ಚೂರು ಮಾಡಲಾಗುತ್ತಿದೆ.ನಿಜಕ್ಕೂ ಇದು ಬಹಳ ಸಂಕಟ ಮತ್ತು ಯಾತನೆಯ ಕಾಲ. ಈ ಸಂಕಟ ಯಾತನೆಯ ಪ್ರಮಾಣ ಕಡಿಮೆಯಾಗಲು ಜೀವಪರವಾಗಿ ಯೋಚಿಸುವ ಎಲ್ಲ ಮನಸ್ಸುಗಳು ಒಂದಾಗಿ ಹೋರಾಡಯವ ಕಾಲವಿದು. ಇದರಲ್ಲಿ ಕಲೆ ಕಲಾವಿದನ ಪಾತ್ರ ಬಹಳ ಮುಖ್ಯ. ಕಲಾವಿದನ ಬದ್ದತೆ ಕೇವಲ ಕಲೆಗೆ ಮಾತ್ರವಲ್ಲ ಅದು ಸಮಾಜಕ್ಕೂ ಕೂಡ ಹೌದು. ಕಲೆ ಎನ್ನುವುದು ಸಮಾಜದ ದನಿ ಪೆಟ್ಟಿಗೆ ಇದ್ದ ಹಾಗೆ. ಅದು ಮೌನವಾದರೆ ಅಥವಾ ಇಲ್ಲವಾದರೆ ಇಲ್ಲಿ ನಡೆಯುವ ದೌರ್ಜನ್ಯ, ಶೋಷಣೆ,ಕ್ರೌರ್ಯ,ದಬ್ಬಾಳಿಕೆ ಹೆಚ್ಚುತ್ತಲೆ ಹೋಗುತ್ತದೆ.
ಇವೆಲ್ಲವನ್ನು ತಡೆಯಬೇಕು ಎಂದರೆ ಕಲೆ ಮಾತನಾಡಬೇಕು ಎನ್ನುವ ವಿವೇಕವನ್ನು “ಜತೆಗಿರುವನು ಚಂದಿರ” ನಾಟಕ ಕಟ್ಟಿ ಕೊಡುವ ಕೆಲಸ ಮಾಡಿದೆ. ಇದು ನಿಜಕ್ಕೂ ಈ ದುರಿತ ಕಾಲದಲ್ಲಿ ಕಾಲದ ಕರೆಗೆ ಓಗೊಡುವ ಸಮಾಜಿಕ ಹೊಣೆಗಾರಿಕೆಯ ಭಾಗವಾಗಿದೆ ಎಂದು ಯಾವ ಮುಲಾಜು ಇಲ್ಲದೆ ಹೇಳಬಹುದು. ಇಲ್ಲಿ ನಾಟಕದ ವಸ್ತು ಭಾರತ ಸ್ವಾತಂತ್ರ್ಯ ಪಡೆದು ವಿಭಜನೆಯಾದ ಹೊತ್ತಿನಲ್ಲಿ ಧರ್ಮದ ನೆಲೆಯಲ್ಲಿ ಸಮುದಾಯವನ್ನು ದೇಶದಿಂದ ಹೊರಹಾಕುವ ಹೃದಯ ವಿದ್ರಾಕ ಘಟನೆಯನ್ನು ನಾಟಕ ಹೇಳುತ್ತದೆ.
