*ಫೆ.28ಕ್ಕೆ ಸ್ಬೂಡಾ ಅಧ್ಯಕ್ಷಾವಧಿ ಮುಕ್ತಾಯ* *ಮುಂದಿನ ಅಧ್ಯಕ್ಷರು ಯಾರು?* *ಎಂ.ಶ್ರೀಕಾಂತ್- ಆರ್.ಪ್ರಸನ್ನಕುಮಾರ್- ಎಸ್.ಕೆ.ಮರಿಯಪ್ಪ- ಶ್ರೀಮತಿ ಬಲ್ಕೀಶ್ ಬಾನು- ಕಲೀಂ ಪಾಷ ರೇಸಲ್ಲಿ…* *ಹೆಚ್.ಎಸ್.ಸುಂದರೇಶ್ ಮತ್ತೆ ಅಧ್ಯಕ್ಷರಾಗಿ ಮುಂದುವರೆಯುತ್ತಾರಾ?*
*ಫೆ.28ಕ್ಕೆ ಸ್ಬೂಡಾ ಅಧ್ಯಕ್ಷಾವಧಿ ಮುಕ್ತಾಯ*
*ಮುಂದಿನ ಅಧ್ಯಕ್ಷರು ಯಾರು?*
*ಎಂ.ಶ್ರೀಕಾಂತ್- ಆರ್.ಪ್ರಸನ್ನಕುಮಾರ್- ಎಸ್.ಕೆ.ಮರಿಯಪ್ಪ- ಶ್ರೀಮತಿ ಬಲ್ಕೀಶ್ ಬಾನು- ಕಲೀಂ ಪಾಷ ರೇಸಲ್ಲಿ…*
*ಹೆಚ್.ಎಸ್.ಸುಂದರೇಶ್ ಮತ್ತೆ ಅಧ್ಯಕ್ಷರಾಗಿ ಮುಂದುವರೆಯುತ್ತಾರಾ?*

ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಹಾಲಿ ಅಧ್ಯಕ್ಷರ ಎರಡು ವರ್ಷಗಳ ಅಧಿಕಾರಾವಧಿ ಇದೇ ಫೆ.28 ರಂದು ಮುಕ್ತಾಯವಾಗುತ್ತಿದೆ. ಖಾಲಿಯಾಗಲಿರುವ ಅಧ್ಯಕ್ಷ ಸ್ಥಾನಕ್ಕೇರಲು ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ತಮ್ಮದೇ ಲಾಬಿ ಆರಂಭಿಸಿದ್ದಾರೆ.
ಇದೇ ಫೆಬ್ರವರಿ 28 ಕ್ಕೆ ಸ್ಬೂಡಾ ಅಧ್ಯಕ್ಷರಾಗಿರುವ ಹೆಚ್.ಎಸ್.ಸುಂದರೇಶ್ ರವರ ಅಧ್ಯಕ್ಷಾವಧಿ ಮುಗಿಯಲಿದೆ. ಈ ಸ್ಥಾನಕ್ಕೇರಲು ಈಗಾಗಲೇ ತಮ್ಮ ತಮ್ಮ ನಾಯಕರನ್ನು ಮುಂದಿಟ್ಟುಕೊಂಡು ಶಿವಮೊಗ್ಗದ ಕಾಂಗ್ರೆಸ್ ಮುಖಂಡರು ಲಾಬಿಯಲ್ಲಿ ತೊಡಗಿಕೊಂಡಿದ್ದಾರೆ. ಕೊನೆಗೆ ಈ ಸ್ಬೂಡಾ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ? ಕುತೂಹಲವನ್ನು ಹೈ ಕಮಾಂಡ್ ಹಾಗೆಯೇ ಉಳಿಸಿಕೊಂಡಿದೆ.
ಸ್ಬೂಡಾ ಅಧ್ಯಕ್ಷ ಗಾದಿಗೆ ಮುಸ್ಲೀಮ್ ಮುಖಂಡರನ್ನೇ ನೇಮಕ ಮಾಡಿ ಎಂಬ ವಾದ ಕಳೆದ ಎರಡು ವರ್ಷಗಳ ಹಿಂದೆಯೂ ಇತ್ತು.ಈಗಲೂ ಅದು ತಾರಕಕ್ಕೇರುತ್ತಿದೆ.
ಜೊತೆಗೆ, ಕುರುಬ ಸಮುದಾಯದ ಮುಖಂಡರ ಲಾಬಿ ಕೂಡ ಬಲವಾಗಿಯೇ ಇದೆ. ಡಿಸಿಸಿ ಬ್ಯಾಂಕ್ ನಿರ್ದೇಶಕರೂ ಕಾಂಗ್ರೆಸ್ ಮುಖಂಡರೂ ಕೊಡುಗೈ ದಾನಿಯೂ ಆಗಿರುವ ಎಂ. ಶ್ರೀಕಾಂತ್ ರವರ ಪರ ವಿಶೇಷ ಆಂತರಿಕ ಹೋರಾಟ ನಡೆಯುತ್ತಿದೆ. ಅಧಿಕಾರವಿಲ್ಲದಿದ್ದರೂ ಜನರ ಮಧ್ಯೆಯೇ ಇದ್ದು ಪ್ರೀತಿ ಗಳಿಸಿರುವ ಎಂ.ಶ್ರೀಕಾಂತ್ ರವರಿಗೆ ಸ್ಬೂಡಾ ಅಧ್ಯಕ್ಷ ಸ್ಥಾನ ನೀಡಿ ಅವರ ಶಕ್ತಿಯನ್ನು ಕಾಂಗ್ರೆಸ್ ಪಕ್ಷ ಬಳಸಿಕೊಳ್ಳಬೇಕೆಂಬ ಒತ್ತಡ ಹಿರಿಯ ಪ್ರಭಾವಿ ನಾಯಕರ ಮೇಲಿದೆ.
