ಡಿ ಎಸ್ ಎಸ್ ಗುರುಮೂರ್ತಿ ಪತ್ರಿಕಾಗೋಷ್ಠಿ;* *ಒಳ ಮೀಸಲಾತಿ ಜಾರಿ ಸ್ವಾಗತಾರ್ಹ* *ಅಲೆಮಾರಿಗಳ ನಿರ್ಲಕ್ಷ್ಯ ಸರಿಯಲ್ಲ*

*ಡಿ ಎಸ್ ಎಸ್ ಗುರುಮೂರ್ತಿ ಪತ್ರಿಕಾಗೋಷ್ಠಿ;*

*ಒಳ ಮೀಸಲಾತಿ ಜಾರಿ ಸ್ವಾಗತಾರ್ಹ*

*ಅಲೆಮಾರಿಗಳ ನಿರ್ಲಕ್ಷ್ಯ ಸರಿಯಲ್ಲ*

ಶಿವಮೊಗ್ಗ: ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ತೀರ್ಪಿನಂತೆ ಒಳಮೀಸಲಾತಿ ಜಾರಿಗೊಳಿಸುತ್ತಿರುವುದು ಸ್ವಾಗತಾರ್ಹ ಎಂದು ದಲಿತ ಸಂಘರ್ಷ ಸಮಿತಿ(ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಹೇಳಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ಐತಿಹಾಸಿಕವಾದುದು. ಇದನ್ನು ಜಾರಿಗೊಳಿಸಬೇಕಾದ ಹೊಣೆ ರಾಜ್ಯ ಸರ್ಕಾರಕ್ಕೆ ನೀಡಲಾಗಿತ್ತು. ರಾಜ್ಯ ಸರ್ಕಾರ ನಾಗಮೋಹನದಾಸ್ ಅವರ ವರದಿಯಂತೆ 5 ವಿಭಾಗಗಳಲ್ಲಿ ಮೀಸಲಾತಿಯನ್ನು ವಿಂಗಡಿಸಿದ್ದನ್ನು ಮೂರು ವರ್ಗಕ್ಕೆ ಸೀಮಿತಗೊಳಿಸಿ ಆದೇಶ ಹೊರಡಿಸಿದೆ. ಇದರ ಪ್ರಕಾರ ಮಾದಿಗ ಜಾತಿಗೆ ಶೇ. 6ರಷ್ಟು, ಹೊಲೆಯ ಜಾತಿಗೆ ಶೇ. 6ರಷ್ಟು. ಲಂಬಾಣಿ, ಭೋವಿ, ಕೊರಚ ಮತ್ತು ಅಲೆಮಾರಿಗಳಿಗೆ ಶೇಕಡ 5ರಷ್ಟು ಮೀಸಲಾತಿ ನೀಡಲಾಗಿತ್ತು. ಆದರೆ, ರಾಜ್ಯ ಸರ್ಕಾರ ಈಗ ಅಲೆಮಾರಿಗಳಿಗಾಗಿ ಶೇ.1ರಷ್ಟು ನೀಡಿದ್ದ ಮೀಸಲಾತಿಯನ್ನು ತೆಗೆದು ಅದನ್ನು ಸಿ ವರ್ಗಕ್ಕೆ ವಿಲೀನಗೊಳಿಸಿರುವುದು ಸರಿಯಲ್ಲ ಎಂದರು.

ಈಗಾಗಲೇ ಸಿ ವರ್ಗದಲ್ಲಿ ಬಲಾಢ್ಯ ಜಾತಿಗಳಿದ್ದು, ಆ ಜಾತಿಗಳೊಂದಿಗೆ ಸಣ್ಣ ಜಾತಿಗಳು ಮೀಸಲಾತಿ ಬಯಸುವುದು ಮತ್ತು ತೆಗೆದುಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಅಲೆಮಾರಿಗಳಲ್ಲಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಜಾತಿಗಳಾದ ಸುಮಾರು 59 ಜಾತಿಗಳಿಗೆ ಇದರಿಂದ ತೊಂದರೆಯಾಗುತ್ತಿದ್ದು, ಅವರಿಗೆ ಈ ಹಿಂದೆ ಇದ್ದಂತೆ ಶೇಕಡ 1ರಷ್ಟು ಮೀಸಲಾತಿಯನ್ನು ಪ್ರತ್ಯೇಕವಾಗಿಯೇ ನೀಡಬೇಕು. ಸರ್ಕಾರ ಮತ್ತೊಮ್ಮೆ ತನ್ನ ನಿರ್ಧಾರವನ್ನು ಪರಿಷ್ಕರಣೆ ಮಾಡಿ ಅಲೆಮಾರಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದರು.

ದಲಿತ ಸಂಘರ್ಷ ಸಮಿತಿಯ ಮತ್ತೊರ್ವ ಮುಖಂಡ ಭದ್ರಾವತಿ ಶಿವಬಸಪ್ಪ ಮಾತನಾಡಿ, ಮೀಸಲಾತಿಯು ಕೇವಲ ಶಿಕ್ಷಣ ಮತ್ತು ಉದ್ಯೋಗಕ್ಕೆ ಮಾತ್ರ ಸೀಮಿತವಾಗಿದೆ. ಇದು ರಾಜಕೀಯ ಮೀಸಲಾತಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜೋಗಿ ಚಂದ್ರಪ್ಪ, ಎಂ. ಏಳುಕೋಟಿ, ರಮೇಶ್ ಚಿಕ್ಕಮರಡಿ, ಬೊಮ್ಮನಕಟ್ಟೆ ಕೃಷ್ಣ, ಬಸವರಾಜ್, ಹರಿಗೆ ರವಿ, ಗಂಗಮಾಳಮ್ಮ, ರಾಜಶೇಖರ್, ವೆಂಕಟೇಶ್, ಶ್ರೀನಿವಾಸ್ ಇದ್ದರು.