ಮೂಲತಃ ಈ ನಾಟಕದ ಮೂಲ ಕಥೆ ರಶ್ಯಾದ ಶೋಲಮ್ ಅಲೈಬೇಮ್‍ನದು. ಇದನ್ನು ಜೋಸೆಫ್ ಸ್ಪೀನ್ “ಫಿಡ್ಲರ್ ಆನ್ ದಿ ರೂಫ್” ಎನ್ನುವ ಸಂಗೀತ ನಾಟಕ ರಚಿಸಿದ. ಇದು ಅಮೆರಿಕಾ ಮತ್ತಿತರ ದೇಶದಲ್ಲಿ ಸಾವಿರಾರು ಪ್ರದರ್ಶನಗೊಂಡಿದೆ.ರಶ್ಯಾ ಜಾರ್ ದೊರೆಯ ಆಡಳಿತವು ಅಲ್ಪಸಂಖ್ಯಾತ ಜ್ಯೂ ಕುಟುಂಬವನ್ನು ದೇಶದಿಂದ ಹೊರ ಹಾಕಿ ಆ ಕುಟುಂಬ ಅನುಭವಿಸಿದ ಯಾತನೆಯನ್ನು ಸಾಹಿತಿ ಜಯಂತ್ ಕಾಯ್ಕಿಣಿಯವರು ಭಾರತಕ್ಕೆ ಸ್ವಾತಂತ್ರ್ಯ ಬಂದು ದೇಶ ವಿಭಜನೆಯಾದಾಗ ಆದ ಅನಾಹುತವನ್ನು ಕರ್ನಾಟಕದ ಕರಾವಳಿಯ ಹಳ್ಳಿಯೊಂದರ ಮೇಲೆ ಆಗುವ ಪರಿಣಾಮವನ್ನು ಈ ನಾಟಕದಲ್ಲಿ ಚಿತ್ರಿಸಿದ್ದಾರೆ.ನಾನು ನಾಟಕದ ಕೊನೆಯಲ್ಲಿ ಬರುವ ಸಂಭಾಷಣೆಯನ್ನು ಪ್ರಸ್ತಾಪ ಮಾಡಿ ನಾಟಕದ ಇತರೆ ವಿಚಾರಗಳನ್ನು ಪ್ರಸ್ತಾಪ ಮಾಡುತ್ತೇನೆ ಓದುಗರು ಈ ಕೊನೆಯ ಸಂಭಾಷಣೆಯನ್ನು ಓದಿ ಈ ನಾಟಕದ ಬಗ್ಗೆ ನಾನು ಬರೆದ ಈ ಟಿಪ್ಪಣಿಗೆ ಹೊಂದಿಸಿಕೊಂಡು ಚರ್ಚೆಗೆ ಮುಂದಾಗಬಹುದು.
ಈ ನಾಟಕದ ಪತ್ರಧಾರಿ ಮನೆಯ ಯಜಮಾನಿ ತಾನು ಬಾಳಿ ಬದುಕಿದ್ದ ಮನೆಯಿಂದ ಹೊರ ಹೋಗುವ ಸನ್ನಿವೇಶ ಬಂದಾಗ ತನ್ನ ಗಂಡನಿಗೆ *ನೀವು ಮುಂದಾಗಿ ನಾನು ಮನೆ ಕಸ ಗುಡಿಸಿ ಬರುತ್ತೇನೆ ನನ್ನ ಮನೆಯಲ್ಲಿ ಕಸ ಇರಲು ಬಿಡುವುದಿಲ್ಲ.*
ಈಗ ನಾಟಕದ ಕಥೆಯ ವಿಷಯಕ್ಕೆ ಬರುವುದಾದರೆ ಅದೊಂದು ಸಣ್ಣ ಹಳ್ಳಿ ಎಲ್ಲ ಧರ್ಮದವರು ಪರಸ್ಪರ ಪ್ರೀತಿ ವಿಶ್ವಾಸದಿಂದ ತಮ್ಮ ತಮ್ಮ ಉದ್ಯೋಗವನ್ನು ಮಾಡಿಕೊಂಡು ಜೀವನ ಸಾಗಿಸುತ್ತಾ ಪರಸ್ಪರ ಕಷ್ಟ ಸುಖಗಳಲ್ಲಿ ಒಂದಾಗುತ್ತಾ ಕೈ ಕೈಜೋಡಿಸುತ್ತಾ ಬದುಕಿರುತ್ತಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ಭಾರತ ವಿಭಜನೆಯಾಗುವ ಸಂದರ್ಭ ಬರುತ್ತದೆ. ಈ ಹೊತ್ತಿನಲ್ಲಿ ಕರ್ನಾಟಕದ ಕರಾವಳಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಜೀವನ ನಡೆಸುತ್ತಿದ್ದ ಹಲವು ಕುಟುಂಬಗಳು ಹಳ್ಳಿತೊರೆದು ಹೋಗುವ ಸಂದರ್ಭವನ್ನು ಅಂದಿನ ರಾಜಕಾರಣ ಮಾಡುತ್ತದೆ. ಈ ಸಂದರ್ಭ ಬರುವ ಮೊದಲು ಈ ಹಳ್ಳಿಯಲ್ಲಿ ವಾಸವಾಗಿರುವ ಬಡೇಮಿಯಾ ಕುಟುಂಬವೂ ಒಂದು.ಈ ಬಡೇಮಿಯಾನಿಗೆ ಮೂರು ಜನ ಹೆಣ್ಣು ಮಕ್ಕಳು. ಬಡತನವಿದ್ದರೂ ಸಂತೋಷದಿಂದ ಈ ಕುಟುಂಬ ಜೀವನ ಸಾಗಿಸುತ್ತ ಇರುತ್ತದೆ. ಬಡೇಮಿಯಾ ವಿಶಾಲ ಹೃದಯದ ವ್ಯಕ್ತಿ.ಹೀಗೆ ಕಾಲ ಜಾರುತ್ತಲೇ ಇವರ
ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಹೆಣ್ಣು ಮಕ್ಕಳಿಗೆ ಮದುವೆ ಮಾಡಬೇಕೆನ್ನುವ ತಾಯಿಗೆ ಒತ್ತಡ ಹೆಚ್ಚಾಗುತ್ತದೆ. ಬಡತನದ ಕಾರಣಕ್ಕೆ ಹಣ ಹೊಂದಿಸುವುದು ಕಷ್ಟವಾಗಿ ಆ ಹೆಣ್ಣು ಮಕ್ಕಳಿಗೆ ಉತ್ತಮ ಗಂಡು ಸಿಗದೇ ಇರುವುದು ಹೇಗಾದರೂ ಮಾಡಿ ಮದುವೆ ಮಾಡಬೇಕೆಂಬ ತಂದೆ ತಾಯಿಯ ಪ್ರಯತ್ನದಲ್ಲಿ ವಯಸ್ಸಾದ ಪಾತ್ರೆಗೆ ಕಲೆ ಹಾಕುವ ವ್ಯಕ್ತಿಯೊಬ್ಬನೊಂದಿಗೆ
ಮಗಳಿಗೆ ಮದುವೆ ಮಾಡುವ ತೀರ್ಮಾನಕ್ಕೆ ಬರುತ್ತಾರೆ.
