*ಸೆ.24 ರಿಂದ ರಂಗ ದಸರಾ ಆರಂಭ* *30 ತಂಡಗಳಿಂದ 43 ರಂಗ ಪ್ರದರ್ಶನಗಳ ಆಯೋಜನೆ* *12 ಕಾಲೇಜುಗಳಲ್ಲಿ ರಂಗ ಚಟುವಟಿಕೆಗಳು- 50 ಶಿಕ್ಷಕರಿಗೆ ಪ್ರಸಾದನ ತರಬೇತಿ*
*ಸೆ.24 ರಿಂದ ರಂಗ ದಸರಾ ಆರಂಭ*
*30 ತಂಡಗಳಿಂದ 43 ರಂಗ ಪ್ರದರ್ಶನಗಳ ಆಯೋಜನೆ*
*12 ಕಾಲೇಜುಗಳಲ್ಲಿ ರಂಗ ಚಟುವಟಿಕೆಗಳು- 50 ಶಿಕ್ಷಕರಿಗೆ ಪ್ರಸಾದನ ತರಬೇತಿ*

ಶಿವಮೊಗ್ಗ ಮಹಾನಗರ ಪಾಲಿಕೆಯು ನಾಡಹಬ್ಬ ಶಿವಮೊಗ್ಗ ದಸರಾ ಪ್ರಯುಕ್ತ ರಂಗ ದಸರಾ ಕಾರ್ಯಕ್ರಮವನ್ನು ಅತ್ಯಂತ ವಿಭಿನ್ನವಾಗಿ ಆಚರಿಸುತ್ತಿದ್ದು, ಸೆ.24ರ ಬೆಳಿಗ್ಗೆ ಉದ್ಘಾಟನೆ ಜರುಗಲಿದೆ ಎಂದು ಕಲಾವಿದರಾದ ಕಾಂತೇಶ್ ಕದರಮಂಡಲಗಿ, ಹೊನ್ನಾಳಿ ಚಂದ್ರಶೇಖರ್ ಮತ್ತು ಮಧು ನಾಯಕ್ ಹೇಳಿದರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಕಲಾವಿದರು, ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘ ಹಾಗೂ ಶಿವಮೊಗ್ಗ ರಂಗಾಯಣ ಸಹಯೋಗ ನೀಡಿವೆ ಎಂದರು.
ಈ ಬಾರಿ ರಂಗ ದಸರಾ ಕಾರ್ಯಕ್ರಮದಲ್ಲಿ ಒಟ್ಟು 30 ತಂಡಗಳು ನಾಟಕಗಳು ಅಭಿನಯಿಸಲಿದ್ದು, ಒಟ್ಟು 43 ಪ್ರದರ್ಶನ ಆಯೋಜನೆಯಾಗಿದೆ. ರಂಗಗೀತೆ ಹಾಗೂ ರಂಗ ಉಪನ್ಯಾಸಗಳು ಸೇರಿ 52 ಕಾರ್ಯಕ್ರಮಗಳು ನಡೆಯುತ್ತಿವೆ. ಎಲ್ಲವೂ ಸೇರಿ ಸರಿಸುಮಾರು 300 ಕಲಾವಿದರು ನಾಟಕಗಳಲ್ಲಿ ನಾಟಕ ಅಭಿನಯಿಸುತ್ತಿರುವುದು ಈ ಬಾರಿಯ ವಿಶೇಷ. ಹಾಗೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಲಾವಿದರು, ತಂತ್ರಜ್ಞರು ಭಾಗಿಯಾಗುತ್ತಿರುವುದು ದಾಖಲೆಯೇ ಆಗಿದೆ.
