*ಅಪಾಯದಲ್ಲಿ ಕರ್ನಾಟಕದ 12 ನದಿಗಳು* *ಕುಡಿಯಲು- ತೊಳೆಯಲು ಕೂಡ ಈ ನದಿಗಳ ನೀರು ಅಪಾಯಕಾರಿ* *ಕಲುಷಿತ ನದಿಗಳಲ್ಲಿ ತುಂಗಭದ್ರೆಯೂ ಕಾವೇರಿಯೂ…*

*ಅಪಾಯದಲ್ಲಿ ಕರ್ನಾಟಕದ 12 ನದಿಗಳು*

*ಕುಡಿಯಲು- ತೊಳೆಯಲು ಕೂಡ ಈ ನದಿಗಳ ನೀರು ಅಪಾಯಕಾರಿ*

*ಕಲುಷಿತ ನದಿಗಳಲ್ಲಿ ತುಂಗಭದ್ರೆಯೂ ಕಾವೇರಿಯೂ…*

ಕರ್ನಾಟಕದ 12 ಪ್ರಮುಖ ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಮಾಡಿದೆ.

ಕಾವೇರಿ, ಕೃಷ್ಣ, ಭೀಮಾ ನದಿಗಳು ಕಲುಷಿತಗೊಂಡು ಎ ದರ್ಜೆ ಗುಣಮಟ್ಟ ಕಳೆದುಕೊಂಡಿವೆ. ಕೈಗಾರಿಕಾ ರಾಸಾಯನಿಕಗಳು, ಆಮ್ಲಜನಕ ಕೊರತೆ ಹಾಗೂ ಬ್ಯಾಕ್ಟೀರಿಯಾಗಳು ನೀರಿನ ಗುಣಮಟ್ಟ ಕುಸಿತಕ್ಕೆ ಕಾರಣವಾಗಿದೆ. ಇದು ಮುಂದಿನ ಪೀಳಿಗೆಗೆ ಅಪಾಯದ ಮುನ್ಸೂಚನೆಯಾಗಿದೆ ಎಂದು ಹೇಳಲಾಗಿದೆ.

ಕರ್ನಾಟಕದ ಜೀವಜಲವಾಗಿರುವ (Karnataka river pollution) ನದಿಗಳ ಸ್ಥಿತಿಗತಿ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಆತಂಕಕಾರಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ, ರಾಜ್ಯದ 12 ಪ್ರಮುಖ ನದಿಗಳ ನೀರು ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ ಎಂದು ತಿಳಿದುಬಂದಿದೆ. ಸೆಪ್ಟೆಂಬರ್‌ನಲ್ಲಿ ನಡೆಸಿದ ಪರೀಕ್ಷೆಯಲ್ಲಿ, ಕಾವೇರಿ, ಕೃಷ್ಣ, ಭೀಮಾ, ತುಂಗಭದ್ರ ಸೇರಿದಂತೆ ಯಾವುದೇ ನದಿಯು ಎ ದರ್ಜೆಯ ಗುಣಮಟ್ಟವನ್ನು ಹೊಂದಿಲ್ಲ ಎಂದು ಹೇಳಲಾಗಿದೆ. ನದಿಯ ನೀರಿನ ಗುಣಮಟ್ಟವನ್ನು ಪ್ರತಿ ತಿಂಗಳು ಪರಿಶೀಲಿಸಲಾಗುತ್ತದೆ. ಈ ಇತ್ತೀಚಿನ ವರದಿಯು ನದಿಗಳ ಮಾಲಿನ್ಯದ ಭೀಕರತೆ ಇರುವ ಬಗ್ಗೆ ತಿಳಿಸಿದೆ. ಎ ದರ್ಜೆಯು ನೇರವಾಗಿ ಕುಡಿಯಲು ಯೋಗ್ಯವಾದ ನೀರನ್ನು ಸೂಚಿಸಿದರೆ, ಬಿ ದರ್ಜೆಯು ಸಂಸ್ಕರಿಸಿದ ನಂತರ ಗೃಹಬಳಕೆಗೆ ಯೋಗ್ಯವಾದ ನೀರನ್ನು, ಸಿ ದರ್ಜೆಯು ಮೀನುಗಾರಿಕೆ ಮತ್ತು ಇನ್ನಿತರ ಚಟುವಟಿಕೆಗಳಿಗೆ ಸೂಕ್ತವಾದ ನೀರನ್ನು ಸೂಚಿಸುತ್ತದೆ. ಡಿ ಮತ್ತು ಝಡ್ ದರ್ಜೆಗಳು ಅತ್ಯಂತ ಕಲುಷಿತ ನೀರು ಎಂದು ತಿಳಿಸುತ್ತದೆ.

