ಕರ್ನಾಟಕದಲ್ಲಿ ಒಂದೇ ವರ್ಷದಲ್ಲಿ ನಡೆದ 700 ಬಾಲ್ಯ ವಿವಾಹಗಳು!* *685 ಬಾಲ ಗರ್ಭಿಣಿ ಪ್ರಕರಣಗಳು!* *ಶಿವಮೊಗ್ಗದಲ್ಲಿ 231 ಪೋಕ್ಸೋ ಪ್ರಕರಣಗಳಲ್ಲಿ 55 ಬಾಲಕಿಯರು ಗರ್ಭಿಣಿಯರು!* *ಶಿವಮೊಗ್ಗದಲ್ಲೇ ಅತೀ ಹೆಚ್ಚು ಬಾಲ್ಯ ವಿವಾಹಗಳು*

*ಕರ್ನಾಟಕದಲ್ಲಿ ಒಂದೇ ವರ್ಷದಲ್ಲಿ ನಡೆದ 700 ಬಾಲ್ಯ ವಿವಾಹಗಳು!*

*685 ಬಾಲ ಗರ್ಭಿಣಿ ಪ್ರಕರಣಗಳು!*

*ಶಿವಮೊಗ್ಗದಲ್ಲಿ 231 ಪೋಕ್ಸೋ ಪ್ರಕರಣಗಳಲ್ಲಿ 55 ಬಾಲಕಿಯರು ಗರ್ಭಿಣಿಯರು!*

*ಶಿವಮೊಗ್ಗದಲ್ಲೇ ಅತೀ ಹೆಚ್ಚು ಬಾಲ್ಯ ವಿವಾಹಗಳು*

ಪ್ರಗತಿಶೀಲ ರಾಜ್ಯವಾದ ಕರ್ನಾಟಕದಲ್ಲಿ ಬಾಲ್ಯ ವಿವಾಹ ಹಾಗೂ ಬಾಲ ಗರ್ಭಿಣಿ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಅದೆಷ್ಟೇ ಜಾಗೃತಿ ಮೂಡಿಸಿ, ಕಠಿಣ ಕ್ರಮಗಳನ್ನು ಕೈಗೊಂಡರೂ ಬಾಲ್ಯ ವಿವಾಹ ಹಾಗೂ ಬಾಲ ಗರ್ಭಿಣಿಯರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ.

ಕರ್ನಾಟಕ ಶೈಕ್ಷಣಿಕ, ಸಾಮಾಜಿಕ, ತಂತ್ರಜ್ಞಾನಗಳಲ್ಲಿ ಆಧುನಿಕತೆಯನ್ನು ಮೈಗೂಡಿಸಿಕೊಂಡು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯ. ಆದರೂ ಕೂಡ ಬಾಲ್ಯ ವಿವಾಹದ ಪಿಡುಗು ಇನ್ನೂ ಮುಂದುವರೆದಿದೆ. ಅದರ ಜೊತೆಗೆ ಬಾಲ ಗರ್ಭಿಣಿಯರ ಸಂಖ್ಯೆಯೂ ಹೆಚ್ಚುತ್ತಿದೆ. ರಾಜ್ಯದ ಎಲ್ಲಾ ಸರ್ಕಾರಗಳು ಈ ಸಂಬಂಧ ಕಠಿಣ ಕಾನೂನು ಪಾಲನೆ ಮಾಡುತ್ತಿದ್ದರೂ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಜನಜಾಗೃತಿ ಜೊತೆಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದರೂ ಈ ಸಾಮಾಜಿಕ ಪಿಡುಗು ದೂರವಾಗಿಲ್ಲ.

ಬಾಲ್ಯ ವಿವಾಹ ಹಾಗೂ ಬಾಲ ಗರ್ಭಿಣಿಯರ ಪ್ರಮಾಣ ಅಧಿಕ ಪ್ರಮಾಣದಲ್ಲಿರುವುದು ಆತಂಕಕಾರಿ ವಿಚಾರವಾಗಿದೆ. ಬಾಲ್ಯ ವಿವಾಹ ಹಾಗೂ ಬಾಲ ಗರ್ಭಿಣಿ ಪ್ರಕರಣಗಳನ್ನು ಕಡಿಮೆಗೊಳಿಸಲು ಸಿಎಂ ಸಿದ್ದರಾಮಯ್ಯ ಕೂಡ ಎರಡು ದಿನಗಳ ಕಾಲ‌ ನಡೆದ ಡಿಸಿಗಳು ಹಾಗೂ ಸಿಇಒಗಳ ಸಭೆಯಲ್ಲಿ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದಾರೆ.

*ರಾಜ್ಯದಲ್ಲಿ ನಡೆದ ಬಾಲ್ಯ ವಿವಾಹ 700*

2024-25ರ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 700 ಬಾಲ್ಯ ವಿವಾಹಗಳು ನಡೆದಿವೆ. ಒಟ್ಟು 3,049 ಬಾಲ್ಯ ವಿವಾಹ ದೂರುಗಳು ಸ್ವೀಕೃತವಾಗಿವೆ. ಈ ಪೈಕಿ 2,349 ಬಾಲ್ಯ ವಿವಾಹವನ್ನು ತಡೆಯಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಿನ ವಿಚಾರವಾಗಿದೆ. ಎರಡು ದಿನ ಸಿಎಂ ನೇತೃತ್ವದಲ್ಲಿ ನಡೆದ ಡಿಸಿ ಹಾಗೂ ಸಿಇಒಗಳ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿ 2024-25ರಲ್ಲಿ 700 ಬಾಲ್ಯ ವಿವಾಹಗಳು ನಡೆದಿವೆ.

ಇದರಲ್ಲಿ, ಶಿವಮೊಗ್ಗದಲ್ಲಿ ಅತೀ ಹೆಚ್ಚು 79 ಬಾಲ್ಯ ವಿವಾಹಗಳು ನಡೆದಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಜಿಲ್ಲೆ ಬೆಳಗಾವಿಯಲ್ಲಿ 78 ಬಾಲ್ಯ ವಿವಾಹ ನಡೆದಿದ್ದು, ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಚಿತ್ರದುರ್ಗದಲ್ಲಿ 74 ಬಾಲ್ಯ ವಿವಾಹ ನಡೆದರೆ, ಬಾಗಲಕೋಟೆ ಜಿಲ್ಲೆಯಲ್ಲಿ 60, ಸಿಎಂ ತವರು ಜಿಲ್ಲೆ ಮೈಸೂರಿನಲ್ಲಿ 60, ಮಂಡ್ಯದಲ್ಲಿ 57 ಹಾಗೂ ಹಾವೇರಿ ಜಿಲ್ಲೆಯಲ್ಲಿ 42 ಬಾಲ್ಯ ವಿವಾಹಗಳು ನಡೆದಿವೆ.

*ಸಿಎಂ ತವರು ಜಿಲ್ಲೆ ಮೈಸೂರಲ್ಲಿ ಅತೀ ಹೆಚ್ಚು ದೂರು:*

ಬಾಲ್ಯ ವಿವಾಹ ಸಂಬಂಧ ಅತಿ ಹೆಚ್ಚು ದೂರು ಸ್ವೀಕೃತವಾಗಿರುವುದು ಮೈಸೂರು ಜಿಲ್ಲೆಯಲ್ಲಾಗಿದೆ. ಜಿಲ್ಲೆಯಲ್ಲಿ ಸುಮಾರು 284 ದೂರುಗಳು ಸ್ವೀಕೃತವಾಗಿದ್ದು, ಆ ಪೈಕಿ 224 ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ. ಉಳಿದಂತೆ ಮಂಡ್ಯದಲ್ಲಿ 180 ದೂರುಗಳು ಸ್ವೀಕೃತವಾಗಿದ್ದು, ಆ ಪೈಕಿ 129 ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ಅಧಿಕಾರಿಗಳು ಸಫಲರಾಗಿದ್ದಾರೆ.

ಬೆಂಗಳೂರು ನಗರದಲ್ಲಿ ಬಾಲ್ಯ ವಿವಾಹಗಳ ಬಗ್ಗೆ 83 ದೂರುಗಳು ಸ್ವೀಕೃತವಾಗಿದ್ದು, ಈ ಪೈಕಿ 53 ವಿವಾಹಗಳನ್ನು ತಡೆಯಲಾಗಿದೆ. ಆದರೆ, 30 ಬಾಲ್ಯ ವಿವಾಹಗಳು ನಡೆದಿವೆ. ಇನ್ನುಳಿದಂತೆ, ರಾಮನಗರ ಜಿಲ್ಲೆಯಲ್ಲಿ 28, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 24, ಯಾದಗಿರಿಯಲ್ಲಿ 16, ಹಾಸನದಲ್ಲಿ 15 ಹಾಗೂ ಕೋಲಾರದಲ್ಲಿ 14 ಬಾಲ್ಯ ವಿವಾಹಗಳು ನಡೆದಿವೆ.

ಕಲಬುರಗಿಯಲ್ಲಿ 142 ದೂರುಗಳ ಪೈಕಿ 130 ಬಾಲ್ಯ ವಿವಾಹವನ್ನು ತಡೆಯಲಾಗಿದ್ದು, 12 ಬಾಲ್ಯ ವಿವಾಹಗಳು ನಡೆದಿವೆ. ವಿಜಯಪುರದಲ್ಲಿ 160 ಬಾಲ್ಯ ವಿವಾಹ ದೂರುಗಳ ಪೈಕಿ 148ನ್ನು ತಡೆಯಲಾಗಿದ್ದು, 12 ಬಾಲ್ಯ ವಿವಾಹಗಳು ನಡೆದಿವೆ. ಚಿಕ್ಕಬಳ್ಳಾಪುರದಲ್ಲಿ 12, ವಿಜಯನಗರದಲ್ಲಿ 11, ಬಳ್ಳಾರಿ ಹಾಗೂ ಚಿಕ್ಕಮಗಳೂರಲ್ಲಿ ತಲಾ 11 ಬಾಲ್ಯ ವಿವಾಹಗಳು ಸಂಭವಿಸಿವೆ. ಕೊಪ್ಪಳದಲ್ಲಿ 168 ಬಾಲ್ಯ ವಿವಾಹಗಳ ದೂರುಗಳು ಸ್ವೀಕೃತವಾಗಿದ್ದು, ಆ ಪೈಕಿ 161 ತಡೆದಿದ್ದು, 7 ಬಾಲ್ಯ ವಿವಾಹಗಳು ಜರುಗಿವೆ.

ದಕ್ಷಿಣ ಕನ್ನಡ, ಕೊಡಗು, ಉಡುಪಿಯಲ್ಲಿ ಅತೀ ಕಡಿಮೆ ಬಾಲ್ಯ ವಿವಾಹಗಳ ದೂರುಗಳು ಸ್ವೀಕೃತವಾಗಿವೆ. ದ.ಕನ್ನಡ ಹಾಗೂ ಕೊಡಗು ತಲಾ 7, ಉಡುಪಿಯಲ್ಲಿ 6 ಬಾಲ್ಯ ವಿವಾಹಗಳು ನಡೆದಿವೆ. ದಾವಣಗೆರೆಯಲ್ಲೂ 7 ಬಾಲ್ಯ ವಿವಾಹಗಳು ನಡೆದಿವೆ. ರಾಯಚೂರಲ್ಲಿ 118 ಬಾಲ್ಯ ವಿವಾಹ ದೂರು ಸ್ವೀಕಾರವಾಗಿದ್ದು, 114 ತಡೆಯಲಾಗಿದೆ. ಕೇವಲ 4 ಬಾಲ್ಯ ವಿವಾಹಗಳು ನಡೆದಿವೆ. ಇನ್ನು ಬೀದರ್, ತುಮಕೂರು ಹಾಗೂ ಉತ್ತರ ಕನ್ನಡದಲ್ಲಿ ತಲಾ 3 ಬಾಲ್ಯ ವಿವಾಹಗಳು ನಡೆದಿವೆ. ಚಾಮರಾಜನಗರ, ಗದಗದಲ್ಲಿ ತಲಾ 2 ಮತ್ತು ಧಾರವಾಡದಲ್ಲಿ 1 ಬಾಲ್ಯ ವಿವಾಹ ನಡೆದಿದೆ.

*ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ 2,165 ಬಾಲ್ಯ ವಿವಾಹ:*

ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಅಂದರೆ 2021-22 ರಿಂದ 2024-25ವರೆಗೆ 2,165 ಬಾಲ್ಯ ವಿವಾಹಗಳು ನಡೆದಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. 2021-22ರಲ್ಲಿ 418, 2022-23ರಲ್ಲಿ 328 ನಡೆದಿವೆ. ಆದರೆ ಕಾಂಗ್ರೆಸ್ ಸರ್ಕಾರದ ಆಡಳಿತ ಆರಂಭವಾದ 2023-24ರಲ್ಲಿ ಬಾಲ್ಯ ವಿವಾಹ ಪ್ರಕರಣ 719ಕ್ಕೆ ಏರಿಕೆಯಾಗಿದೆ. ಬಳಿಕ 2024-25ರಲ್ಲಿ 700 ಬಾಲ್ಯ ವಿವಾಹಗಳು ನಡೆದಿವೆ. ಕಳೆದ ಎರಡು ವರ್ಷಗಳಲ್ಲೇ 1,416 ಬಾಲ್ಯ ವಿವಾಹಗಳು ಜರುಗಿವೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸಭೆಯಲ್ಲಿ ಬಾಲ್ಯ ವಿವಾಹ ನಿಯಂತ್ರಿಸದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

*ರಾಜ್ಯದಲ್ಲಿ 3,489 ಪೋಕ್ಸೋ ಪ್ರಕರಣ, 685 ಬಾಲ ಗರ್ಭಿಣಿಯರು ಪತ್ತೆ:*

ರಾಜ್ಯದಲ್ಲಿ 2024-25 ಸಾಲಿನಲ್ಲಿ 685 ಬಾಲ ಗರ್ಭಿಣಿ ಪ್ರಕರಣಗಳು ವರದಿಯಾಗಿವೆ. ಪೋಕ್ಸೋ ಪ್ರಕರಣಗಳ ಪೈಕಿ 685 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿರುವುದು ಮತ್ತೊಂದು ಆತಂಕಕಾರಿ ವಿಚಾರವಾಗಿದೆ. ರಾಜ್ಯದಲ್ಲಿ 2024-25 ಸಾಲಿನಲ್ಲಿ 3,489 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 685 ಬಾಲ ಗರ್ಭಿಣಿಯರಾಗಿದ್ದಾರೆ ಎಂದು ಸಿಎಂ ನೇತೃತ್ವದ ಸಭೆಯಲ್ಲಿ ಇಲಾಖೆ ಅಧಿಕಾರಿಗಳು ಅಂಕಿ-ಅಂಶ ನೀಡಿದ್ದಾರೆ.

ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 343 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 28 ಬಾಲ ಗರ್ಭಿಣಿಯರಾಗಿದ್ದಾರೆ. ಶಿವಮೊಗ್ಗದಲ್ಲಿ 231 ಪೋಕ್ಸೋ ಪ್ರಕರಣಗಳಾಗಿದ್ದು, ಈ ಪೈಕಿ 55 ಬಾಲಕಿಯರು ಗರ್ಭಿಣಿಯರಾಗಿದ್ದಾರೆ. ಬೆಳಗಾವಿಯಲ್ಲಿ 179 ಪೋಕ್ಸೋ ಪ್ರಕರಣಗಳಲ್ಲಿ, 20 ಬಾಲ ಗರ್ಭಿಣಿಯಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 170 ಪೋಕ್ಸೋ ಪ್ರಕರಣ ದಾಖಲಾಗಿದ್ದು, 32 ಗರ್ಭವತಿಯರಾಗಿದ್ದಾರೆ. ಮಂಡ್ಯದಲ್ಲಿ 160 ಪೋಕ್ಸೋ ಪ್ರಕರಣ ದಾಖಲಾಗಿದ್ದು, 8 ಮಂದಿ ಬಾಲ ಗರ್ಭಿಣಿಯರಾಗಿದ್ದಾರೆ.