ಭಾಗ-1 *ಸ್ಬೂಡಾ…ಹಗರಣಗಳ ನಿಜವಾದ ಗೂಡಾ?!* *ಸ್ಬೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಟಾರ್ಗೆಟ್ ಹಿಂದಿನ ಸತ್ಯಗಳು!* *ಭ್ರಷ್ಟಾಚಾರದ ಆರೋಪಗಳಿಗೆ ಒಳಗಾಗಿರುವ ಸ್ಬೂಡಾ ಕಾಮಗಾರಿಗಳ ತನಿಖೆ ಸೂಕ್ತ ರೀತಿಯಲ್ಲೇ ನಡೆಯಲಿ… ದೂರುದಾರ ಗುತ್ತಿಗೆದಾರರ ಪ್ರಾಮಾಣಿಕತೆಯೂ ತನಿಖೆಗೆ ಒಳಗಾಗಲಿ…ಸ್ಬೂಡಾ ಅಧ್ಯಕ್ಷ ಪಟ್ಟಕ್ಕಾಗಿ ನಡೆಯುತ್ತಿರುವ ರಾಜಕಾರಣದ ಒಳ ಸಂಚೂ ಬೆತ್ತಲಾಗಲಿ…*

ಭಾಗ-1

*ಸ್ಬೂಡಾ…ಹಗರಣಗಳ ನಿಜವಾದ ಗೂಡಾ?!*

*ಸ್ಬೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಟಾರ್ಗೆಟ್ ಹಿಂದಿನ ಸತ್ಯಗಳು!*

*ಭ್ರಷ್ಟಾಚಾರದ ಆರೋಪಗಳಿಗೆ ಒಳಗಾಗಿರುವ ಸ್ಬೂಡಾ ಕಾಮಗಾರಿಗಳ ತನಿಖೆ ಸೂಕ್ತ ರೀತಿಯಲ್ಲೇ ನಡೆಯಲಿ… ದೂರುದಾರ ಗುತ್ತಿಗೆದಾರರ ಪ್ರಾಮಾಣಿಕತೆಯೂ ತನಿಖೆಗೆ ಒಳಗಾಗಲಿ…ಸ್ಬೂಡಾ ಅಧ್ಯಕ್ಷ ಪಟ್ಟಕ್ಕಾಗಿ ನಡೆಯುತ್ತಿರುವ ರಾಜಕಾರಣದ ಒಳ ಸಂಚೂ ಬೆತ್ತಲಾಗಲಿ…*

ಕೆಲವು ದಿನಗಳಿಂದ ಗುತ್ತಿಗೆದಾರರಾದ ಗುರುಸಾಯಿ ಮತ್ತು ಹೆಚ್.ಸಿ.ಬಸವರಾಜ್ ಚರ್ಚೆಯ ವಿಷಯವಾಗಿದ್ದಾರೆ. 2025ರ ಜುಲೈನಲ್ಲಿ ಕರ್ನಾಟಕ ಲೋಕಾಯುಕ್ತದಲ್ಲಿ ಈ ಇಬ್ಬರು ದಾಖಲಿಸಿದ ದೂರು ಫೆಬ್ರವರಿ, 2026ರಲ್ಲಿ ಒಂದು ಪಕ್ಷದ ವೇದಿಕೆಯ ಮೂಲಕ ಚರ್ಚೆಗೆ, ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದ್ದು, ಬೇರೆಯದೇ ದಿಕ್ಕಿನಲ್ಲಿ ಟೀಕೆ ಟಿಪ್ಪಣಿಗೂ ಒಳಗಾಗಿದೆ.

ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ರವರ ಅಧಿಕಾರಾವಧಿ ಇದೇ ಫೆ.28 ಕ್ಕೆ ಮುಗಿಯುತ್ತದೆ. ಅವರ ಅಧಿಕಾರದ ಕೊನೆ ಘಳಿಗೆಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷರೂ ಕಾಂಗ್ರೆಸ್ಸಿನಿಂದಲೇ ಶಾಸಕರಾಗಿದ್ದ ಮಾಜಿ ಎಂ ಎಲ್ ಎ ಕೆ.ಬಿ.ಪ್ರಸನ್ನ ಕುಮಾರ್ ರವರು ಕಳೆದ ವರ್ಷದ ಜುಲೈ ತಿಂಗಳಲ್ಲಿ ದಾಖಲಾದ ಲೋಕಾಯುಕ್ತ ದೂರನ್ನು ಈ ವರ್ಷದ ಫೆಬ್ರವರಿಯಲ್ಲಿ ಢಂ ಎನಿಸಿದ್ದು, ಸುಂದರೇಶ್ ಅವಧಿಯ 13 ಕಾಮಗಾರಿಗಳು ತನಿಖೆ ಆಗಬೇಕೆಂದು ಒತ್ತಾಯಿಸಿದ್ದು ಗರಂ ಗರಂ ಸುದ್ದಿ ಕೂಡ ಆಗಿದೆ.

