*ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರನ್ನು ಭೇಟಿ ಮಾಡಿದ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ* *ಶಿವಮೊಗ್ಗವೂ ಸೇರಿದಂತೆ ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಚರ್ಚೆ*

*ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರನ್ನು ಭೇಟಿ ಮಾಡಿದ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ*

*ಶಿವಮೊಗ್ಗವೂ ಸೇರಿದಂತೆ ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಚರ್ಚೆ*

ಕುವೆಂಪು ವಿವಿ ಓಬಿಸಿ ವಿದ್ಯಾರ್ಥಿ ವಸತಿ ಗೃಹ ನಿರ್ಮಾಣಕ್ಕೆ ಯುಜಿಸಿ ವಿಶೇಷ ಅನುದಾನ ಬಿಡುಗಡೆಗೊಳಿಸಲು ಸಂಸದ ಬಿ.ವೈ. ರಾಘವೇಂದ್ರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರನ್ನು ಇಂದು ದೆಹಲಿಯಲ್ಲಿ ಭೇಟಿ ಮಾಡಿ ಒತ್ತಾಯಿಸಿದರು.

ಧರ್ಮೇಂದ್ರ ಪ್ರಧಾನ ಅವರನ್ನು ಭೇಟಿ ಮಾಡಿದ ಅವರು, ಶಿವಮೊಗ್ಗ ಮತ್ತು ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದರು.

ಕುವೆಂಪು ವಿಶ್ವವಿದ್ಯಾಲಯದ ಸುಮಾರು 3,000 ಗ್ರಾಮೀಣ ಮತ್ತು ಓಬಿಸಿ ವಿದ್ಯಾರ್ಥಿಗಳಿಗೆ ಗಂಭೀರ ವಸತಿ ಸಮಸ್ಯೆ ಎದುರಾಗುತ್ತಿರುವುದರಿಂದ, ಓಬಿಸಿ ವಿದ್ಯಾರ್ಥಿಗಳ ವಸತಿ ಗೃಹ ನಿರ್ಮಾಣಕ್ಕೆ ಯುಜಿಸಿ ವಿಶೇಷ ಅನುದಾನ ಮಂಜೂರು ಮಾಡುವಂತೆ ವಿನಂತಿಸಿದರು.

ಶಿವಮೊಗ್ಗದ ಕೇಂದ್ರ ವಿದ್ಯಾಲಯದಲ್ಲಿ ಎಲ್ಲಾ ತರಗತಿಗಳಿಗೆ ಎರಡು ಹೆಚ್ಚುವರಿ ಸೆಕ್ಷನ್‌ಗಳನ್ನು ಅನುಮೋದಿಸಲಾಗಿದೆ; ಇದಕ್ಕಾಗಿ ಶಾಶ್ವತ ಕಟ್ಟಡಗಳು ಮತ್ತು ಹೊಸ ಮೂಲಸೌಕರ್ಯ ಒದಗಿಸಲು ಸಹಕಾರ ಕೋರಿ ಮನವಿ ಮಾಡಿದರು.

ಕರ್ನಾಟಕದ ಏಕೈಕ ಸಂಸ್ಕೃತ ಭಾಷಾಭಿಮಾನಿ ಗ್ರಾಮವಾದ ಮತ್ತೂರು–ಹೊಸಳ್ಳಿಯಲ್ಲಿ ರಾಷ್ಟ್ರೀಯ ಆದರ್ಶ ವೇದ ವಿದ್ಯಾಲಯ ಸ್ಥಾಪನೆಗೆ ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಸ್ತಾವನೆಯನ್ನು ಅನುಮೋದಿಸಲು ಬೇಡಿಕೆ ಇಟ್ಟರು.

2009 ರ ಪೂರ್ವದಲ್ಲಿ ಎಂ.ಫಿಲ್ ಪದವಿ ಪಡೆದ, 10–25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ Guest Lecturers‌ರ ಪದವಿಯನ್ನು NET ಸಮಾನವಾಗಿ ಪರಿಗಣಿಸಲು, ಮಹಾರಾಷ್ಟ್ರ ಸರ್ಕಾರದ ಉದಾಹರಣೆಯನ್ನು ಅನುಸರಿಸಿ ಮಾನ್ಯತೆ ನೀಡುವಂತೆ ಮನವಿ ಮಾಡಿದರು.

PM POSHAN ಯೋಜನೆಯ ಅಡಿಯಲ್ಲಿ ಕೆಲಸ ಮಾಡುವ 25 ಲಕ್ಷಕ್ಕೂ ಹೆಚ್ಚು ಕುಕ್-ಕಮ್-ಹೆಲ್ಪರ್ಸ್‌ಗಳಿಗೆ 2009 ರಿಂದ ಬದಲಾಗದ ಕೇವಲ 600 ರೂ ಕೇಂದ್ರದ ಹಂಚಿಕೆ ದೊರೆಯುತ್ತಿರುವುದರಿಂದ, ಸಂಭಾವನೆ ಹೆಚ್ಚಿಸುವುದು, ಆರೋಗ್ಯ ವಿಮೆ, ಸಾಮಾಜಿಕ ಭದ್ರತೆ ಮತ್ತು ಕಾನೂನುಬದ್ಧ ಹುದ್ದೆ ನೀಡುವಂತೆ ವಿನಂತಿಸಿದರು.

ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಸೇವೆಯಲ್ಲಿ ಇದ್ದ ಶಿಕ್ಷಕರಿಗೆ TET ಕಡ್ಡಾಯವಾಗಿರುವುದರಿಂದ ಉಂಟಾದ ಆತಂಕಕ್ಕೆ ಪರಿಹಾರವಾಗಿ, TET ನಿಯಮ ಜಾರಿಗಿಂತ ಮೊದಲೇ ನೇಮಕಗೊಂಡ ಶಿಕ್ಷಕರಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಿದರು.

ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಹಿತಕ್ಕಾಗಿ ತಿಳಿಸಿದ ಎಲ್ಲಾ ವಿಷಯಗಳನ್ನು ಸಂವೇದನಾಶೀಲವಾಗಿ ಆಲಿಸಿ ಕೇಂದ್ರ ಸಚಿವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರೆಂದು ಸಂಸದ ರಾಘವೇಂದ್ರ ವಿವರಿಸಿದ್ದಾರೆ.