*ರಾಷ್ಟ್ರಭಕ್ತರ ಬಳಗದ ಕೆ.ಇ.ಕಾಂತೇಶ್ ಪತ್ರಿಕಾಗೋಷ್ಠಿ* *ನ್ಯಾಯಾಲಯ ಛೀಮಾರಿ ಹಾಕುವ ಮುನ್ನ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ ನಡೆಸಿ*
*ರಾಷ್ಟ್ರಭಕ್ತರ ಬಳಗದ ಕೆ.ಇ.ಕಾಂತೇಶ್ ಪತ್ರಿಕಾಗೋಷ್ಠಿ*
*ನ್ಯಾಯಾಲಯ ಛೀಮಾರಿ ಹಾಕುವ ಮುನ್ನ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ ನಡೆಸಿ*
ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಸರ್ಕಾರಕ್ಕೆ ಇಷ್ಟವಿಲ್ಲ. ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಹಲವು ಹೋರಾಟಗಳನ್ನು ಮಾಡಿದ್ದು, ಇದೀಗ ಹೈಕೋರ್ಟ್ ನಿಂದ ರಾಷ್ಟ್ರಭಕ್ತರ ಬಳಗಕ್ಕೆ ಮೊದಲ ಜಯ ಸಿಕ್ಕಿದೆ. ಆದಷ್ಟು ಬೇಗ ಪಾಲಿಕೆ ಚುನಾವಣೆ ನಡೆಸಿ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರೂ ರಾಷ್ಟ್ರಭಕ್ತರ ಬಳಗದ ಪ್ರಮುಖರೂ ಆದ ಕೆ.ಇ.ಕಾಂತೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ ನಡೆಸಲು ನ್ಯಾಯಾಲಯ ಹಲವು ಬಾರಿ ಸೂಚಿಸಿದರೂ ಸಿಎಂ, ಡಿಸಿಎಂ ಮನಸು ಮಾಡದೇ ಕಾಲಹರಣ ಮಾಡುತ್ತಿದ್ದಾರೆ ಎಂದರು.
ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಕರೆಂದು ಹೇಳಿಕೊಂಡು ರಾಜಕೀಯ ಮಾಡುತ್ತಿರುವ ಕಾಂಗ್ರೇಸ್ ಪಕ್ಷ ಕರ್ನಾಟಕದಲ್ಲಿ ಅವಧಿ ಪೂರ್ಣಗೊಂಡು ಮೂರು ವರ್ಷಗಳಾದರೂ ಮಹಾನಗರ ಪಾಲಿಕೆಗಳು ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ನಡೆಸದೆ ಪ್ರಜಾಪ್ರಭುತ್ವದ ಆಶಯವನ್ನೇ ಹಾಳುಗೆಡುವಿದೆ. ಪ್ರಜಾಪ್ರಭುತ್ವದ ಮೇಲೆ ಕಾಂಗ್ರೇಸ್ ಪಕ್ಷಕ್ಕೆ ನಂಬಿಕೆಯೇ ಇಲ್ಲದೆ ನಗರಾಡಳಿತವನ್ನು ಅಧಿಕಾರಿಗಳ ಕೈಯ್ಯಲ್ಲಿ ಕೊಟ್ಟಿದೆ. ಜನ ಪ್ರತಿನಿಧಿಗಳಿಲ್ಲದ ಆಡಳಿತ ವ್ಯವಸ್ಥೆಯಿಂದಾಗಿ ಭ್ರಷ್ಟಾಚಾರ, ದುರಾಡಳಿತ ಮಿತಿ ಮೀರಿದೆ. ಆದ್ದರಿಂದ ಶ್ರೀಸಾಮಾನ್ಯರಿಗೆ ಇದರಿಂದಾಗುವ ತೊಂದರೆಗಳನ್ನು ಮನಗಂಡು ಅನಿವಾರ್ಯವಾಗಿ ರಾಷ್ಟ್ರಭಕ್ತರ ಬಳಗ ದಿಂದ ಮಾನ್ಯ ಉಚ್ಚನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ಸಲ್ಲಿಸುವ ಸಂದರ್ಭ ಬಂದಿತು ಎಂದರು.
‘ರಾಷ್ಟ್ರಭಕ್ತರ ಬಳಗ’ದ ಪರವಾಗಿ ನಾನು ಭಾರತ ಸಂವಿಧಾನದ 0 226 ಮತ್ತು 227ನೇ ವಿಧಿಗಳನ್ವಯ 21-01-2026 ರಂದು ಸಾರ್ವಜನಿಕ ಹಿತಾಸಕ್ತಿಯ ರಿಟ್ ಪಿಟಿಷನ್ ಸಲ್ಲಿಸಿ ಅವಧಿ ಮುಗಿದಿರುವ ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾವಣೆಯನ್ನು ತಕ್ಷಣ ನಡೆಸುವಂತೆ ಹಾಗೂ ಈ ಸಂಬಂಧವಾಗಿ ರಾಜ್ಯ ಚುನಾವಣಾ ಆಯುಕ್ತರು, ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ, ರಾಜ್ಯ ಶಾಸನ ಸಭೆಯ ಕಾರ್ಯದರ್ಶಿಗಳು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರುಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಲಾಗಿತ್ತು.
ನಮ್ಮ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಅಂಗೀಕರಿಸಿದ ಮಾನ್ಯ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆಯನ್ನು ನಡೆಸಿ ಮೇಲ್ಕಂಡ ಎಲ್ಲಾ ಎದುರುದಾರರಿಗೆ ನೋಟಿಸ್ ಜಾರಿಗೊಳಿಸಿ ತಕ್ಷಣ ಸದರಿ ವಿಷಯಕ್ಕೆ ಸಂಬಂಧ ಪಟ್ಟಂತೆ ಪ್ರತಿಕ್ರಯಿಸಲು ಆದೇಶಿಸಿದೆ.
ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ನ್ಯಾಯಾಲಯ ಛೀಮಾರಿ ಹಾಕುವ ಮುನ್ನ ಶಿವಮೊಗ್ಗ ಮಹಾನಗರ ಪಾಲಿಕೆಗೆ ಚುನಾವಣೆಯನ್ನು ನಡೆಸಲು ತಕ್ಷಣ ಪ್ರಕ್ರಿಯೆಗಳನ್ನು ಪ್ರಾರಂಭಿಸಬೇಕು. ಜನ ಪ್ರತಿನಿಧಿಗಳಿಲ್ಲದೆ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಬೇಕು ಹಾಗೂ ನಗರದ ಸರ್ವತೋಮುಖ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು.


