ಕೆನರಾ ಬ್ಯಾಂಕ್‌ನಲ್ಲಿ ಸೇವಾನ್ಯೂನತೆ : ಪರಿಹಾರ ನೀಡಲು ಆಯೋಗ ಆದೇಶ* ಕಟ್ಟಡ ಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ; ಅರ್ಜಿ ಆಹ್ವಾನ*
*ಕೆನರಾ ಬ್ಯಾಂಕ್‌ನಲ್ಲಿ ಸೇವಾನ್ಯೂನತೆ : ಪರಿಹಾರ ನೀಡಲು ಆಯೋಗ ಆದೇಶ*
ಶಿವಮೊಗ್ಗ
ಶಿವಮೊಗ್ಗದ ವಿಷ್ಣುಮೂರ್ತಿ ಕೇಕುಡ ಬಿನ್ ಶ್ರೀನಿವಾಸ ಕೇಕುಡ ಎಂಬುವವರು ಮ್ಯಾನೇಜರ್, ಕೆನರಾ ಬ್ಯಾಂಕ್, ಶಿವಮೂರ್ತಿ ಸರ್ಕಲ್, ಶಿವಮೊಗ್ಗ ಹಾಗೂ ಮ್ಯಾನೇಜರ್, ಕೆನರಾ ಬ್ಯಾಂಕ್, ಕಾನ್‌ಕಾರ್ಡ್ ಡಿವಿಷನ್, ಬೆಂಗಳೂರು ಇವರುಗಳ ವಿರುದ್ದ ಕ್ರೆಡಿಟ್ ಕಾರ್ಡ್ ಸಂಬAಧ ಸೇವಾ ನ್ಯೂನತೆ ಕುರಿತು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಕೆನರಾ ಬ್ಯಾಂಕ್ ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರರು ಏಪ್ರಿಲ್-2024 ರಂದು ತಮ್ಮ ಕೆನರಾ ಬ್ಯಾಂಕ್ ಸೇವಿಂಗ್ಸ್ ಅಕೌಂಟ್ ಕ್ರೆಡಿಟ್ ಕಾರ್ಡ್ ಹ್ಯಾಕ್ ಆಗಿ ಒಟ್ಟು ರೂ. 1.29 ಲಕ್ಷ ಕಡಿತಗೊಂಡಿದ್ದು, ಈ ಬಗ್ಗೆ ಬ್ಯಾಂಕ್‌ಗೆ ಸರಿಪಡಿಸುವಂತೆ ಹಲವಾರು ಬಾರಿ ದೂರು ನೀಡಿದರೂ ಕ್ರಮ ಕೈಗೊಳ್ಳದೇ ತಮ್ಮ ಎಸ್.ಬಿ.ಖಾತೆಗೆ ಮೊತ್ತವನ್ನು ಮರುಜಮೆ ಮಾಡಿಲ್ಲವೆಂದು ಆಯೋಗಕ್ಕೆ ದೂರು ನೀಡಿರುತ್ತಾರೆ.
ಆಯೋಗವು ದೂರನ್ನು ಪರಿಶೀಲಿಸಿ ನೀಡಿದ ನೋಟಿಸ್‌ಗೆ ಎದುರುದಾರರು ವಕೀಲರ ಮೂಲಕ ಹಾಜರಾಗಿ ದೂರುದಾರರೇ ತಮ್ಮ ಓ.ಟಿ.ಪಿ ಅಥವಾ ಲಿಂಕ್‌ನ್ನು ಶೇರ್ ಮಾಡಿರುವುದರಿಂದ ಈ ವ್ಯವಹಾರ ನಡೆದಿದೆ ವಿನಃ ತಮ್ಮಿಂದ ಯಾವುದೇ ಸೇವಾ ನ್ಯೂನತೆವಾಗಿಲ್ಲವೆಂದು ತಕರಾರು ಸಲ್ಲಿಸಿರುತ್ತಾರೆ.
ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಸಾಕ್ಷಿ, ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮತ್ತು ಉಭಯ ಪಕ್ಷಗಾರರ ವಕೀಲರ ವಾದವನ್ನು ಆಲಿಸಿ, ದೂರುದಾರರು ತಮ್ಮ ಕ್ರೆಡಿಟ್ ಕಾರ್ಡ್ ಹ್ಯಾಕ್ ಆಗಿರುವ ಬಗ್ಗೆ ಸರಿಯಾದ ಸಮಯದಲ್ಲಿ ತಿಳಿಸಿದ್ದರೂ ಎದುರುದಾರರು ಕ್ರಮ ಕೈಗೊಳ್ಳದೇ ಇರುವುದು ಮತ್ತು ಓ.ಟಿ.ಪಿ/ಲಿಂಕ್ ಷೇರ್ ಮಾಡಿಕೊಂಡಿರುವುದಕ್ಕೆ ಯಾವುದೇ ದಾಖಲೆಗಳನ್ನು ಒದಗಿಸಿರುವುದಿಲ್ಲ. ಆದ್ದರಿಂದ ಎದುರುದಾರರು ಆರ್.ಬಿ.ಐ ಗೈಡ್‌ಲೈನ್ಸ್ ಆಧಾರದ ಮೇಲೆ ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ ಈ ಆದೇಶದ 45 ದಿನಗಳೊಳಗೆ ರೂ. 1,33,39/- ಗಳನ್ನು ವಾರ್ಷಿಕ ಶೇ.9% ಬಡ್ಡಿಯೊಂದಿಗೆ ದಿ: 14/06/2024 ರಿಂದ ಪೂರ ಹಣ ನೀಡುವವರೆಗೂ, ತಪ್ಪಿದಲ್ಲಿ ಈ ಮೊತ್ತಕ್ಕೆ ಶೇ.12% ರಂತೆ ಬಡ್ಡಿ ಸಹಿತ ಪಾವತಿಸಲು ಹಾಗೂ ರೂ.25,000 ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ರೂ.10,000 ಗಳನ್ನು ವ್ಯಾಜ್ಯದ ಖರ್ಚಾಗಿ ನೀಡಬೇಕೆಂದು, ತಪ್ಪಿದಲ್ಲಿ ಈ ಮೊತ್ತಗಳ ಮೇಲೆ ವಾರ್ಷಿಕ ಶೇ.10% ಬಡ್ಡಿಯನ್ನು ಈ ಆದೇಶವಾದ ದಿನಾಂಕದಿAದ ಹಣವನ್ನು ಪಾವತಿಸುವವರೆಗೂ ನೀಡಬೇಕೆಂದು ನಿರ್ದೇಶಿಸಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಮೇ.12 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟಾçರ್ ತಿಳಿಸಿದ್ದಾರೆ.
—————–
*ಕಟ್ಟಡ ಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ; ಅರ್ಜಿ ಆಹ್ವಾನ*
ಜಿಲ್ಲಾ ಕಾರ್ಮಿಕ ಇಲಾಖೆಯು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಕೆಲಸದ ಕೌಶಲ್ಯವನ್ನು ಬಲವರ್ಧನೆಗೊಳಿಸಲು ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆಯೋಜಿಸಲಾಗಿದೆ.
ಆಸಕ್ತ ಶಿವಮೊಗ್ಗ ಜಿಲ್ಲೆಯಲ್ಲಿ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ತಮ್ಮ ವ್ಯಾಪ್ತಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ನೋಂದಣಿ ಗುರುತಿನ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಮತ್ತು ಒಂದು ಪಾಸ್‌ಪೋರ್ಟ್ ಭಾವಚಿತ್ರದೊಂದಿಗೆ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ಎಂ.ಪಿ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ತರಬೇತಿಯನ್ನು ಪಡೆದ ಕಾರ್ಮಿಕರಿಗೆ ಪ್ರಮಾಣ ಪತ್ರ ಮತ್ತು ಆರ್.ಪಿ.ಎಲ್ ಕಿಟ್‌ಗಳನ್ನು ವಿತರಿಸಲಾಗುವುದು.
————–