*ಡಿಸೆಂಬರ್ 27ರಂದು ಶಿವಮೊಗ್ಗದಲ್ಲಿ ದೈವಜ್ಞ ದರ್ಶನ’ ಕಾರ್ಯಕ್ರಮ*

*ಡಿಸೆಂಬರ್ 27ರಂದು ಶಿವಮೊಗ್ಗದಲ್ಲಿ ದೈವಜ್ಞ ದರ್ಶನ’ ಕಾರ್ಯಕ್ರಮ*

ಶ್ರೀಕ್ಷೇತ್ರ ಕರ್ಕಿಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ದೈವಜ್ಞ ಬ್ರಾಹ್ಮಣ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ಹಾಗೂ ಅವರ ಉತ್ತರಾಧಿಕಾರಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮಿಗಳವರು ದೈವಜ್ಞ ಬ್ರಾಹ್ಮಣ ಸಮಾಜದ ಸಂಘಟನೆಯ ದೃಷ್ಟಿಯಿಂದ ಮತ್ತು ಉತ್ತರಾಧಿಕಾರಿಗಳಾದ ಶ್ರೀ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮಿಗಳವರನ್ನು ಪರಿಚಯಿಸಲು ರಾಜ್ಯದಾದ್ಯಂತ ‘ದೈವಜ್ಞ ದರ್ಶನ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಡಿಸೆಂಬರ್ 27ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ಎಂದು ಅಧ್ಯಕ್ಷ ಎಸ್.ಪಾಂಡುರಂಗ ಶೇಟ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.

ಅಂದು ಸಂಜೆ 4 ಗಂಟೆಗೆ ನಗರದ ಗಾಂಧಿ ಬಜಾರ್‌ನ ರಾಮಣ್ಣ ಶ್ರೇಷ್ಠಿ ಪಾರ್ಕ್ ಬಳಿ ಗುರುವರ್ಯರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಡೊಳ್ಳು, ಚಂಡೆ, ಮಂಗಳವಾದ್ಯಗಳೊಂದಿಗೆ ಭವ್ಯ ಮೆರವಣಿಗೆಯ ಮೂಲಕ ಗಾಂಧಿ ಬಜಾರ್ ಮುಖ್ಯರಸ್ತೆ, ಬಿ.ಹೆಚ್.ರಸ್ತೆ, ನೆಹರೂ ರಸ್ತೆ ಮತ್ತು ದುರ್ಗಿಗುಡಿಯ ಮೂಲಕ ದೈವಜ್ಞ ಕಲ್ಯಾಣ ಮಂದಿರಕ್ಕೆ ಕರೆತರಲಾಗುವುದು ಎಂದರು.

ದೈವಜ್ಞ ಕಲ್ಯಾಣ ಮಂದಿರದಲ್ಲಿ ಸಂಜೆ 6 ರಿಂದ ಗುರುವರ್ಯರ ಸಾನ್ನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಶ್ರೀ ಶ್ರೀಗಳವರಿಗೆ ಸಮಾಜದ ವತಿಯಿಂದ ಪಾದುಕಾ ಪೂಜೆ ನಡೆಯಲಿದೆ. ಸಭೆಯಲ್ಲಿ ಸಮಾಜದ ಸರ್ವಾಂಗೀಣ ಅಭಿವೃದ್ಧಿ, ಧಾರ್ಮಿಕ ಭಾವನೆಗಳ ಸಂವರ್ಧನೆಗಾಗಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು. ಉಭಯ ಶ್ರೀಗಳವರು ಸಮಾಜ ಬಾಂಧವರನ್ನು ಉದ್ದೇಶಿಸಿ ಆಶೀರ್ವಚಿಸಿ ಫಲಮಂತ್ರಾಕ್ಷತೆ ನೀಡಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಮಹಾಪ್ರಸಾದ ಸಂತರ್ಪಣೆ ಇರುತ್ತದೆ. ಸಮಾಜ ಬಾಂಧವರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಆರ್.ಗಿರೀಶ್, ಖಜಾಂಚಿ ಸುಬ್ರಹ್ಮಣ್ಯ.ಎಲ್., ಕಾರ್ಯದರ್ಶಿ ನಿರ್ಮಲಾಪ್ರಕಾಶ್, ಸಹಕಾರ್ಯದರ್ಶಿ ಕೆ. ರಾಘವೇಂದ್ರ, ಮಾಜಿ ಅಧ್ಯಕ್ಷರುಗಳು ಹಾಗೂ ಹಾಲಿ ನಿರ್ದೇಕರುಗಳಾದ : ಬಿಳಿಕಿ ಕೃಷ್ಣಮೂರ್ತಿ, ಹೆಚ್.ಡಿ. ಚಂದ್ರಹಾಸ್, ಕಮಲಾಕ್ಷ ಎಸ್.ಡಿ., ಮಂಜುನಾಥ ಜಿ.ಶೇಟ್, ಸಿ.ಪ್ರಕಾಶ್ ನಿರ್ದೇಶಕರುಗಳಾದ : ನಾಗರಾಜ ಎಸ್., ಸೋಮೇಶ್ ಪಿ.ಶೇಟ್, ಸಂತೋಷ್ ಜಿ., ಮೋಹನ್ ಎಂ.ಶೇಟ್, ಗಣಪತಿ ಕೆ.ಶೇಟ್ ಉಪಸ್ಥಿತರಿದ್ದರು.