*ಏನಿದು 400 ಕೋಟಿ ರೂ. ದರೋಡೆ ಪ್ರಕರಣ?* *400 ಕೋಟಿ ರೂ. ದರೋಡೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್!*
*ಏನಿದು 400 ಕೋಟಿ ರೂ. ದರೋಡೆ ಪ್ರಕರಣ?*
*400 ಕೋಟಿ ರೂ. ದರೋಡೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್!*
ಕರ್ನಾಟಕ-ಗೋವಾ ಗಡಿಯಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರೂ. ದರೋಡೆ (Rs 400 Crore Robbery Case) ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ದೊರೆತಿದೆ. ಘಟನೆ ನಡೆದದ್ದೇ ಸುಳ್ಳು ಎಂಬ ಅನುಮಾನಕ್ಕೆ ಬಲ ಸಿಕ್ಕಿದೆ. ಬೆಳಗಾವಿ ಸಮೀಪದ ಗಡಿ ಪ್ರದೇಶದಲ್ಲಿ ಹಣ ಸಾಗಿಸುತ್ತಿದ್ದ ಎರಡು ಕಂಟೇನರ್‌ಗಳನ್ನು ದರೋಡೆ ಮಾಡಲಾಗಿದೆ ಎಂದು ನೀಡಿದ್ದ ದೂರಿನ ಮೇಲೆ ಮಹಾರಾಷ್ಟ್ರ ಸರ್ಕಾರ ಎಸ್‌ಐಟಿ ರಚಿಸಿ ತನಿಖೆ ನಡೆಸಿತ್ತು. ಸುಮಾರು ಒಂದು ತಿಂಗಳ ಕಾಲ ತನಿಖೆ ನಡೆಸಿದ ಎಸ್‌ಐಟಿ ತಂಡ, ಬೆಳಗಾವಿ (Belagavi) ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ಬಳಿ ದರೋಡೆ ನಡೆದಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ವರದಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.
ದೂರು ನೀಡಿದ್ದ ಸಂದೀಪ್ ಪಾಟೀಲ್ ಹೇಳಿಕೆಯಲ್ಲಿ ಸ್ಥಳ, ಸಮಯ, ಪ್ರಯಾಣ ಮಾರ್ಗ ಹಾಗೂ ಕರೆ ವಿವರಗಳಲ್ಲಿ ಗಂಭೀರ ವ್ಯತ್ಯಾಸಗಳು ಕಂಡುಬಂದಿವೆ ಎಂಬುದು ಎಸ್‌ಐಟಿ ತನಿಖೆಯಲ್ಲಿ ಬಹಿರಂಗವಾಗಿದೆ ಎನ್ನಲಾಗಿದೆ.
ಇದರ ಆಧಾರವಾಗಿ ಚೋರ್ಲಾ ಘಾಟ್‌ನಲ್ಲಿ ಯಾವುದೇ ದರೋಡೆ ನಡೆದಿಲ್ಲ ಎಂದು ಎಸ್‌ಐಟಿ ಸ್ಪಷ್ಟಪಡಿಸಿದೆ. ಹೀಗಾಗಿ ಸಾಕ್ಷ್ಯಗಳ ಕೊರತೆಯಿಂದ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳನ್ನು ನ್ಯಾಯಾಲಯ ಇಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಪ್ರಕರಣ ಕರ್ನಾಟಕ ಹಾಗೂ ಮಹಾರಾಷ್ಟ್ರ ಎರಡೂ ರಾಜ್ಯಗಳಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು.
ಇದೀಗ ಸುಳ್ಳು ದೂರು ನೀಡಿದ ಆರೋಪದ ಮೇಲೆ ಸಂದೀಪ್ ಪಾಟೀಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಾಸಿಕ್ ಪೊಲೀಸರಿಂದ ಸಿದ್ಧತೆ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಸಂದೀಪ್ ಪಾಟೀಲ್ ಅವರು ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಭಾನುವಾರ ಪತ್ರ ಬರೆದು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಮಹಾರಾಷ್ಟ್ರ ಎಸ್‌ಐಟಿ ಪಾರದರ್ಶಕ ತನಿಖೆ ನಡೆಸುತ್ತಿಲ್ಲ, ಪ್ರಕರಣಕ್ಕೆ ಸಂಬಂಧಿಸಿದ ಆಡಿಯೋ ದಾಖಲೆಗಳು ನನ್ನ ಬಳಿ ಇವೆ ಎಂದು ಅವರು ತಿಳಿಸಿದ್ದು, ಆ ದಾಖಲೆಗಳ ಆಧಾರದಲ್ಲಿ ಮರು ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
*ಏನಿದು 400 ಕೋಟಿ ರೂ. ದರೋಡೆ ಪ್ರಕರಣ?*
ಬೆಳಗಾವಿಯ ಚೋರ್ಲಾ ಘಾಟ್ ಪ್ರದೇಶದಲ್ಲಿ 2025 ರ ಅಕ್ಟೋಬರ್ 25 ರಂದು 2 ಕಂಟೇನರ್‌ಗಳಲ್ಲಿದ್ದ ಸುಮಾರು 400 ಕೋಟಿ ರೂ. ನಗದು ಹಣವನ್ನು ದರೋಡೆ ಮಾಡಲಾಗಿತ್ತು ಎಂದು ಮಹಾರಾಷ್ಟ್ರದ ನಾಸಿಕ್ ಮೂಲದ ಉದ್ಯಮಿ ಸಂದೀಪ್ ದತ್ತಾ ಪಾಟೀಲ್ ಇತ್ತೀಚೆಗೆ ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ್ದರು. ಅವರು ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು ದೇಶದಾದ್ಯಂತ ಸಂಚಲನ ಮೂಡಿಸಿತ್ತು. ದೂರುದಾರರ ಪ್ರಕಾರ, ದರೋಡೆಯಾದ ಹಣವು ಗುಜರಾತ್ ಮೂಲದ ಬಿಲ್ಡರ್ ಕಿಶೋರ್ ಸವಲಾ ಸೇಠ್ ಅವರಿಗೆ ಸೇರಿದ್ದು, ಅದರಲ್ಲಿ ರದ್ದಾದ 2,000 ರೂ. ಮುಖಬೆಲೆಯ ನೋಟುಗಳೂ ಇದ್ದವು ಎನ್ನಲಾಗಿದೆ.
ಆದರೆ ಇದೀಗ, ಅಂಥದ್ದೊಂದು ಪ್ರಕರಣ ನಡೆದಿರುವ ಸಾಧ್ಯತೆಯನ್ನೇ ಮಹಾರಾಷ್ಟ್ರ ಎಸ್‌ಐಟಿ ಅಲ್ಲಗಳೆದಿದೆ. ಜತೆಗೆ, ವರದಿಯನ್ನೂ ಸಿದ್ಧಪಡಿಸಿದೆ.


