ಮಲೆನಾಡಿನ ಫೀನಿಕ್ಸ್ ಆರ್.ಎಂ.ಮಂಜುನಾಥ ಗೌಡರು ಈಗ MADB ಅಧ್ಯಕ್ಷರು

ಮಲೆನಾಡಿನ ಫೀನಿಕ್ಸ್ ಆರ್.ಎಂ.ಮಂಜುನಾಥ ಗೌಡರು

ಫಿನಿಕ್ಸ್‌ ನಂತೆ ಎದ್ದು ಬಂದ ನಾಯಕ
ಚತುರತೆವುಳ್ಳವನಿಗೆ ರಾಜಕೀಯದ ಚದುರಂಗದಾಟ ತುಂಬಾ ಸುಲಭ
………………..
ಇನ್ನೇನು ಮಗಿತು ಬಿಡಿ ಕಥೆ? ಕೇವಲ ಒಂದು ವರ್ಷದ ಹಿಂದಿನ ಮಾತು.
ಹಿರಿಯ ಸಹಕಾರಿ ಹಾಗೂ ಕಾಂಗ್ರೆಸ್‌ ಮುಖಂಡ ಆರ್.‌ ಎಂ. ಮಂಜುನಾಥ ಗೌಡ ಅವರ ರಾಜಕೀಯ ಭವಿಷ್ಯದ ಬಗ್ಗೆ ಬಹಳಷ್ಟು ಜನ ಹೀಗೆ ಭವಿಷ್ಯ ನುಡಿದಿದ್ದರು. ಅವರ ವಿರೋಧಿಗಳು ಕೂಡ ಸಂಭ್ರಮಿಸಿದ್ದರು. ದುರಂತ ಅಂದ್ರೆ, ಮುಂದಿನ ಪರಿಸ್ಥಿತಿ ಹೇಗೋ ಏನೋ ಅಂತ ಅವರ ಆಪ್ತರು ಕೂಡ ಅಂತರ ಕಾಯ್ದುಕೊಂಡಿದ್ದರು. ಆಗ ಗೌಡರ ಗ್ರಹಗತಿ ಕೈ ಕೊಟ್ಟಿತು. ದ್ವೇಷದ ರಾಜಕೀಯ ಜೇಡರ ಬಲೆ ಅವರ ರಾಜಕೀಯ ನಡೆಯ ಸುತ್ತ ಮುತ್ತಿಕೊಂಡಿತ್ತು. ಅವರ ಮೇಲಿನ ಇಡಿ ದಾಳಿಗಳು ದೊಡ್ಡ ಸುದ್ದಿಯಾದವು. ಅವರ ವಿರೋಧಿಗಳ ಹಾಲು ಕುಡಿದು, ಭರ್ಜರಿ ಪಾರ್ಟಿ ಮಾಡಿದರು. ಇಡಿ ದಾಳಿಗಳು ಇನ್ನೇನು ಅವರ ರಾಜಕೀಯ ಭವಿಷ್ಯವನ್ನೇ ಮುಗಿಸಿಬಿಟ್ಟವು ಅಂತಲೇ ಅಪಪ್ರಚಾರ ನಡೆಸಿದರು. ಆದರೆ ಕಾಲ ಹಾಗೆ ಇರುತ್ತಾ?

