ಉಚ್ಛಾಟಿತ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದೇನು?* *ಇನ್ನೂ 10-12 ಸೀಟುಗಳು ಬಿಜೆಪಿಯಿಂದ ಖಾಲಿಯಾಗಲಿವೆ!* *ಅಶೋಕ್ ಕಂಡ್ರೆ ಬಿಜೆಪಿಗೇ ಆಗಲ್ಲ* *ರಾಜಕೀಯವಾಗಿ ಬೆಳೆಸಿದ್ದು ಡಿಕೆಶಿ ಎಂದ ಸೋಮಶೇಖರ್ ಮತ್ತೇನಂದ್ರು?*
*ಉಚ್ಛಾಟಿತ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದೇನು?*
*ಇನ್ನೂ 10-12 ಸೀಟುಗಳು ಬಿಜೆಪಿಯಿಂದ ಖಾಲಿಯಾಗಲಿವೆ!*
*ಅಶೋಕ್ ಕಂಡ್ರೆ ಬಿಜೆಪಿಗೇ ಆಗಲ್ಲ*
*ರಾಜಕೀಯವಾಗಿ ಬೆಳೆಸಿದ್ದು ಡಿಕೆಶಿ ಎಂದ ಸೋಮಶೇಖರ್ ಮತ್ತೇನಂದ್ರು?*
ಪಕ್ಷವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದಿಂದ ತಮ್ಮನ್ನು ಉಚ್ಛಾಟನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಎಸ್ ಟಿ ಸೋಮಶೇಖರ್, ಬಿಜೆಪಿಯ 10 ರಿಂದ 12 ಶಾಸಕ ಸ್ಥಾನಗಳು ಖಾಲಿಯಾಗುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿಯಿಂದ ಗೆದ್ದು ವಿಧಾನಸಭೆ ಪ್ರವೇಶಿಸಿರುವ ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ (ST Somashekar) ಹಾಗೂ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ (Shivaram Hebbar) ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಉಚ್ಚಾಟನೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಎಸ್ ಟಿ ಸೋಮಶೇಖರ್, ‘ಅಮವಾಸ್ಯೆ ದಿನ ಒಳ್ಳೆ ನಿರ್ಧಾರ ಕೈಗೊಂಡಿದ್ದಾರೆ. ಬೆಳಗ್ಗೆ ಮೊಬೈಲ್ ನೋಡಿದಾಗ ಈ ವಿಚಾರ ತಿಳಿಯಿತು ಎಂದರು.
ಅಂತೆಯೇ, ‘ಪಕ್ಷದಿಂದ ನಮ್ಮನ್ನು ಉಚ್ಚಾಟನೆ ಮಾಡುತ್ತಾರೆ ಎಂದು ಗೊತ್ತಿತ್ತು. ಆದ್ರೆ ಯಾವಾಗ ಉಚ್ಚಾಟನೆ ಮಾಡುತ್ತಾರೆ ಎಂದು ಗೊತ್ತಿರಲಿಲ್ಲ. 6 ವರ್ಷಗಳ ಕಾಲ ನನ್ನನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿದ್ದಾರೆ. ನೋಟಿಸ್ ಕೊಡುವ ಮುನ್ನ ಅಮಿತ್ ಶಾ ನನ್ನ ಜತೆ ಮಾತಾಡಿದ್ದರು. ಕ್ಷೇತ್ರದಲ್ಲಿರುವ ಭಿನ್ನಮತದ ಬಗ್ಗೆ ಅಮಿತ್ ಶಾ ಜತೆ ಮಾತನಾಡಿದ್ದೆ. ಸಮಸ್ಯೆ ಬಗೆಹರಿಸದಿದ್ದರೆ ಪಕ್ಷ ತೊರೆಯುವುದಾಗಿ ನಾನು ಹೇಳಿದ್ದೆ. ಬಿಜೆಪಿಯ ಯಾರೂ ನನ್ನನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ಅಮಾವಾಸ್ಯೆಯ ದಿನ ಒಳ್ಳೆಯದು ಮಾಡಿದ್ದಾರೆ’ ಎಂದರು.
ಇದೇ ವೇಳೆ ಚುನಾವಣೆ ವೇಳೆಗೆ ಬಿಜೆಪಿಯಲ್ಲಿ ಇನ್ನೂ 10-12 ಸೀಟ್ ಖಾಲಿ ಆಗುತ್ತೆ ಎಂದು ಎಸ್ ಟಿ ಸೋಮಶೇಖರ್ ಹೊಸ ಬಾಂಬ್ ಸಿಡಿಸಿದ್ದಾರೆ. ಉಚ್ಚಾಟನೆಗೂ ಮುನ್ನ ಶಿಸ್ತು ಸಮಿತಿಯಿಂದ ನೋಟಿಸ್ ನೀಡಿದ್ದರು. ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ನೋಟಿಸ್ ಗೆ ಉತ್ತರಿಸಿದ್ದೆ. ಬಿಜೆಪಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಸದ್ಯಕ್ಕೆ ನಮ್ಮ ಕೆಲಸವನ್ನು ನಾವು ಮಾಡಿಕೊಂಡು ಹೋಗುತ್ತೇವೆ. ಚುನಾವಣೆ ಘೋಷಣೆಯಾದಾಗ ಮುಂದಿನ ನಿರ್ಧಾರ ತಿಳಿಸುತ್ತೇವೆ. ಚುನಾವಣೆ ವೇಳೆಗೆ ಬಿಜೆಪಿಯಲ್ಲಿ ಇನ್ನೂ 10-12 ಸೀಟ್ ಖಾಲಿ ಆಗುತ್ತೆ. ಉಚ್ಚಾಟನೆ ಮಾಡಿದವರಿಗೆ ಚಾಮುಂಡೇಶ್ವರಿ ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಎಂದರು.