ಆದರೆ ಆಧುನಿಕವಾಗಿ ಯೋಚಿಸುವ ಈ ಮೂವರು ಹೆಣ್ಣು ಮಕ್ಕಳು ತಮಗೆ ಇಷ್ಟವಾದ ಪ್ರಿಯತಮನನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಮೊದಲ ಮಗಳು ಮದುವೆಗೆ ನಿರಾಕರಿಸಿದಾಗ ತಂದೆ ಬಡೇಮಿಯಾ ಕಾರಣ ತಿಳಿದು ಈ ಸಂದರ್ಭವನ್ನು ನಿಭಾಯಿಸುವುದು ಹೇಗೆ ಅನ್ನುವುದು ಯೋಚಿಸುತ್ತಾನೆ. ಅತ್ತ ಹೆಂಡತಿ ಮಗಳ ಮದುವೆಯಾದರೆ ಸಾಕು ಎನ್ನುವ ಆತುರದಲ್ಲಿ ಇದ್ದಾಗ ಮಗಳ ಪ್ರೇಮವನ್ನು ಹೇಗೆ ಉಳಿಸುವುದು ಎನ್ನುವುದು ಬಡೇಮಿಯನಿಗೆ ದೊಡ್ಡ ಸವಾಲು. ಇಲ್ಲಿ ಆತ ಕನಸು ಬಿತ್ತು ಎನ್ನುವ ನೆಪದಲ್ಲಿ ನಿರ್ವಹಿಸುವ ಪಾತ್ರ ನಿಜಕ್ಕೂ ಅದ್ಭುತ .
ಸಂಪ್ರದಾಯಸ್ಥ ಈ ಸಮಾಜದಲ್ಲಿ ಕೆಲವು ಕುಟುಂಬಗಳು ಬಹಳ ಭಿನ್ನವಾಗಿ ನಿಲ್ಲುತ್ತದೆ ಅದಕ್ಕೆ ಉದಾಹರಣೆಯಾಗಿ ಬಡೇಮಿಯ ಕುಟುಂಬವೂ ಕೂಡ.