ಒಟ್ಟು 12 ನದಿಗಳ ನೀರಿನ ಪರೀಕ್ಷೆಯ ವೇಳೆ ನೇತ್ರಾವತಿ ನದಿ ಮಾತ್ರ ಬಿ ದರ್ಜೆಯ ಗುಣಮಟ್ಟವನ್ನು ಹೊಂದಿದ್ದು, ಇದು ನೇರವಾಗಿ ಕುಡಿಯಲು ಸಾಧ್ಯವಿಲ್ಲವಾದರೂ ಸ್ನಾನ ಅಥವಾ ಗೃಹಬಳಕೆಗೆ ಸಂಸ್ಕರಿಸಿದ ನಂತರ ಬಳಸಬಹುದು. ಇನ್ನು ಕಾವೇರಿ, ಲಕ್ಷ್ಮಣ ತೀರ್ಥ, ತುಂಗಭದ್ರ, ಭದ್ರ, ಕೃಷ್ಣ, ಶಿಂಷಾ ಮತ್ತು ಕಬಿನಿ ಸೇರಿದಂತೆ ಎಂಟು ನದಿಗಳು ಸಿ ದರ್ಜೆಯ ಗುಣಮಟ್ಟವನ್ನು ಹೊಂದಿವೆ. ಈ ನದಿಗಳ ನೀರನ್ನು ಗೃಹ ಬಳಕೆಗೆ ಬಳಸಬೇಕಾದರೂ ಸಹ ಕಡ್ಡಾಯವಾಗಿ ಸಂಸ್ಕರಿಸಬೇಕು. ವಿಶೇಷವಾಗಿ, ಕಾವೇರಿ ನದಿಯು ಸಿ ದರ್ಜೆಯಲ್ಲಿರುವುದು ಕಳವಳಕಾರಿಯಾಗಿದೆ, ಏಕೆಂದರೆ ಇದು ರಾಜ್ಯದ ಪ್ರಮುಖ ಜೀವನಾಡಿಯಾಗಿದೆ.

ಭೀಮಾ, ಕಾಗಿಣಾ ಮತ್ತು ಅರ್ಕಾವತಿ ನದಿಗಳು ಡಿ ದರ್ಜೆಗೆ ಸೇರಿದೆ. ಬೆಂಗಳೂರಿನ ವೃಷಭಾವತಿ ನದಿಯನ್ನು ಝೆಡ್ ದರ್ಜೆಗೆ ಸೇರಿಸುವಷ್ಟು ಮಾಲಿನ್ಯಗೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಾಲಿನ್ಯಕ್ಕೆ ಪ್ರಮುಖ ಕಾರಣಗಳು ಏನು ಎಂಬುದನ್ನು ನೋಡುವುದಾದರೆ ಕೈಗಾರಿಕಾ ರಾಸಾಯನಿಕಗಳು, ನೀರಿನಲ್ಲಿ ಆಮ್ಲಜನಕದ ಕೊರತೆ ಮತ್ತು ಬಯೋಕೆಮಿಕಲ್ ಆಕ್ಸಿಜನ್ ಡಿಮಾಂಡ್ (BOD) ಮಟ್ಟದಲ್ಲಿನ ಕುಸಿತವಾಗಿದೆ. ಸಾಮಾನ್ಯವಾಗಿ, ಪ್ರತಿ ಲೀಟರ್ ನೀರಿಗೆ 6 ರಿಂದ 8 ಮಿಲಿಗ್ರಾಂ ಆಮ್ಲಜನಕ ಇರಬೇಕು. ಆದರೆ ಬಹುತೇಕ ನದಿಗಳಲ್ಲಿ ಈ ಮಟ್ಟ ಇಲ್ಲ. ಕೋಲಿಫಾರ್ಮ್ ಮತ್ತು ಫೇಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳ ಇರುವಿಕೆಯೂ ನೀರಿನ ಗುಣಮಟ್ಟವನ್ನು ಹಾಳುಮಾಡಿದೆ.

ಈ ವರದಿಯು ಕರ್ನಾಟಕದ ನದಿಗಳ ಪರಿಸ್ಥಿತಿಯ ಕುರಿತು ರೆಡ್ ಅಲರ್ಟ್ ನೀಡಿದಂತಿದೆ. ನದಿಗಳನ್ನು ನಂಬಿಕೊಂಡು ಜೀವಿಸುವ ಲಕ್ಷಾಂತರ ಜನರ ಆರೋಗ್ಯ ಮತ್ತು ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆ ಇದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನದಿಗಳ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ತಕ್ಷಣದ ಹಾಗೂ ಕಠಿಣ ಕ್ರಮಗಳು ಅಗತ್ಯವಾಗಿವೆ.