ಅಶ್ವತ್ಥ್  ಕಲ್ಲೇದೇವರಹಳ್ಳಿ ಅಂಕಣ- ರಸ್ತೆ ನದಿ ಮರ ನೆರಳು ಇವಿಷ್ಟೇ ಡೊಂಕು ಮನಸ್ಸುಗಳು..?

ಬದುಕಿನ ಅನೇಕ ಮಜಲುಗಳಲ್ಲಿ ನಮ್ಮ ದೃಷ್ಟಿಕೋನಗಳು ಕಾಲ ಕಾಲಕ್ಕೆ ಬದಲಾಗುವುದು ಎಷ್ಟು ಸತ್ಯವೂ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಕೂಡ ಅಷ್ಟೇ ಸತ್ಯ ಹೀಗಿರುವಾಗ ನಮ್ಮ ನಡುವಿನ ಸಂಬಂಧಗಳು ತಿದ್ದಿ ತೀಡಿದಷ್ಟು ಡೊಂಕಾಗಿಯೇ ಉಳಿದುಬಿಡುವುದು ಮತ್ತೊಂದು ರೀತಿಯ ವಿಪರ್ಯಾಸ.

ಯಾವಾಗಲೋ ಕರಗಿ ಹೋಗುವ ಮೇಣದಬತ್ತಿಗೆ  ಅಡ್ಡಲಾಗಿ ಏನನ್ನಾದರೂ ಮರೆಮಾಚುತ್ತೇವೆ. ಇದರ ಉದ್ದೇಶ ಬೆಳಕು ಇಡೀ ಕೋಣೆಗೆ ಆವರಿಸುತ್ತದೆ ಅನ್ನುವುಕ್ಕಿಂತ ಆ ಮೇಣದಬತ್ತಿಯ ಕ್ಷಣಕಾಲದ ಜೊತೆಗಾರಿಕೆ ಕತ್ತಲೆಯ ಭಯವನ್ನು ಹೋಗಲಾಡಿಸಿ ಒಂದಷ್ಟು ಧೈರ್ಯ ಮತ್ತು ಭರವಸೆಯನ್ನು ಕೊಡುತ್ತದೆ. ಬೆಳಕಿನ ಜೊತೆ ಬದುಕುತ್ತಿದ್ದೇವೆನ್ನುವ ನಂಬಿಕೆಗೆ ಜೀವ ತುಂಬುತ್ತದೆ.
ನಾವು ಕ್ರಮಿಸುವ ದಾರಿ ಕೂಡ ಹೀಗೆ ಅಲ್ವೇ. ಸಾಗುವ ಮಾರ್ಗದಲ್ಲಿ ಸಿಕ್ಕ ಎಲ್ಲವನ್ನು ನಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ, ಸಾಗುವ ಧಾವಂತದಲ್ಲಿ ಸಿಕ್ಕ ಎಲ್ಲವನ್ನೂ ಕಳೆದುಕೊಂಡೆ ಸಾಗುತ್ತೇವೆ. ಆದರೆ ಒಂದು ಮೆಣದಬತ್ತಿ ಇಡೀ ರಾತ್ರಿಯ ಇಡೀ ಕತ್ತಲೆಯನ್ನು ನುಂಗಲು ಸಾಧ್ಯವೇ?. ಬದುಕಿನ ದೀರ್ಘ ಪಯಣದಲ್ಲಿ ಸಾಗಿ ಬಂದ ಹಾದಿಯಲ್ಲಿ ಜೊತೆಯಾದ ಎಲ್ಲರನ್ನು ಎಲ್ಲಿವರೆಗೆ ಕರೆದುಕೊಂಡು ಹೋಗಲು ಸಾಧ್ಯವಾದೀತು? ಇಲ್ಲ ಅಲ್ಲವೇ ! ಹೀಗಿರುವಾಗಲು ನಮ್ಮ ಪ್ರೀತಿ ಪಾತ್ರರನ್ನು ಕಬ್ಬಿಣದ ಸರಪಳಿಗಳಿಂದ ಬಂಧಿಸುವ ಹುಚ್ಚುತನ ಯಾಕಾಗಿ ನಮ್ಮನ್ನು ಆವರಿಸಿಕೊಳ್ಳುತ್ತದೆ ?
