ಕುವೆಂಪು ವಿವಿಯಲ್ಲಿ ಬೇಜವಾಬ್ದಾರಿತನದ ಮೌಲ್ಯ ಮಾಪನ; ಎನ್ ಎಸ್ ಯು ಐ ಪ್ರತಿಭಟನೆ
ಕುವೆಂಪು ವಿವಿಯಲ್ಲಿ ಬೇಜವಾಬ್ದಾರಿತನದ ಮೌಲ್ಯ ಮಾಪನ;
ಎನ್ ಎಸ್ ಯು ಐ ಪ್ರತಿಭಟನೆ
ಕುವೆಂಪು ವಿವಿಯ ಡಿಜಿಟಲ್ ಮೌಲ್ಯಮಾಪನವನ್ನು ಬೇಜವಾಬ್ದಾರಿತನದಿಂದ ನಡೆಸಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ಪ್ರತಿಭಟನೆ ನಡೆಸಿತು.
ಇತ್ತೀಚೆಗೆ ನಡೆದ ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷೆಯ ಮೌಲ್ಯಮಾಪನವನ್ನು ಡಿಜಿಟಲ್ ರೂಪದಲ್ಲಿ ನಡೆಸಿದ್ದು, ಫಲಿತಾಂಶದಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ವಿವಿಯ ಆಡಳಿತ ಡಿಜಿಟಲ್ ಮೌಲ್ಯಮಾಪನಕ್ಕೆ ಸಾಕಷ್ಟು ತಯಾರಿ ನಡೆಸದೇ ಇರುವುದರಿಂದ ಬೇಕಾಬಿಟ್ಟಿ ಫಲಿತಾಂಶಗಳು ಬಂದಿದ್ದು, ವಿವಿಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನವನ್ನು ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ತೀವ್ರವಾಗಿ ಖಂಡಿಸಿತು.
ಈ ಹಿಂದೆ ನವೆಂಬರ್ 4 ರಂದು ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಿಗೆ ಹಾಗೂ ಕುಲಸಚಿವರಿಗೆ ಪರೀಕ್ಷಾಂಗ ಇವರಿಗೆ ಮನವಿಯನ್ನು ನೀಡಿದಾಗ 14/11/25 ರೊಳಗೆ ಸರಿಪಡಿಸುವ ಭರವಸೆಯನ್ನು ನೀಡಿದರೂ ಈಗಲೂ ಯಾಥಾಸ್ಥಿತಿ ಮುಂದುವರೆಸಿರುವುದನ್ನು ಜ ಖಂಡಿಸಿತು.
ಮ್ಯಾನ್ಯುಯಲ್ ಮೌಲ್ಯಮಾಪನದಿಂದ ನಡೆಯುತ್ತಿದ್ದ ಅವ್ಯವಹಾರ ತಡೆಯುವ ನೆಪದಲ್ಲಿ ಕುವೆಂಪು ವಿವಿ ಡಿಜಿಟಲ್ ಮೌಲ್ಯಮಾಪನದ ಮೊರೆ ಹೋಗಿದೆ. ಆದರೆ, ಈ ಮೌಲ್ಯಮಾಪನದಿಂದ ಪ್ರತಿ ಕಾಲೇಜುಗಳಲ್ಲಿಯೂ ಶೇ. 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಮರುಮೌಲ್ಯಮಾಪನ ಮಾಡಿದಾಗ ಕೇವಲ 0 5 6 ಅಂಕಗಳನ್ನು ಗಳಿಸಿದ್ದ ವಿದ್ಯಾರ್ಥಿಯನ್ನು ಉತ್ತೀರ್ಣಗೊಳಿಸಲಾಗುತ್ತಿದೆ.
ಈ ಎಲ್ಲಾ ಬೆಳವಣಿಗೆಗಳು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಪರೀಕ್ಷಾ ಶುಲ್ಕ, ಮರುಮೌಲ್ಯಮಾಪನ ಶುಲ್ಕ ಎಂದು ವಿದ್ಯಾರ್ಥಿಗಳಿಂದ ವಸೂಲಿ ಮಾಡುತ್ತಿರುವ ವಿಶ್ವವಿದ್ಯಾಲಯ, ವಿದ್ಯಾರ್ಥಿಗಳ ಫಲಿತಾಂಶದ ಜೊತೆ ಆಟವಾಡುತ್ತಾ ಅವರನ್ನು ಅತಂಕಕ್ಕೆ ದೂಡುತ್ತಿದೆ.
ಕೂಡಲೇ ವಿವಿಯ ಕುಲಪತಿಗಳು ಈ ಬಗ್ಗೆ ಗಮನ ಹರಿಸಬೇಕು. ಡಿಜಿಟಲ್ ಮೌಲ್ಯಮಾಪನದಲ್ಲಿ ಆಗಿರುವ ಗೊಂದಲಗಳನ್ನು ಬಗೆಹರಿಸಬೇಕು. ವ್ಯವಸ್ಥಿತ ಪೂರ್ವಸಿದ್ಧತೆಯಿಲ್ಲದೇ ಡಿಜಿಟಲ್ ಮೌಲ್ಯಮಾಪನ ನಡೆಸಲು ಕಾರಣರಾದವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಯಾವುದೇ ಶುಲ್ಕ ಪಡೆಯದೇ ಎಲ್ಲಾ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮರುಮೌಲ್ಯಮಾಪನ ಮಾಡಬೇಕು. ಇಲ್ಲವಾದಲ್ಲಿ ಎನ್.ಎಸ್.ಯು.ಐ. ವತಿಯಿಂದ ವಿವಿ ಬಂದ್ ನಡೆಸಿ ತೀವ್ರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಈ ಮೂಲಕ ಎಚ್ಚರಿಸಿದರು.
ಈ ಪ್ರತಿಭಟನೆಯಲ್ಲಿ ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ವಿಜಯ್, ಕಾರ್ಯಧ್ಯಕ್ಷ ರವಿಕಟಿಕೆರೆ, ಚಂದ್ರಾಜಿ ರಾವ್, ಆದಿತ್ಯ, ಸುಭಾನ್, ಫರಾಜ್, ಅಂಜನ್, ಲೋಹಿತ್, ವರುಣ್, ಫರಜ್, ಸಿಂಚನ, ದೀಕ್ಷಾ, ಸ್ಫೂರ್ತಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