ಹೀಗೆ ಅವರ ಮೂವರು ಮಕ್ಕಳು ತಮಗೆ ಇಷ್ಟವಾದ ಪ್ರಿಯತಮರನ್ನು ಆಯ್ಕೆ ಮಾಡಿಕೊಂಡು ಮದುವೆಯಾಗುವುದು,ಆ ಸಂದರ್ಭದಲ್ಲಿ ಆಗುವಂತಹ ತೊಂದರೆಗಳು, ಇದರ ನಡುವೆಯೇ ವಾಸಿಸಿದ ಊರನ್ನು ಬಿಡುವ ಸಂದರ್ಭ. ಧರ್ಮದ ಆಧಾರದಲ್ಲಿ ಸಮಾಜವನ್ನು ಛಿದ್ರಗೊಳಿಸುವ ಸಂದರ್ಭ ಬರುತ್ತದೆ. ಎಲ್ಲೋ ಕುಳಿತು ರಾಜಕೀಯ ತೀರ್ಮಾನ ತೆಗೆದುಕೊಂಡು ತಾವು ಉನ್ನತ ಹುದ್ದೆಗೆ ಏರಬೇಕೆಂಬ ದುರಾಸೆಗೆ ಅಮಾಯಕರು ಅದರಲ್ಲೂ ಅಲ್ಪಸಂಖ್ಯಾತರು ಅನುಭವಿಸುವ ಯಾತನೆಯನ್ನು ಈ ನಾಟಕ ಕಟ್ಟಿಕೊಡುತ್ತದೆ. ರಂಗದಲ್ಲಿ ಯಾವುದೇ ಅಬ್ಬರವಿಲ್ಲದೆ ವ್ಯವಸ್ಥೆಯೊಂದು ಹೇಗೆ ಜನರನ್ನ ಕಾರಣವಿಲ್ಲದೆ ಒಕ್ಕಲಿಬ್ಬಿಸುತ್ತದೆ ಉಚ್ಚಾಟಿಸುತ್ತದೆ ಎನ್ನುವುದನ್ನು ರುಜು ಮಾಡುತ್ತದೆ ಈ ನಾಟಕ. ವರ್ತಮಾನದ ಈ ಹೊತ್ತಿನಲ್ಲಿ ರಾಷ್ಟ್ರೀಯತೆ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಯುದ್ಧ ಅದರಿಂದ ಆಗುವಂತಹ ಸಾವು ನೋವುಗಳು, ಈ ಸಾವು ನೋವಿನಲ್ಲಿ ಹೆಚ್ಚಾಗಿ ಬಳಲುವವರು ಬಡವರು. ಇರುವ ಸಣ್ಣಪುಟ್ಟ ಆಸ್ತಿಯನ್ನು ಕಳೆದುಕೊಳ್ಳುವವರು ಬಡವರು ಎನ್ನುವುದನ್ನು ಈ ನಾಟಕ ಕಣ್ಣೆದುರಿಗೆ ತೆರೆದಿಡುತ್ತದೆ. ವರ್ತಮಾನ ಭಾರತದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಈ ದೇಶದ ಅಲ್ಪಸಂಖ್ಯಾತರನ್ನು ಗುರಿಯಾಗಿ ಇಟ್ಟುಕೊಂಡು ಎನ್ ಆರ್ ಸಿ ಮತ್ತು ಸಿ ಎ ಎ ಎಂಬ ದಮನಕಾರಿ ಕಾನೂನನ್ನು ತರಲು ಹೊರಟಿದ್ದು ಅದರ ವಿರುದ್ಧ ನಡೆದ ಹೋರಾಟಕ್ಕೆ ಪ್ರಭುತ್ವ ನಡೆದುಕೊಂಡಿದ್ದು, ರೈತರು ನಡೆಸಿದ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿದ್ದು, ಬಂಡವಾಳಶಾಹಿಗಳಿಗೆ ಸಹಾಯ ಮಾಡಲು ಸಾವಿರಾರು ಹೆಕ್ಟರ್ ಭೂಮಿಯನ್ನು ನೀಡಲು ಮುಂದಾಗಿ ಅಲ್ಲಿ ವಾಸಿಸುತ್ತಿರುವ ಆದಿವಾಸಿ ಬುಡಕಟ್ಟು ಜನರನ್ನು ಒಕ್ಕಕಲೆಬ್ಬಿಸುವ ಸರ್ಕಾರದ ನೀತಿಯನ್ನು ಈ ನಾಟಕ ನೋಡುತ್ತಿರುವಾಗಲೇ ಮನಸ್ಸಿನಲ್ಲಿ ಹಾದು ಹೋಗುತ್ತದೆ . ಒಟ್ಟಾರೆಯಾಗಿ ಈ ನಾಟಕದ ಕೇಂದ್ರ ಆಶಯ ಸಮಾನತೆ, ಸೌಹಾರ್ದತೆಗೆ ಧಕ್ಕೆ ತರುವ ಶಕ್ತಿಗಳ ವಿರುದ್ಧ ಮತ್ತು ಶಾಂತಿ ಸೌಹಾರ್ದತೆಯನ್ನು ನೆಲೆಸುವಂತೆ ಮಾಡುವ ಯುದ್ಧ ವಿರೋಧಿ ಸಂದೇಶವನ್ನು ಸಾರುವುದಾಗಿದೆ. ತಮ್ಮ ಗದ್ದುಗೆಯ ಆಸೆಗಾಗಿ ಎಲ್ಲೋ ಕುಳಿತು ರಾಜಕೀಯ ಆರ್ಥಿಕ ಶೈಕ್ಷಣಿಕ ಸಾಮಾಜಿಕ ಧಾರ್ಮಿಕ ನಿಲುವನ್ನು ತೆಗೆದುಕೊಂಡು ಅದರಿಂದಾಗುವ ಅಪಾಯಗಳ ಕುರಿತು ಈ ನಾಟಕ ಎಳೆ-ಎಳೆಯಾಗಿ ಬಿಚ್ಚಿಡುತ್ತದೆ.