ರಂಗ ಕಲಾವಿದರು ಮಾತ್ರವಲ್ಲದೇ ಮಾತ್ರವಲ್ಲದೇ ಕಾಲೇಜು ವಿದ್ಯಾರ್ಥಿಗಳು, ಕುಟುಂಬಗಳು, ಸಮುದಾಯಗಳನ್ನು ಒಳಗೊಂಡು ನಾಟಕ ಮಾಡುತ್ತಿರುವುದು ಈ ಬಾರಿಯ ವಿಶೇಷವಾಗಿದೆ.
ಪ್ರಮುಖವಾಗಿ ಈ ಬಾರಿ 12 ಕಾಲೇಜುಗಳಲ್ಲಿ ರಂಗ ಚಟುವಟಿಕೆಯನ್ನು ಮಾಡಲಾಗುತ್ತಿದೆ. ಮೂರು ಕಾಲೇಜುಗಳಲ್ಲಿ ಕಿರುನಾಟಕ, ನಾಲ್ಕು ಕಾಲೇಜುಗಳಲ್ಲಿ ಬೀದಿ ನಾಟಕ, ಐದು ಕಾಲೇಜುಗಳಲ್ಲಿ ರಂಗ ಉಪನ್ಯಾಸ ಚಟುವಟಿಕೆ ನಡೆಸಲಾಗಿದೆ. 600ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಈ ಮೂಲಕ ನೇರವಾಗಿ ತಲುಪಲಾಗಿದೆ.
ಕುಟುಂಬ ರಂಗ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಈ ಬಾರಿಯೂ ಮುಂದುವರಿಸಲಾಗಿದೆ. ಶಿವಮೊಗ್ಗದ 15 ಕುಟುಂಬಗಳು ತಮ್ಮ ಮನೆಯಲ್ಲಿ ಅಥವಾ ಸಮೀಪದ ಅನುಕೂಲಕರ ಸ್ಥಳದಲ್ಲಿ ನಾಟಕ ಪ್ರದರ್ಶನ ಮಾಡುವರು. ಇವುಗಳಲ್ಲಿ ಆಯ್ಕೆ ಮಾಡಿದ ನಾಲ್ಕು ನಾಟಕಗಳು ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನವಾಗುವವು.
ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕರಿಗಾಗಿ ಈಗಾಗಲೇ ಪ್ರಸಾದನ ಶಿಬಿರವನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳು 50 ಶಿಕ್ಷಕರಿಗೆ ಪ್ರಸಾದನ ತರಬೇತಿಯನ್ನು ನೀಡಿದ್ದಾರೆ.
ಈ ಬಾರಿಯ ಸೇರ್ಪಡೆ ಎಂದರೆ ಕರ್ತವ್ಯ ರಂಗ, ಸಮಾಜದ ಬೇರೆಬೇರೆ ಸಮುದಾಯಗಳಿಗೆ ನಾಟಕ ಕಲಿಸುವ ವಿಶಿಷ್ಟ ಕಾರ್ಯಕ್ರಮವಿದು. ಅದರಂತೆ ವಾಹನ ಮಾರುಕಟ್ಟೆ ಮತ್ತು ರಿಪೇರಿ ಕ್ಷೇತ್ರದ ಒಂದು ಸಮುದಾಯಕ್ಕೆ, ಶಿಕ್ಷಕರಿಗೆ ಹಾಗೂ ಅಲೆಮಾರಿ ಸಮುದಾಯಕ್ಕೆ ತಲಾ ಒಂದು ಕಿರು ನಾಟಕ ಕಲಿಸಲಾಗುತ್ತಿದೆ. ಜೊತೆಗೆ ನಾಲ್ಕು ಪ್ರಮುಖ ನಾಟಕಗಳನ್ನು ಶಿವಮೊಗ್ಗದ ತಂಡಗಳು ಕುವೆಂಪು ರಂಗಮಂದಿರದಲ್ಲಿ ಅಭಿನಯಿಸುತ್ತಿವೆ.
ರಂಗ ದಸರಾ ಕಾರ್ಯಕ್ರಮದ ಸಂಪೂರ್ಣ ವಿವರ ಇಂತಿದೆ.
