ಶಿಷ್ಯನಾಗದಿದ್ದರೂ ನಮ್ಮಂತವರಲ್ಲಿ ಅಭಿಮಾನ ಮೂಡಿಸಿದ ಮೇಷ್ಟ್ರು …- ದೇಶಾದ್ರಿ ಹೊಸ್ಮನೆ ವಿಶೇಷ ಬರಹ

ಶಿಷ್ಯನಾಗದಿದ್ದರೂ ನಮ್ಮಂತವರಲ್ಲಿ
ಅಭಿಮಾನ ಮೂಡಿಸಿದ ಮೇಷ್ಟ್ರು ..

ಕೂಡಿಗೆ ಮೇಷ್ಟ್ರು ಫೆ. ೨೮ಕ್ಕೆ ಪ್ರತಿಷ್ಠಿತ ಜಿಎಸ್‌ ಎಸ್‌ ಪುರಸ್ಕಾರಕ್ಕೆ ಪಾತ್ರವಾಗುತ್ತಿದ್ದಾರೆ. ಶಿವಮೊಗ್ಗದ ರಾಷ್ಟ್ರ ಕವಿ ಜಿ.ಎಸ್ . ಶಿವರುದ್ರಪ್ಪ ಪ್ರತಿಷ್ಠಾನವೂ ಈ ಪುರಸ್ಕಾರಕ್ಕೆ ಅವರನ್ನು ಆಯ್ಕೆ ಮಾಡಿದ್ದು ಸಂತಸ ತಂದಿದೆ. ಪ್ರಶಸ್ತಿ-ಪುರಸ್ಕಾರಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಒಂದ್ರೀತಿಯ ತಾತ್ಸಾರ, ವಾಕರಿಕೆ, ಬೇಸರ, ಭಿನ್ನಾಭಿಪ್ರಾಯಗಳೇ ತುಂಬಿಕೊಂಡಿದ್ದಾಗ್ಯೂ, ಕೂಡಿಗೆ ಅವರ ಆಯ್ಕೆ ಬಗೆಗೆ ಇದುವರೆಗೂ ಯಾವ ಆಕ್ಷೇಪಣೆಗಳು ವ್ಯಕ್ತವಾಗಿಲ್ಲ. ಇದು ನಿಜಕ್ಕೂ ಸಮಾಧಾನಕರ ಸಂಗತಿ. ಅದರರ್ಥ ಕೂಡಿಗೆ ಯವರು ಇದಕ್ಕೆ ಅರ್ಹರು ಎನ್ನುವುದರ ಜತೆಗೆ ಆ ಪುರಸ್ಕಾರದ ಮೌಲ್ಯವನ್ನು ಹೆಚ್ಚಿಸಿದ್ದಾರೆನ್ನುವುದು ವಾಸ್ತವ. ಇನ್ನು ಕೂಡಿಗೆ ಮೇಷ್ಟ್ರಿಗೆ ನಾನೇನು ಶಿಷ್ಯನಲ್ಲ. ಅವರ ಪಾಠಗಳಿಗೆ ತರಗತಿಗಳಲ್ಲೂ ಕುಳಿತಿಲ್ಲ. ಅದ್ಯಾಕೋ ನನಗೆ ವಿಶ್ವ ವಿದ್ಯಾನಿಲಯದ ಮೆಟ್ಟಿಲು ಹತ್ತುವ ಅವಕಾಶ ಕೂಡಿ ಬರಲಿಲ್ಲ. ಅರ್ಧಬರ್ಧ ಓದಿ, ಪತ್ರಕರ್ತನಾದ ನನಗೆ ಕೂಡಿಗೆ ಅವರು ಪರಿಚಯವಾಗಿದ್ದು ಸಂಘಟನೆಯ ಚಟುವಟಿಕೆಗಳ ಮೂಲಕವೇ ಎನ್ನುವುದು ವಿಶೇಷ.

ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದಾಗ ನಾನು ಪ್ರಗತಿಪರ ವಿದ್ಯಾರ್ಥಿ ಕೇಂದ್ರದ ಸದಸ್ಯನಾಗಿದ್ದೆ. ಆ ದಿನಗಳಲ್ಲಿ ವಿಮುಕ್ತಿ ಮಾಸ ಪತ್ರಿಕೆಯು ಮುದ್ರಣಗೊಂಡು ಬಂದ ಹೊತ್ತಿಗೆ ವಿಶ್ವ ವಿದ್ಯಾಲಯದ ಕಡೆಗೆ ಹೋಗುತ್ತಿದ್ದೆ. ಗೆಳೆಯರು, ಹಿತೈಷಿಗಳು , ಮಾರ್ಗದರ್ಶಕರೂ ಆದ ದೇವೇಂದ್ರಪ್ಪನವರು ಊರಲ್ಲಿಲ್ಲದಿದ್ದಾಗ, ವಿವಿಯ ಪ್ರಗತಿಪರ ಪ್ರಾಧ್ಯಾಪಕರಿಗೆ ವಿಮುಕ್ತಿ ತಲುಪಿಸಿ, ಅವರಿಂದ ಹಣ( ವಿಮುಕ್ತಿ ಶುಲ್ಕ) ಪಡೆದು ಬರುವ ಕೆಲಸ ನನ್ನ ಮೇಲಿರುತ್ತಿತ್ತು. ಆ ದಿನಗಳಲ್ಲಿಯೇ ನನಗೆ ವಿಶ್ವ ವಿದ್ಯಾಲಯದಲ್ಲಿ ಕೂಡಿಗೆ ಸರ್‌, ಚೆನ್ನಿ ಸರ್‌, ರಾಜರಾಂ ಸರ್‌, ಕೇಶವ ಶರ್ಮ ಸರ್‌ ಸೇರಿ ಹಲವು ಪ್ರಾಧ್ಯಾಪಕರು, ಸಿಬ್ಬಂದಿಗಳು ಪರಿಚಯವಾಗಿದ್ದು. ಗ್ರಂಥಾಲಯ ವಿಭಾಗದಲ್ಲಿ ಮಲ್ಲಿನಾಥ್‌ ಅಂತ ಇದ್ದರು. ಅವರು ತುಂಬಾ ಸಂಭಾವಿತ ಮನುಷ್ಯ. ವಿಮುಕ್ತಿ ಬರುವುದನ್ನೇ ಕಾಯುತ್ತಿದ್ದರು. ಅದನ್ನು ಪಡೆಯುತ್ತಿದ್ದಂತೆಯೇ ಸಂಭ್ರಮಪಟ್ಟು, ಟೀ -ಕಾಫಿಗೆ ಹೋಟೆಲ್‌ ಕಡೆಗೆ ಕರೆದುಕೊಂಡು ಹೋಗುತ್ತಿದ್ದರು. ಉಳಿದವರ ಪ್ರೀತಿಯೂ ಹಾಗೆಯೇ ಇತ್ತು. ಅಷ್ಟೇ ಕಾಳಜಿವಹಿಸಿ, ಸಂಘಟನೆ ಚಟುವಟಿಕೆಗಳ ಬಗ್ಗೆ ಚರ್ಚಿಸುತ್ತಿದ್ದದ್ದೀಗ ಇತಿಹಾಸ.

ವಿವಿ ಹಾಸ್ಟೇಲ್‌ ನಲ್ಲಿ ಆಗ ಸಾಕಷ್ಟು ಗೆಳೆಯರಿದ್ದರು. ನನ್ನ ಆತ್ಮೀಯ ಗೆಳೆಯ ರಾಘವೇಂದ್ರ ತೋಗರ್ಸಿ, ತುಮುರಿ ಸತ್ಯನಾರಾಯಣ, ಪರಮೇಶ್ವರ, ದುರ್ಗದ ಚಂದ್ರಪ್ಪ ಸೇರಿ ಹಲವರು ಸಂಘಟನೆಯ ಸಿಂಪಥೈಸರ್‌ ಆಗಿದ್ದರು. ಅವರಲ್ಲಿ ಬಹುತೇಕರು ಕೂಡಿಗೆ ಅವರ ಶಿಷ್ಯರಾಗಿದ್ದರು. ಅವರನ್ನೂ ಭೇಟಿ, ಮಾಡಿ ಮಾತುಕತೆ ನಡೆಸಿ ಹೊರಡುವುದು, ಇಲ್ಲವೇ ಸಮಯವಿದ್ದರೆ ಹಾಸ್ಟೇಲ್‌ ನಲ್ಲಿಯೇ ಒಂದಿನ ಉಳಿದುಕೊಳ್ಳುವುದು ಸಾಮಾನ್ಯವಾಗಿತ್ತು. ಆ ದಿನಗಳಲ್ಲಿಯೇ ಕೂಡಿಗೆ ಸರ್‌ ಅವರನ್ನು