ಚತುರತೆವುಳ್ಳವನಿಗೆ ರಾಜಕೀಯದ ಚದುರಂಗದಾಟ ತುಂಬಾ ಸುಲಭ. ಗೌಡರಿಗೆ ತಮ್ಮ ಸುತ್ತ ಹೆಣೆದ ರಾಜಕೀಯದ ದ್ವೇಷ ಜೇಡಲ ಬಲೆ ಹರಿದು ಹೊರಬರುವುದು ಕಷ್ಟವೇನು ಆಗಲಿಲ್ಲ. ಕಾಂಗ್ರೆಸ್‌ ಸರ್ಕಾರ ಬಂತು. ಆಖಾಡಕ್ಕಿಳಿಯುವುದಕ್ಕೆ ರಹದಾರಿ ಸಿಕ್ಕಿತು. ಮತ್ತೆ ಪುಟಿದೆದ್ದು ಬಂದೆ ಎನ್ನುವುದನ್ನು ದೊಡ್ದ ಸದ್ದು ಮಾಡದೆಯೇ ಮತ್ತೆ ಜಿಲ್ಲೆಯ ರಾಜಕೀಯದ ಮುನ್ನೆಲೆಗೆ ಬಂದು ನಿಂತರು. ಗೌಡರಿಗೆ ರಾಜಕೀಯದ ಪ್ರತಿ ಹಂತದಲ್ಲೂ ಮೂಲ ಬೇರಾಗಿ ನಿಂತಿದ್ದು ಸಹಕಾರಿ ಕ್ಷೇತ್ರ. ಅಲ್ಲಿಂದಲೇ ಗೌಡರು ಜಿಲ್ಲೆಯ ರಾಜಕೀಯ ಅಂಗಳದ ಮುನ್ನೆಲೆಯಲ್ಲಿ ಕಾಣಿಸಿಕೊಂಡವರು. ಅವರ ರಾಜಕೀಯ ಭವಿಷ್ಯಕ್ಕೆ ಅದೇ ಭದ್ರ ಬುನಾದಿ. ಅದರ ತಾಯಿ ಬೇರು ಡಿಸಿಸಿ ಬ್ಯಾಂಕ್.‌ ಅವರ ಹೊಸ ಚೈತನ್ಯದ ರಾಜಕೀಯದಾಟವನ್ನು ಅಲ್ಲಿಂದಲೇ ಶುರು ಮಾಡಲು ಪ್ರಯತ್ನ ನಡೆಸಿದರು. ಮೊದಲು ಪ್ರಾಥಮಿಕ ಸಹಕಾರಿ ಸಂಸ್ಥೆಯ ಸದಸ್ಯತ್ವಕ್ಕೆ ಇದ್ದ ಕಾನೂನಿನ ತೊಡಕಿಗೆ ಕೋರ್ಟ್‌ ನಲ್ಲಿ ಗೆಲುವು ಕಂಡರು.

ಫಿನಿಕ್ಸ್‌ ಹಕ್ಕಿ ಪುಟಿದೆದ್ದಂತೆ ಕೋರ್ಟ್‌ ಗೆಲುವಿನೊಂದಿಗೆ ರಾಜಕೀಯದ ವಿಜಯದುಂದುಬಿ ಶುರುವಾಯಿತು. ಪ್ರಾಥಮಿಕ ಸಹಕಾರಿ ಸಂಸ್ಥೆಯ ಸದಸ್ಯತ್ವಕ್ಕೆ ಚುನಾವಣೆಗೆ ಸ್ಪರ್ಧೆ ಮಾಡಿ ಗೆದ್ದರು. ಆಮೂಲಕವೇ ಡಿಸಿಸಿ ಬ್ಯಾಂಕ್‌ ಮೆಟ್ಟಿಲು ತುಳಿಯಬೇಕೆನ್ನುವ ಅವರ ಛಲ ಫಲಿಸಿತು. ಅಧಿಕಾರದ ಎಲ್ಲಾ ಸಿದ್ದ ಸೂತ್ರಗಳನ್ನು ಬಳಸಿಕೊಂಡು, ದುಗ್ಗಪ್ಪ ಗೌಡರನ್ನು ಅಪೆಕ್ಸ್‌ ನಿರ್ದೇಶಕರನ್ನಾಗಿಸಿ, ಅ ಜಾಗಕ್ಕೆ ಗೌಡರು ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದರು. ಅದಾಗಲೇ ಜಿಲ್ಲೆಯ ಸಹಕಾರಿ ವಲಯದಲ್ಲಿ ಗೌಡರ ರೀ ಎಂಟ್ರಿ ದೊಡ್ಡಸದ್ದು ಮಾಡಿತು. ಗೌಡರು ಬಂದರೆಂದರೆ ಅವರೇ ಅಧ್ಯಕ್ಷರು ಎನ್ನುವ ಮಾತು ನಿಜವಾಯಿತು. ಫೈನಲ್‌ ಡೇ ಗೌಡರು ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಬಿದ್ದೇ ಹೋದರು, ಅವರ ಕತೆ ಮುಗಿಯಿತು, ಇನ್ನೇನು ಮೇಲೆಳೆಯುವುದು ಕಷ್ಟ ಅಂತೆಲ್ಲ ಕೊಂಕು ಮಾತುಗಳನ್ನಾಡಿದವರು, ಅವರ ಸೋಲನ್ನು ಸಂಭ್ರಮಿಸಿದವರು, ತುಳಿಯಲು ಯತ್ನಿಸಿದವರೆಲ್ಲ ಮುಟ್ಟಿ ನೋಡಿಕೊಳ್ಳುವ ಹಾಗೆ ಗೌಡರು, ತಮ್ಮ ವಿರೋಧಿಗಳಿಗೆ ಬಲವಾದ ತಿರುಗೇಟು ಕೊಟ್ದಿದ್ದು ದೊಡ್ಡ ಸಾಹಸದ ಕೆಲಸವೇ ಹೌದು.

