ಕುವೆಂಪು ವಿವಿಯಲ್ಲಿ ಭಾಷಾಂತರ ಕುರಿತು ಒಂದು ವಾರದ ಕಾರ್ಯಾಗಾರ* *ಶ್ರೇಷ್ಠ ವಿಚಾರಗಳು ದೇಶ, ಭಾಷೆಗಳ‌ ಗಡಿ ದಾಟಲು ಭಾಷಾಂತರ ಅಗತ್ಯ: ಪ್ರೊ.‌ ರಾಜೇಂದ್ರ ಚೆನ್ನಿ*

 

*ಕುವೆಂಪು ವಿವಿಯಲ್ಲಿ ಭಾಷಾಂತರ ಕುರಿತು ಒಂದು ವಾರದ ಕಾರ್ಯಾಗಾರ*

*ಶ್ರೇಷ್ಠ ವಿಚಾರಗಳು ದೇಶ, ಭಾಷೆಗಳ‌ ಗಡಿ ದಾಟಲು ಭಾಷಾಂತರ ಅಗತ್ಯ: ಪ್ರೊ.‌ ರಾಜೇಂದ್ರ ಚೆನ್ನಿ*

ಶಂಕರಘಟ್ಟ, ಫೆ. 28: ಪ್ರಸ್ತುತ ಮಾಹಿತಿ ಯುಗದಲ್ಲಿ ವಿವಿಧ ವಿಚಾರಗಳನ್ನು ದೇಶ, ಭಾಷೆ, ಗಡಿಗಳಿಂದಾಚೆಗೆ ಜಗತ್ತಿನಾದ್ಯಂತ ಪ್ರಸರಣೆ ಮಾಡಲು ಭಾಷಾಂತರ ಪ್ರಕ್ರಿಯೆ ಅತ್ಯಗತ್ಯ. ಜ್ಞಾನದ ಸೃಷ್ಟಿ ಹಾಗೂ ಅಭಿವೃದ್ಧಿಗೂ ಅನುವಾದ ಅವಶ್ಯಕ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ರಾಜೇಂದ್ರ ಚೆನ್ನಿ ಹೇಳಿದರು.

ಕುವೆಂಪು ವಿಶ್ವವಿದ್ಯಾಲಯದ ಪ್ರೊ. ವೆಂಕಟರಾಮಯ್ಯ ಸಂಭಾಂಗಣದಲ್ಲಿ ಬುಧವಾರದಂದು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (CIIL) ಹಾಗೂ ಸಮಾಜ ಕಾರ್ಯ ವಿಭಾಗ ಜಂಟಿಯಾಗಿ ಆಯೋಜಿಸಿರುವ ಒಂದು ವಾರದ ಭಾರತೀಯ ಭಾಷೆಗಳ ಅನುವಾದ ಕೌಶಲ್ಯಾಭಿವೃದ್ಧಿ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾಷಾಂತರ ಅಧ್ಯಯನ ಇತ್ತೀಚೆಗೆ ಹೆಚ್ಚು ಬೇಡಿಕೆ ಇರುವ ಕ್ಷೇತ್ರವಾಗಿದ್ದು, ಸ್ವ ಉದ್ಯೋಗ ಕಲ್ಪಿಸಿ ಕೊಡುವಲ್ಲಿ ಮುಂಚೂಣಿಯಲ್ಲಿದೆ. ಜ್ಞಾನ ಕ್ಷೇತ್ರಕ್ಕೆ ಹೊಸ ಕೊಡುಗೆಗಳನ್ನು ನೀಡುವ ಸಾಧ್ಯತೆಗಳನ್ನು ನಮಗೆ ಒದಗಿಸುತ್ತದೆ. ಜಾಗತೀಕರಣದ ಯುಗದಲ್ಲಿ ವಿವಿಧ ದೇಶಗಳಲ್ಲಿ ಇರುವ ಜ್ಞಾನ ಹಾಗೂ ಮಾಹಿತಿ ಕಣಜವನ್ನು ಪ್ರಪಂಚದಾದ್ಯಂತ ಲಭ್ಯವಾಗುವಂತೆ ಮಾಡಲು ಭಾಷಾಂತರ ಸಹಾಯಕವಾಗಿದೆ.

ಯುರೋಪ್‌ನಲ್ಲಿ ಆಧುನಿಕ ಜ್ಞಾನ ಸೃಷ್ಠಿಯಾದ ನಂತರ ಎಲ್ಲಾ ಜ್ಞಾನ ಪ್ರಕಾರಗಳು ಲ್ಯಾಟಿನ್ ಭಾಷೆಯಲ್ಲಿ ಇರುತ್ತಿದ್ದವು. ಜ್ಞಾನ ಪ್ರಕಾರಗಳನ್ನು ಇಂಗ್ಲೀಷ್ ಭಾಷೆಗೆ ತರ್ಜುಮೆ ಮಾಡಿದ ಬಳಿಕ ಎಲ್ಲಾ ದೇಶದವರು ಅವುಗಳನ್ನು ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಈಗ ಅವುಗಳು ಭಾರತೀಯ ಭಾಷೆಗಳಿಗೆ ಅನುವಾದ ಆಗಬೇಕಿದೆ. ಅವುಗಳನ್ನು ಭಾರತೀಯ ಭಾಷೆಗಳ ವಿದ್ವಾಂಸರು ಅಧ್ಯಯನ ಮಾಡಿ ಪರಿಷ್ಕರಿಸಿ ನಮ್ಮದೇ ನೆಲದ ಜ್ಞಾನವನ್ನು ಸೃಷ್ಟಿ ಮಾಡುವ ತುರ್ತು ಇದೆ ಎಂದು ಅಭಿಪ್ರಾಯಪಟ್ಟರು.

ಬಳಿಕ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವೆಂಕಟೇಶ್ ಎಸ್ ಅವರು ಮಾತನಾಡಿ, ಸಂಶೋಧಕರು ತಮ್ಮ ವಿಷಯಾನುಸಾರ ಇಂಗ್ಲಿಷ್ ಸೇರಿದಂತೆ ಇತರೆ ಭಾಷೆಗಳಲ್ಲಿರುವ ಮಾಹಿತಿಗಳನ್ನು ಅನುವಾದ ಮಾಡಿ ಜ್ಞಾನ ಸೃಷ್ಟಿ ಮಾಡಬೇಕಾಗಿರುತ್ತದೆ. ಆ ನಿಟ್ಟಿನಲ್ಲಿ ಸಂಶೋಧನಾರ್ಥಿಗಳಿಗೆ ಅನುವಾದ ಅವಶ್ಯಕವಾಗಿರುತ್ತದೆ ಎಂದರು.

ರಾಷ್ಟ್ರೀಯ ಅನುವಾದ ಮಿಷನ್ ಭಾರತ ಸರ್ಕಾರದ ಅಡಿ ಕಾರ್ಯನಿರ್ವಹಿಸುತ್ತಿದ್ದು, ಭಾರತದ 22 ಭಾಷೆಗಳ ಅನುವಾದ ಕಾರ್ಯದಲ್ಲಿ ತೊಡಗಿಕೊಂಡಿದೆ. ಈವರೆಗೂ 115 ಪಠ್ಯಗಳನ್ನು ಅನುವಾದ ಮಾಡಿದ್ದು, ಇದರಲ್ಲಿ 22 ಭಾಷೆಯ ವಿದ್ವಾಂಸರು ಕೆಲಸ ಮಾಡುತ್ತಿದ್ದಾರೆ ಎಂದು ಮೈಸೂರಿನ ರಾಷ್ಟ್ರೀಯ ಅನುವಾದ ಮಿಷನ್‌ನ ಸಂಪನ್ಮೂಲ ವ್ಯಕ್ತಿ ಉಷಾರಾಣಿ ಹೇಳಿದರು.

ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಮತ್ತು ಸಮಾಜಕಾರ್ಯ ವಿಭಾಗದ ಅಧ್ಯಕ್ಷ ಪ್ರೊ.‌ ಪ್ರಶಾಂತ್ ನಾಯಕ್, ನಿವೃತ್ತ ಪ್ರಾಧ್ಯಾಪಕ ಪ್ರೊ. ಡಿ.ಎಸ್ ಪೂರ್ಣಾನಂದ, ರಾಷ್ಟ್ರೀಯ ಅನುವಾದ ಮಿಷನ್‌ನ ಡಾ. ಚಾಯಾದೇವಿ, ಗಿರಿಜ ಉಪಸ್ಥಿತರಿದ್ದರು.

# # #