ಯತ್ನಾಳ್ ರನ್ನ ಅಂದೇ ಉಚ್ಚಾಟಿಸಿದ್ದರೆ ಬಿಜೆಪಿ ಸರ್ಕಾರ ಹೋಗುತ್ತಿರಲಿಲ್ಲ
ಇದೇ ವೇಳೆ ನಮ್ಮ ಉಚ್ಚಾಟನೆಗೂ, ಯತ್ನಾಳ್ ಉಚ್ಚಾಟನೆಗೂ ತುಂಬಾ ವ್ಯತ್ಯಾಸವಿದೆ. ಯತ್ನಾಳ್ ರನ್ನ ಅಂದೇ ಉಚ್ಚಾಟಿಸಿದ್ದರೆ ಬಿಜೆಪಿ ಸರ್ಕಾರ ಹೋಗುತ್ತಿರಲಿಲ್ಲ. ಬಿಜೆಪಿಯ ಒಬ್ಬ ಶಾಸಕ ವಿಧಾನಸೌಧದಲ್ಲಿ ರೇಪ್ ಮಾಡುತ್ತಾನೆ. ವಿಪಕ್ಷ ನಾಯಕರಿಗೆ ಏಡ್ಸ್ ಇಂಜೆಕ್ಷನ್ ಚುಚ್ಚಲು ಪ್ರಯತ್ನ ಮಾಡುತ್ತಾರೆ. ಒಕ್ಕಲಿಗ ಹೆಣ್ಮಗಳನ್ನು ಮಂಚಕ್ಕೆ ಕರೆಯುವುದನ್ನು ಎಲ್ಲಾದ್ರೂ ಕೇಳಿದ್ದೀರಾ? ಬಿಜೆಪಿ ಪ್ರಾಮಾಣಿಕ ಪಕ್ಷ ಆಗಿದ್ದರೆ ಇಂತಹವರನ್ನು ಸಸ್ಪೆಂಡ್ ಮಾಡಬೇಕಿತ್ತು ಎಂದು ಸೋಮಶೇಖರ್ ಪರೋಕ್ಷವಾಗಿ ಶಾಸಕ ಮುನಿರತ್ನ ವಿರುದ್ಧವೂ ಕ್ರಮ ಜರುಗಿಸಲಿ ಎಂದು ವಾಗ್ದಾಳಿ ನಡೆಸಿದರು.
ಬಿಎಸ್ ವೈ, ವಿಜಯೇಂದ್ರ ಉಳಿಸಿಕೊಳ್ಳುವ ಪ್ರಯತ್ನಪಡಲಿಲ್ಲ
ಉಚ್ಚಾಟನೆಯಲ್ಲಿ ಬಿಎಸ್ವೈ, ವಿಜಯೇಂದ್ರರದ್ದು ಯಾವ ಪಾತ್ರ. ಉಳಿದ ನಾಯಕರೂ ಉಳಿಸಿಕೊಳ್ಳಲು ಪ್ರಯತ್ನ ಮಾಡಲಿಲ್ಲ. ನಾನಾಗಿ ಹೋಗಿ ಮೇಲೆ ಬಿದ್ದು ಕೇಳುವ ಮನಸ್ಸು ನನ್ನದಲ್ಲ. ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಉಳಿಸಿಕೊಳ್ಳುವ ಪ್ರಯತ್ನ ಮಾಡ್ಲಿಲ್ಲ. ಇಬ್ಬರೂ ಕೂಡ 100% ನನ್ನ ಉಳಿಸಿಕೊಳ್ಳಲು ಪ್ರಯತ್ನ ಮಾಡಲಿಲ್ಲ. ಅವರು ಪ್ರಯತ್ನ ಮಾಡಿದ್ದರೆ ಇಂದು ನಾನು ಉಚ್ಚಾಟನೆ ಆಗುತ್ತಿರಲಿಲ್ಲ ಎಂದು ಸೋಮಶೇಖರ್ ಕಿಡಿಕಾರಿದರು.
