ಗೌರಿ ಗಣೇಶ ಹಬ್ಬ- ಈದ್ ಮಿಲಾದ್ ಹಿನ್ನೆಲೆ ವಿಶೇಷ ಸಭೆ;* *ಫ್ಲೆಕ್ಸ್- ಬ್ಯಾನರ್ಸ್, ಪ್ರಿಂಟರ್ಸ್ ಗಳಿಗೆ ಕಟು ಸೂಚನೆ ನೀಡಿ ಸಹಕರಿಸಲು ವಿನಂತಿಸಿದ ಎಸ್.ಪಿ.ಮಿಥುನ್ ಕುಮಾರ್*

*ಗೌರಿ ಗಣೇಶ ಹಬ್ಬ- ಈದ್ ಮಿಲಾದ್ ಹಿನ್ನೆಲೆ ವಿಶೇಷ ಸಭೆ;*

*ಫ್ಲೆಕ್ಸ್- ಬ್ಯಾನರ್ಸ್, ಪ್ರಿಂಟರ್ಸ್ ಗಳಿಗೆ ಕಟು ಸೂಚನೆ ನೀಡಿ ಸಹಕರಿಸಲು ವಿನಂತಿಸಿದ ಎಸ್.ಪಿ.ಮಿಥುನ್ ಕುಮಾರ್*

ಮುಂಬರುವ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಆಚರಣೆಯ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಎಸ್ ಪಿ ಮಿಥುನ್ ಕುಮಾರ್ ಜಿ. ಕೆ. ರವರ ನೇತೃತ್ವದಲ್ಲಿ, ಇಂದು ಬೆಳಗ್ಗೆ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ, ಜಿಲ್ಲೆಯ ಫ್ಲೆಕ್ಸ್, ಬ್ಯಾನರ್ಸ್ ಹಾಗೂ ಪ್ರಿಂಟರ್ಸ್ ಅಂಗಡಿ ಮಾಲೀಕರುಗಳ ಸಭೆಯನ್ನು ಕರೆಯಲಾಗಿತ್ತು.

ಸಭೆಯಲ್ಲಿ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಮಾತನಾಡಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 10 ರಿಂದ 15 ವರ್ಷಗಳಿಂದ ಕಾನೂನು ಸುವ್ಯವಸ್ಥೆಗೆ ಸಂಬಂಧ ಪಟ್ಟಂತಹ ಪ್ರಕರಣಗಳನ್ನು ಗಮನಿಸುತ್ತಾ ಬಂದಾಗ, ಬೆಳಕಿಗೆ ಬಂದ ಅಂಶಗಳೇನೆಂದರೆ, ಹೆಚ್ಚಿನ ಪ್ರಮಾಣದ ಪ್ರಕರಣಗಳು ಫ್ಲೆಕ್ಸ್, ಬ್ಯಾನರ್ಸ್ ಗಳಿಗೆ ಸಂಬಂಧಪಟ್ಟಂತಹ ಪ್ರಕರಣಗಳೇ ಆಗಿರುತ್ತವೆ.

ಅನಧಿಕೃತವಾಗಿ ಫ್ಲೆಕ್ಸ್ ಮತ್ತು ಬ್ಯಾನರ್ ಗಳ ಅಳವಡಿಕೆ ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ತರುವಂತಹ ಪ್ರಚೋದನಾಕಾರಿ ಬರಹಗಳು, ಸಂಬಂಧವಿಲ್ಲದಂತಹ ಸ್ಥಳಗಳಲ್ಲಿ ಬ್ಯಾನರ್ ಗಳ ಅಳವಡಿಕೆ ಮತ್ತು ಕಿಡಿಗೇಡಿತನದಿಂದ ಫ್ಲೆಕ್ಸ್ ಬ್ಯಾನರ್ ಗಳನ್ನು ಹರಿಯುವುದು ಹಾಗೂ ಕಾನೂನು ಉಲ್ಲಂಘನೆ ಮಾಡಿರುವ ಘಟನೆಗಳು ಸೇರಿ ಈ ರೀತಿಯ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಕರಣಗಳು ವರದಿಯಾಗಿರುತ್ತವೆ.

