ಮಕ್ಕಳ ಸಮಗ್ರ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಅಗತ್ಯ : ಸ್ನೇಹಲ್ ಸುಧಾಕರ ಲೋಖಂಡೆ*

*ಮಕ್ಕಳ ಸಮಗ್ರ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಅಗತ್ಯ : ಸ್ನೇಹಲ್ ಸುಧಾಕರ ಲೋಖಂಡೆ*

ಮಕ್ಕಳಲ್ಲಿನ ವಿವಿಧ ರೀತಿಯ ಪ್ರತಿಭೆ, ಕಲೆ, ಕ್ರೀಡೆ ಹೀಗೆ ಪಠ್ಯೇತರ ಚಟುವಟಿಕೆಗಳು ಅವರ ಸಮಗ್ರ ಬೆಳವಣಿಗೆಗೆ ಪೂರಕವಾಗಿದ್ದು ಶೈಕ್ಷಣಿಕ ಚಟುವಟಿಕೆಯೊಂದಿಗೆ ಇವಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ತಿಳಿಸಿದರು.
ಜಿಲ್ಲಾಡಳಿತ, ಜಿ.ಪಂ, ಮಹಾನಗರಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಶಿವಮೊಗ್ಗ ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಇಂದು ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಿದ್ದ ಮಕ್ಕಳ ಹಬ್ಬ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಸಂಭ್ರಮದ ಮಕ್ಕಳ ಹಬ್ಬವನ್ನು ಆಚರಿಸಲಾಗುತ್ತಿದೆ. ಮಕ್ಕಳೇ ಭವಿಷ್ಯದ ಪ್ರಜೆಗಳು. ಸಾಮಾನ್ಯವಾಗಿ ವಿದ್ಯಾರ್ಥಿಗಳ ಓದಿಗೆ ಹೆಚ್ಚಿನ ಒತ್ತು ಮತ್ತು ಒತ್ತಡ ಹಾಕುತ್ತೇವೆ. ಆದರೆ ಶೈಕ್ಷಣಿಕ ಚಟುವಟಿಕೆ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳ ಕಡೆ ಸಹ ಗಮನ ಹರಿಸುವುದೂ ಬಹು ಮುಖ್ಯವಾಗುತ್ತದೆ. ಶಾಲೆಯಲ್ಲಿ ಶಿಕ್ಷಕರು ಮತ್ತು ಮನೆಗಳಲ್ಲಿ ಪೋಷಕರು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಬೇಕು. ಅವರ ಆಸಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಹಾಗೂ ಮಕ್ಕಳೂ ಸಹ ಇಂತಹ ವೇದಿಕೆಗಳ ಸದುಪಯೋಗ ಪಡೆಯಬೇಕೆಂದರು.
ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಮಾತನಾಡಿ, ನಾವು ಸಾಮಾನ್ಯವಾಗಿ ಮಕ್ಕಳ ಓದಿನ ಬಗ್ಗೆ ಮಾತ್ರ ಒತ್ತಡ ಹಾಕುತ್ತೇವೆ. ಅವರಲ್ಲಿ ಸುಪ್ತ ಪ್ರತಿಭೆ, ಸೃಜನಶೀಲತೆ ಅಡಿಗಿದೆ. ಆದ್ದರಿಂದ ಸಹ ಪಠ್ಯ ಚಟುವಟಿಕೆಗಳಾದ ಸಂಗೀತ, ಸಾಹಿತ್ಯ, ಕ್ರೀಡೆ, ನೃತ್ಯ ಇತರೆ ಪ್ರತಿಭೆಯನ್ನು ಗುರುತಿಸಿದಲ್ಲಿ ಅವರ ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ ಎಂದರು.
ರಂಗಾಯಣದ ಆಡಳಿತಾಧಿಕಾರಿ ಶೈಲಜಾ.ಎ.ಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಒತ್ತಡ ನಿರ್ವಹಣೆಗೆ ಪಠ್ಯೇರತ ಚಟುವಟಿಕೆ ಅನುಕೂಲ. ಅವರಲ್ಲಿರುವ ಪ್ರತಿಭೆಯನ್ನು ಮುಂದೆ ವೃತ್ತಿಯಾಗಿಸಬಹುದು. ರಂಗಾಯಣದಿಂದ ಯುವ ಪ್ರತಿಭೆಗಳನ್ನು ಸೆಳೆಯಲು ನಾಟಕ, ರಂಗಗೀತೆ ಹೀಗೆ ಹಲವಾರು ತರಬೇತಿ, ಶಿಬಿರಗಳನ್ನು ನಡೆಸಲಾಗುತ್ತಿದ್ದು ಆಸಕ್ತರು ಇದರ ಸದುಪಯೋಗ ಪಡೆಯಬೇಕೆಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, 6 ರುಂದ 16 ವರ್ಷದ ಮಕ್ಕಳಲ್ಲಿನ ಸೃಜನಾತ್ಮಕತೆ, ಪ್ರತಿಭೆ ಮತ್ತು ಕಲೆಯನ್ನು ಉತ್ತೇಜಿಸಲು ಈ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಚಿತ್ರಕಲೆ, ಕವನ/ಪದ್ಯ ವಾಚನ, ಜಾನಪದ ಗೀತೆ, ಜಾನಪದ ನೃತ್ಯ, ಜಾನಪದ ಗೀತೆ ಹಾಗೂ ಸಾಮೂಹಿಕ ವಿಭಾಗದಲ್ಲಿ ಜಾನಪದ ಕ್ರೀಡೆ(ಹಗ್ಗ ಜಗ್ಗಾಟ) ಸ್ಪರ್ಧೆಗಳನ್ನು ಆಯೋಜಿಸಿದ್ದು ಎಲ್ಲ ತಾಲ್ಲೂಕುಗಳಿಂದ ಸುಮಾರು 400 ಮಕ್ಕಳು ಪಾಲ್ಗೊಂಡಿದ್ದಾರೆ ಎಂದರು.
ಮಹಿಳಾ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಿ.ಹೆಚ್.ಕೃಷ್ಣಪ್ಪ ಮಕ್ಕಳ ಹಬ್ಬದ ಕುರಿತು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಾ.ಸಂತೋಷಕುಮಾರ್ , ಎಲ್ಲ ತಾಲ್ಲೂಕು ಗಳ ಸಿಡಿಪಿಒ ಗಳು, ಇತರೆ ಅಧಿಕಾರಿಗಳು, ಸಿಬ್ಬಂದಿ ಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮಕ್ಕಳ ಹಬ್ಬದಲ್ಲಿ ಮಕ್ಕಳು ವಿವಿಧ ಜಾನಪದ ಗೀತಿ, ಚಿತ್ರಕಲೆ, ಕವನ ವಾಚನ, ಜಾನಪದ ನೃತ್ಯಗಳನ್ನು ಎಲ್ಲರ ಮನ ಮುಟ್ಟುವಂತೆ ಪ್ರದರ್ಶಿಸಿದ್ದು, ಜಿ.ಪಂ ಸಿಇಓ ಜಾನಪದ ನೃತ್ಯ ಪ್ರದರ್ಶನ ವೀಕ್ಷಿಸಿ, ಮಕ್ಕಳ ಪ್ರತಿಭೆಯನ್ನು ಶ್ಲಾಘಿಸಿದರು.