ಇದೇ ಸೆಪ್ಟೆಂಬರ್ 24ರಂದು ಬೆಳಿಗ್ಗೆ 10.30ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ಖ್ಯಾತ ರಂಗ ನಿರ್ದೇಶಕ ಗಣೇಶ್ ಮಂದಾರ್ತಿ ಅವರು ರಂಗ ದಸರಾ ಉದ್ಘಾಟಿಸುವರು, ನಂತರ ಕಾಲೇಜು ವಿದ್ಯಾರ್ಥಿಗಳು ಅಭಿನಯಿಸುವ ಮೂರು ನಾಟಕಗಳು ಪ್ರದರ್ಶನವಾಗುವವು. ಗೋಪಾಳದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ತಂಡವು ಕೆ.ವೈ. ನಾರಾಯಣ ಸ್ವಾಮಿ ಅವರ ರಚನೆ, ಮಾನಸ ಸಂತೋಷ್ ಅವರ ನಿರ್ದೇಶನದಲ್ಲಿ ಬಾರಮ್ಮ ಭಾಗೀರಥಿ, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ತಂಡವು ಶ್ರೀನಿವಾಸ ವೈದ್ಯ ಅವರ ರಚನೆ, ವಿಜಯ್ ನೀನಾಸಂ ಅವರ ನಿರ್ದೇಶನದಲ್ಲಿ ದತ್ತೋಪಂತದ ಪತ್ತೆದಾರಿ, ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ
ಕಾಲೇಜಿನ ತಂಡವು ಭಾನು ಮುಸ್ತಾಕ್ ಅವರ ಕಥೆ, ಡಾ. ಅಣ್ಣಪ್ಪ ಮಳಿಮತ್ ಅವರ ರಂಗರೂಪ, ಮಹದೇವನ್ ಪಿ. ಅವರ ನಿರ್ದೇಶನದಲ್ಲಿ ಎದೆಯ ಹಣತೆ ನಾಟಕ ಪ್ರದರ್ಶನ ಮಾಡುವರು.
ಸೆಪ್ಟೆಂಬರ್ 25ರಂದು ಶಿವಮೊಗ್ಗದ ವಿವಿಧ ಸ್ಥಳಗಳಲ್ಲಿ ಡಿವಿಎಸ್ (ಸ್ವ) ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಮಟೆ ಜಗದೀಶ್ ರಚನೆ ಹಾಗೂ ಗಿರಿಧರ ಎಂ. ದಿಣ್ಣೆಮನೆ ಅವರ ನಿರ್ದೇಶನದಲ್ಲಿ ಬಾಲ್ಯಜೋಪಾನ ಬೀದಿ ನಾಟಕ ಪ್ರದರ್ಶನ ಮಾಡುವರು. ಸಂಜೆ 6 ಗಂಟೆಗೆ ಸುವರ್ಣ ಸಂಸ್ಕೃತಿ ಭವನದಲ್ಲಿ ಕರ್ತವ್ಯ ರಂಗ ಕಾರ್ಯಕ್ರಮ ನಡೆಯುವುದು, ಶಿವಮೊಗ್ಗದ ಶಿಕ್ಷಕರು ಡಾ. ಸಾಸ್ಟೆಹಳ್ಳಿ ಸತೀಶ್ ಅವರ ರಚನೆ, ಗಂಗಮ್ಮ ಅವರ ನಿರ್ದೇಶನದಲ್ಲಿ ಆನು ಒಲಿದಂತೆ ಹಾಡುವೆ ನಾಟಕ, ಅಲೆಮಾರಿ ಕ್ಯಾಂಪಿನ ನಿವಾಸಿಗಳು ಮಂಜುನಾಥ್ ಎ.ಸಿ. ಅವರ ನಿರ್ದೇಶನದಲ್ಲಿ ಭಾಸ ಮಹಾಕವಿಯ ಮಧ್ಯಮ ವ್ಯಾಯೋಗ ನಾಟಕ, ಆಸಂಘಟಿತ ಕಾರ್ಮಿಕ ವರ್ಗದವರು ಬಿ.ಆರ್ ರೇಣುಕಪ್ಪ ಅವರ ನಿರ್ದೇಶನದಲ್ಲಿ ವಿ.ಎನ್. ಅಶ್ವತ್ ಅವರ ಶ್ರೀಕೃಷ್ಣ ಸಂಧಾನ ನಾಟಕ ಪ್ರದರ್ಶನ ಮಾಡುವರು. ಸಂಜೆ 6.30ಕ್ಕೆ ಪೊಲೀಸ್ ಸಮುದಾಯ ಭವನದಲ್ಲಿ ಟಿ.ಜೆ. ನಾಗರತ್ನ ಮತ್ತು ತಂಡದವರು ರಂಗಗೀತೆ ಹಾಡಲಿದ್ದು, ಎಸ್ಪಿ ಮಿಥುನ್ ಕುಮಾರ್ ಉದ್ಘಾಟಿಸುವರು.