ಅವರದೇ ಸರ್ಕಾರ ಬಂತು, ಬೇಕಾದ ನಾಯಕರು ಅವರ ಹತ್ತಿರದಲ್ಲಿದ್ದರು, ಹಾಗಾಗಿ ಎಲ್ಲವನ್ನು ಸುಲಭವಾಗಿ ಮಾಡಿಸಿಕೊಂಡು ಬಂದು ಮತ್ತೆ ಅಧಿಕಾರಕ್ಕೆ ಕುಳಿತರೆಂದು ಎರಡಕ್ಷರದಲ್ಲಿ ಷರಾ ಬರೆಯುವುದು ತುಂಬಾ ಸುಲಭ. ಆದರೆ ಮುಗಿಸಿಯೇ ಬಿಡಬೇಕೆಂದು ತಮ್ಮ ವಿರುದ್ದ ನಡೆದ ದ್ವೇಷದ ರಾಜಕೀಯದಾಟದಲ್ಲಿ ಗೌಡರು, ಮತ್ತೆ ಗೆಲ್ಲಬೇಕೆಂದು ನಿರ್ಧರಿಸಿ ಹೊರಟ್ಟಿದ್ದು ಹಲವು ದಿನಗಳ ಕಾಲ ನಿದ್ದೆ ನೀರಡಿಕೆಗಳನ್ನೇ ಮರೆಸಿದೆ ಎನ್ನುವುದು ಅವರ ಅಂತರಂಗದ ಮಾತು. ಮಾತಿಗೆ ಕುಳಿತರೆ ಅದೆಲ್ಲ ಬೇಡ ಬಿಡಿ ಅಂತ ಅವರು ಹೇಳಿಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲವಾದರೂ, ರಾಜಕೀಯದ ಸೋಲು ಯಾರಿಗೂ ನಿದ್ರೆ ತರಿಸುವುದಿಲ್ಲ ಎನ್ನುವುದು ಕಟು ವಾಸ್ತವ. ಗೌಡರಿಗೆ ಕೂಡ ಅಂತಹದ್ದೇ ಕೆಟ್ಟ ಸ್ಥಿತಿ ಆಗಿತ್ತಂತೆ. ಆದರೂ ಅದನ್ನವರು ಗೆದ್ದರು. ಈ ಸಾಹಸದ ಗೆಲುವಿನ ನಡುವೆಯೇ ಅವರು ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರಾಗಲಿದ್ದಾರೆನ್ನುವ ಮಾತುಗಳ ನಡುವೆಯೇ ಮತ್ತೊಂದು ಹುದ್ದೆಗೆ ಸದ್ದಿಲ್ಲದೆ ಅವಕಾಶ ಪಡೆದುಕೊಂಡಿದ್ದಾರೆ. ಇದು ಅವರನ್ನೇ ಹುಡುಕಿಕೊಂಡು ಬಂತು ಎನ್ನುವುದಕ್ಕಿಂತ ಅವರ ರಾಜಕೀಯದ ಚತುರತೆಯ ಮೂಲಕ ಅದನ್ನವರು ದಕ್ಕಿಸಿಕೊಂಡಿದ್ದಾರೆ. ಕೊಡಗು, ಮಂಗಳೂರು, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಗಳೂರು, ಹಾಸನ, ಬೆಳಗಾವಿ ಹೆಚ್ಚು ಕಡಿಮೆ ೧೨ ಜಿಲ್ಲೆಗಳನ್ನೊಳಗೊಂಡ ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿಗೆ ಆರ್.‌ ಎಂ. ಮಂಜುನಾಥ ಗೌಡರನ್ನು ಸರ್ಕಾರ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.