ಕೆಬಿಪಿ ಆರೋಪಿಸಿರುವ 13 ಕಾಮಗಾರಿಗಳು ನನ್ನ ಕಾಲದ್ದಲ್ಲ…ನನ್ನದೇನಿದ್ದರೂ ಪಾರ್ಕುಗಳ ಅಭಿವೃದ್ಧಿ ಕಾಮಗಾರಿಗಳಷ್ಟೇ…ತನಿಖೆ ಆಗುವುದಿದ್ದರೆ ನನ್ನದಷ್ಟೇ ಯಾಕೆ? ಎಲ್ಲಾ ಅಧ್ಯಕ್ಷರ ಕಾಲದ ಕಾಮಗಾರಿಗಳ ತನಿಖೆಯೂ ಆಗಲಿ…ನನ್ನ ಅವಧಿಯಲ್ಲಿ ಭ್ರಷ್ಟಾಚಾರ ಮಾಡಿದ್ದರೆ ಅಂಥ ಅಧಿಕಾರಿಗಳು ಶಿಕ್ಷೆ ಅನುಭವಿಸುತ್ತಾರೆ ಎಂದು ಸ್ವತಃ ಹೆಚ್.ಎಸ್.ಸುಂದರೇಶ್ ಪತ್ರಿಕಾಗೋಷ್ಠಿ ಕರೆದು ಸ್ಪಷ್ಟೀಕರಣ ನೀಡಿದರೂ ಜೆಡಿಎಸ್ ನಗರ ಘಟಕ ಪ್ರತಿಭಟನೆ ಕೂಡ ಮಾಡಿತು.

2025ರ ಜುಲೈ 16ರಂದು ಗುರುಸಾಯಿ ಮತ್ತು ಬಸವರಾಜ್ ಎಂಬ ಗುತ್ತಿಗೆದಾರರು ಲೋಕಾಯುಕ್ತದಲ್ಲಿ ಸ್ಬೂಡಾದ 13 ಕಾಮಗಾರಿಗಳ ಬಗ್ಗೆ ದೂರು ದಾಖಲಿಸುತ್ತಾರೆ. ಇಲ್ಲಿ ಸ್ಬೂಡಾ ಆಯುಕ್ತರಾದಿಯಾಗಿ ಒಂದಿಷ್ಟು ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದಾರೆಂದು ಆ ದೂರಿನಲ್ಲಿದೆಯೇ ಹೊರತು ಅಲ್ಲಿ ಸ್ಬೂಡಾ ಅಧ್ಯಕ್ಷ ಸುಂದರೇಶ್ ರವರ ಹೆಸರು ಕಾಣುವುದಿಲ್ಲ. ಸುಂದರೇಶ್ ರವರ ಹೆಸರು ಈ ಹಗರಣ ಆರೋಪದಲ್ಲಿ ಮುನ್ನೆಲೆಗೆ ತರುವುದರ ಹಿಂದೆ ಸ್ಬೂಡಾ ಅಧ್ಯಕ್ಷ ಸ್ಥಾನದ ಲಾಬಿ ಅಡಗಿದೆಯೇ? ಸುಂದರೇಶ್ ಹೆಸರಿಗೆ ಮಸಿ ಬಳಿದ ಹಾಗೂ ಆಗಬೇಕು ಪ್ರಾಧಿಕಾರದ ಅಧ್ಯಕ್ಷ ಪಟ್ಟ ಅನಾಯಾಸವಾಗಿ ಜೋಳಿಗೆಗೂ ಬೀಳಬೇಕೆಂಬ ಆಟ ಆಡಲಾಗಿದೆಯೇ?ಅಂಥ ದಟ್ಟ ಅನುಮಾನಗಳು ಕೂಡ ಚರ್ಚೆಗೆ ಒಳಗಾಗಿವೆ!

