*ಡೆಂಟಲ್ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ ಹಿಂದೆ ನಿರಂತರ ಕಿರುಕುಳ* *ವಿದ್ಯಾರ್ಥಿನಿ ಕಾಲೇಜಿನಲ್ಲಿ ಅಳುತ್ತಾ ಕುಳಿತುಕೊಂಡು ಸಾವಿಗೂ ಮುನ್ನ ಬರೆದಿರುವ ಡೆತ್‌ ನೋಟ್ ನಲ್ಲೇನಿದೆ?*

*ಡೆಂಟಲ್ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ ಹಿಂದೆ ನಿರಂತರ ಕಿರುಕುಳ*

*ವಿದ್ಯಾರ್ಥಿನಿ ಕಾಲೇಜಿನಲ್ಲಿ ಅಳುತ್ತಾ ಕುಳಿತುಕೊಂಡು ಸಾವಿಗೂ ಮುನ್ನ ಬರೆದಿರುವ ಡೆತ್‌ ನೋಟ್ ನಲ್ಲೇನಿದೆ?*

ಪ್ರತಿಷ್ಠಿತ ಬೊಮ್ಮನಹಳ್ಳಿಯ ಡೆಂಟಲ್ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿನಿ ಯಶಸ್ವಿನಿ (23) ಎಂಬಾಕೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ನಡೆದಿದೆ. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ಆತ್ಮಹತ್ಯೆಯಂತೆ ಕಂಡರೂ, ಕಾಲೇಜು ಆಡಳಿತ ಮಂಡಳಿ ಮತ್ತು ಉಪನ್ಯಾಸಕರ ನಿರಂತರ ಕಿರುಕುಳವೇ ಮಗಳ ಸಾವಿಗೆ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದರು.

ಇದೀಗ ವಿದ್ಯಾರ್ಥಿನಿ ಕಾಲೇಜಿನಲ್ಲಿ ಅಳುತ್ತಾ ಕುಳಿತುಕೊಂಡಿರುವ ಹಾಗೂ ಸಾವಿಗೂ ಮುನ್ನ ಬರೆದಿರುವ ಡೆತ್‌ ನೋಟ್ ಲಭ್ಯವಾಗಿದೆ.

ಮೃತ ಯಶಸ್ವಿನಿ ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿನ ಡಾ. ನಿಶಾ ಎಂಬುವವರು ವಿದ್ಯಾರ್ಥಿಗಳಿಗೆ ಮಾನಸಿಕ ಟಾರ್ಚರ್ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ‘ನೀನು ಬರುವುದು ಸ್ಲಂನಿಂದ, ನೋಡಲು ಕೋತಿಯ ಹಾಗೆ ಇದ್ದೀಯಾ’ ಎಂದು ಯಶಸ್ವಿನಿಯನ್ನು ಸಹಪಾಠಿಗಳ ಮುಂದೆ ಅವಮಾನಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ಬುಧವಾರ ಕಣ್ಣಿನ ನೋವಿನ ಕಾರಣ ಯಶಸ್ವಿನಿ ರಜೆ ಹಾಕಿದ್ದರು. ಮರುದಿನ ಕಾಲೇಜಿಗೆ ಬಂದಾಗ, ‘ಯಾವ ಡ್ರಾಪ್ಸ್ ಹಾಕಿದೆ? ಎಷ್ಟು ಹನಿ ಹಾಕಿದೆ? ಇಡೀ ಬಾಟಲ್ ಸುರಿದುಕೊಂಡಾ?’ ಎಂದು ಉಪಹಾಸ ಮಾಡಿ ಅವಮಾನಿಸಲಾಗಿತ್ತು ಎನ್ನಲಾಗಿದೆ.

ಓಎಂಆರ್ ಸೀಟ್ (OMR Sheet) ನೀಡಿಲ್ಲವೆಂದು ಯಶಸ್ವಿನಿ ಕಾಲೇಜಿನಲ್ಲೇ ಕಣ್ಣೀರು ಹಾಕುತ್ತಾ ಕುಳಿತಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೆಮಿನಾರ್‌ಗೆ ಅವಕಾಶ ನೀಡದೆ ಇರುವುದು, ರೇಡಿಯಾಲಜಿ ಕೇಸ್‌ಗಳನ್ನು ನೀಡದೆ ಸತಾಯಿಸುವುದು ಸೇರಿದಂತೆ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಯಶಸ್ವಿನಿಯನ್ನು ಗುರಿಯಾಗಿಸಿಕೊಂಡಿದ್ದರು ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸೀನಿಯರ್ ವಿದ್ಯಾರ್ಥಿಗಳಿಗೂ ಇದೇ ರೀತಿ ಟಾರ್ಚರ್ ನೀಡಿದ್ದ ಬಗ್ಗೆ ಆಡಳಿತ ಮಂಡಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.