ಮಲೆನಾಡು, ಕರಾವಳಿ ಜಿಲ್ಲೆಗಳ ವ್ಯಾಪ್ತಿ ಹೊಂದಿದ್ದರೂ, ಶಿವಮೊಗ್ಗ ನಗರದಲ್ಲಿಯೇ ಕೇಂದ್ರ ಕಚೇರಿ ಹೊಂದಿರುವ ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿಯಲ್ಲಿ ಮೊದಲಿನಿಂದಲೂ ಶಿವಮೊಗ್ಗದವರ ಪ್ರಾಬಲ್ಯವೇ ಹೆಚ್ಚಿದೆ. ಈ ಪ್ರಾಬಲ್ಯ ಗೌಡರ ಎಂಟ್ರಿಯ ಮೂಲಕ ಮತ್ತೊಂದು ಅವಧಿಗೂ ಸಿಕ್ಕಿದೆ. ಗೌಡರು ರಾಜಕೀಯ ಚತುರರು. ಹಾಗೆಯೇ ಸಿಕ್ಕ ಅಧಿಕಾರವನ್ನು ಹೇಗೆ ಬಳಸಿಕೊಳ್ಳಬೇಕೆನ್ನುವುದರಲ್ಲೂ ನಿಪುಣತೆ ಹೊಂದಿದವರು. ಅಲ್ಲಿನ ಅಧ್ಯಕ್ಷ ಹುದ್ದೆಯ ಅವಕಾಶ ಹುಡುಕಿಕೊಂಡು ಬರುವ ಮುನ್ನವೇ ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಆಳ-ಅಗಲವನ್ನು ಇಂಚಿಚು ಅಧ್ಯಯನ ಮಾಡಿರಿರುತ್ತಾರೆ. ಅಲ್ಲಿ ಏನು ಮಾಡಿದರೆ ಮಲೆನಾಡಿಗೆ ಒಳ್ಳೆಯದಾಗಬಹುದು ಅಂತಲೂ ಲೆಕ್ಕಚಾರ ಹಾಕಿ ಕೊಂಡಿರುತ್ತಾರೆ. ಆ ನಿಟ್ಟಿನಲ್ಲಿ ಎಂಎಡಿಬಿ ಮಂಜುನಾಥ ಗೌಡರ ಅಧಿಕಾರವದಿಯಲ್ಲಿ ಉತ್ತರೋತ್ತರ ಅಭಿವೃದ್ದಿ ಕಾಣಲಿ ಎನ್ನುವುದರರ ಜತೆಗೆ ಪರಿಚಿತರಾದ ಆರ್.‌ ಎಂ. ಮಂಜುನಾಥ ಗೌಡರಿಗೆ ಅಭಿನಂದನೆಗಳು.
– ದೇಶಾದ್ರಿ ಹೊಸ್ಮನೆ
ಪತ್ರಕರ್ತ
…………….