ಹೇಗಿದ್ದರೂ ಸುಂದರೇಶ್ ಫೆ.28 ಕ್ಕೆ ಅಧ್ಯಕ್ಷ ಪಟ್ಟದಿಂದ ಇಳಿಯುವುದು ಖಚಿತವಾದರೂ ಈ 13 ಕಾಮಗಾರಿಗಳ ಹಗರಣದಲ್ಲಿ ಸುಂದರೇಶ್ ಹೆಸರು ತೇಲಿಬಿಡುವಂತಾಗಿದ್ದು ಯಾಕೆ?!

ಅಧಿಕಾರವುಳ್ಳ ಪಕ್ಷಗಳಲ್ಲಿ ಒಬ್ಬರ ಕಾಲು ಮತ್ತೊಬ್ಬರು ಎಳೆಯುವುದು ಸಹಜ. ಇಲ್ಲಿ ಕಾಲೆಳೆದೇ ಬೆಳೆಯುವ ಪರಂಪರೆ ಇರುತ್ತದೆ. ಅಂಥ ಪರಂಪರೆ ಮುಂದುವರೆಸುವ ಆಟ ಇಲ್ಲೂ ನಡೆಯಿತೇ?

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಭದ್ರಾವತಿಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಸಮಾರಂಭದಲ್ಲಿ ಭಾಗವಹಿಸಲು ವಯಾ ಶಿವಮೊಗ್ಗಕ್ಕೆ ಬಂದ ಸಂದರ್ಭದಲ್ಲಿ ಬಹಳಷ್ಟು ರಾಜಕಾರಣ ಗರಿಗೆದರಿತ್ತು. ಕಾರ್ಯಕ್ರಮ ಮುಗಿಸಿ ಹೊರಟಾಗ ಡಿಕೆಶಿಯವರು ಜನನಾಯಕರ ಸಂದಣಿಯಿಂದ ಸುಂದರೇಶ್ ರವರ ಜೊತೆ ಹೊರಕ್ಕೆ ಬಂದು ಏಕಾಂತವಾಗಿ ಮಾತಾಡಿದ್ದೇ ಮಾತಾಡಿದ್ದು ಸುಂದರೇಶ್ ರವರ ವಿರೋಧಿಗಳೆಲ್ಲ ಒಂದೇ ಹಡಗು ಹತ್ತಿದಂತಿದೆ! ಅಲ್ಲಿಂದ ಆರಂಭವಾಗಿದ್ದೇ ಸ್ಬೂಡಾ ಅಧ್ಯಕ್ಷರ ವಿರುದ್ಧದ ಹೋರಾಟ ಎಂಬ ಮಾತುಗಳು ಕೂಡ ಗಂಭೀರವಾಗಿಯೇ ಇವೆ.

ಗುತ್ತಿಗೆದಾರರಾಗಿರುವ ಡಿ.ಎಲ್.ಗುರುಸಾಯಿ ಮತ್ತು ಹೆಚ್.ಸಿ.ಬಸವರಾಜ ಸ್ಬೂಡಾದ ಹಲವು ಟೆಂಡರ್ ಗಳ ಭಾಗಿದಾರರು. ಬೇರೆ ಗುತ್ತಿಗೆದಾರರಿಗಿಂತ ಹೆಚ್ಚಿನ ಮೊತ್ತಕ್ಕೆ ಟೆಂಡರ್ ಸಲ್ಲಿಸಿದ್ದರ ಪರಿಣಾಮ ಕಡಿಮೆ ಮೊತ್ತದ ಟೆಂಡರ್ ದಾರರಿಗೆ ಕೆಪಿಪಿಪಿ ನಿಯಮಗಳಂತೆ ಕಾಮಗಾರಿ ದಕ್ಕಿದೆ. ಆದರೆ, ಈ ಗುತ್ತಿಗೆದಾರರು , ಕಡಿಮೆ ದರ ಸಲ್ಲಿಸಿ ಗೆದ್ದ ಗುತ್ತಿಗೆದಾರರ ಟೆಂಡರ್ ರದ್ದು ಪಡಿಸಿ ಮರು ಟೆಂಡರ್ ಕರೆಯಲು ಕೋರಿ ಅರ್ಜಿ ಸಲ್ಲಿಸುತ್ತಾರೆ. ಇದಕ್ಕೆ ಕೆಪಿಪಿಪಿ ನಿಯಮಾವಳಿ ಅವಕಾಶ ಕಲ್ಪಿಸಿಕೊಡುತ್ತಾ?

