*ಅ. 31ರವರೆಗೆ ಜಾತಿ ಗಣತಿ ಅವಧಿ ವಿಸ್ತರಣೆ;* *ಸಮೀಕ್ಷೆಯಿಂದ ಶಿಕ್ಷಕರ ಕೈಬಿಟ್ಟ ರಾಜ್ಯ ಸರ್ಕಾರ* *ಅ.21-23ರ ವರೆಗೆ ಸಮೀಕ್ಷೆಗೆ ಬ್ರೇಕ್*

*ಅ. 31ರವರೆಗೆ ಜಾತಿ ಗಣತಿ ಅವಧಿ ವಿಸ್ತರಣೆ;*

*ಸಮೀಕ್ಷೆಯಿಂದ ಶಿಕ್ಷಕರ ಕೈಬಿಟ್ಟ ರಾಜ್ಯ ಸರ್ಕಾರ*

*ಅ.21-23ರ ವರೆಗೆ ಸಮೀಕ್ಷೆಗೆ ಬ್ರೇಕ್*

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆಯನ್ನು ಅಕ್ಟೋಬರ್ 31ರವರೆಗೆ ವಿಸ್ತರಣೆ ಮಾಡಲಾಗಿದೆ. ಮೂರು ಜಿಲ್ಲೆಗಳಲ್ಲಿ ಗಣತಿ ಕುಂಠಿತವಾಗಿದ್ದು, ಈ ಹಿನ್ನಲೆ ಬೆಂಗಳೂರು ಸೇರಿ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗಿದೆ. ಸೆಪ್ಟೆಂಬರ್ 22ರಿಂದ ಆರಂಭವಾಗಿದ್ದ ಜಾತಿಗಣತಿಯನ್ನು ಅಕ್ಟೋಬರ್ 7ರ ಒಳಗೆ ಮುಕ್ತಾಯಗೊಳಿಸಲು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಆದರೆ, ಗಣತಿ ಕಾರ್ಯ ಬಾಕಿ ಉಳಿದ ಹಿನ್ನಲೆ ಅಕ್ಟೋಬರ್​ 18ರ ವರೆಗೆ ಜಾತಿ ಸಮೀಕ್ಷೆ ಕಾರ್ಯ ವಿಸ್ತರಣೆಗೊಂಡಿತ್ತು.

ಬೆಂಗಳೂರನ್ನು ಹೊರತುಪಡಿಸಿ ಇಲ್ಲಿಯವರೆಗೆ ಬಹುತೇಕ ಜಿಲ್ಲೆಗಳಲ್ಲಿ ಶೇ.95ರಷ್ಟು ಸಮೀಕ್ಷೆ ಕಾರ್ಯ ಮುಗಿದಿದೆ. ರಾಮನಗರ, ಬೀದರ್, ಧಾರವಾಡದಲ್ಲಿ ಇದರ ಪ್ರಮಾಣ ಶೇ. 90ಕ್ಕಿಂತ ಕಡಿಮೆ ಆಗಿದೆ. ಬೆಂಗಳೂರಲ್ಲಿ ಗಣತಿ ಕಾರ್ಯ ಅತ್ಯಂತ ನಿಧಾನವಾಗಿ ನಡೆಯುತ್ತಿದ್ದು ಈವರೆಗೆ ಕೇವಲ ಶೇ.45ರಷ್ಟು ಮನೆಗಳ ಸಮೀಕ್ಷೆ ಮಾತ್ರ ಮುಗಿದಿದೆ. ಈ ನಡುವೆ ದೀಪಾವಳಿ ಹಬ್ಬದ ರಜೆಯೂ ಬಂದಿರುವುದರಿಂದ ಸಮೀಕ್ಷೆ ವಿಸ್ತರಣೆಯ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಕ್ಟೋಬರ್​ 31ರ ಒಳಗೆ ಕಡ್ಡಾಯವಾಗಿ ಸಮೀಕ್ಷೆ ಮುಗಿಯಬೇಕು ಎಂಬ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸಿಎಂ ಸೂಚನೆ ಕೊಟ್ಟಿದ್ದಾರೆ.

ಸಮೀಕ್ಷೆ ಅವಧಿ ವಿಸ್ತರಣೆ ಬೆನ್ನಲ್ಲೇ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರನ್ನು ಗಣತಿ ಕೆಲಸದಿಂದ ಬಿಡುಗಡೆ ಮಾಡಲಾಗಿದೆ. ಶಿಕ್ಷಕರನ್ನು ಹೊರತುಪಡಿಸಿ ಉಳಿದ ಇಲಾಖೆ ಸಿಬ್ಬಂದಿ ಬಳಸಿಕೊಂಡು ಬಾಕಿ ಉಳಿದಿರುವ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ನಿಗದಿತ ಅವಧಿಯೊಳಗೆ ಜಾತಿ ಗಣತಿ ಕಾರ್ಯ ಮುಗಿಯದ ಕಾರಣ ಈ ಹಿಂದೆ ಸರ್ಕಾರ ಅವಧಿಯನ್ನ ವಿಸ್ತರಿಸಿತ್ತು. ಆದರೆ ಆಗ ಶಿಕ್ಷಕರನ್ನು ಸಮೀಕ್ಷೆ ಕಾರ್ಯದಿಂದ ಕೈ ಬಿಟ್ಟಿರಲಿಲ್ಲ. ಬದಲಾಗಿ ಶಾಲೆಗಳ ರಜಾ ಅವಧಿಯನ್ನೇ ವಿಸ್ತರಿಸಿತ್ತು. ಆದರೆ ಈಗ ಶಾಲೆಗಳು ಆರಂಭವಾಗಿರುವ ಹಿನ್ನಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಮೀಕ್ಷೆ ಇನ್ನೂ ಅವಕಾಶ ನೀಡಲಾಗುತ್ತಿದ್ದು, ಯಾರು ಭಾಗಹಿಸಲ್ಲವೋ ಅವರು ಭಾಗವಹಿಸಿ. ಎಲ್ಲಾ ಸಮಾಜದವರು ಇರುವ ಅವಕಾಶ ಕಳೆದುಕೊಳ್ಳೋಕೆ ಹೋಗಬೇಡಿ. ಅ.21-23ರ ವರೆಗೆ ದೀಪಾವಳಿ ಹಿನ್ನಲೆ ಸಮೀಕ್ಷೆ ಇರಲ್ಲ. ಬೆಂಗಳೂರು ಸೌತ್, ಬೀದರ್, ಧಾರವಾಡ ಬಿಟ್ಟು ಉಳಿದ ಕಡೆ ಗಣತಿ ಕಾರ್ಯ ಚೆನ್ನಾಗಿ ಆಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ತಿಳಿಸಿದ್ದಾರೆ.