ನಾನು ಹತ್ತಿರದಿಂದ ನೋಡಿದ್ದೆ. ಆಗಲೇ ಅವರು ಜಿಲ್ಲೆಯ ಪ್ರಗತಿಪರ ವಿಚಾರಧಾರೆಯ ಸಂಘಟನೆಗಳ ಜತೆಗೆ ಒಡನಾಟ ಹೊಂದಿದ್ದರು. ನೆಲ-ಜಲ, ಭಾಷೆ ವಿಚಾರಕ್ಕೆ ಯಾವುದೇ ಸಭೆ -ಸಮಾರಂಭ ನಡೆದರೂ ಅಲ್ಲಿಗೆ ಹಾಜರಿರುತ್ತಿದ್ದರು. ವಿಶೇಷವಾಗಿ ಆಗ ಅವರು ಜಿಲ್ಲೆಯ ಎಡಪಂಥೀಯ ಸಂಘಟನೆಗಳ ಜತೆಗೆ ಹೆಚ್ಚು ಸಂಪರ್ಕ ಹೊಂದಿದ್ದರು. ಹಾಗಾಗಿಯೇ ಆಗ ಅವರು ನಮ್ಮನ್ನು ಕೂಡ ಅಷ್ಟೇ ಕಾಳಜಿ ವಹಿಸಿ ಮಾತನಾಡಿಸುತ್ತಿದ್ದರು. ಹಾಗೊಂದು ಬೆಸುಗೆ ಮಾತ್ರವೇ ಅವರೊಂದಿಗಿತ್ತು.

ಒಮ್ಮೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಸಾಹಿತಿ ವಸುದೇವ ಭೂಪಾಳಂ ಅವರ ʼದೇವರು ಸತ್ತ ʼ ಕೃತಿ ಕುರಿತು ವಿಚಾರ ಸಂಕಿರಣ ಇತ್ತು. ಅಲ್ಲಿಗೆ ಕೂಡಿಗೆ ಅವರು, ಅವರೊಂದಿಗೆ ʼತರಂಗʼ ವಾರ ಪತ್ರಿಕೆ ಆಗಿನ ಸಂಪಾದಕರಾಗಿದ್ದ ಸಂತೋಷ್‌ ಕುಮಾರ್‌ ಗುಲ್ವಾಡಿ ಅತಿಥಿಗಳಾಗಿ ಭಾಗವಹಿಸಿದ್ದರು. ಚರ್ಚೆ ತುಂಬಾ ಸ್ವಾರಸ್ಯಕರವಾಗಿತ್ತು. ಕೂಡಿಗೆ ಅವರು ಎಡಪಂಥೀಯ ವಿಚಾರಧಾರೆಯಲ್ಲಿ ಗುರುತಿಸಿಕೊಂಡವರು, ಅತ್ತ ಗುಲ್ವಾಡಿ ಅವರು ಬಲಪಂಥೀಯ ವಿಚಾರವನ್ನು ಪ್ರಚುರಪಡಿಸುತ್ತಿದ್ದರು. ಹಾಗಾಗಿ ಇಂದ್ರೀತಿ ಇಬ್ಬರ ನಡುವೆ ಜುಗಲ್‌ ಬಂಧಿಯೇ ಏರ್ಪಟ್ಟಿತ್ತು. ವಿಚಾರ ಮಂಡನೆಯ ವೇಳೆ ಸಂತೋಷ್‌ ಕುಮಾರ್‌ ಗುಲ್ವಾಡಿ ಅವರು ಮಾತನಾಡುತ್ತಾ, ಸಾಹಿತಿ ವಸುದೇವ ಭೂಪಾಳಂ ಅವರು ದೇವರು ಸತ್ತ ಎಂದು ಕಾದಂಬರಿ ಬರೆದಿದ್ದಾರೆಂದರೆ ಅವರು ಕೂಡ ದೇವರು ಇದ್ದ ಎಂದು ನಂಬಿದ್ದರೆಂದು ವಾದ ಮಂಡಿಸಿ, ಅಲ್ಲಿದ್ದ ಜನರನ್ನೇ ಗೊಂದಲಕ್ಕೆ ತಳ್ಳಿ ಬಿಟ್ಟರು. ಇದಕ್ಕೆ ಕೂಡಿಗೆ ಅವರು ಸರಿಯಾದ ಕೌಂಟರ್‌ ನೀಡುವಲ್ಲಿ ಎಡವಿದರು. ವಿಚಾರ ಸಂಕಿರಣ ಮುಗಿದ ಮರುದಿನವೇ ನಾನು ಕೂಡಿಗೆ ಸರ್‌ ಅವರ ವಿವಿ ವಿಳಾಸಕ್ಕೆ ಸಣ್ಣದೊಂದು ಪತ್ರ ಬರೆದು, ನನ್ನ ಅನಿಸಿಕೆ ಹಂಚಿಕೊಂಡಿದ್ದೆ.