ಕಳೆದ ಮೂರು ವರ್ಷಗಳಲ್ಲಿಯೇ ಈ ಕುರಿತು ಜಿಲ್ಲೆಯಾದ್ಯಂತ ಸುಮಾರು 10 ಪ್ರಕರಣಗಳನ್ನು ದಾಖಲಿಸಿರುತ್ತೇವೆ. ಈ ರೀತಿ ಪ್ರಕರಣಗಳನ್ನು ಗಮನಿಸಿದಾಗ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ಸಾರ್ವಜನಿಕರಿಗೆ ಪ್ರಿಂಟ್ ಮಾಡಿಕೊಡುವವರ ಜವಾಬ್ದಾರಿಯೂ ಸಹಾ ಹೆಚ್ಚಿರುತ್ತವೆ.

ಸಮಾಜದಲ್ಲಿ ಶಾಂತಿ ಕಾಪಾಡುವುದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದನ್ನು ಗಮನದಲ್ಲಿಟ್ಟುಕೊಂಡು ಪರಾಮರ್ಶಿಸಿ ನೋಡಿದಾಗ ಪೊಲೀಸ್ ಇಲಾಖೆಯ ಜೊತೆ ಜೊತೆಗೆ ಪ್ರತಿಯೊಬ್ಬ ಸಾರ್ವಜನಿಕರ ಪಾತ್ರವೂ ಸಹಾ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ ಹಾಗೂ ಇದು ಸಾರ್ವಜನಿಕರ ಜವಾಬ್ದಾರಿಯೂ ಸಹಾ ಆಗಿರುತ್ತದೆ.

ಫ್ಲೆಕ್ಸ್ ಹಾಗೂ ಬ್ಯಾನರ್ ಗಳ ವಿಚಾರವಾಗಿ ಆಗುವ ಲೋಪ ದೋಷಗಳನ್ನು ಗಮನಿಸುತ್ತಾ ಬಂದಾಗ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯದೇ ಇರುವುದು, ಪ್ರಿಂಟ್ ಮಾಡಿಕೊಟ್ಟ ಫ್ಲೆಕ್ಸ್ ಹಾಗೂ ಬ್ಯಾನರ್ ನ ಮೇಲೆ ಎಲ್ಲಿ ಪ್ರಿಂಟರ್ ನ ಹೆಸರು, ಎಷ್ಟು ಪ್ರತಿಗಳನ್ನು ಪ್ರಿಂಟ್ ಮಾಡಲಾಯಿತು ಎಂಬ ಮಾಹಿತಿ ಇಲ್ಲದೇ ಇರುವುದು, ಫ್ಲೆಕ್ಸ್ ಗಳ ಮೇಲೆ ಪ್ರಿಂಟ್ ಮಾಡಲಾಗುವ ವಿಚಾರ / ಬರಹ / ಸಂದೇಶ / ಚಿತ್ರಗಳ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿರುವುದಿಲ್ಲ. ಆದ್ದರಿಂದ ಇನ್ನು ಮುಂದೆ ಯಾವುದೇ ಫ್ಲೆಕ್ಸ್ ಗಳನ್ನು ಪ್ರಿಂಟ್ ಮಾಡುವಾಗ ಯಾವ ಫ್ಲೆಕ್ಸ್ ಪ್ರಿಂಟ್ ಮಾಡಲಾಗುತ್ತದೆ ಎಂದು ಮೊದಲೇ ಪೊಲೀಸ್ ಇಲಾಖೆಯ ಗಮನಕ್ಕೆ ಕಡ್ಡಾಯವಾಗಿ ತರಬೇಕಿರುವುದು ಮುಖ್ಯವಾಗಿರುತ್ತದೆ.

