ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಾರ್ವಜನಿಕ ಸೇವೆ ಮಾಡಲು ಸರ್ಕಾರಿ ನೌಕರರು ಮುಂದಾಗಲಿ- ರಾಜ್ಯಾಧ್ಯಕ್ಷ ಷಡಾಕ್ಷರಿ
ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಾರ್ವಜನಿಕ ಸೇವೆ ಮಾಡಲು ಸರ್ಕಾರಿ ನೌಕರರು ಮುಂದಾಗಲಿ- ರಾಜ್ಯಾಧ್ಯಕ್ಷ ಷಡಾಕ್ಷರಿ
ಸರ್ಕಾರಿ ನೌಕರರಾದ ನಾವುಗಳು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಾರ್ವಜನಿಕರ ಕೆಲಸವನ್ನು ತ್ವರಿತಗತಿಯಲ್ಲಿ ಮಾಡಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಶಿಕ್ಷಣ ಇಲಾಖೆಯ ಲಿಪಿಕ ನೌಕರರ ಸಂಘ, ವಾಹನ ಚಾಲಕರ ಸಂಘ ಹಾಗೂ ಡಿ.ಗ್ರೂಪ್ ನೌಕರರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಮಾನಗಳಲ್ಲಿ ಇಡೀ ದಿನ ಆಗುವ ಕೆಲಸವನ್ನು ಒಂದೇ ಗಂಟೆಯಲ್ಲಿ ಮಾಡಿ ಮುಗಿಸುವಂತಹ ಅವಶ್ಯಕತೆ ಇದೆ. ಇದಕ್ಕಾಗಿ ಪ್ರತಿಯೊಬ್ಬ ನೌಕರನೂ ಆಧುನಿಕ ತಂತ್ರಜ್ಞಾನದ ಜ್ಞಾನವನ್ನು ಪಡೆದುಕೊಳ್ಳಬೇಕು,. ಆಗ ಮಾತ್ರ ಕೆಲಸದಲ್ಲಿ ವೇಗವನ್ನು ಪಡೆಯಬಹುದು ಎಂದರು.
ಆರ‍್ಟಿಫಿಶಿಯಲ್ ಇಂಟಲಿಜೆನ್ಸಿ ಈಗ ಎಲ್ಲಾ ಕಡೆ ಬಳಸಿಕೊಳ್ಳಲಾಗುತ್ತಿದೆ. ಇದು ಇಲಾಖಾ ವ್ಯಾಪ್ತಿಗೆ ಬಂದರೆ ಸರ್ಕಾರಕ್ಕೆ ನೌಕರರ ಅವಶ್ಯಕತೆಯೇ ಬರುವುದಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸುವ ಸಾಧ್ಯತೆ ಇದೆ. ಆದ್ದರಿಂದ ನೌಕರರ ಸಮೂಹ ಕಚೇರಿಗೆ ಅಲೆಸದೇ ಕೆಲಸವನ್ನು ಮಾಡಿಕೊಡಬೇಕು ಎಂದರು.
ಸರ್ಕಾರಿ ನೌಕರರಿಗೆ ನಮ್ಮ ಸಂಘಟನೆ ಸರ್ಕಾರದೊಂದಿಗೆ ಮಾತುಕತೆ ಮೂಲಕವೇ ೭ನೇ ವೇತನ,ಆರೋಗ್ಯ ಸಂಜೀವಿನಿಸೇರಿದಂತೆ ಅನೇಕ ಸವಲತ್ತುಗಳನ್ನು ಕೊಡಿಸಿದೆ. ಎನ್‌ಪಿಎಸ್‌ನ್ನು ರದ್ದುಪಡಿಸಿ ಒಪಿಎಸ್‌ನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಮಾತುಕತೆ ನಡೆದಿದೆ. ಇವೆಲ್ಲದಕ್ಕೂ ಕಾರಣ ಸಂಘಟನೆ ಎಂದರು.
ಕಾರ್ಯಕ್ರಮದಲ್ಲಿ ಬೋಧಕೇತರ ನೌಕರರ ಸಂಘದ ರಾಜ್ಯಾಧ್ಯಕ್ಷ ನವೀನ್, ಉಪಾಧ್ಯಕ್ಷ ದೇವರಾಜ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮೋಹನ್ ಕುಮಾರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ದಬಸಪ್ಪ, ಡಿಡಿಪಿಐ ಮಂಜುನಾಥ್, ಬಿಇಓ ರಮೇಶ್, ತಾಲೂಕಿನ ಇತರೆ ಬಿಇಓಗಳು ಇತರರು ಉಪಸ್ಥಿತರಿದ್ದರು.