ಎರಡ್ಮೂರು ದಿನದಲ್ಲಿಯೇ ಅದಕ್ಕವರು ಒಂದು ಸುದೀರ್ಘ ಪತ್ರ ಬರೆದು, ನನ್ನಿದ್ದ ಪತ್ರಿಕೆಯ ವಿಳಾಸಕ್ಕೆ ಕಳುಹಿಸಿದ್ದರು. ಅದರಲ್ಲಿ ಅವರು ಅನೇಕ ಸಂಗತಿಗಳನ್ನು ಹಂಚಿಕೊಂಡಿದ್ದರು. ತಾಳ್ಮೆಯಿಂದ ಅಷ್ಟೇಲ್ಲ ವಿವರ ಬರೆದು ಪತ್ರ ಕಳುಹಿಸಿದ್ದ ಅವರ ಬಗ್ಗೆ ನನಗೆ ದೊಡ್ಡ ಅಭಿಮಾನ ಮೂಡಿತು. ಅಲ್ಲಿಂದ ಕೂಡಿಗೆ ಸರ್‌, ಅಭಿಮಾನದ ಮೇಷ್ಟೇ ಆದರು. ನಾನು ಕಂಡಂತೆ ಕೂಡಿಗೆ ಸರ್‌ ಅವರದ್ದು ಸ್ವಲ್ಪ ಅಳುಕಿನ ಮನಸ್ಸು. ತಾವಾಗಿಯೇ ಬಂದು ವೇದಿಕೆ ಹತ್ತುವುದಾಗಲಿ, ತಮ್ಮನ್ನೂ ಸಭೆ- ಸಮಾರಂಭಗಳಿಗೆ ಆಹ್ವಾನಿಸುವಂತೆ ದುಂಬಾಲು ಬೀಳುವುದಾಗಲಿ ಎಂದಿಗೂ ಮಾಡಿದವರಲ್ಲ. ಸಂಘಟನೆಯವರು ಅಭಿಮಾನದಿಂದ ಕರೆದಾಗ ಮಾತ್ರ ಬಂದು ಮಾತನಾಡುವುದನ್ನು ನಾನು ಕಂಡಿದ್ದೆ. ಕೆಲವರು ತಾವೇ ಮಹಾನ್‌ ಚಿಂತಕರು ಅಂತ ಪೋಸು ಕೊಡುವಾಗ, ಕೂಡಿಗೆಯವರು ವಿವಿಯ ತಮ್ಮ ಕಚೇರಿಯಲ್ಲಿಯೇ ಕುಳಿತು, ತಾವಾಯಿತು, ತಮ್ಮ ಕೆಲಸವಾಯಿತು ಅಂತಲೇ ಇದ್ದರು. ಆ ಮೂಲಕವೇ ತಮ್ಮದೇ ಶಿಷ್ಯ ಬಳಗವನ್ನು ಸೃಷ್ಟಿಸುವ ಕಾಯಕದಲ್ಲಿ ಬ್ಯುಸಿ ಆಗಿದ್ದರು.