ಅಪರೂಪದ ಸಂಗೀತ,ಹಿತಮಿತವಾದ ರಂಗ ಸಜ್ಜಿಕೆ ಮತ್ತು ವಸ್ತ್ರ ವಿನ್ಯಾಸ,ಬೆಳಕಿನ ವಿನ್ಯಾಸವಿದೆ. ಬಡೇಮಿಯಾ ಪಾತ್ರದಾರಿ ಹುಲಿಗೆಪ್ಪ ಕಟ್ಟಿಮನಿ ಅದ್ಬುತವಾಗಿ ನಟಿಸಿದರೂ ಕೆಲವೊಮ್ಮೆ ಓವರ್ ಆ್ಯಕ್ಟ್ ಮಾಡಿದರು,ಮಂಗಳ ಅವರ ನಟನೆ ಸೂಪರ್. ಕಾಯ್ಕಿಣಿಯವರು ಕವಿ,ಕಥೆಗಾರ ನಾಟಕಕಾರ ಆಗಿರುವುದರಿಂದ ನಾಟಕದ ಕೃತಿಯೇ ಕ್ಲಾಸಿಕ್. ಆದರೆ ಅತಿಯಾದ ಪ್ರಾಸ ಸಂಭಾಷಣೆ ಆಗಾಗ ಕಿರಿಕಿರಿ ಆಗುತ್ತದೆ. ಹುಟ್ಟಿದ ಬೆಳೆದ ಬಾಳಿದ ಊರನ್ನು ಬಿಟ್ಟು ಹೋಗುವ ಸಂಕಟ ಮನ ಮಿಡಿತುವಂತೆ ಪ್ರಸ್ತುತ ಪಡಿಸಲಾಗಿದೆ. ಊರು ಬಿಟ್ಟು ಹೋಗುವಾಗ ಎಲ್ಲಿ ಹೋಗುವುದು ಏನು ಮಾಡುವುದು ಎನ್ನುವ ಆತಂಕದ ಪ್ರಶ್ನೆ ಬಂದಾಗ ಜತಗಿರುವನು ಚಂದಿರ ಎನ್ನುವ ಆತ್ಮವಿಶ್ವಾಸದ ನುಡಿಗಳು ಪಾತ್ರದಾರಿಯ ಬಾಯಲ್ಲಿ ಬಂದಾಗ ಈ ಹೊತ್ತಿನ ರಾಜ ಕಾರಣ ಗಮನಿಸಿದಾಗ ನಾಟಕದ ಶಿರೋನಾಮೆ *ಜತೆಗಿರುವನು ಚಂದಿರ ಎನ್ನುವುದು ಜತೆಗಿರುವನೇ ಚಂದಿರ ? ಎಂಬ ಪ್ರಶ್ನೆ ಮೂಡುತ್ತದೆ. ಮನೆಯೊಡತಿ ನನ್ನ ಮನೆಯಲ್ಲಿ ಕಸ ಇರಲು ಬಿಡುವುದಿಲ್ಲ ಎನ್ನುವ ಮಾತು ಮಿದುಳು ಮತ್ತು ಹೃದಯಕ್ಕೆ ಸಂಪರ್ಕ ಕಡಿದುಕೊಂಡು ಜಾತಿ ಧರ್ಮದ ನಂಜು ಏರಿಸಿಕೊಂಡು ದಾಳಿ ಮಾಡುವವರಿಗೆ ಈ ನಾಟಕದಲ್ಲಿ ಬರುವ ಸಂಭಾಷಣೆ ಮತ್ತೆ ಮತ್ತೆ ಕೇಳುವ ಹಾಗೆ ಮಾಡಬೇಕು.ಚಂದ್ರ ನಾವು ಹೋದಲ್ಲೆಲ್ಲ ಬರುತ್ತಾನೆ. ಕನಸುಗಳು ಕೂಡ ನಮ್ಮೊಂದಿಗೆ ಇರುತ್ತವೆ. ಹೀಗಾಗಿ ಚಂದಿರ ನಮ್ಮ ಕನಸುಗಳೇ ಅಲ್ಲವೆ.

ವೆಲ್ ಡನ್ ಸಂಕಲ್ಪ ಮೈಸೂರು ತಂಡ ..ಥಾಂಕ್ಯೂ

* – ಚಾರ್ವಾಕ ರಾಘು,ಸಾಗರ*