ರಾಜಕೀಯವಾಗಿ ನನ್ನ ಬೆಳೆಸಿದ್ದು ಡಿಕೆಶಿ
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು, ಡಿಕೆ ಶಿವಕುಮಾರ್. ಸಹಕಾರ ಕ್ಷೇತ್ರದಲ್ಲಿ ನಾನು ಬೆಳೆಯಲು ಡಿ.ಕೆ.ಶಿವಕುಮಾರ್ ಕಾರಣ. ಉತ್ತರಹಳ್ಳಿ ಟಿಕೆಟ್ ಸಿಗಲು ಡಿ.ಕೆ.ಶಿವಕುಮಾರ್ ಅವರೇ ಕಾರಣ. ಖರ್ಗೆ, ಪರಮೇಶ್ವರ್ ಯಶವಂತಪುರ ಕ್ಷೇತ್ರದ ಟಿಕೆಟ್ ಕೊಡಿಸಿದರು. ಹಿಂದೆ ಕಾಂಗ್ರೆಸ್ನಲ್ಲಿದ್ದ ಕಾರಣಕ್ಕೆ ಅನುದಾನ ಕೇಳುವ ಕೆಲಸ ಮಾಡಿದೆ. ಅದರಿಂದಾಗಿ ಇವರು ಪಕ್ಷಕ್ಕೆ ಮುಜುಗರ ಆಗುತ್ತೆ ಎನ್ನುವುದಾದರೆ ರೇಪ್, ಏಡ್ಸ್ ಇಂಜೆಕ್ಷನ್ ಯಾವುದೂ ಮುಜುಗರ ಅಲ್ಲವೇ? ಎಂದು ಸೋಮಶೇಖರ್ ಪ್ರಶ್ನಿಸಿದರು.
ಆರ್ ಅಶೋಕ್ ಕಂಡ್ರೆ ಬಿಜೆಪಿಯವರಿಗೇ ಆಗಲ್ಲ..
ಅಂತೆಯೇ ನಾವು 2028ರ ವರೆಗೆ ಶಾಸಕರಾಗಿಯೇ ಇರುತ್ತೇವೆ. 2028ಕ್ಕೆ ಮತ್ತೆ ಕಾಂಗ್ರೆಸ್‌ನಿಂದಲೇ ಸ್ಪರ್ಧೆ ಮಾಡುತ್ತೇನೆ. ಅದು ಯಾವ ಬಿಜೆಪಿಯವರು ನನ್ನನ್ನು ಸೋಲಿಸಲು ಬರುತ್ತಾರೋ ನೋಡೋಣ ಎಂದು ಸವಾಲೆಸೆದರು.
ಅಶೋಕ್ ಕಂಡರೆ ಬಿಜೆಪಿಯವರಿಗೆ ಆಗಲ್ಲ ಎಂದ ಸೋಮಶೇಖರ್, ‘ಅಸೆಂಬ್ಲಿಯಲ್ಲಿ ಅಶೋಕ್ ಎದ್ದು ನಿಂತರೆ ಹಿಂದೆ ಹೇಗೆಲ್ಲ ಅವನ ಬಗ್ಗೆ ಕೆಟ್ಟದಾಗಿ ಮಾತಾಡ್ತಾರೆ ಎಂದು ಒಮ್ಮೆ ನೆನಪು ಮಾಡಿಕೊಳ್ಳಲಿ. ಎಸ್ ಆರ್ ವಿಶ್ವನಾಥ್ ಏನು ಒಳ್ಳೊಳ್ಳೆ ಮಾತಾಡಿದ್ದಾರಾ ನಿಮಗೆ? ಎಂದು ಪ್ರಶ್ನಿಸಿದರು. ನಾನು ಬಿಜೆಪಿಗೆ ಬಂದ ಮೇಲೆ ಒಮ್ಮೆಯೂ ಆರ್.ಅಶೋಕ್ ವಿರುದ್ಧ ನಾನು ಮಾತಾಡಿಲ್ಲ, ನನ್ನ ಬಗ್ಗೆ ಮಾತಾಡಿದ್ರೆ ಮೂರು ವರ್ಷಗಳ ಕಾಲ ನಾನು ಏನು ಬಿಜೆಪಿಯಲ್ಲಿದ್ದೆ, ಅವಾಗಿನ ನಿಮ್ಮ ಹಿಸ್ಟರಿನೂ ನಾನು ತೆಗೆಯಬೇಕಾಗುತ್ತದೆ. ಯಾರ ಜೊತೆ ಏನು ಒಡಂಬಡಿಕೆ ಮಾಡಿಕೊಂಡಿದ್ದಾರೆ ಅವೆಲ್ಲವೂ ಹೇಳಬೇಕಾಗುತ್ತದೆ. ಉಚ್ಚಾಟನೆ ಮಾಡಿದ್ದಾರೆ ನಾನು ಇವಾಗ ನೆಮ್ಮದಿಯಿಂದ ಇದ್ದೇನೆ. ಇನ್ನೂ ನನ್ನ ಬಗ್ಗೆ ಏನಾದರೂ ಮಾತಾಡಿದ್ರೆ ಸುದ್ದಿಗೋಷ್ಠಿ ಕರೆದು ಹೇಳಬೇಕಾಗುತ್ತದೆ ಎಂದು ಕಿಡಿಕಾರಿದರು.