ಪೊಲೀಸ್ ಉಪ ವಿಭಾಗ ವಾರು ಈಗಾಗಲೇ ವಾಟ್ಸ್ ಅಪ್ ಗ್ರೂಪ್ ಗಳನ್ನೂ ಸಹಾ ಸೃಜಿಸಲಾಗಿದ್ದು, ಪ್ರಿಂಟ್ ಮಾಡುವ ಪೂರ್ವದಲ್ಲಿ ಯಾವ ವ್ಯಕ್ತಿಯು ಯಾವ ವಿಚಾರವನ್ನು / ಫ್ಲೆಕ್ಸ್ ಅನ್ನು ಪ್ರಿಂಟ್ ಮಾಡಿಸುತ್ತಿದ್ದಾನೆಂದು ಅದರಲ್ಲಿ ಶೇರ್ ಮಾಡಿ, ಪೊಲೀಸ್ ಇಲಾಖೆಯ ಅನುಮತಿ ಪಡೆದು ನಂತರ ಪ್ರಿಂಟ್ ಮಾಡಬೇಕು.

ಫ್ಲೆಕ್ಸ್ ಬ್ಯಾನರ್ಸ್ ಗಳ ಪ್ರಿಂಟರ್ ರವರ ಮೇಲೆ ಯಾವುದೇ ರೀತಿಯ ಹಿಡಿತ ಸಾಧಿಸುವ ಉದ್ದೇಶದಿಂದ ಈ ಕ್ರಮವನ್ನು ಜಾರಿಗೆ ತಂದಿರುವುದಿಲ್ಲ ಬದಲಾಗಿ ಸಮಾಜದಲ್ಲಿ ಶಾಂತಿ ಕಾಪಾಡಲು ಕಾನೂನು ಹಾಗೂ ಸುವ್ಯವಸ್ಥೆಗೆ ಯಾವುದೇ ರೀತಿಯ ದಕ್ಕೆ ತರದಂತೆ ನೋಡಿಕೊಳ್ಳಲು ಈ ಕ್ರಮವನ್ನು ಅನುಸರಿಸಿ ಸಹಕರಿಸಬೇಕು. ಆದ್ದರಿಂದ ಕಡ್ಡಾಯವಾಗಿ ಯಾವ ವಿಚಾರವನ್ನು ಪ್ರಿಂಟ್ ಮಾಡುತ್ತೀರಿ ಎಂದು ಮೊದಲೇ ವಾಟ್ಸ್ ಅಪ್ ಗ್ರೂಪ್ ನಲ್ಲಿ ಸಾಫ್ಟ್ ಕಾಪಿ (ಇಮೇಜ್ / ಪಿಡಿಎಫ್ / ಫೋಟೋ) ಶೇರ್ ಮಾಡಿ ಆನಂತರ ಪ್ರಿಂಟ್ ಮಾಡಿ.

ಒಂದು ವೇಳೆ ಪೊಲೀಸ್ ಇಲಾಖೆಯ ಗಮನಕ್ಕೆ ತರದೇಯೇ ಮುಚ್ಚಿಟ್ಟು ಪ್ರಿಂಟ್ ಮಾಡಿಕೊಟ್ಟು ಕಾನೂನು ಉಲ್ಲಂಘನೆ ಮಾಡಿದರೆ, ಅಂತಹ ಸಂದರ್ಭದಲ್ಲಿ ಈ ರೀತಿ ಮಾಡಿದವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ.

ಯಾವುದೇ ಸಮಸ್ಯೆಗಳು ಉಂಟಾದರೆ / ಅವಶ್ಯಕತೆ ಬಂದಾಗ* ನಿಮ್ಮನ್ನು ಸುಲಭವಾಗಿ ಹಾಗೂ ಶೀಘ್ರವಾಗಿ ತಲುಪುವ ಉದ್ದೇಶದಿಂದ ನೀವುಗಳು ಪ್ರಿಂಟ್ ಮಾಡಲಾಗುವ ಪ್ರತಿ ಫ್ಲೆಕ್ಸ್ ಬ್ಯಾನರ್ ನ ಮೇಲೆ, ಪ್ರಿಂಟರ್ ನ ಹೆಸರು, ಫೋನ್ ನಂ, ವಿಳಾಸ, ಪ್ರಿಂಟ್ ಮಾಡಲಾದ ಪ್ರತಿಗಳ ಸಂಖ್ಯೆಯನ್ನು ಸಹಾ ಕಡ್ಡಾಯವಾಗಿ ಪ್ರಿಂಟ್ ಮಾಡಿ.

