ಆರೇಳು ತಿಂಗಳಲ್ಲಿ ರಾತ್ರಿ ವಿಮಾನ ಸಂಚಾರಕ್ಕೆ ಕ್ರಮ; ನಂಜಯ್ಯನಮಠ್

ಆರೇಳು ತಿಂಗಳಲ್ಲಿ ರಾತ್ರಿ ವಿಮಾನ ಸಂಚಾರಕ್ಕೆ ಕ್ರಮ; ನಂಜಯ್ಯನಮಠ್

ಶಿವಮೊಗ್ಗ : ಮುಂದಿನ ಆರೇಳು ತಿಂಗಳ ಅವಧಿಯೊಳಗಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲಿ ವಿಮಾನಗಳು ಏರಿಳಿಯಲು ಅನುಕೂಲವಾಗುವಂತೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಫೆಬ್ರವರಿ ಮಾಸಾಂತ್ಯದೊಳಗಾಗಿ ಸುಮಾರು 6 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳು ಆರಂಭಗೊಳ್ಳಲಿವೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅ‍ಧ್ಯಕ್ಷ ನಂಜಯ್ಯನಮಠ್‌ ಅವರು ಹೇಳಿದರು.

ಅವರು ಇಂದು ನಗರದ ಹೊರವಲಯದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಈ ಹಿಂದೆ ನವೀಕರಣಗೊಳ್ಳದೆ ಬಾಕಿ ಉಳಿದಿದ್ದ ವಿಮಾನ ನಿಲ್ದಾಣದ ಪರವಾನಗಿ ನವೀಕರಣದ ಸಮಸ್ಯೆಯನ್ನು ಇತ್ಯರ್ಥಗೊಳಿಸಿ, ಆಡಳಿತಾತ್ಮಕ ಅಡತಡೆಗಳನ್ನು ನಿವಾರಿಸಿಕೊಳ್ಳಲಾಗಿದೆ. ಅಲ್ಲದೇ ಬಾಕಿ ಇದ್ದ 22.00ಲಕ್ಷ ರೂ. ದಂಡ ಪಾವತಿಸಲಾಗಿದ್ದು, ಮುಂದಿನ ಮೂರು ವರ್ಷಗಳ ಅವಧಿಗೆ ಪರವಾನಗಿ ನವೀಕರಿಸುವ ಅಗತ್ಯವಿರುವುದಿಲ್ಲ ಎಂದವರು ತಿಳಿಸಿದರು.

ಹವಾಮಾನ ವೈಪರೀತ್ಯ ಹಾಗೂ ಮತ್ತಿತರ ಹಲವು ಕಾರಣಗಳಿಗಾಗಿ ಇಳಿಯಬೇಕಾದ ವಿಮಾನಗಳು ಇಳಿಯದೇ ಹಿಂದಿರುಗಿ ಹೋಗುವುದನ್ನು ನಿಯಂತ್ರಿಸಲು, ರಾತ್ರಿ ಸಂಚಾರಕ್ಕೆ ಮತ್ತು ಸರಕು ಸಾಗಾಣಿಕೆಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅಗತ್ಯವಾಗಿರುವ ದಿಕ್ಸೂಚಿ ಯಾಂತ್ರಿಕ ವ್ಯವಸ್ಥೆ (DBOR)ಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಅಲ್ಲದೇ ವಿದ್ಯುತ್‌ ಸಂಪರ್ಕ ವ್ಯವಸ್ಥೆಯೂ ಪೂರ್ಣಗೊಂಡಿದೆ ಎಂದರು.

ನೈಟ್‌ಲ್ಯಾಂಡಿಂಗ್‌ ವ್ಯವಸ್ಥೆ ಕಲ್ಪಿಸಲು ನಿಯಮಾನುಸಾರ ಸದರಿ ಪ್ರದೇಶದಲ್ಲಿನ ಮಣ್ಣಿನ ಗುಣಮಟ್ಟದ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಇನ್ನೊಂದು ವಾರದಲ್ಲಿ ವರದಿ ಬರುವ ನಿರೀಕ್ಷೆ ಹೊಂದಲಾಗಿದೆ ಎಂದ ಅವರು, ಈ ಎಲ್ಲಾ ಕಾಮಗಾರಿಗಳ ಸಕಾಲಿಕ ಪರಿಶೀಲನೆಗಾಗಿ ತಾವು ಖುದ್ದಾಗಿ ಆಗಮಿಸಿ, ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡುವುದಾಗಿ ಅವರು ತಿಳಿಸಿದರು.