ನದಿ ಹರಿಯುವಾಗ ತನ್ನ ದಿಕ್ಕನ್ನೇ ಬದಲಿಸುತ್ತದೆ. ಹುಟ್ಟುವ ಸೂರ್ಯ ತನ್ನ ದಾರಿಯನ್ನೇ ಬದಲಿಸುತ್ತಾನೆ. ಮರ ಬೆಳೆಯುತ್ತಾ ತನ್ನ ಗತಿಯನ್ನೇ ಬದಲಿಸಿಕೊಳ್ಳುತ್ತದೆ. ಅಷ್ಟೇ ಏಕೆ ನಮ್ಮ ನೆರಳು ಕೂಡ ನಮ್ಮ ಹಿಂದೆ ಹಾದು ಹೋಗುವಾಗಲೂ ತನ್ನ ಆಕಾರವನ್ನೇ ಬದಲಿಸಿಕೊಳ್ಳುತ್ತದೆ. ದಾರಿ ಎಲ್ಲೆಂದರಲ್ಲಿ ಕವಲೊಡೆದು ನಮ್ಮ ದಿಕ್ಕು ತಪ್ಪಿಸುತ್ತದೆ. ನಾವು ಕಾಣುವ ಅಥವಾ ಕಾಣಬಯಸುವ ರೀತಿಯಲ್ಲಿ ನೇರವಾಗಿ ಇರುತ್ತದೆಯೇ  ಅದೂ ಸಾಧ್ಯವಿಲ್ಲ.
ನೇರ ದಾರಿ ನೋಡಲು ಸುಂದರವಾಗಿ ಕಾಣಬಹುದೇನೋ. ಪಯಣಕ್ಕೆ ಸುಗಮವೂ ಹೌದೇನೋ. ಆದರೆ ಇಳಿಜಾರು ಉಬ್ಬು ತಗ್ಗು ಇವುಗಳ ಮೂಲಕ ಹಾದು ಹೋಗುವ ದಾರಿ ಏಷ್ಟೋ ಸಲ ನಮ್ಮ ಬದುಕಿಗೆ ಕನ್ನಡಿಯಾಗಿ ಸತ್ಯವನ್ನ ಬಿಂಬಿಸುತ್ತವೆ ಕೂಡ.  ಇದಕ್ಕಾಗಿಯೇ ಏನ್ನೋ ನಮ್ಮ ಸಂಬಂಧಗಳಿಗೆ ಅಂಕು ಡೊಂಕಿನ ಗೋಡೆಯನ್ನು ಕಟ್ಟಲು ಹತೊರೆಯುತ್ತೇವೆ ಎನ್ನುವುದೂ ಕಾಕತಾಳೀಯ ಆಗದೇ ಇರಲಿ. ಇದರಿಂದಲೇ ನಮ್ಮ ಮನಸ್ಸಿನ ಕುಬ್ಜತೆಯನ್ನು ಸ್ಪಷ್ಟವಾಗಿ ತಂದು ನಿಲ್ಲಿಸುತ್ತೀವೇ. ಪರಿಸರ ಹೇಳಿಕೊಡುವ ನೀತಿಯನ್ನೇ ಅನುಸರಿಸಲು ಹೋಗಿ ನಮ್ಮ ಅಖಂಡ ಜ್ಞಾನಕ್ಕೆ ಉದ್ದಟತನದ ಅವಿವೇಕದ ಪರಾಮಾವಧಿಯಲ್ಲೆ ಮುಳುಗಿ ಅಲ್ಲಿಯೂ ಬದಲಾಗುವ ಯಾವ ಮಾರ್ಗಗಳನ್ನು ಕಂಡುಕೊಳ್ಳಲು ಶಕ್ತರಾಗುವುದೇ ಇಲ್ಲ. ಸಾಧ್ಯವಾದರೆ ಪ್ರಕೃತಿಯತ್ತಲೇ ಬೇರಳುಮಾಡಿ ತೋರಿಸುವ ಮಟ್ಟಕ್ಕೆ ನಾವು ಬೆಳೆದು ನಿಲ್ಲುತ್ತೇವೆ ಅನ್ನುವುದರಲ್ಲಿ ಎರೆಡು ಮಾತಿಲ್ಲ.