ಸಮಾಜದಲ್ಲಿ ಕಿಡಿಗೇಡಿತನ ಮಾಡುವವರು ಎಲ್ಲಾ ಕಡೆ ಇರುತ್ತಾರೆ, ಯಾವುದೋ ವಿವಾದಾತ್ಮಕ / ಕಾನೂನು ಬಾಹೀರವಾದ ವಿಚಾರಗಳನ್ನು ಪ್ರಿಂಟ್ ಮಾಡಿಸಲು ಬರುವವರೂ ಸಹಾ ಇರುತ್ತಾರೆ. ಆದ್ದರಿಂದ
ನಿಮ್ಮ ಸುರಕ್ಷತೆಯ ದೃಷ್ಟಿಯಿಂದ* ನಿಮಗೆ ಪ್ರಿಂಟ್ ಮಾಡಿಕೊಡಲು ಆರ್ಡರ್ ನೀಡುವವರ / ಗ್ರಾಹಕರ ವಿವರಗಳನ್ನು ಅಂದರೆ, ಹೆಸರು, ವಿಳಾಸ, ಫೋನ್ ನಂಬರ್ ಅನ್ನು ಒಂದು ಪ್ರತ್ಯೇಖವಾದ ರಿಜಿಸ್ಟರ್ ನಲ್ಲಿ ಬರೆದುಕೊಳ್ಳಬೇಕು ಹಾಗೂ ಅವರುಗಳ ಯಾವುದೇ ಒಂದು ಐಡಿ ಪ್ರೂಫ್ ನ ನಕಲು ಪ್ರತಿಯನ್ನು ಸಹಾ ಪಡೆದುಕೊಳ್ಳಬೇಕು ಹಾಗೂ ಈ ಮಾಹಿತಿಯನ್ನು ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಬೇಕು. ಇದರಿಂದ ನಿಮ್ಮನ್ನು ನೀವು ಸುರಕ್ಷಿತಗೊಳಿಸಲು ಸಾಧ್ಯವಿರುತ್ತದೆ.

ಪೊಲೀಸ್ ಇಲಾಖೆಯು ನೀಡಿದ ಎಲ್ಲಾ ಸೂಚನೆಗಳು ಕಡ್ಡಾಯವಾಗಿ ಪಾಲನೆ ಯಾಗುತ್ತಿವೆಯೇ ಎಂಬ ಬಗ್ಗೆ ಖಾತರಿ ಪಡಿಸಿಕೊಳ್ಳಲು ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳು ನಿಮ್ಮ ಪ್ರಿಂಟರ್ಸ್ ಗೆ ಬಂದು / ಸ್ಥಳಕ್ಕೆ ಬಂದು ಪರಿಶೀಲಿಸಲಿದ್ದಾರೆ.

ನೀವು ವಾಟ್ಸ್ ಅಪ್ ಗ್ರೂಪ್ ನಲ್ಲಿ ಹಾಕಿರುವ ಸಾಫ್ಟ್ ಕಾಪಿಯಲ್ಲಿರುವ ವಿಚಾರಕ್ಕೂ ಮತ್ತು ನೀವು ಪ್ರಿಂಟ್ ಮಾಡಿ ನೀಡುತ್ತಿರುವ ಹಾರ್ಡ್ ಕಾಪಿ ಗಳಿಗೂ ತಾಳೆ ಮಾಡಿ ನೋಡಿದಾಗ, ಪೊಲೀಸ್ ಇಲಾಖೆಗೆ ನೀಡಲಾದ ವಿವರಕ್ಕೂ ನೀವು ಮಾಡಿಕೊಡುತ್ತಿರುವ ಪ್ರಿಂಟ್ ಕಾಪಿಗಳಿಗೂ ಯಾವುದೇ ವ್ಯತ್ಯಾಸಗಳು ಕಂಡು ಬಂದಲ್ಲಿ, ಕಾನೂನು ರೀತ್ಯಾ ನಿರ್ದಾಕ್ಷಿಣ್ಯ ಕ್ರಮ* ಕೈಗೊಳ್ಳಲಾಗುವುದು.