ಉಡಾನ್ ಯೋಜನೆ ಮುಂದುವರಿಸಲು ಕೇಂದ್ರಕ್ಕೆ ಮನವಿ : ಶಿವಮೊಗ್ಗದಿಂದ ಬೆಂಗಳೂರು, ಚೆನ್ನೈ, ಹೈದ್ರಾಬಾದ್‌, ಗೋವಾ ಸೇರಿದಂತೆ ಹಲವು ಪ್ರದೇಶಗಳಿಗೆ ನಿರಂತರವಾಗಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಕೇಂದ್ರ ಪುರಸ್ಕೃತ ಹಾಗೂ ವಿಮಾನ ಪ್ರಯಾಣಕ್ಕೆ ರಿಯಾಯಿತಿ ಒದಗಿಸುವ ‘ಉಡಾನ್’ ಯೋಜನೆಯ ಅವಧಿ ಶೀ‍ಘ್ರದಲ್ಲಿ ಮುಕ್ತಾಯಗೊಳ್ಳಲಿದೆ. ಆದ್ದರಿಂದ ಪ್ರಯಾಣಿಕರಿಗೆ ಹೆಚ್ಚಿನ ಪ್ರಯಾಣದರ ಪಾವತಿಸುವ ಹೊರೆ ಬೀಳದಂತೆ ನೋಡಿಕೊಳ್ಳಲು ಸ್ಥಳೀಯ ಸಂಸದರು ಹಾಗೂ ಜನಪ್ರತಿನಿಧಿಗಳ ಸಹಕಾರವನ್ನು ಪಡೆದು, ಸದರಿ ಯೋಜನೆಯನ್ನು ಮುಂದುವರೆಸಲು ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದವರು ನುಡಿದರು.

ವಿಮಾನ ನಿಲ್ದಾಣದಲ್ಲಿ ಈಗಾಗಲೇ ಕಾಯ್ದಿರಿಸಲಾಗಿರುವ 17ಎಕರೆ ನಿವೇಶನದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಬೃಹತ್‌ ವಾಣಿಜ್ಯ ಸಂಕೀರ್ಣ ಮತ್ತು ಪಂಚತಾರಾ ಹೋಟೆಲ್‌ನ್ನು ನಿರ್ಮಿಸುವ ಕುರಿತು ಈಗಾಗಲೇ ನಿಗಮದ ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ. ಶೀಘ್ರದಲ್ಲಿ ಈ ವಿಷಯದ ಕುರಿತು ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಸದರಿ ವಿಮಾನ ನಿಲ್ಧಾಣದಲ್ಲಿ ಪೈಲಟ್‌ ತರಬೇತಿ ಕೇಂದ್ರ ಆರಂಭಿಸಲು ಈ ಹಿಂದೆ ಖಾಸಗಿ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆದರೆ, ಯಾವುದೇ ಕಂಪನಿಗಳು ಆಸಕ್ತ ವಹಿಸಿರುವುದು ಕಂಡುಬಂದಿರುವುದಿಲ್ಲ. ಆದಾಗ್ಯೂ ಪೈಲಟ್‌ ತರಬೇತಿ ಕೇಂದ್ರ ಆರಂಭಿಸಲು ಇನ್ನೊಮ್ಮೆ ಆಸಕ್ತ ತರಬೇತಿ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದರು.

ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಭೂಮಿ ನೀಡಿ ಸಹಕರಿಸಿದ ರೈತರ 370 ಕುಟುಂಬಗಳಿಗೆ ಅಂದಿನ ಅಧಿಕಾರಿ-ಜನಪ್ರತಿನಿಧಿಗಳು ನೀಡಿದ ಭರವಸೆಯಂತೆ ತಲಾ ಒಂದು ನಿವೇಶನ ನೀಡಿರುವುದಿಲ್ಲ. ಈ ಬಗ್ಗೆ ಸಂತ್ರಸ್ಥರು ಅನೇಕ ಬಾರಿ ಸರ್ಕಾರದ ಗಮನ ಸೆಳೆಯುವ ಕಾರ್ಯ ಮಾಡಿದ್ದಾರೆ. ಅಲ್ಲದೇ ನ್ಯಾಯಾಲಯವೂ ಕೂಡ ಸಂತ್ರಸ್ಥರ ಪರವಾಗಿ ತೀರ್ಪು ನೀಡಿರುವುದು ಗಮನಕ್ಕೆ ಬಂದಿದೆ. ಈ ಸಮಸ್ಯೆಯ ಇತ್ಯರ್ಥಗೊಳಿಸಲು ಖುದ್ದಾಗಿ ಮಾನ್ಯ ಮುಖ್ಯಮಂತ್ರಿಗಳ ಗಮನಸೆಳೆದು ಅಗತ್ಯವಿರುವು ಅನುದಾನ ಬಿಡುಗಡೆಗೊಳಿಸಲು ಒತ್ತಾಯಿಸಲಾಗುವುದು ಎಂದರು.

ಸಭೆಯಲ್ಲಿ ವಿಮಾನ ನಿಲ್ದಾಣದ ಮುಖ್ಯಸ್ಥ ಕ|| ಶಮಂತ್‌, ವಿದ್ಯಾಧರ್‌ ಸಾಲಿಮಠ್‌, ಕಾಂಗ್ರೆಸ್ ಮುಖಂಡ ಹೆಚ್.ಸಿ. ಯೋಗೀಶ್‌ ಮತ್ತಿತರರು ಉಪಸ್ಥಿತರಿದ್ದರು.