ಸ್ಬೂಡಾ ಮೇಲೆ ಇವರಿಗೆ ಪ್ರೀತಿ ಇದ್ದಿದ್ದರೆ ತಮಗೆ ಕಾಮಗಾರಿಗಳು ಸಿಗಲಿಲ್ಲವೆಂದು ಸಿಗದ ದ್ರಾಕ್ಷಿ ಹುಳಿ ಎಂಬಂತೆ ವರ್ತಿಸುತ್ತಿದ್ದರಾ? ಇವರಿಗೆ ಟೆಂಡರ್ ಸಲ್ಲಿಸಿದ ಕಾಮಗಾರಿಗಳೆಲ್ಲ ಸಿಕ್ಕಿಬಿಟ್ಟಿದ್ದರೆ ಲೋಕಾಯುಕ್ತದ ಮೆಟ್ಟಿಲು ಹತ್ತುತ್ತಿದ್ದರಾ?

ಇತ್ತೀಚೆಗೆ ಪ್ರವರ್ಗ 2ಎ ಅಡಿಯಲ್ಲಿ ಟೆಂಡರ್ ಆಹ್ವಾನಿಸಿದ್ದ ರಸ್ತೆ ಕಾಮಗಾರಿಗೂ ಗುರುಸಾಯಿ ಏಕಮಾತ್ರ ಬಿಡ್ ಸಲ್ಲಿಸಿದ್ದರೆಂಬ ಮಾಹಿತಿಯಿದೆ. ಈ ಟೆಂಡರ್ ಸಿಂಗಲ್ ಟೆಂಡರ್ ಆಗಿದ್ದರಿಂದ ಸರ್ಕಾರದ ಸುತ್ತೋಲೆಯನ್ವಯ 1ನೇ ಕರೆ ಟೆಂಡರ್ ರದ್ದುಪಡಿಸಿ 2ನೇ ಕರೆ ಟೆಂಡರ್ ಆಹ್ವಾನಿಸಲಾಗಿದ್ದು ಸುಳ್ಳೇ ಎಂಬುದನ್ನು ಗುತ್ತಿಗೆದಾರ ಗುರುಸಾಯಿ ಸ್ಪಷ್ಟಪಡಿಸಬೇಕಿದೆ.

ಸೌ ಚೂಹೇ ಖಾಕೆ ಬಿಲ್ಲಿ ಹಜ್ ಕು ಚಲೀ ಎಂಬಂತೆ ಗುತ್ತಿಗೆದಾರರ ಹೋರಾಟದ ಹಿಂದಿನ ಪ್ರಾಮಾಣಿಕತೆಯ ಆಳವನ್ನೂ ನಾವು ನೋಡಬೇಕಿದೆ. ಇದನ್ನೇ ಬ್ರಹ್ಮಾಸ್ತ್ರವಾಗಿಸಿಕೊಂಡು ಅಧಿಕಾರಿಗಳಿಗೆ ಭಯಬೀಳಿಸುವ
ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ…

ಭ್ರಷ್ಟಾಚಾರದ ಆರೋಪಗಳಿಗೆ ಒಳಗಾಗಿರುವ ಕಾಮಗಾರಿಗಳ ತನಿಖೆ ಸೂಕ್ತ ರೀತಿಯಲ್ಲೇ ನಡೆಯಲಿ…ಹಾಗೇ, ದೂರುದಾರರ ಪ್ರಾಮಾಣಿಕತೆಯೂ ತನಿಖೆಗೆ ಒಳಗಾಗಲಿ…ಸ್ಬೂಡಾ ಅಧ್ಯಕ್ಷ ಪಟ್ಟಕ್ಕಾಗಿ ನಡೆಯುತ್ತಿರುವ ರಾಜಕಾರಣದ ಒಳ ಸಂಚೂ ಬೆತ್ತಲಾಗಲಿ…

– *ಶಿ.ಜು.ಪಾಶ*