ಇಷ್ಟಕ್ಕೂ ನಾವು ಜೊತೆಯಾಗಿ ಸಾಗುವುದು ಯಾರ ಜೊತೆ ಮತ್ತು ಎಲ್ಲಿವರೆಗೆ!  ಹತ್ತಾರು ಹೆಜ್ಜೆಗಳು ಮಾತ್ರವೇ ತಾನೇ. ಯಾರೋ ಜೊತೆಯಾಗಿ ನಮ್ಮ ಒಂಟಿತನಕ್ಕೆ ಕೊಂಚ ಹೆಜ್ಜೆಗಳಿಗೆ ಭರವಸೆಯನ್ನು ತುಂಬುತ್ತಾರೆ. ಮತ್ತೆ ಅವರವರ ನಿಲ್ದಾಣಗಳಲ್ಲಿ ಮರೆಯಾಗುತ್ತಾರೆ. ನಾವೋ ಜೋತೆಯಲಿದ್ದಷ್ಟು ಹೊತ್ತು ಅಪಸ್ವರದ ರಾಗದಲ್ಲಿ ಗುನುಗುಡುತ್ತಲೇ ಅವರಿಗೂ ಬೇಸರ ತರುವುದರಲ್ಲಿ ಮಗ್ನರಾಗಿಬಿಡುತ್ತೇವೆ. ಅವ್ರು ಇಲ್ಲವಾದಾಗ ಮಾತ್ರ ಬೆಸೆದುಕೊಂಡ ಪ್ರೀತಿ ಮಮತೆ ಬಾಂಧವ್ಯದ ಪುಟಗಳನ್ನು ತಿರುವಿ ಲೋಕದ ಕಣ್ಣಿಗೆ ನಾವೇ ಎಲ್ಲರಿಗಿಂತ ದಾರ್ಶನಿಕರು.. ನಾವೇ ಒಳ್ಳೆಯವರು. ನಾವೇ ಎಲ್ಲವನ್ನೂ ಬಲ್ಲವರು ಎಂಬ ಮುಖವಾಡ ಹಾಕಿಕೊಂಡು ನಟನೆ ಮಾಡುತ್ತೇವೆ. ಒಂದಷ್ಟು ಕಣ್ಣೀರು ಹರಿಸುತ್ತೇವೆ. ಇದ್ದಾಗ ತೆಗಳುವ ಇಲ್ಲದಾಗ ಹೊಗುಳುವ ನಾವು ಬಯಲಲ್ಲಿ ಬೆತ್ತಲಾಗುವಸ್ಟೂ.  ಕುಬ್ಜಾರಾಗಿ ಹೋಗಿದ್ದೇವೆ.
ಆದರೂ ಮರ ನದಿ ನೆರಳು ದಾರಿ ಮುಂತಾದ ಅಂಕು ಡೊಂಕುಳನ್ನು ಬೆಟ್ಟು ಮಾಡಿ ತೋರಿಸುತ್ತಲೆ ನಮ್ಮನ್ನು ನಾವು ಎಲ್ಲರಿಗಿಂತ ಭಿನ್ನ ಎಲ್ಲರಿಗಿಂತ
ಬುದ್ದಿವಂತ ಎನ್ನುವ ಹಣೆ ಪಟ್ಟಿ ಹಚ್ಚಿಕೊಂಡು ನಮ್ಮ ಬುಜ ನಾವೇ ತಟ್ಟಿಕೊಳ್ಳುತ್ತಿದ್ದೇವೆ.
* ಅಶ್ವತ್ಥ್  ಕಲ್ಲೇದೇವರಹಳ್ಳಿ