ಸೂಡಾದಿಂದ ಎತ್ತಂಗಡಿ ಆಗುತ್ತಿರುವ ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿ…* *ಸ್ಮಶಾನವಾಗಲಿದೆ ಸೂಡಾ!* *ಸ್ಮಶಾನದ ಹೆಣವಾಗಲಿದ್ದಾರೆ ಸ್ಥಳೀಯ ವರ್ತಕರು!*
*ಸೂಡಾದಿಂದ ಎತ್ತಂಗಡಿ ಆಗುತ್ತಿರುವ ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿ…*
*ಸ್ಮಶಾನವಾಗಲಿದೆ ಸೂಡಾ!*
*ಸ್ಮಶಾನದ ಹೆಣವಾಗಲಿದ್ದಾರೆ ಸ್ಥಳೀಯ ವರ್ತಕರು!*
ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವಿನೋಬನಗರ ಬಡಾವಣೆಯ ವಾಣಿಜ್ಯ ಸಂಕೀರ್ಣದಲ್ಲಿ ಅನಾದಿ ಕಾಲದಿಂದಲೂ ಕಾರ್ಯ ನಿರ್ವಹಿಸುತ್ತಿರುವ ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಆಫೀಸ್ ಸಾಗರ ರಸ್ತೆಯಲ್ಲಿರುವ ಎಪಿಎಂಸಿ ನೂತನ ಕಟ್ಟಡಕ್ಕೆ ಶಿಫ್ಟ್ ಆಗುತ್ತಿದೆ!
ಹಾಗೆಂದು, ಅಧಿಕೃತ ಸುದ್ದಿಯೊಂದು ಹೊರಬೀಳುತ್ತಿದೆ. ಶಿವಮೊಗ್ಗದ ಎಪಿಎಂಸಿ ನೂತನವಾಗಿ ನಿರ್ಮಿಸಿರುವ ಕಟ್ಟಡಕ್ಕೆ ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿ ಎತ್ತಂಗಡಿ ಆಗುತ್ತಿರುವುದರಿಂದ ಬಹಳಷ್ಟು ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಎಪಿಎಂಸಿ ಕಾರ್ಯದರ್ಶಿಗಳು ವಿಶೇಷ ಆಸಕ್ತಿ ವಹಿಸುತ್ತಿರುವುದರ ಹಿಂದೆ ಏನಿದೆ? ಪ್ರಶ್ನೆ ಮುಗಿಲು ಮುಟ್ಟಿದೆ.
ಶಿವಮೊಗ್ಗದ ಸೂಡಾ ಕಚೇರಿಯನ್ನೂ ಹೊಂದಿರುವ ಸೂಡಾ ವಾಣಿಜ್ಯ ಸಂಕೀರ್ಣದಲ್ಲಿ ಬಹಳ ವರ್ಷಗಳಿಂದ ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿಯೂ ಬಾಡಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದೆ.
ಸೂಡಾಕ್ಕೆ ಪ್ರತಿ ತಿಂಗಳು 40,000₹ ಬಾಡಿಗೆ ಪಾವತಿಸುತ್ತಿರುವ ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿಯು ಶಿವಮೊಗ್ಗದ ಎಪಿಎಂಸಿ ಕಟ್ಟಡಕ್ಕೆ ಎತ್ತಂಗಡಿ ಆದರೆ ಅಲ್ಲಿ ಸುಮಾರು 2 ಲಕ್ಷ ₹ ಬಾಡಿಗೆ ಪಾವತಿಸಬೇಕಾಗುತ್ತದೆ.ಇದು ಸರ್ಕಾರಕ್ಕೆ ಹೊರೆಯಾಗಲಿದೆ.
ಸೂಡಾ ವಾಣಿಜ್ಯ ಸಂಕೀರ್ಣದಲ್ಲಿ ಸುಮಾರು 30 ಮಳಿಗೆಗಳಿದ್ದು, ಈ ಮಳಿಗೆಗಳಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ನಂಬಿದ ವ್ಯವಹಾರಸ್ಥರು ತಿಂಗಳಿಗೆ ಒಂದಿಷ್ಟು ಬಾಡಿಗೆ ಪಾವತಿಸಿಕೊಂಡು, ಜೀವನ ಸಾಗಿಸುತ್ತಿದ್ದಾರೆ. ಇದೀಗ ಸಬ್ ರಿಜಿಸ್ಟ್ರಾರ್ ಕಚೇರಿಯ ಎತ್ತಂಗಡಿಯಿಂದ ಇವರಿಗಷ್ಟೇ ಅಲ್ಲದೇ ಸೂಡಾ ಕಚೇರಿ ಆವಣವೂ ಸ್ಮಶಾನ ಮೌನಕ್ಕೆ ಜಾರಲಿದೆ.
ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿ ಎತ್ತಂಗಡಿಯಾದರೆ, ಈ ಕಚೇರಿಯ ಕೆಲಸಗಳನ್ನೇ, ಇಲ್ಲಿಗೆ ಬರುವ ಜನರನ್ನೇ ನಂಬಿಕೊಂಡು ಬದುಕುತ್ತಿರುವ ನೂರಾರು ಜನ ಬೀದಿಗೆ ಬೀಳುವುದು ಖಚಿತ.
ಸಬ್ ರಿಜಿಸ್ಟ್ರಾರ್ ಕಚೇರಿ ಎಪಿಎಂಸಿ ಕಟ್ಟಡಕ್ಕೆ ಎತ್ತಂಗಡಿಯಾದರೆ, ವರ್ತಕರು ಅಲ್ಲಿ ಹೋಗಿ ಮಳಿಗೆ ಪಡೆಯಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಇದೆ. ಅಲ್ಲಿ ಮಳಿಗೆ ಪಡೆಯಲು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಮಳಿಗೆ ಸಿಕ್ಕರೂ ಕನಿಷ್ಠ 37,000₹ ಬಾಡಿಗೆಯನ್ನು ತಲಾ ಒಂದು ಮಳಿಗೆಗೆ ಕಟ್ಟಲೇಬೇಕಾದ ಪರಿಸ್ಥಿತಿ ಇದೆ. ಇದು ಸಾಧ್ಯವೇ?
ಜಿಲ್ಲಾಡಳಿತ ಎಲ್ಲರಿಗೂ ಅನುಕೂಲವಾಗುವ ಕೆಲಸಕ್ಕೆ ಯೋಜಿಸಿ, ಯೋಚಿಸಿ ಕೈ ಹಾಕುವುದೇ!?