ಡಿ. 28 : ರಾಜ್ಯ ಮಟ್ಟದ ಮನೋಧರ್ಮ ಸಂಗೀತ ಸ್ಪರ್ಧೆ
ಡಿ. 28 : ರಾಜ್ಯ ಮಟ್ಟದ ಮನೋಧರ್ಮ ಸಂಗೀತ ಸ್ಪರ್ಧೆ
ಶಿವಮೊಗ್ಗ : ನಗರದ ಎಸ್ ಪಿ ಎಂ ರಸ್ತೆಯಲ್ಲಿರುವ ಶ್ರೀ ಶಾರದಾ ಸಂಗೀತ ನೃತ್ಯ ವಿದ್ಯಾಲಯದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಡಿ. 28 ರ ಭಾನುವಾರ ಕರ್ನಾಟಕ ಸಂಘದಲ್ಲಿ ರಾಜ್ಯ ಮಟ್ಟದ ಮನೋಧರ್ಮ ಸಂಗೀತ ಸ್ಪರ್ಧೆ ನಡೆಯಲಿದೆ ಎಂದು ವಿದ್ಯಾಲಯದ ಪ್ರಾಂಶುಪಾಲರಾದ ವಿದ್ವಾನ್ ಜಿ ಅರುಣ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ವಿದ್ಯಾಲಯದ ಸ್ಥಾಪಕರೂ, ಹಿರಿಯ ಸಂಗೀತ ವಿದ್ವಾಂಸರಾಗಿದ್ದ ಕೀರ್ತಿಶೇಷ ವಿದ್ವಾನ್ ಕೆ ಎಂ ಗೋಪಾಲಕೃಷ್ಣ ರವರ ಸ್ಮರಣಾರ್ಥವಾಗಿ ಈ ಸಂಗೀತ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.
ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಅಭ್ಯಾಸ ಮಾಡುತ್ತಿರುವ ಯುವ ಗಾಯಕರಿಗೆ ಬೆಳೆಸಿ ಪೋಷಿಸುವ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ 26 ವರ್ಷದೊಳಗಿನ ಮಕ್ಕಳಿಗಾಗಿ ಈ ಸ್ಪರ್ಧೆ ನಡೆಯಲಿದೆ ಎಂದ ಅವರು, ಅಂದು ಬೆಳಿಗ್ಗೆ 9-00 ಗಂಟೆಯಿಂದ ಆರಂಭವಾಗುವ ಈ ಸಂಗೀತ ಸ್ಪರ್ಧೆಯಲ್ಲಿ ಒಬ್ಬೊಬ್ಬ ಸ್ಪರ್ಧಿಯು 40 ನಿಮಿಷದ ಅವಧಿಯಲ್ಲಿ ಸಂಗೀತ ಕಛೇರಿ ನಡೆಸಿ ಕೊಡುವುದರ ಮೂಲಕ ವರ್ಣ, ರಾಗಗಳ ಆಲಾಪನೆ, ಕೃತಿ ಪ್ರಸ್ತುತಿ, ನೆರವಲ್ ಮತ್ತು ಸ್ವರ ಪ್ರಸ್ತಾರ ಮುಂತಾದವುಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದು ಹೇಳಿದರು.
ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ, ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ ಹಲವು ಯುವ ಕಲಾವಿದರು ಪಾಲ್ಗೊಳ್ಳಲಿದ್ದಾರೆ.
ಸಂಗೀತಾಸಕ್ತರು, ಶ್ರೋತೃಗಳು, ಸಂಗೀತ ಕಲಿಸುತ್ತಿರುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂಗೀತವನ್ನು ಆಸ್ವಾದಿಸುವ ಜೊತೆಗೆ ಯುವ ಗಾಯಕರನ್ನು ಪ್ರೋತ್ಸಾಹಿಸಬೇಕೆಂದು ವಿದ್ಯಾಲಯದ ಪ್ರಾಂಶುಪಾಲರಾದ ವಿದ್ವಾನ್ ಶ್ರೀ ಜಿ ಅರುಣ್ ಕುಮಾರ್ ಕೋರಿದ್ದಾರೆ.
ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ : 98444-44820 ಗೆ ಸಂಪರ್ಕಿಸಬಹುದು..