ಅವರಲ್ಲಿ ಆಗ ಪಾಠ ಕೇಳಿ, ವಿವಿಯಿಂದ ಹೊರ ಬಂದ ಅನೇಕ ಗೆಳೆಯರು ಅವರ ಬಗ್ಗೆ ತುಂಬಾ ಅಭಿಮಾನದಿಂದ ಮಾತನಾಡುತ್ತಿದ್ದರು. ತಮ್ಮೊಳಗಿನ ಪ್ರಗತಿಪರ ವಿಚಾರಗಳಿಗೆ ಕೂಡಿಗೆ ಸರ್‌ ಕಾರಣವೆಂದು ಹೆಮ್ಮೆ ಪಡುತ್ತಿದ್ದರು. ಇತ್ತೀಚೆಗೆ ಆನವಟ್ಟಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕರಾದ ಕರಿಬಸಪ್ಪ ಸರ್‌, ಕೂಡ ಅವರ ಬಗ್ಗೆ ಹೀಗೆ ಅಭಿಮಾನದಿಂದ ಮಾತನಾಡಿದ್ದರು. ಕಳೆದ ಕೆಲವು ದಿನಗಳ ಹಿಂದೆ ಊರಲ್ಲಿ ಅವರು ಕುವೆಂಪು ಮಂತ್ರ ಮಾಂಗಲ್ಯದ ಒಂದು ಮದುವೆಗೆ ಕಾರಣರಾದರು. ಅವರ ಬಳಿ ಪಾಠ ಕಲಿತ ಒಬ್ಬ ವಿದ್ಯಾರ್ಥಿ ತಮ್ಮ ಪೋಷಕರ ಮನವೊಲಿಸಿ, ಊರಿನಲ್ಲಿಯೇ ಸರಳವಾಗಿ ಕುವೆಂಪು ಅವರ ಮಂತ್ರ ಮಾಂಗಲ್ಯದಡಿ ಮದುವೆ ಆಗುವ ಮೂಲಕ ತನ್ನ ಸುತ್ತಲ ಸಮಾಜಕ್ಕೆ ಮಾದರಿಯಾದ. ಆತನಿಗೆ ಅಲ್ಲಿ ಮುಖ್ಯ ಪ್ರೇರಣೆಯೇ ಪ್ರಾಧ್ಯಾಪಕರಾದ ಕರಿಬಸಪ್ಪ. ಆ ಹುಡುಗನಲ್ಲಿ ಅಂತ ವಿಚಾರ ಬಿತ್ತಿದ್ದ ಪ್ರಾಧ್ಯಾಪಕ ಕರಿಬಸಪ್ಪ ಅವರಿಗೆ ಮುಖ್ಯ ಪ್ರೇರಣೆ ಕೂಡಿಗೆ ಸರ್.‌ ಮದುವೆಯ ಕುರಿತು ಪತ್ರಿಕೆಯಲ್ಲಿ ಬಂದ ವರದಿ ನೋಡಿ, ಖುಷಿಯಾಗಿ ಕರಿಬಸಪ್ಪ ಅವರಿಗೆ ಫೋನ್‌ ಮಾಡಿ ಮಾತನಾಡಿದಾಗ, ಮೊದಲು ಅವರು ನೆನಪಿಸಿಕೊಂಡಿದ್ದು ಕೂಡಿಗೆ ಅವರನ್ನು. ಒಬ್ಬ ಪ್ರಾಧ್ಯಾಪಕ ವಿಶ್ವ ವಿದ್ಯಾನಿಲಯದಲ್ಲಿ ಕುಳಿತು ಸದ್ದಿಲ್ಲದೆ, ಪ್ರಚಾರವಿಲ್ಲದ ಮಾಡಬಹುದಾದ ದೊಡ್ಡ ಮಾದರಿ ಕೆಲಸವೇ ಇದೆ. ಅಂತಹ ಕೆಲಸವನ್ನು ಕೂಡಿಗೆ ಸರ್‌ ಮಾಡಿದ್ದಾರೆ. ಅದಕ್ಕೆ ಸಾಕ್ಷಿ ಕರಿಬಸಪ್ಪ ಸರ್‌ ಸೇರಿ ಹಲವರು. ಇಂತಹ ಮೇಷ್ಟ್ರು ಈಗ ಜಿಎಸ್‌ ಎಸ್‌ ಪುರಸ್ಕಾರಕ್ಕೆ ಪಾತ್ರರಾಗುತ್ತಿದ್ದಾರೆಂದಾಗ ನನಗೆ ಅಭಿಮಾನದಿಂದ ಅನಿಸಿದ್ದು ಇಷ್ಟು. ಇನ್ನು ಹೇಳಬಹುದಾಗಿದ್ದು ಬಹಳಷ್ಟಿರಬಹುದು. ಸದ್ಯಕ್ಕೆ ನನಗನಿಸಿದ್ದು ಇಷ್ಟು. ಕೂಡಿಗೆ ಸರ್‌ ಗೆ ಅಭಿನಂದನೆಗಳು.
………………………………
– ದೇಶಾದ್ರಿ ಹೊಸ್ಮನೆ