ಶಿವಮೊಗ್ಗದಲ್ಲಿ ಮತ್ತೊಂದು ಹೊಸ ವಿಮಾನ ನಿಲ್ದಾಣ; ಎಲ್ಲಿ? ಯಾವಾಗ?*

*ಶಿವಮೊಗ್ಗದಲ್ಲಿ ಮತ್ತೊಂದು ಹೊಸ ವಿಮಾನ ನಿಲ್ದಾಣ; ಎಲ್ಲಿ? ಯಾವಾಗ?*

ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೈಂದೂರಿನಲ್ಲಿ ಮೂಕಾಂಬಿಕಾ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ್ದಾರೆ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಒತ್ತಿನೆಣೆಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಕೇಂದ್ರ ಸಚಿವರು ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ್ದಾರೆ.

ಬೆಂಗಳೂರಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ರಾಘವೇಂದ್ರ, ಶಿವಮೊಗ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ 2 ನೇ ಅತೀ ಹೆಚ್ಚು ಆದಾಯ ಗಳಿಸುವ ದೇವಸ್ಥಾನವಾಗಿದೆ. ಇಲ್ಲಿಗೆ ದೇಶ – ವಿದೇಶಗಳಿಂದ ಪ್ರತಿದಿನ ಹತ್ತು ಸಾವಿರಕ್ಕೂ ಹೆಚ್ಚು ಯಾತಾರ್ಥಿಗಳು ಭೇಟಿ ನೀಡುತ್ತಾರೆ.

ಈ ಸಂಬಂಧವಾಗಿ ಬೈಂದೂರಿಗೆ ವಿಮಾನ ನಿಲ್ದಾಣ ಮಂಜೂರು ಮಾಡುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನು ಕೋರಲಾಗಿತ್ತು. ಕೇಂದ್ರ ಸಚಿವರು ರಾಜ್ಯ ಸರಕಾರದಿಂದ ಪ್ರಸ್ತಾವನೆ ಸಲ್ಲಿಸಿ ಜಮೀನು ಹಸ್ತಾಂತರ ಮಾಡಿಕೊಟ್ಟಲ್ಲಿ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ.

ಬೈಂದೂರು ಮೂಕಾಂಬಿಕಾ ರೋಡ್‌ ರೈಲ್ವೆ ನಿಲ್ದಾಣ ಹಾಗೂ ಬಸ್‌ ನಿಲ್ದಾಣಕ್ಕೆ ಸಮೀಪವಿರುವ ಒತ್ತಿನೆಣೆಯಲ್ಲಿ ಸುಮಾರು 500 ಎಕರೆಗೂ ಅಧಿಕ ಅರಣ್ಯ ಇಲಾಖೆಯ ವಿಸ್ತರಣೆ ಬ್ಲಾಕ್‌ನ ಸ್ಥಳ ಲಭ್ಯವಿದೆ. ಅಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಿದರೆ ಭಕ್ತರಿಗೆ ಅನುಕೂಲವಾಗುತ್ತದೆ. ಈಗಾಗಲೇ ಕೆಎಸ್‌ಐಐಡಿಸಿ ವತಿಯಿಂದ ಸರ್ವೆ ಕಾರ್ಯ ನಡೆದು ಉಡುಪಿ ಜಿಲ್ಲಾಧಿಕಾರಿಗಳಿಂದ ದಾಖಲೆಗಳನ್ನು ಪಡೆದುಕೊಳ್ಳಲಾಗಿದೆ. ಹೀಗಾಗಿ, ತ್ವರಿತವಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕೋರಿದರು.