ಡೆಪಾಸಿಟ್ ಮಷಿನ್​ಗೆ​​​ ಕಂತೆ ಕಂತೆ ಖೋಟಾ ನೋಟು!*- 10 ಜನರ ಬಂಧನ

*ಡೆಪಾಸಿಟ್ ಮಷಿನ್​ಗೆ​​​ ಕಂತೆ ಕಂತೆ ಖೋಟಾ ನೋಟು!*

ಡೆಪಾಸಿಟ್ ಮಷಿನ್​​ಗೆ ಅಸಲಿ ನೋಟುಗಳ ಜೊತೆಗೆ ಕಂತೆ ಕಂತೆ ಖೋಟಾ ನೋಟುಗಳನ್ನ (Fake Currency) ಹಾಕಿ ಅಸಲಿ ಮಾಡುವ ದಂಧೆಯೊಂದು ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಜಿಲ್ಲೆಯ ಮಾನ್ವಿ ಪೊಲೀಸರು ಹತ್ತು ಜನರನ್ನು ಬಂಧಿಸಿದ್ದಾರೆ (Arrested).

ರಾಯಚೂರು ಮೂಲದ ವಿರೂಪಾಕ್ಷ, ಶೇಖರ್, ಖಾಜಾ ಹುಸೇನ್, ಕೊಪ್ಪಳ ಮೂಲದ ಭೀಮೇಶ್ ಸೇರಿ 10 ಜನರನ್ನು ಬಂಧಿಸಲಾಗಿದ್ದು, ಒಂದು ಕಾರು, ನಾಲ್ಕು ಬೈಕ್ ಜಪ್ತಿ ಮಾಡಲಾಗಿದೆ.

ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಘಟನೆ ನಡೆದಿದೆ. ಇದೇ ಮೇ ತಿಂಗಳಲ್ಲಿ ಮಾನ್ವಿ ಠಾಣೆಯಲ್ಲಿ ಎರಡು ಎಫ್ಐಆರ್​ ದಾಖಲಾಗಿದ್ದವು. ಆರೋಪಿ ಶೇಖರ್​ನಿಂದ ತನ್ನ ಸಹೋದರ ವಿರೂಪಾಕ್ಷ ಖಾತೆಗೆ 20,500 ರೂ ಖೋಟಾ ನೋಟುಗಳನ್ನು ಡೆಪಾಸಿಟ್ ಮಾಡಿ, ಸಾರ್ವಜನಿಕವಾಗಿ ಚಲಾವಣೆಗೆ ಯತ್ನಿಸಲಾಗಿದೆ.

ಈ ಪೈಕಿ 2500 ಅಸಲಿ ನೋಟು ಮಾತ್ರ ಡೆಪಾಸಿಟ್ ಮಷಿನ್​​ನಲ್ಲಿ ಜಮೆ ಆಗಿದೆ. ಬಾಕಿ 18 ಸಾವಿರ ಮೌಲ್ಯದ 500 ಮುಖ ಬೆಲೆಯ 36 ಖೋಟಾ ನೋಟುಗಳು ಮಷಿನ್​​ನಲ್ಲಿ ಸಿಕ್ಕಿಕೊಂಡಿವೆ. ಆಗ ಹಣ ಜಮೆ ಆಗಿಲ್ಲ ಅಂತ ತನ್ನ ಖಾಸಗಿ ಬ್ಯಾಂಕ್​ಗೆ ಆರೋಪಿ ವಿರುಪಾಕ್ಷ ದೂರು ನೀಡಿದ್ದ.

ಈ ವೇಳೆ ಪರಿಶೀಲಿಸಿದಾಗ ಡೆಪಾಸಿಟ್ ಮಷಿನ್​ನಲ್ಲಿ ಖೋಟಾ ನೋಟುಗಳು ಸಿಲುಕಿರುವುದು ಪತ್ತೆ ಆಗಿದೆ. ಕೂಡಲೇ ಬ್ಯಾಂಕ್​ ಸಿಬ್ಬಂದಿಯಿಂದ ಮಾನ್ವಿ ಠಾಣೆ ಪೊಲೀಸರಿಗೆ ವಿರೂಪಾಕ್ಷ ವಿರುದ್ಧ ದೂರು ನೀಡಲಾಗಿದೆ. ಇದೇ ಮಾದರಿಯಲ್ಲಿ ಮಾನ್ವಿ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ಸದ್ಯ ಮಾನ್ವಿ ಪೊಲೀಸರಿಂದ ತನಿಖೆ ಮುಂದುವರೆದಿದೆ.