ಸೇವಾನ್ಯೂನ್ಯತೆ: ಪರಿಹಾರ ನೀಡಲು ಕಾವೇರಿಮೋಟಾರ್ಸ್ ವಿರುದ್ಧ ಗ್ರಾಹಕರ ಆಯೋಗ ಆದೇಶ*
*ಸೇವಾನ್ಯೂನ್ಯತೆ: ಪರಿಹಾರ ನೀಡಲು
ಕಾವೇರಿಮೋಟಾರ್ಸ್ ವಿರುದ್ಧ ಗ್ರಾಹಕರ ಆಯೋಗ ಆದೇಶ*
ಶಿವಮೊಗ್ಗ, ಸಾತ್ವಿಕ್ ಬಿನ್ ನಾಗೇಶ್ವರ ರಾವ್ ಎಂಬುವವರು ತಮ್ಮ ವಕೀಲರ ಮೂಲಕ ಎಂ.ಜಿ. ಮೋಟರ‍್ಸ್ ಇಂಡಿಯಾ ಪ್ರೈ. ಲಿ., ಹರಿಯಾಣ ಮತ್ತು ಮೇ|| ಕಾವೇರಿ ಮೋಟರ‍್ಸ್, ಶಿವಮೊಗ್ಗ ಇವರುಗಳ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಹಾರ ನೀಡಲು ಆದೇಶಿಸಿದೆ.
ಅರ್ಜಿದಾರ ಸಾತ್ವಿಕ್ ರವರು 2023ರಲ್ಲಿ ಶಿವಮೊಗ್ಗದ ಕಾವೇರಿ ಮೋಟರ‍್ಸ್ರವರಿಂದ ಎಲೆಕ್ಟ್ರಿಕ್ ಕಾರನ್ನು ರೂ. 10,35,497/- ಪಾವತಿಸಿ ಖರೀದಿಸಿದ್ದು, ರೂ. 8,700/-ಗಳನ್ನು ಪಡೆದು 3 ವರ್ಷಗಳ ಇ-ಶೀಲ್ಡ್ ಮೈನ್ಟೇನೆನ್ಸ್ ಪ್ಲಾನ್‌ನ್ನು ನೀಡಿರುತ್ತಾರೆ. ಆದರೆ ಕಾರು ಖರೀದಿಸಿದ 15 ದಿನಗಳಲ್ಲೇ ಬ್ಯಾಟರಿ ಇಳಿಕೆಯಾಗುತ್ತಿರುವುದು ಗಮನಿಸಿ ಕಾವೇರಿ ಮೋಟರ‍್ಸ್ರವರಿಗೆ ತಿಳಿಸಿದಾಗ ಅವರು ಹೊಸ ಬ್ಯಾಟರಿಯನ್ನು ಅಳವಡಿಸಿರುತ್ತಾರೆ. ಆದರೆ ಸುಮಾರು 6 ತಿಂಗಳ ನಂತರ ಮತ್ತೆ ಮತ್ತೆ ಸಮಸ್ಯೆ ಎದುರಾಗಿದ್ದು, ದೂರು ನೀಡಿದರೂ ಎದುರುದಾರರು ಪರಿಹಾರ ಮಾಡದೇ ಸೇವಾ ಲೋಪವೆಸಗಿದ್ದಾರೆಂದು ಸೂಕ್ತ ಪರಿಹಾರ ಕೋರಿ ಪ್ರಕರಣ ಸಲ್ಲಿಸಿರುತ್ತಾರೆ.
ಈ ಕುರಿತು ಆಯೋಗವು ಪ್ರಕರಣದ ಅಂಶಗಳು ಮತ್ತು ಅರ್ಜಿದಾರರು ಹಾಜರುಪಡಿಸಿದ ದಾಖಲೆಗಳನ್ನು ಪರಿಗಣಿಸಿ, ಎದುರುದಾರರಿಗೆ ಆಯೋಗವು ನೋಟೀಸ್ ನೀಡಿ ದೂರಿನ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ತಿಳಿಸಿದ್ದು, ದೂರುದಾರರು ಕಾರನ್ನು ಮ್ಯಾನುವಲ್ ಪ್ರಕಾರ ಸರಿಯಾದ ರೀತಿಯಲ್ಲಿ ಚಲಾಯಿಸದೇ ಇರುವುದರಿಂದ ಈ ಸಮಸ್ಯೆಯುಂಟಾಗಿರುತ್ತದೆ ಹಾಗೂ ಇದು ತಯಾರಿಕಾ ದೋಷವಲ್ಲವೆಂದು ಮತ್ತು ಕಾರನ್ನು 10000 ಕ್ಕೂ ಹೆಚ್ಚು ಕಿ.ಮಿ. ಚಲಾಯಿಸಿರುವುದರಿಂದ ಹೊಸ ಕಾರನ್ನು ನೀಡಲು ಬರುವುದಿಲ್ಲ. ತಮ್ಮ ಕಡೆಯಿಂದ ಯಾವುದೇ ಸೇವಾ ನ್ಯೂನ್ಯತೆಯಾಗಿರುವುದಿಲ್ಲ. ಆದ ಕಾರಣ ದೂರನ್ನು ವಜಾ ಮಾಡಲು ಎದುರುದಾರರು ಕೋರಿರುತ್ತಾರೆ.
ಅರ್ಜಿದಾರರ ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ, ದಾಖಲೆಗಳನ್ನು ಮತ್ತು ಉಭಯ ಪಕ್ಷಗಾರರ ವಕೀಲರ ವಾದವನ್ನು ಆಲಿಸಿ, ಬ್ಯಾಟರಿಯಲ್ಲಿ ಲೋಪವಿರುವುದು ಮತ್ತು ಹಲವಾರು ಬಾರಿ ಕಾರನ್ನು ಸರಿಯಾದ ರೀತಿಯಲ್ಲಿ ರಿಪೇರಿ ಮಾಡಿಕೊಡದೇ ಇರುವುದು ಎದುರುದಾರರು ಸೇವಾ ನ್ಯೂನತೆ ಎಸಗಿರುತ್ತಾರೆಂದು ಪರಿಗಣಿಸಿ ದೂರನ್ನು ಬಾಗಶಃ ಪುರಸ್ಕರಿಸಿ ಎದುರುದಾರು ತಮ್ಮದೇ ಖರ್ಚಿನಲ್ಲಿ ದೋಷಮುಕ್ತ ಬ್ಯಾಟರಿಯನ್ನು ಆಯೋಗ ಆದೇಶದ ದಿನಾಂಕದಿAದ 45 ದಿನಗಳೊಳಗಾಗಿ ಬದಲಿಸಿಕೊಡಲು ಹಾಗೂ ರೂ. 25,000/-ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ರೂ. 10,000 ಗಳನ್ನು ವ್ಯಾಜ್ಯದ ಖರ್ಚು ವೆಚ್ಚದ ಬಾಬ್ತಾಗಿ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಜ.27 ರಂದು ಆದೇಶಿಸಿದೆ.
—————————