ಸೆಪ್ಟೆಂಬರ್ 26ರಂದು ಬೆಳಿಗ್ಗೆಯಿಂದ ಶಿವಮೊಗ್ಗದ ವಿವಿಧೆಡೆ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ತಂಡವು ಹಲವು ಲಾವಣೆ ಹಾಗೂ ಜಾನಪದ ಕಥೆಯಾದಾರಿತ ಬೀದಿ ನಾಟಕ ಹಲಗಲಿ ನಾಟಕವನ್ನು ಚಂದನ್ ಎನ್. ಅವರ ನಿರ್ದೇಶನದಲ್ಲಿ ಪ್ರದರ್ಶಿಸುವರು. ಸಂಜೆಯಿಂದ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ರಂಗ ಛಾಯಾಚಿತ್ರ ಪ್ರದರ್ಶನ, ರಂಗ ಪರಿಕರಗಳ ಪ್ರದರ್ಶನ ನಡೆಯುವುದು. ನಂತರ ಕಲಾಜ್ಯೋತಿ ತಂಡವು ಹರಿಗೆ ಗೋಪಾಲಸ್ವಾಮಿ ಅವರ ನಿರ್ದೇಶನದಲ್ಲಿ ಪ್ರೊ. ಬಿ.ಎಸ್. ಚಂದ್ರಶೇಖರ್ ಅವರ ಪರಹಿತ ಪಾಷಾಣ ನಾಟಕ ಪ್ರದರ್ಶನ ಮಾಡುವರು. ಸಂಜೆ 6.30ಕ್ಕೆ ಕೋಟಿ ಮಾರಿಕಾಂಬ ದೇವಾಲಯ ಆವರಣದಲ್ಲಿ ರಂಗಗೀತೆ ಕಾರ್ಯಕ್ರಮ ನಡೆಯುವುದು.
ಸೆಪ್ಟೆಂಬರ್ 27ರಂದು ಶಿವಮೊಗ್ಗದ ವಿವಿಧ ಸ್ಥಳದಲ್ಲಿ ಮೈತ್ರಿ ಕಾಲೇಜ್ ಆಫ್ ಎಜ್ಯುಕೇಷನ್ ತಂಡವು ಮಂಜು ರಂಗಾಯಣ ಅವರ ನಿರ್ದೇಶನದಲ್ಲಿ ಆರೋಗ್ಯ ನಮ್ಮ ಕೈಯಲ್ಲಿ ಎಂಬ ಬೀದಿ ನಾಟಕವನ್ನು ಶಿವಮೊಗ್ಗದ ವಿವಿಧೆಡೆ ಪ್ರದರ್ಶನ ಮಾಡುವರು. ಸಂಜೆ 6.30ಕ್ಕೆ ಶರಾವತಿ ನಗರದಲ್ಲಿ ರಂಗಗೀತೆ ಗಾಯನ ನಡೆಯುವುದು, ಸಂಜೆ 7ಕ್ಕೆ ಕುವೆಂಪು ರಂಗಮಂದಿರದಲ್ಲಿ ಜೋಗಿ ಅವರು ರಚಿಸಿರುವ ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ? ಆಸ್ಟ್ ಮಿಸ್ಟರ್ ವೈಎನ್ನೆ ನಾಟಕವನ್ನು ಆರ್.ಎಸ್. ಹಾಲಸ್ವಾಮಿ ಅವರ ನಿರ್ದೇಶನದಲ್ಲಿ ನೇಟಿವ್ ತಂಡದ ಕಲಾವಿದರು ಅಭಿನಯಿಸುವರು.
