*ಪತ್ರಿಕಾಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ವಿವರಣೆ* *ಶ್ರೀಗಂಧ- ವಕೀಲರ ಸಂಘದಿಂದ ಡಿ.25ರಂದು ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದರಿಂದ ವಿಶೇಷ ಉಪನ್ಯಾಸ*

*ಪತ್ರಿಕಾಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ವಿವರಣೆ*

*ಶ್ರೀಗಂಧ- ವಕೀಲರ ಸಂಘದಿಂದ ಡಿ.25ರಂದು ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದರಿಂದ ವಿಶೇಷ ಉಪನ್ಯಾಸ*

ಶಿವಮೊಗ್ಗದ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ಶಿವಮೊಗ್ಗ ವಕೀಲರ ಸಂಘದ ಸಹಯೋಗದಲ್ಲಿ ಕರ್ನಾಟಕ ಉಚ್ಛ ನ್ಯಾಯಾಯಲದ ನ್ಯಾಯಮೂರ್ತಿಗಳಾದ ವಿ. ಶ್ರೀಶಾನಂದರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಡಿಸೆಂಬರ್ 25ರ ಗುರುವಾರ ಸಂಜೆ 6 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶ್ರೀಗಂಧ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಂದು ನ್ಯಾಯಮೂರ್ತಿಗಳು “ಪ್ರಾಚೀನ ಭಾರತದ ನ್ಯಾಯಾಂಗ ವ್ಯವಸ್ಥೆ” ಕುರಿತು ವಿಶೇಷವಾದ ಉಪನ್ಯಾಸ ನೀಡಲಿದ್ದಾರೆ ಎಂದರು.

ಇದೇ ಕಾರ್ಯಕ್ರಮದಲ್ಲಿ ಇತ್ತೀಚೆಗಷ್ಟೆ ಅಂತರರಾಷ್ಟ್ರೀಯ ರೋಟರಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಶಿವಮೊಗ್ಗದ ವೈದ್ಯರಾದ ಡಾ. ಪಿ. ನಾರಾಯಣ್ ಮತ್ತು ಯೋಗ ಯೂನಿವರ್ಸಿಟಿ ಆಫ್ ಅಮೇರಿಕಾ ಸಂಸ್ಥೆಯಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಖ್ಯಾತ ಯೋಗಾಚಾರ್ಯರಾದ ಡಾ. ಸಿ.ವಿ. ರುದ್ರಾರಾಧ್ಯ ಅವರನ್ನು ಸನ್ಮಾನಿಸಲಾಗುವುದು.

ಕರ್ನಾಟಕ ಸರ್ಕಾರದ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಶ್ರೀಗಂಧ ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್. ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಶ್ರೀಗಂಧ ಸಂಸ್ಥೆಯ ಖಜಾಂಚಿಗಳಾದ ಕೆ.ಇ. ಕಾಂತೇಶ್, ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷರಾದ ಬಿ.ಆರ್. ರಾಘವೇಂದ್ರ ಸ್ವಾಮಿ ಹಾಗೂ ಶ್ರೀಗಂಧ ಸಂಸ್ಥೆಯ ಸಂಚಾಲಕರಾದ ಉಮೇಶ್ ಆರಾಧ್ಯ ಅವರು ಉಪಸ್ಥಿತರಿರಲಿದ್ದಾರೆ.

ಸುಶಾಸನ್ ದಿವಸ್ ಎಂದು ದೇಶಾದ್ಯಂತ ಆಚರಿಸಲ್ಪಡುವ, ಭಾರತ ಕಂಡ ಶ್ರೇಷ್ಠ ಪ್ರಧಾನಿಗಳಲ್ಲಿ ಒಬ್ಬರಾದ ಭಾರತ ರತ್ನ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಈ ಕಾರ್ಯಕ್ರಮವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ ಎಂದರು.

ಉಪಸ್ಥಿತಿ-ಕೆ.ಈ.ಕಾಂತೇಶ್,ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ,ಉಮೇಶ್ ಆರಾಥ್ಯ,ಸುಮತೀಂದ್ರ ಆಚಾರ್,ಆಶ್ವಥ್ ನಾರಯಣ ಶೆಟ್ಚರು,ಸತ್ಯನಾರಯಣ.

*ನ್ಯಾಯಮೂರ್ತಿ ವಿ. ಶ್ರೀಶಾನಂದರ ವಿವರ;*

ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಶ್ರೀ ವೇದವ್ಯಾಸಾಚಾರ್ ಮತ್ತು ಶ್ರೀಮತಿ ಸುಧಾರಾಣಿ ದಂಪತಿಗಳ ಜ್ಯೇಷ್ಠ ಪುತ್ರ. ಬೆಂಗಳೂರು, ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಮತ್ತು ಶೇಷಾದ್ರಿಪುರಂ ಕಾಲೇಜಿನಲ್ಲಿ ಕಾನೂನು ಪದವಿ ಪಡೆದ ಶ್ರೀಯುತರು ೧೯೯೧ರಲ್ಲಿ ತಮ್ಮ ತಂದೆಯವರಾದ ಪ್ರಸಿದ್ಧ ಹಿರಿಯ ನ್ಯಾಯವಾದಿ ಜಿ. ವೇದವ್ಯಾಸಾಚಾರ್ ಮಾರ್ಗದರ್ಶನದಲ್ಲಿ ಮತ್ತು ನಂತರ ಸ್ವತಂತ್ರವಾಗಿ ಸುಮಾರು ೧೭ ವರ್ಷಗಳ ಕಾಲ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿ ತಮ್ಮ ಛಾಪನ್ನು ಮೂಡಿಸಿದ್ದರು.
ಮುಂದೆ ೨೦೦೮ ರಲ್ಲಿ, ಜಿಲ್ಲಾ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿ, ಜಿಲ್ಲಾ ನ್ಯಾಯಾಧೀಶರಾಗಿ ನೇರ-ನೇಮಕಾತಿ ಪಡೆದರು. ಕಲಬುರ್ಗಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ ಕಾರ್ಯ ಆರಂಭಿಸಿ, ನಂತರ ಕಾರವಾರ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶ, ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ, ಹಾವೇರಿ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶ, ಧಾರವಾಡ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶ, ರಾಜ್ಯ ಸಾರಿಗೆ ಮೇಲ್ಮನವಿ ಪ್ರಾಧಿಕಾರದ ಅಧ್ಯಕ್ಷ, ಕರ್ನಾಟಕ ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ (ನ್ಯಾಯಾಂಗ) ಮತ್ತು ರಿಜಿಸ್ಟ್ರಾರ್ ಜನರಲ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ನ್ಯಾಯಾಧೀಶ, ಹೀಗೆ ವಿವಿಧ ಮಹತ್ವದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದರು. ಇವರ ಸೇವಾ ಹಿರಿತನ, ಕಾರ್ಯಕ್ಷಮತೆ ಮತ್ತು ನಿಷ್ಕಳಂಕ ನ್ಯಾಯದಾನವನ್ನು ಗಮನಿಸಿ ಮಾನ್ಯ ರಾಷ್ಟ್ರಪತಿಯವರು ೨೦೨೦ರ ಮೇ ೪ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಳಿಸಿದರು.
ನಂತರ ೨೦೨೧ರಿಂದ ಖಾಯಂ ನ್ಯಾಯಮೂರ್ತಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋರ್ಟು ಅದರಲ್ಲೂ ಉಚ್ಚ ನ್ಯಾಯಾಲಯ ಎಂದರೆ ಜನಸಾಮಾನ್ಯರ ಭಾವನೆ ಮತ್ತು ಕಲ್ಪನೆಯೇ ಬೇರೆ. ಹೀಗಿರುವಾಗ ನ್ಯಾಯ ಸ್ಥಾನದಲ್ಲಿ ಮತ್ತು ಹೊರಗೂ ತಮ್ಮ ಸರಳ, ಆಪ್ತ ಮತ್ತು ಸಹಾನುಭೂತಿ ಭರಿತ ನಡವಳಿಕೆಯಿಂದ ಜನ ಸಾಮಾನ್ಯರಲ್ಲಿ ನ್ಯಾಯ ವಿತರಣಾ ವ್ಯವಸ್ಥೆಯ ಬಗ್ಗೆ ಒಂದು ಹೊಸ ಪರಿಕಲ್ಪನೆಯನ್ನೇ ಹುಟ್ಟು ಹಾಕಿದ ಮಾನ್ಯ ನ್ಯಾಯಮೂರ್ತಿಗಳು ಇಂದು, ನಾಡಿನಲ್ಲಿ, ದೇಶದಲ್ಲಿ ಮತ್ತು ವಿದೇಶದಲ್ಲಿ ಕೂಡ ಪ್ರಖ್ಯಾತರು. ವಿವಿಧ ವಿಷಯಗಳಲ್ಲಿ ಪರಿಣತಿ ಹೊಂದಿರುವ ಶ್ರೀಯುತರು, ಕೇಳುಗರ ಬುದ್ಧಿ ಮತ್ತು ಮನಸ್ಸುಗಳಿಗೆ ಮುಟ್ಟುವ, ಮನದಟ್ಟಾಗುವ ರೀತಿಯಲ್ಲಿ ತಮ್ಮ ಉಪನ್ಯಾಸ ಮತ್ತು ಭಾಷಣಗಳಿಗೆ ಹೆಸರುವಾಸಿ. ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಎಲ್ಲಾ ವರ್ಗಗಳ ವೀಕ್ಷಕರನ್ನು ಹೊಂದಿದ್ದಾರೆ. ಕಾನೂನಿನ ಜ್ಞಾನ, ಸಾಮಾನ್ಯ ಜ್ಞಾನ, ಸಾಮಾಜಿಕ ವಿದ್ಯಮಾನಗಳು, ಮಾನವಿಕ ನಡವಳಿಕೆಗಳ ಸೂಕ್ಷ್ಮ ಅಂಶಗಳು ಇವುಗಳಿಂದ ಕೂಡಿದ ಆಕರ್ಷಕ ವಕ್ತವ್ಯ ಶೈಲಿಯಿಂದ ಜನಮಾನಸದಲ್ಲಿ ವಿಶೇಷ ಅಭಿಮಾನವನ್ನು, ಅಯಾಚಿತವಾಗಿ ಗಳಿಸಿದ್ದಾರೆ.