ಮಾಜಿ ವಿಧಾನ ಪರಿಷತ್ ಸದಸ್ಯರೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ ಆಗಿರುವ ಆರ್.ಪ್ರಸನ್ನ ಕುಮಾರ್ ರವರು ಕೂಡ ಸ್ಬೂಡಾ ಅಧ್ಯಕ್ಷರಾಗುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದಾರೆ. ಇವರ ಪರವಾಗಿ ಕೆಲ ಪ್ರಮುಖರು ಹೈ ಕಮಾಂಡ್ ಅಂಗಳದಲ್ಲಿ ಓಡಾಡುತ್ತಿರುವುದು ಚರ್ಚೆಗೆ ಒಳಗಾಗಿದೆ.
ಕಳೆದ ಬಾರಿಯೂ ಅಧ್ಯಕ್ಷರಾಗಲು ಪ್ರಯತ್ನಿಸಿದ್ದ ಮಾಜಿ ಮೇಯರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಎಸ್.ಕೆ.ಮರಿಯಪ್ಪರವರು ಈ ಬಾರಿಯೂ ಸ್ಬೂಡಾ ಅಧ್ಯಕ್ಷರಾಗುವ ಸರ್ವ ಪ್ರಯತ್ನಗಳಲ್ಲೂ ಕಾಣಸಿಗುತ್ತಿದ್ದಾರೆ.
ಎಂ.ಶ್ರೀಕಾಂತ್, ಆರ್.ಪ್ರಸನ್ನ ಕುಮಾರ್, ಎಸ್.ಕೆ.ಮರಿಯಪ್ಪರವರಿಗೆ ಕುರುಬ ಸಮುದಾಯದವರೆಂಬ ಶ್ರೀರಕ್ಷೆ ಇದ್ದು, ಸ್ಬೂಡಾ ಕುರುಬ ಸಮಾಜಕ್ಕೆ ಮೀಸಲಿರಿಸಿದರೆ ಈ ಮೂವರಲ್ಲಿ ಓರ್ವ ಪ್ರಭಾವಿಗಳು ಅಧ್ಯಕ್ಷರಾಗಲಿದ್ದಾರೆ.
ಇನ್ನುಳಿದಂತೆ, ಸ್ಬೂಡಾ ಮುಸ್ಲೀಮರ ಪಾಲಿಗಿರಲಿ ಎಂಬ ಪ್ರಾಚೀನ ಹೋರಾಟ ಹಾಲಿ ಮತ್ತೆ ಚಾಲ್ತಿಯಲ್ಲಿದೆ. ಚುನಾವಣೆಗಳಲ್ಲಿ ಮಾತ್ರ ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಬಳಸಿಕೊಂಡು ಅಧಿಕಾರ ನೀಡುವ ಸಂದರ್ಭಗಳಲ್ಲಿ ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಆರೋಪವನ್ನು ಗಂಭೀರವಾಗಿ ಪಕ್ಷ ಪರಿಗಣಿಸಿದರೆ ಇಬ್ಬರು ಅಲ್ಪಸಂಖ್ಯಾತ ಮುಖಂಡರು ತಮ್ಮ ಪ್ರಭಾವಶಾಲಿ ಹೋರಾಟದಲ್ಲಿರುವುದನ್ನು ಕಾಣಬಹುದು.
ಹಾಲಿ ವಿಧಾನ ಪರಿಷತ್ ಸದಸ್ಯರೂ ಕ್ರಿಯಾಶೀಲ ಮಹಿಳಾ ಕಾಂಗ್ರೆಸ್ ಪ್ರಮುಖರೂ ಆಗಿರುವ ಶ್ರೀಮತಿ ಬಲ್ಕೀಶ್ ಬಾನು, ಶಿವಮೊಗ್ಗ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಕ್ರಿಯಾಶೀಲ ಕಾಂಗ್ರೆಸ್ ಸಂಘಟಕರೂ ಆಗಿರುವ ಕಲೀಂ ಪಾಷ ಸ್ಬೂಡಾ ಅಧ್ಯಕ್ಷರಾಗುವ ರೇಸ್ ನಲ್ಲಿದ್ದಾರೆ.
ಹೈಕಮಾಂಡ್ ಅಲ್ಪಸಂಖ್ಯಾತರಿಗೆ ಮಣೆ ಹಾಕಿದರೆ ಈ ಇಬ್ಬರಲ್ಲಿ ಒಬ್ಬರನ್ನು ಅಧ್ಯಕ್ಷ ಗಾದಿಯಲ್ಲಿ ಕಾಣಬಹುದು.
ಫೆ.28 ಕ್ಕೆ ಸುಂದರೇಶ್ ಅಧ್ಯಕ್ಷ ಗಾದಿಯಿಂದ ಇಳಿಯುತ್ತಾರೆ ಎಂಬ ಮಾತಿದೆಯಾದರೂ ರಾಜ್ಯ ಸರ್ಕಾರ ಕೊನೆಯ ಕ್ಷಣದಲ್ಲಿ ಪ್ರಾಧಿಕಾರಗಳ ಅಧಿಕಾರಾವಧಿ ಮುಂದುವರೆಸಿದರೂ ಆಶ್ಚರ್ಯವಿಲ್ಲ….
– *ಶಿ.ಜು.ಪಾಶ*


