ಸಿಗಂದೂರು ಸೇತುವೆ ಲೋಕಾರ್ಪಣೆ ವಿಚಾರ;* *ಸಿ.ಎಂ ಸಿದ್ದರಾಮಯ್ಯ ಪತ್ರದಲ್ಲೇನಿದೆ?*

*ಸಿಗಂದೂರು ಸೇತುವೆ ಲೋಕಾರ್ಪಣೆ ವಿಚಾರ;*

*ಸಿ.ಎಂ ಸಿದ್ದರಾಮಯ್ಯ ಪತ್ರದಲ್ಲೇನಿದೆ?*

ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅಂಬಾರಗೋಡ್ಲು-ಕಳಸವಳ್ಳಿ (ಸಿಗಂದೂರು) ಸೇತುವೆ (Sigandur Bridge) ಲೋಕಾರ್ಪಣೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ನಡುವೆ, ಸೋಮವಾರ (ಜು.14) ನಡೆಯಲಿರುವ ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮವನ್ನು ಮುಂದೂಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ.

ಸರ್ಕಾರದ ಗಮನಕ್ಕೆ ತರದೇ ಕಾರ್ಯಕ್ರಮ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ನನಗೆ ಮೊದಲೇ ಮಾಹಿತಿ ನೀಡಿಲ್ಲ. ಇದೇ ದಿನ ಕರ್ನಾಟಕ ಸರ್ಕಾರದವತಿಯಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನನ್ನ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹೀಗಾಗಿ ನಾಳೆಯ ಕಾರ್ಯಕ್ರಮ ಮುಂದೂಡಿ, ಮತ್ತೊಂದು ದಿನ ಕಾರ್ಯಕ್ರಮ ಮಾಡುವಂತೆ” ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ.

ಸಿಎಂ ಬರೆದ ಪತ್ರದಲ್ಲಿ ಏನಿದೆ?
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಜುಲೈ 14, 2025 ರಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನೆಹರು ಮೈದಾನದಲ್ಲಿ “ರಾಷ್ಟ್ರ ಸಮರ್ಪಣೆ ಮತ್ತು ಶಿಲಾನ್ಯಾಸ ಸಮಾರಂಭ” ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಮತ್ತು ನನ್ನ ಹೆಸರನ್ನು ಕರಡು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. ಆದಾಗ್ಯೂ, ಈ ಕಾರ್ಯಕ್ರಮದ ಬಗ್ಗೆ ನನಗೆ ಮುಂಚಿತವಾಗಿ ತಿಳಿಸಲಾಗಿಲ್ಲ. ಮತ್ತು ಅದೇ ದಿನ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ನನ್ನ ಅಧ್ಯಕ್ಷತೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಈಗಾಗಲೇ ನಿಗದಿಪಡಿಸಲಾಗಿದೆ.

ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ನಿಗದಿಪಡಿಸುವ ಮೊದಲು MoRTH ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿದ್ದರೆ ಹೆಚ್ಚು ಸೂಕ್ತವಾಗುತ್ತಿತ್ತು. ಆದ್ದರಿಂದ, ಅಂತಹ ಕಾರ್ಯಕ್ರಮಗಳನ್ನು ಆಯೋಜಿಸುವಾಗ ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲು ಇಲಾಖೆಗೆ ಸೂಚಿಸಬೇಕೆಂದು ನಾನು ವಿನಂತಿಸುತ್ತೇನೆ. ಅಲ್ಲದೆ, ಈ ಕಾರ್ಯಕ್ರಮವನ್ನು ಮುಂದೂಡಲು ಮತ್ತು ನಿಮಗೆ ಅನುಕೂಲಕರವಾದ ಒಂದೆರಡು ದಿನಾಂಕಗಳನ್ನು ನನಗೆ ಒದಗಿಸುವಂತೆ ನಾನು ವಿನಂತಿಸುತ್ತೇನೆ, ಇದರಿಂದ ನಾನು ಈ ಮಹತ್ವದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ನಿಮ್ಮೊಂದಿಗೆ ಭಾಗಿಯಾಗಲು ಸಾಧ್ಯವಾಗುತ್ತದೆ.

*ಸರ್ಕಾರದ ಪರವಾಗಿ ಸತೀಶ್​ ಜಾರಕಿಹೊಳಿ ಭಾಗಿ*

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಇಂಡಿ ತಾಲೂಕಿನಲ್ಲಿ ನಡೆಯುವ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಪರವಾಗಿ ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ಭಾಗಿಯಾಗಲಿದ್ದಾರೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಸತೀಶ್​ ಜಾರಕಿಹೊಳಿ, ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ತಡವಾಗಿ ಆಹ್ವಾನ ನೀಡಿದ್ದಾರೆ. ಇಂಡಿಯಲ್ಲೂ ಕಾರ್ಯಕ್ರಮ ಇದೆ, ಅದನ್ನು ತಿರಸ್ಕರಿಸುವುದಕ್ಕೆ ಆಗಲ್ಲ. ಡೇಟ್ ಕ್ಲ್ಯಾಶ್ ಆಗಿದೆ, ಅದನ್ನು ತಪ್ಪಿಸಲು ಆಗಲ್ಲ. ಸರ್ಕಾರದ ಪರ ಸಿಗಂದೂರು ಸೇತುವೆ ಉದ್ಘಾಟನೆಗೆ ನಾನು ಹೋಗುತ್ತೇನೆ ಎಂದು ಹೇಳಿದರು.

ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಿದ್ದು ಹಿಂದಿನ ಸರ್ಕಾರದಲ್ಲಿ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲ ಸರ್ಕಾರದಲ್ಲೂ ಸೇತುವೆ ಆಗಿದೆ. ಆಸ್ಕರ್ ಫರ್ನಾಂಡಿಸ್ ಸಚಿವರಾಗಿದ್ದಾಗ ಸಿಗಂದೂರು ಸೇತುವೆ ರೂಪುಗೊಂಡಿದ್ದು. ಸೇತುವೆ ನಿರ್ಮಾಣದಿಂದ ಕರ್ನಾಟಕಕ್ಕೆ ಒಳ್ಳೆಯದಾಗಿದೆ ಎಂದರು.