ಕನ್ನಡ ಭಾಷೆಯ ಉಳಿವು ಪ್ರತಿಯೊಬ್ಬ ಕನ್ನಡಿಗನ ಉಳಿವು; ಶಾಸಕ ಎಸ್.ಎನ್ ಚನ್ನಬಸಪ್ಪ*
*ಕನ್ನಡ ಭಾಷೆಯ ಉಳಿವು ಪ್ರತಿಯೊಬ್ಬ ಕನ್ನಡಿಗನ ಉಳಿವು; ಶಾಸಕ ಎಸ್.ಎನ್ ಚನ್ನಬಸಪ್ಪ*
ಕನ್ನಡ ಭಾಷೆ ಉಳಿದರೆ ಕನ್ನಡಿಗರು ಉಳಿಯಲು ಸಾಧ್ಯ. ಕನ್ನಡದ ಉಳಿವಿಗಾಗಿ ಹೋರಾಡಿದ ಹೋರಾಟಗಾರರನ್ನು ಸ್ಮರಿಸಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತ ಇಲಾಖೆ ವತಿಯಿಂದ ಕರ್ನಾಟಕ ಸಂಭ್ರಮ – 50 ರಡಿ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಅಭಿಯಾನದ ಕನ್ನಡಜ್ಯೋತಿ ರಥವು ಮಂಗಳವಾರ ಶಿವಮೊಗ್ಗ ನಗರದ ಶಿವಪ್ಪನಾಯಕ ವೃತ್ತಕ್ಕೆ ಆಗಮಿಸಿದ್ದು, ಅದನ್ನು ಸ್ವಾಗತಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಯ ಉಳಿವಿಗಾಗಿ ಅನೇಕ ಕನ್ನಡಪರ ಸಂಘಟನೆಗಳು ಹೋರಾಟವನ್ನು ನಡೆಸುತ್ತಿದ್ದಾರೆ. ಕನ್ನಡ ಭಾಷೆಯ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಹೋರಾಟಗಳು ನಡೆಯುತ್ತಾ ಬಂದಿವೆ. ಅದೇ ರೀತಿ ಗೋಕಾಕ್ ಚಳವಳಿಯ ನೆನಪು ಇಂದಿಗೂ ಅಮರವಾಗಿದ್ದು ಡಾ.ರಾಜ್ ಕುಮಾರ್ ಸೇರಿದಂತೆ ಅನೇಕ ನಟನಟಿಯರು ಕನ್ನಡ ಪರವಾದ ಹೋರಾಟದಲ್ಲಿ ಭಾಗವಹಿಸಿದ್ದರು. ನಾವೆಲ್ಲ ಕನ್ನಡ ಪರವಾದ ಹೋರಾಟಗಳನ್ನು ಸ್ಮರಿಸಬೇಕು ಎಂದರು.
ಕನ್ನಡ ಒಂದು ಭಾಷೆಯಲ್ಲ, ಅದು ನಮ್ಮ ಬದುಕಾಗಿದೆ. ಕವಿಗಳು, ಸಾಹಿತಿಗಳ ಮೂಲಕ ಅಕ್ಷರ ರೂಪದಲ್ಲಿ ಕನ್ನಡ ಭಾಷೆ ಜೀವಂತವಾಗಿರಲು ಸಹಕಾರಿಯಾಗಿದೆ. ಪ್ರತಿಯೊಬ್ಬರು ಕನ್ನಡ ಸಾಹಿತ್ಯಗಳನ್ನು ಓದುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳಸಬೇಕಾಗಿದೆ. ಕನ್ನಡ ರಥ ಇಡೀ ರಾಜ್ಯಾದ್ಯಂತ ಸಂಚಾರ ನಡೆಸುತ್ತಿದ್ದು ಶಿವಮೊಗ್ಗ ನಗರಕ್ಕೆ ಆಗಮಿಸಿರುವ ರಥವನ್ನು ಅದ್ದೂರಿಯಾಗಿ ಸ್ವಾಗತಿಸಿ ಗೌರವಿಸಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಬಲ್ಕೀಶ್ ಬಾನು ಮಾತನಾಡಿ, ಕನ್ನಡ ಭಾಷೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕನ್ನಡಜ್ಯೋತಿ ರಥಯಾತ್ರೆಯನ್ನು ನಡೆಸುತ್ತಿದೆ. ಕನ್ನಡ ನೆಲ, ಜಲ, ನಾಡುನುಡಿ ವಿಷಯ ಬಂದಾಗ ಎಲ್ಲರೂ ಒಂದಾಗಿ ಹೋರಾಡಬೇಕು ಎಂದರು.
ಕನ್ನಡಜ್ಯೋತಿ ರಥಯಾತ್ರೆ ಶಿವಪ್ಪ ನಾಯಕ ವೃತ್ತದಿಂದ ಗೋಪಿವೃತ್ತ ಮಾರ್ಗವಾಗಿ ಮಹಾವೀರ ವೃತ್ತ ಕುವೆಂಪು ರಂಗಮAದಿರದವರೆಗೆ ಸಾಗಿ ಬಂದಿದ್ದು ಮಹಿಳಾ ಮತ್ತು ಪುರುಷ ಡೊಳ್ಳು ತಂಡ ಹಾಗೂ ಇತರ ಕಲಾಮೇಳದೊಂದಿಗೆ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ, ತಹಶೀಲ್ದಾರ್ ಗಿರೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಡಿ ಮಂಜುನಾಥ್, ರೋಟರಿ ಸಂಸ್ಥೆಯ ವಿಜಯಕುಮಾರ್, ವಿವಿಧ ಕನ್ನಡಪರ ಸಂಘಟನೆ ಪದಾಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.