ನಿಮ್ಮ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಇಲಾಖೆಯು ವಿವಿಧ ಸೂಚನೆಗಳನ್ನು ನೀಡಲಿದ್ದು, ಈ ರೀತಿ ನೀಡಲಾದ ಎಲ್ಲಾ ಸೂಚನೆಗಳನ್ನು ಪಾಲನೆ ಮಾಡಲು ನೀವು ಸಹಾ ಒಬ್ಬ ಜವಾಬ್ದಾರಿಯುತ ವ್ಯಕ್ತಿಗೆ ಜವಾಬ್ದಾರಿ ನೀಡಿ, ವೈಯಕ್ತಿಕ ಗಮನ ಹರಿಸುವುದು ಸೂಕ್ತವಿರುತ್ತದೆ.

ಕೆಲವು ಬಾರಿ ನಿಮ್ಮಿಂದ ಡಿಸೈನ್ ಮಾಡಿಸಿಕೊಂಡು ಬೇರೆಲ್ಲೋ ಹೋಗಿ ಪ್ರಿಂಟ್ ಮಾಡಿಸಿಕೊಂಡು ಬಂದು ಅಳವಡಿಸುವವರು ಸಹಾ ಇರುತ್ತಾರೆ ಆದ್ದರಿಂದ ಈ ರೀತಿ ಯಾವುದೇ ವಿಚಾರ ಕಂಡು ಬಂದರೆ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿರಿ.

ನಾವೆಲ್ಲರೂ ಸೇರಿ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಣೆ ಮಾಡೋಣ ಹಾಗೂ ಹಬ್ಬಗಳ ಹಿನ್ನೆಲೆಯಲ್ಲಿ ನಿಮ್ಮೆಲ್ಲರಿಗೂ ಸಹಾ ಲಾಭದಾಯಕವಾಗಲಿ ಎಂದು ಆಶೀಸೋಣ.

ಈ ಸಂದರ್ಭದಲ್ಲಿ *ಡಾ|| ಬೆನಕ ಪ್ರಸಾದ್ ಎನ್ ಜೆ, ಐಪಿಎಸ್,* (ಎ.ಎಸ್.ಪಿ ಸಾಗರ ಉಪ ವಿಭಾಗ), *ಬಾಬು ಆಂಜನಪ್ಪ,* (ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಎ ಉಪ ವಿಭಾಗ,) *ಅರವಿಂದ ಕಲಗುಚ್ಚಿ,* (ಪೊಲೀಸ್ ಉಪಾಧೀಕ್ಷಕರು, ತೀರ್ಥಹಳ್ಳಿ, ಉಪ ವಿಭಾಗ) *ಕೇಶವ್ ಕೆ. ಇ* (ಪೊಲೀಸ್ ಉಪಾಧೀಕ್ಷಕರು, ಶಿಕಾರಿಪುರ ಉಪ ವಿಭಾಗ), *ನಾಗರಾಜ್* (ಪೊಲೀಸ್ ಉಪಾಧೀಕ್ಷಕರು, ಭದ್ರಾವತಿ ಉಪ ವಿಭಾಗ) ಹಾಗೂ ಶಿವಮೊಗ್ಗ ನಗರದ ಪೊಲೀಸ್ ಅಧಿಕಾರಿಗಳು ಹಾಗೂ ಶಿವಮೊಗ್ಗ ಜಿಲ್ಲೆಯ ಫ್ಲೆಕ್ಸ್, ಬ್ಯಾನರ್ಸ್ ಹಾಗೂ ಪ್ರಿಂಟರ್ಸ್ ಅಂಗಡಿಗಳ ಮಾಲೀಕರುಗಳು ಉಪಸ್ಥಿತರಿದ್ದರು.