ಸೆಪ್ಟೆಂಬರ್ 28ರಂದು ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಅಸ್ಪರ್ ವಜಾಹತ್ ರಚನೆ, ಇಟಗಿ ಈರಣ್ಣ ಅನುವಾದ, ಕಾಂತೇಶ್ ಕದರಮಂಡಲಗಿ ಅವರ ನಿರ್ದೇಶನದಲ್ಲಿ ಸಹ್ಯಾದ್ರಿ ರಂಗತರಂಗ ತಂಡದ ಕಲಾವಿದರು ರಾವಿ ನದಿ ದಂಡೆಯಲ್ಲಿ ನಾಟಕ ಪ್ರದರ್ಶನ ಮಾಡುವರು.
ಸೆಪ್ಟೆಂಬರ್ 29ರಂದು ಕಟೀಲ್ ಅಶೋಕ್ ಪೈ ಮೆಮೋರಿಯಲ್ ಕಾಲೇಜಿನ ತಂಡವು ಉಮೇಶ್ ರಚನೆ, ಮಂಜುನಾಥ ಸ್ವಾಮಿ ಅನುವಾದ, ಶಂಕರ್ ಕೆ. ನಿರ್ದೇಶನದಲ್ಲಿ ಬಾಲ್ಯ ವಿವಾಹ ಬೀದಿ ನಾಟಕವನ್ನು ಶಿವಮೊಗ್ಗದ ವಿವಿದೆಡೆ ಪ್ರದರ್ಶನ ಮಾಡುವರು. ಸಂಜೆ 6 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ರಂಗಗೀತೆ ಗಾಯನ, ನಂತರ ಡಾ. ಚಂದ್ರಶೇಖರ ಕಂಬಾರ ಅವರ ಜೋಕುಮಾರಸ್ವಾಮಿ ನಾಟಕವನ್ನು ಸಹ್ಯಾದ್ರಿ ಕಲಾ ತಂಡದ ಕಲಾವಿದರು ಜಿ.ಆರ್ ಲವ ಅವರ ನಿರ್ದೇಶನದಲ್ಲಿ ಅಭಿನಯಿಸುವರು. ನಂತರ ರಂಗ ದಸರಾ ಸಮಾರೋಪ ನಡೆಯಲಿದ್ದು, ಶಿವಮೊಗ್ಗದ ಹಿರಿಯ ಕಲಾವಿದ ಪ್ರಕಾಶ್ ರಾವ್ ಅವರು ಸಮಾರೋಪ ಭಾಷಣ ಮಾಡುವರು.
ಸೆಪ್ಟೆಂಬರ್ 30ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಕುವೆಂಪು ರಂಗಮಂದಿರದಲ್ಲಿ ಕುಟುಂಬ ರಂಗ ಕಾರ್ಯಕ್ರಮದಲ್ಲಿ ಆಯ್ಕೆಯಾದ ನಾಲ್ಕು ತಂಡಗಳು ನಾಟಕ ಪ್ರದರ್ಶನ ಮಾಡುವರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆಯ ಮಧು ನಾಯಕ್, ಹಾಲಸ್ವಾಮಿ ಸೇರಿದಂತೆ ಹಲವರಿದ್ದರು.